ಬೆಂಗಳೂರು: ನಗರದ ಉತ್ತರ ಭಾಗದಲ್ಲಿರುವ ಹೊರಮಾವು ಸಮೀಪ ಅಂತೂ ಇಂತು ಸುಸಜ್ಜಿತ ರಸ್ತೆ ನಿರ್ಮಾಣವಾಗುತ್ತಿದೆ. ಇನ್ನು ಮುಂದೆ ವಾಹನ ಸಂಚಾರ ಸುಗಮವಾಗಲಿದೆ. ಬಾಣಸವಾಡಿ, ಕೆ.ಆರ್.ಪುರಂ, ಕಲ್ಕೆರೆಗೆ ಹೊಂದಿಕೊಂಡಿರುವ ಹೊರಮಾವು ನಿವಾಸಿಗಳು ಮೂರುವರ್ಷಗಳಿಂದಲೂ ಡಾಂಬರು ರಸ್ತೆಗಾಗಿ ಕಾಯುತ್ತಿದ್ದರು. ಇದೀಗ ಅಲ್ಲಿ ಬೆಂಗಳೂರು ಮಹಾನಗರ ಪಾಲಿಕೆ (BBMP) ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದೆ.
2017ರಲ್ಲಿ ರಸ್ತೆಗಳನ್ನು ಅಗೆಯಲಾಗಿತ್ತು ! ಬೆಂಗಳೂರು ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ 2017ರಲ್ಲಿ ಹೊರಮಾವು ರಸ್ತೆಗಳನ್ನು ಅಗೆದಿತ್ತು. ನೀರಿನ ಪೈಪ್ಲೈನ್ ಅಳವಡಿಕೆಗಾಗಿ ಸರಿಯಿದ್ದ ರಸ್ತೆಗಳನ್ನು ಕಿತ್ತುಹಾಕಲಾಗಿತ್ತು. 2019ರಲ್ಲಿ ಮತ್ತೆ 60 ಕಿ.ಮೀ.ರಸ್ತೆಗಳನ್ನು ಅಂಡರ್ಗ್ರೌಂಡ್ನಲ್ಲಿ ಪೈಪ್ಗಳನ್ನು ಹಾಕಲು ಅಗೆಯಲಾಗಿತ್ತು. ಹೀಗೆ ಹೊರಮಾವು ಮುಖ್ಯರಸ್ತೆ ಸೇರಿ, ಹಲವು ವಾರ್ಡ್ಗಳಲ್ಲಿ ಒಂದಲ್ಲ ಒಂದು ಕಾಮಗಾರಿಗಾಗಿ ರಸ್ತೆ ಅಗೆಯುತ್ತಲೇ ಇರುತ್ತಿದ್ದರು. ಆದರೆ ಅದರ ದುರಸ್ತಿ ಮಾತ್ರ ಆಗುತ್ತಿರಲಿಲ್ಲ. ಮಳೆ ಬಂದರಂತೂ ಥೇಟ್ ಕೆಸರುಗದ್ದೆಯಂತಾಗುತ್ತಿತ್ತು. ವಾಹನ ಸಂಚಾರ ಬಿಡಿ, ನಡೆದಾಡುವುದೂ ಕಷ್ಟ ಆಗುತ್ತದೆ ಎಂದು ಅಲ್ಲಿನ ನಿವಾಸಿಗಳು ಅಲವತ್ತುಕೊಳ್ಳುತ್ತಿದ್ದರು.
ಇದೀಗ ಹೊರಮಾವು ಲೇಕ್ ರಸ್ತೆ, ಕಲ್ಕೆರೆ ಮುಖ್ಯರಸ್ತೆ, ಹೊರಮಾವು ಅಗಾರಾ ಲೇಕ್ ರೋಡ್, ಮಂಜುನಾಥನಗರ ಮುಖ್ಯ ರಸ್ತೆ, ಮುನ್ನಿರೆಡ್ಡಿ ಲೇಔಟ್ ಹಾಗೂ ವಾರಾಣಸಿ ಮುಖ್ಯ ರಸ್ತೆಯನ್ನು ಡಾಂಬರೀಕರಣ ಮಾಡಲಾಗಿದೆ. ಇನ್ನು ಸುತ್ತಲಿನ ಹಲವು ರಸ್ತೆಗಳ ಡಾಂಬರೀಕರಣ ಕೆಲಸ ಪ್ರಗತಿಯಲ್ಲಿದೆ.
ಅಪಾಯಕಾರಿ ರಸ್ತೆಗಳಾಗಿದ್ದವು ಕಳೆದ ಮೂರು ವರ್ಷಗಳಿಂದ ಹಾಳಾದ ಈ ರಸ್ತೆಗಳು ನಮ್ಮ ಪಾಲಿಗೆ ಅಕ್ಷರಶಃ ಪಿಡುಗಿನಂತಾಗಿದ್ದವು ಎನ್ನುತ್ತಾರೆ ಸ್ಥಳೀಯ ನಿವಾಸಿಗಳು. ಅಗೆದು ಹಾಳು ಮಾಡಿದ ರಸ್ತೆಗಳನ್ನು ದುರಸ್ತಿ ಮಾಡಿಕೊಡಿ ಎಂದು ಅದೆಷ್ಟೇ ಸಲ ಪ್ರತಿಭಟನೆ ನಡೆಸಿದ್ದರೂ, ಬಿಬಿಎಂಪಿ ಇತ್ತ ಲಕ್ಷ್ಯವಹಿಸುತ್ತಿರಲಿಲ್ಲ. ಒಂದು ಮಳೆಯಾದರೆ ಸಾಕು ಆ ರಸ್ತೆಯಲ್ಲಿ ಕಾಲಿಡಲು ಸಾಧ್ಯವಾಗುತ್ತಿರಲಿಲ್ಲ. ವಾಹನಗಳನ್ನು ಓಡಿಸುವುದಂತೂ ಅತ್ಯಂತ ಅಪಾಯಕಾರಿಯಾಗಿತ್ತು. ಅದೆಷ್ಟು ವಾಹನಗಳು ಅಪಘಾತಕ್ಕೀಡಾಗಿವೆ ಎಂದು ಹೇಳಲು ಸಾಧ್ಯವಿಲ್ಲ. ಕಿತ್ತು ಹೋದ ರಸ್ತೆಗಳ ಧೂಳಿನಿಂದ ಸ್ಥಳೀಯರಿಗೆ ಆರೋಗ್ಯ ಸಮಸ್ಯೆಯೂ ಶುರುವಾಗಿತ್ತು. ಅಂತೂ ಇದೀಗ ಡಾಂಬರೀಕರಣ ಕಾಮಗಾರಿ ನಡೆಯುತ್ತಿರುವುದು ನಿಟ್ಟುಸಿರು ಬಿಡುವಂತಾಗಿದೆ ಎಂಬುದು ಸ್ಥಳೀಯರ ಮಾತು.