ಮೈಸೂರು: ಕರ್ನಾಟಕದಲ್ಲಿ ಯಡಿಯೂರಪ್ಪ ಕುಟುಂಬದ ಸರ್ಕಾರವಿದೆ. ರಾಜ್ಯದಲ್ಲಿ ತಾರತಮ್ಯ ಆಗುತ್ತಿದೆ. ಬಿಜೆಪಿ ಸರ್ಕಾರವಲ್ಲ ಇದು ಯಡಿಯೂರಪ್ಪ ಕುಟುಂಬದ ಸರ್ಕಾರ. ನಾಲ್ಕು ಸಲ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಹುಣಸೂರು ಕ್ಷೇತ್ರಕ್ಕೆ ಯಾವ ಅನುದಾನವನ್ನೂ ನೀಡಿಲ್ಲ. ಶಾಸಕ ಹೆಚ್. ವಿಶ್ವನಾಥ್ ಮೂಲಕ ಕೆಲಸ ಮಾಡಿಸೋಣ ಅಂದುಕೊಂಡಿದ್ದೆ ಆದರೆ ಅವರನ್ನು ಅಸಡ್ಡೆ ಮಾಡಿದ್ದಾರೆ. ಸಿಎಂ ನಮಗೆ ವಿಶೇಷ ಅನುದಾನ ಕೊಡುವುದು ಬೇಡ. ಮೈತ್ರಿ ಸರ್ಕಾರದಲ್ಲಿ ಕೊಟ್ಟಿದ್ದ ಅನುದಾನ ಬಿಡುಗಡೆ ಮಾಡಲಿ ಎಂದು ಹುಣಸೂರು ಶಾಸಕ ಹೆಚ್.ಪಿ. ಮಂಜುನಾಥ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಶಾಸಕರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಣಸೂರಿನ ಬಗ್ಗೆ ಯಾಕೆ ನಿಮಗೆ ಈ ತಾರತಮ್ಯ? ಹುಣಸೂರಿನಲ್ಲಿ ನಿಮ್ಮವರು ಯಾರು ಇಲ್ಲ ಅಂತಾನಾ? ನಿಮ್ಮ ಒಂದೆರಡು ಕುಟುಂಬವನ್ನಾದರು ತಂದು ಬಿಡಿ. ನಿಮ್ಮ ಕುಟುಂಬಕ್ಕಾಗಿ ಸರ್ಕಾರ ನಡೆಸುತ್ತಿದ್ದೀರಾ? ಎಂದು ಸಿಎಂ ಯಡಿಯೂರಪ್ಪ ಅವರಿಗೆ ಪ್ರಶ್ನೆ ಮಾಡಿದ್ದಾರೆ.
ಪಿಪಿಇ ಕಿಟ್, ಕೊರೊನಾ ವಾಕ್ಸಿನ್ ಇದೆಲ್ಲ ತರುವುದರಲ್ಲಿ ನಿಮ್ಮ ಕುಟುಂಬದವರೇ ಇದ್ದಾರೆ. ಅದರ ದಾಖಲೆಯೂ ನನ್ನ ಬಳಿ ಇದೆ. ಹೈದ್ರಾಬಾದ್ ದೆಹಲಿಯಿಂದ ಎಲ್ಲ ಬಂದಿರಬಹುದು. ಆದ್ರೆ ಅದು ಬರುವುದಕ್ಕೆ ಒಂದು ಸಂಸ್ಥೆ ಬೇಕಲ್ಲವೇ? ಅದು ನಿಮ್ಮ ಕುಟುಂಬದವರೇ ವಹಿಸಿಕೊಂಡಿದ್ದಾರೆ ಎಂದು ಶಾಸಕ ಮಂಜುನಾಥ್ ಗಂಭೀರ ಆರೋಪ ಮಾಡಿದ್ದಾರೆ.
ನಿಮ್ಮವರನ್ನೇ ಯಾರದರೂ ಹುಣಸೂರಿಗೆ ನೇಮಕ ಮಾಡಿ. ಅವರ ಮುಖಾಂತರವೇ ನಾವು ಕೆಲಸ ಮಾಡಿಸಿಕೊಳ್ಳುತ್ತೇವೆ ಎಂದು ಸ್ವಪಕ್ಷದವರೇ ಸಿಎಂ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದಾರೆ. ಆದರೂ ಏನು ಗೊತ್ತಿಲ್ಲದಂತೆ ಸಿಎಂ ಹಾಗೂ ಬಿಜೆಪಿ ವರ್ತಿಸುತ್ತಿದೆ ಎಂದು ಮಾತನಾಡಿದರು. ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಶಾಸಕರಲ್ಲಿ ಹೆಚ್.ಪಿ.ಮಂಜುನಾಥ್, ಯತೀಂದ್ರ ಸಿದ್ದರಾಮಯ್ಯ, ಆರ್.ಧರ್ಮಸೇನಾ, ಕೆ.ಪಿ.ಸಿ.ಸಿ. ವಕ್ತಾರ ಲಕ್ಷ್ಮಣ್ ಉಪಸ್ಥಿತರಿದ್ದರು.
ಇದನ್ನೂ ಓದಿ: ಏನೇ ಜವಾಬ್ದಾರಿ ನೀಡದೆ ಕೆಲಸ ಮಾಡಲು ಹೇಳಿದರೆ ಮಾಡುವೆ ಎಂದ ನಲಪಾಡ್; ಯುವ ಕಾಂಗ್ರೆಸ್ ನಾಯಕತ್ವದ ಗೊಂದಲಕ್ಕೆ ಬಿತ್ತಾ ತೆರೆ?
(Hunsur MLA HP Manjunath Has held a press conference in Mysuru)