ಬೆಂಗಳೂರು: ಚಿನ್ನಾಭರಣ ದೋಚುತ್ತಿದ್ದ ಇಬ್ಬರು ಕುಖ್ಯಾತ ಮನೆಗಳ್ಳರನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.ಇನ್ಸ್ಪೆಕ್ಟರ್ ಸುನೀಲ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಹುಸ್ಕೂರು ನಾಗೇಶ್ (22), ಹೊಸೂರು ಮೂಲದ ನಿತೀಶ್ ಅಲಿಯಾಸ್ ಜಬ್ಬರ್ (19) ಸರೆ ಸಿಕ್ಕಿದ್ದಾರೆ. ಬಂಧಿತ ಆರೋಪಿಗಳಿಂದ 11 ಲಕ್ಷ ಮೌಲ್ಯದ 200 ಗ್ರಾಂ ಚಿನ್ನಾಭರಣ, 770 ಗ್ರಾಂ ಬೆಳ್ಳಿ, 4 ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಾಗಲಗುಂಟೆಯ 5, ಮಾದನಾಯಕನಹಳ್ಳಿ, ತಾವರೆಕೆರೆ, ಎಗೊಂಡನಹಳ್ಳಿ ಸೇರಿದಂತೆ 8 ಪ್ರಕರಣಗಳಲ್ಲಿ ಈ ಇಬ್ಬರು ಆರೋಪಿಗಳು ಭಾಗಿಯಾಗಿದ್ದಾರೆ. ಬಾಗಲಗುಂಟೆಯ ಥಾಮಸ್ ಮನೆಯಲ್ಲಿ 25 ಸಾವಿರ ನಗದು ಹಾಗೂ 2 ಲಕ್ಷ 10 ಸಾವಿರ ಮೌಲ್ಯದ ಚಿನ್ನಾಭರಣ ದೋಚಿದ್ದರು. ಅಲ್ಲದೆ ಬಾಗಲಗುಂಟೆಯ ವೃದ್ಧೆ ಲತಾ ಮನೆಯಲ್ಲಿ 50 ರೇಷ್ಮೆ ಸೀರೆಗಳು ಮಾತ್ರ ಸಿಕ್ಕಿದ್ದವು. ಹೀಗಾಗಿ ಹೆಚ್ಚಿನ ಚಿನ್ನಾಭರಣ ಮತ್ತು ನಗದು ಸಿಗದಿದ್ದಕ್ಕೆ ಮನೆಗೆ ಬೆಂಕಿ ಹಚ್ಚಿ ಈ ದುಷ್ಕರ್ಮಿಗಳು ಪರಾರಿಯಾಗಿದ್ದರು. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.
ಬೆಂಗಳೂರಿನಲ್ಲಿ ಕಳವು ಮಾಡುತ್ತಿದ್ದ ಬಿಹಾರಿ ಗ್ಯಾಂಗ್ ಬಂಧನ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳವು ಮಾಡುತ್ತಿದ್ದ ಬಿಹಾರಿ ಗ್ಯಾಂಗ್ನ ಪೊಲೀಸರು ಬಂಧಿಸಿದ್ದಾರೆ. ಕೋರಮಂಗಲ ಠಾಣೆ ಪೊಲೀಸರು ಪಂಕಜ್ ಕುಮಾರ್, ಚೋಟು ಕುಮಾರ್, ರಂಜಿತ್ ಕುಮಾರ್, ಗೌತಮ್ ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 20 ಲಕ್ಷ ರೂ. ಮೌಲ್ಯದ ಬೆಳ್ಳಿ ವಸ್ತುಗಳು ಮತ್ತು ವಾಚ್ಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಮನೆ ಮಾಲೀಕರು ಹೊರ ರಾಜ್ಯಕ್ಕೆ ಹೋದಾಗ ಕೃತ್ಯ ಎಸಗಿದ್ದರು ಎಂಬ ಮಾಹಿತಿ ತಿಳಿದುಬಂದಿದೆ.
ಬೆಂಗಳೂರಿನ ಪಿಜಿಯಲ್ಲಿ ವಾಸವಿದ್ದ ಆರೋಪಿಯೊಬ್ಬ ಬಿಹಾರದಿಂದ ಸ್ನೇಹಿತರನ್ನ ಕರೆಸಿ ಕೃತ್ಯ ನಡೆಸುತ್ತಿದ್ದ. ಬಿಹಾರದಿಂದ ಬಂದಿದ್ದ ಆರೋಪಿಗಳು ಕೋರಮಂಗಲದ ಮನೆಯೊಂದರಲ್ಲಿ ಕಳವು ಮಾಡಿದ್ದರು. ಈ ಘಟನೆ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಗದಗದಲ್ಲಿ ವ್ಯಕ್ತಿಯ ಭೀಕರ ಕೊಲೆ
ಗದಗ: ನಗರದ ತೀಸ್ ಬಿಲ್ಡಿಂಗ್ ಬಳಿ ವ್ಯಕ್ತಿಯ ಕೊಲೆಯಾಗಿದ್ದು, ಬೆಟಗೇರಿ ನಿವಾಸಿ ಗುಂಡಪ್ಪ ಚಲವಾದ(28) ಎಂಬುವವರು ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ. ಹಣಕಾಸಿನ ವಿಷಯಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಗುಂಡಪ್ಪ ಬ್ಯಾಂಕ್ ರಸ್ತೆಯಲ್ಲಿ ಹಣ್ಣು ಮಾರಾಟ ಮಾರಿ ಜೀವನ ಮಾಡುತ್ತಿದ್ದ. ದುಷ್ಕರ್ಮಿಗಳು ಮಚ್ಚು, ಚಾಕುವಿನಿಂದ ಕತ್ತು, ತಲೆ, ಎದೆ ಭಾಗದ ಇರಿದು ಹತ್ಯೆ ಎಸಗಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟರ ಹಾಗೂ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:
ಕುಸ್ತಿಪಟು ಸುಶೀಲ್ ಬಂಧನಕ್ಕೆ ಡೆಲ್ಲಿ ಪೊಲೀಸ್ ಮಾಸ್ಟರ್ ಪ್ಲಾನ್; ಸುಳಿವು ನೀಡಿದವರಿಗೆ 1 ಲಕ್ಷ ರೂ. ಬಹುಮಾನ