ಕರೆಂಟ್ ಬಿಲ್ ಪಾವತಿಸುವಾಗ ಈ ತಪ್ಪು ಮಾಡಬೇಡಿ; ಉಚಿತ ವಿದ್ಯುತ್ ಯೋಜನೆಯಿಂದ ವಂಚಿತರಾಗ್ತೀರಿ

ವಿದ್ಯುತ್ ಶುಲ್ಕವನ್ನು ಆನ್​​ಲೈನ್​ನಲ್ಲಿ ಪಾವತಿಸುವವರು ನೀವಾಗಿದ್ದರೆ ನೀವು ಮಾಡುವ ಒಂದು ಸಣ್ಣ ತಪ್ಪು ಉಚಿತ ವಿದ್ಯುತ್ ಯೋಜನೆ ನಿಮಗೆ ದೊರೆಯದಂತೆ ಮಾಡೀತು ಎಂಬ ಎಚ್ಚರವಿರಲಿ. ಹಾಗಾದಾರೆ ಆನ್​​ಲೈನ್​ನಲ್ಲಿ ವಿದ್ಯುತ್ ಬಿಲ್ ಪಾವತಿಸುವಾಗ ಏನು ಎಚ್ಚರಿಕೆ ವಹಿಸಬೇಕು? ಯಾವ ರೀತಿ ಪಾವತಿಸಬೇಕು? ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಕರೆಂಟ್ ಬಿಲ್ ಪಾವತಿಸುವಾಗ ಈ ತಪ್ಪು ಮಾಡಬೇಡಿ; ಉಚಿತ ವಿದ್ಯುತ್ ಯೋಜನೆಯಿಂದ ವಂಚಿತರಾಗ್ತೀರಿ
ಸಾಂದರ್ಭಿಕ ಚಿತ್ರ

Updated on: Jun 22, 2023 | 8:54 PM

ಬೆಂಗಳೂರು: ಕರ್ನಾಟಕದ ನೂತನ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 200 ಯೂನಿಟ್ ವರೆಗಿನ ಉಚಿತ ವಿದ್ಯುತ್ ನೀಡುವ ‘ಗೃಹಜ್ಯೋತಿ’ಗೆ (Gruha Jyothi Scheme) ಅರ್ಜಿ ಸಲ್ಲಿಕೆ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದೆ. ಒಂದೆಡೆ ಆನ್​ಲೈನ್​​ನಲ್ಲಿ ಯೋಜನೆಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಿದ್ದರಿಂದ ಸರ್ವರ್ ಸಮಸ್ಯೆಯಾಗಿದ್ದರೆ, ಬೆಂಗಳೂರು ವನ್, ನಾಡ ಕಚೇರಿ ಸೇರಿದಂತೆ ವಿದ್ಯುತ್ ನಿಗಮಗಳ ಇತರ ಕಚೇರಿಯಲ್ಲಿ ಅರ್ಜಿ ಸಲ್ಲಿಸುವವರ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ. ಇದೀಗ ಸರ್ವರ್ ಸಮಸ್ಯೆ ಬಗೆಹರಿದಿದೆ ಎಂದು ಹೇಳಲಾಗಿದೆ. ಇದೇನೇ ಇದ್ದರೂ ಈ ಹಿಂದಿನ ತಿಂಗಳ ವಿದ್ಯುತ್ ಶುಲ್ಕವನ್ನು (Electricity Bill) ಆನ್​​ಲೈನ್​ನಲ್ಲಿ ಪಾವತಿಸುವವರು ನೀವಾಗಿದ್ದರೆ ನೀವು ಮಾಡುವ ಒಂದು ಸಣ್ಣ ತಪ್ಪು ಉಚಿತ ವಿದ್ಯುತ್ ಯೋಜನೆ ನಿಮಗೆ ದೊರೆಯದಂತೆ ಮಾಡೀತು ಎಂಬ ಎಚ್ಚರವಿರಲಿ. ಹಾಗಾದಾರೆ ಆನ್​​ಲೈನ್​ನಲ್ಲಿ ವಿದ್ಯುತ್ ಬಿಲ್ ಪಾವತಿಸುವಾಗ ಏನು ಎಚ್ಚರಿಕೆ ವಹಿಸಬೇಕು? ಯಾವ ರೀತಿ ಪಾವತಿಸಬೇಕು? ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ವಿಶೇಷವಾಗಿ, ಬೆಸ್ಕಾಂ ಗ್ರಾಹಕರಿಗೆ ಜೂನ್ ತಿಂಗಳಲ್ಲಿ ಮನೆಗೆ ಬಂದಿರುವ ವಿದ್ಯುತ್ ಬಿಲ್ ಮತ್ತು ಆನ್​​ಲೈನ್​ನಲ್ಲಿ ತೋರಿಸುತ್ತಿರುವ ಬಿಲ್​​ನಲ್ಲಿ ವ್ಯತ್ಯಾಸ ಕಂಡುಬಂದಿದೆ. ಕೆಲವು ಮಂದಿಗೆ ಆನ್​​ಲೈನ್​​ನಲ್ಲಿ ತೀರಾ ಕಡಿಮೆ ಮೊತ್ತದ ಬಿಲ್ ಬಂದಿದೆ. ಹಾಗೆಂದು ಆನ್​ಲೈನ್​ನಲ್ಲಿ ಕಡಿಮೆ ಬಿಲ್ ಬಂದಿದೆ ಎಂದು ಅದನ್ನಷ್ಟೇ ಪಾವತಿಸಿ ಸುಮ್ಮನಾಗಿದ್ದರೆ ನಿಮ್ಮ ಗೃಹಜ್ಯೋತಿ ಅರ್ಜಿ ತಿರಸ್ಕೃತಗೊಳ್ಳುವ ಸಾಧ್ಯತೆ ಇದೆ. ಬೆಸ್ಕಾಂ ಕೂಡ ಆನ್​ಲೈನ್​ ಬಿಲ್​ನಲ್ಲಿರುವ ದೋಷದ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿದೆ.

