ಬೆಂಗಳೂರು: ನನಗೆ ಸಾಬರ ವೋಟ್ (muslim votes) ಬೇಡ. ನನನ್ನು ಕುರುಬರು ಕೈ ಬಿಟ್ಟಿಲ್ಲ, ಬ್ರಾಹ್ಮಣರು ಕೈ ಬಿಟ್ಟಿಲ್ಲ, ಓಬಿಸಿ ಕೈ ಬಿಟ್ಟಿಲ್ಲ.. ಆದ್ರೆ ಸಾಬ್ರು ಒಬ್ರು ವೋಟ್ ಹಾಕಿಲ್ಲ, ಅವರ ವೋಟ್ ನನಗೆ ಬೇಡ ಎಂದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ (ks eshwarappa) ಘಂಟಾಘೋಷವಾಗಿ ಹೇಳಿದ್ದಾರೆ. ದಾಖಲಾರ್ಹವೆಂದರೆ ಕಾಲ ಕಾಲಕ್ಕೆ ಈಶ್ವರಪ್ಪ ಅವರು ನಾನೆಂದಿಗೂ ಮುಸಲ್ಮಾನರ ಮತಗಳನ್ನು ಯಾಚಿಸುವುದಿಲ್ಲ ಎಂದು ಹೇಳುತ್ತಲೇ ಬಂದಿದ್ದಾರೆ.
ನರೇಂದ್ರ ಮೋದಿ ಶ್ರೀಕೃಷ್ಣನ ರೂಪದಲ್ಲಿ ಬಂದಿದ್ದಾರೆ. ಕೆಲವರು ನಾನೇ ಸಿಎಂ ನಾನೇ ಸಿಎಂ ಅಂತಾರೆ. ಹಿಂದುಳಿದ ವರ್ಗದ ನಾಯಕ ನಾನೇ ನಾನೇ ಅಂತ ಹೇಳ್ತಾರೆ. ಸಾಮಾಜಿಕ ನ್ಯಾಯ ಅಂದ್ರೆ ನಾನೇ ಅಂತಾರೆ. ಆದರೆ ಅವರು ಜಾತೀವಾದಿಗಳು ಅಂತ ಪ್ರೂವ್ ಮಾಡ್ತಿದ್ದಾರೆ. ಒಕ್ಕಲಿಗರೆಲ್ಲ ನನ್ನ ಹಿಂದೆ ಬನ್ನಿ ಅಂತಂದವರು ಜಾತಿವಾದಿಗಳು. ಎಸ್ಎಂ ಕೃಷ್ಣ ನಂತರ ನಾನೇ ಸಿಎಂ ಅಂತ ಜಾತಿವಾದಿಗಳಾಗಿದ್ದಾರೆ.
ಬಿಜೆಪಿಯವರನ್ನು ಕೋಮುವಾದಿಗಳು ಅಂತ ಕರೆಯುತ್ತಾರೆ. ಭಾರತಾಂಬೆಯನ್ನು ಪೂಜಿಸುವ ಬಿಜೆಪಿ ಕೋಮುವಾದಿಯಾ? ಅವರಿಗೆ ಮುಸ್ಲಿಮರ ವೋಟ್ ಬೆನ್ನ ಹಿಂದಿದೆ ಅನ್ನೋ ಭಾವನೆ. ಹೇಗಾದರೂ ಮುಸ್ಲಿಮರ ವೋಟ್ ದುಡ್ಡು ಕೊಟ್ಟಾದರೂ ತಗೋಬಹುದು ಎನ್ನೋ ಭಾವನೆ. ಅಂತಹ ಕಾಲ ಹೋಯ್ತು ಈಗ. ನರೇಂದ್ರ ಮೋದಿ ಶ್ರೀಕೃಷ್ಣನ ರೂಪದಲ್ಲಿ ಬಂದಿದ್ದಾರೆ ಎಂದು ಕೆ ಎಸ್ ಈಶ್ವರಪ್ಪ ಮಾರ್ಮಿಕವಾಗಿ ಹೇಳಿದರು.
ಯಡಿಯೂರಪ್ಪ ತೆಗೆದುಕೊಳ್ಳುವ ಸ್ಪಾಟ್ ಡಿಸಿಷನ್ ಪಕ್ಷಕ್ಕೆ ಅನುಕೂಲ:
ಯಡಿಯೂರಪ್ಪ ವಿಶೇಷತೆ ರಾಜ್ಯದ ಜನತೆ ಅರ್ಥ ಮಾಡಿಕೊಂಡಿದ್ದಾರೆ. ಅವರು ತೆಗೆದುಕೊಳ್ಳುವ ಸ್ಪಾಟ್ ಡಿಸಿಷನ್ ಪಕ್ಷಕ್ಕೆ ಅನುಕೂಲ ಆಗಲಿದೆ. ರಾಜ್ಯಕ್ಕೂ ಪಕ್ಷಕ್ಕೂ ಅನುಕೂಲ ಆಗುವ ತೀರ್ಮಾನ ತೆಗೆದುಕೊಂಡಿದ್ದಾರೆ. ಯಾರಿಲ್ಲ ಕುಟುಂಬ ರಾಜಕಾರಣ ಮಾಡಿದವರು? ಇಂದಿರಾ ಗಾಂಧಿ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ನಾಳೆ ಯಾವ ಪಾಪು ಗಾಂಧಿ ಯಾವಾಗ ಬರುತ್ತದೋ ಗೊತ್ತಿಲ್ಲ. ಜನ ಇಷ್ಟ ಪಡ್ತಿದ್ದಾರೆ ಯಡಿಯೂರಪ್ಪ ನಿರ್ಧಾರವನ್ನು. ಮುಂದೆ ಹೈಕಮಾಂಡ್ ಎಲ್ಲವನ್ನೂ ನಿರ್ಧಾರ ಮಾಡತ್ತೆ. ಯಡಿಯೂರಪ್ಪ ಹೈಕಮಾಂಡ್ ಅನ್ನು ಒಪ್ಪಿಸಿಕೊಂಡು ಬರ್ತಾರೆ. ಸರಿ ತಪ್ಪು ಅಂತ ಚರ್ಚೆ ಮಾಡೋ ಕಾಲ ದೇಶದಲ್ಲಿ ಇಲ್ಲ ಎಂದು ಈಶ್ವರಪ್ಪ ವ್ಯಾಖ್ಯಾನಿಸಿದ್ದಾರೆ.
ವರಿಷ್ಠರು ಇಂತವರಿಗೆ ತಾಳಿ ಕಟ್ಟು ಅಂದರೆ ಅದನ್ನೇ ಮಾಡ್ತೇನೆ – ಈಶ್ವರಪ್ಪ
ಕಾಂಗ್ರೆಸ್ ನಲ್ಲಿ ಹೇಳೋರೂ ಇಲ್ಲ ಕೇಳೋರೂ ಇಲ್ಲ. ಇವತ್ತಿನ ಕಾಂಗ್ರೆಸ್ ಅಂದರೆ ತಿಹಾರ್ ಜೈಲಿಗೆ ಹೋಗಿ ಬಂದ ಡಿಕೆಶಿವಕುಮಾರ್, ಪರಪ್ಪನ ಅಗ್ರಹಾರಕ್ಕೆ ಹೋಗಿ ಬಂದ ನಲಪಾಡ್ ಆಗಿದ್ದಾರೆ. ನಾನು ಒಕ್ಕಲಿಗ, ನನ್ನ ಸಿಎಂ ಮಾಡಿ ಅನ್ನೋ ಜಾತಿವಾದಿ ಕಾಂಗ್ರೆಸ್ ಈಗ ಉಳಿದಿರುವುದು. ಜಾತಿವಾದಿಗಳಿಂದಲೇ ಕಾಂಗ್ರೆಸ್ ತುಂಬಿ ಹೋಗಿದೆ. ಸ್ವಾತಂತ್ರ್ಯ ಕ್ಕೆ ಹೋರಾಡಿದ ಯಾರೂ ಕಾಂಗ್ರೆಸ್ ನಲ್ಲಿ ಉಳಿದಿಲ್ಲ. ಜಾತಿವಾದಿಗಳು ಸಮಾಜವಾದದ ಬಗ್ಗೆ ಮಾತಾಡ್ತಾರೆ. ಯಾರು ಜಾತಿ ವಾದಿಗಳು ಯಾರು ಕೋಮುವಾದಿಗಳು ಅನ್ನೋದನ್ನು ಜನರೇ ತೀರ್ಮಾನ ಮಾಡ್ತಾರೆ. ಸಿದ್ದರಾಮಯ್ಯ- ಡಿಕೆಶಿವಕುಮಾರ್ ಇಬ್ಬರೇ ಸಾಕು ಕಾಂಗ್ರೆಸ್ ನಿರ್ನಾಮ ಮಾಡುವುದಕ್ಕೆ. ಸಿದ್ದರಾಮಯ್ಯಗೆ ಎಲ್ಲಿ ನಿಂತರೂ ಸೋಲ್ತೀನಿ ಅಂತ ಗೊತ್ತಾಗಿದೆ. ಪರಮೇಶ್ವರನ್ನು ಸೋಲಿಸಿದ್ದು ನಾನಲ್ಲ ಅಂತ ಸಿದ್ದರಾಮಯ್ಯ ಹೇಳಿಬಿಡಲಿ ನೋಡೋಣ ಎಂದು ಸವಾಲಿನ ಧಾಟಿಯಲ್ಲಿ ಈಶ್ವರಪ್ಪ ಹೇಳಿದರು.
ನಾನು ಪಕ್ಷ ಏನು ಹೇಳುತ್ತದೋ ಅದನ್ನು ಮಾಡುತ್ತೇನೆ. ನಾನು ಯಾವತ್ತೂ ನನಗೆ ಟಿಕೆಟ್ ಕೊಡಿ ಮಂತ್ರಿ ಮಾಡಿ ಅಂತ ಕೇಳಿದವನಲ್ಲ. ವರಿಷ್ಠರು ಏನು ಹೇಳ್ತಾರೋ ಅದನ್ನು ಮಾಡುತ್ತೇನೆ. ನೀವು ಇಂತವರಿಗೆ ತಾಳಿ ಕಟ್ಟು ಅಂದರೆ ಅದನ್ನೇ ಮಾಡ್ತೇನೆ. ಸಿಎಂ ಬಳಿ ಮಂತ್ರಿ ಸ್ಥಾನದ ವಿಚಾರ ಮಾತನಾಡಿಲ್ಲ. ಯಾವಾಗ ಸಚಿವ ಸ್ಥಾನ ಕೊಡ್ತಾರೆ ಅನ್ನೋದೂ ಕೂಡ ನನಗೆ ಗೊತ್ತಿಲ್ಲ ಎಂದು ಈಶ್ವರಪ್ಪ ತಿಳಿಸಿದರು.
Published On - 2:44 pm, Sat, 23 July 22