ಆನ್​ಲೈನ್​​ನಲ್ಲಿ ಕಡಿಮೆ ಬಿಲ್ ಬಂದಿದ್ದೇಕೆ?

ಸಾಮಾನ್ಯವಾಗಿ ಮೇ ತಿಂಗಳ ವಿದ್ಯುತ್ ಶುಲ್ಕದ ಬಿಲ್ ಜೂನ್​ನಲ್ಲಿ ಬರುತ್ತದೆ. ಆದರೆ, ಅನೇಕರಿಗೆ ಆನ್​ಲೈನ್ ಆ್ಯಪ್​ನಲ್ಲಿ ಮೇ ತಿಂಗಳ ಬಿಲ್ ಅಪ್​ಡೇಟ್ ಆಗಿಲ್ಲ. ಬದಲಿಗೆ ಕೆಲವೇ ನೂರು ರೂಪಾಯಿ ಬಿಲ್ ಬಂದಿದೆ. ಆದರೆ, ಮನೆಗೆ ರೀಡಿಂಗ್ ಸಿಬ್ಬಂದಿ ಬಂದು ನೀಡಿದ ಬಿಲ್​ನಲ್ಲಿ ಮೊತ್ತ ಹೆಚ್ಚಿದೆ. ಜೂನ್ ತಿಂಗಳಲ್ಲಿ ಗ್ರಾಹಕರಿಗೆ ನೀಡಿರುವ ಬಿಲ್ ಮಾಹಿತಿ ತಂತ್ರಾಂಶದಲ್ಲಿ ಸೇರ್ಪಡೆಗೊಳಿಸುವ ಕಾರ್ಯ ಪ್ರಗತಿಯಲ್ಲಿರುವ ಕಾರಣ ಆನ್​ಲೈನ್​ನಲ್ಲಿ ಋಣಾತ್ಮಕ ಬಿಲ್​ ಬಂದಿದೆ ಎಂದು ಬೆಸ್ಕಾಂ ತಿಳಿಸಿದೆ. ಹಾಗಿದ್ದರೆ ಆನ್​ಲೈನ್​ನಲ್ಲಿ ಕಂಡುಬಂದ ಕಡಿಮೆ ಮೊತ್ತದ ಬಿಲ್ ಯಾವುದು? ಇದು ಏಪ್ರಿಲ್ ತಿಂಗಳ ಬಾಕಿ!

ಹೌದು, ವಿದ್ಯುತ್ ದರ ಹೆಚ್ಚಳ ಏಪ್ರಿಲ್​​ನಿಂದ ಪೂರ್ವಾನ್ವಯವಾಗಿದೆ. ನಾವು ಈ ಹಿಂದೆ ಏಪ್ರಿಲ್​ ತಿಂಗಳ ವಿದ್ಯುತ್ ಬಿಲ್ ಪಾವತಿಸಿದ್ದರೂ ದರ ಹೆಚ್ಚಳದ ಹೆಚ್ಚುವರಿ ಮೊತ್ತ ಪಾವತಿಸಿಲ್ಲ. ಆ ಬಾಕಿ ಮೊತ್ತವೇ ಆನ್​ಲೈನ್​ ಆ್ಯಪ್​​ನಲ್ಲಿ ಕಾಣಿಸಿದೆ. ಅದನ್ನಷ್ಟೇ ಪಾವತಿಸಿ ನಂತರ ಮೇ ತಿಂಗಳ ಬಿಲ್ ಬಾಕಿ ಇರಿಸಿಕೊಂಡಿದ್ದರೆ ನಾವು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡವರಾಗಿರುತ್ತೇವೆ. ಪರಿಣಾಮವಾಗಿ ಗೃಹಜ್ಯೋತಿ ಯೋಜನೆ ಅಡಿ ಉಚಿತ ವಿದ್ಯುತ್ ಪಡೆಯಲು ಅರ್ಹರಾಗುವುದಿಲ್ಲ. ಹೀಗಾಗಿ ನಮ್ಮ ಅರ್ಜಿಯನ್ನು ಸರ್ಕಾರ ಬಾಕಿ ಇಟ್ಟುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಮೇ ತಿಂಗಳ ಬಿಲ್ ಎಂದು ಭಾವಿಸಿ ಏಪ್ರಿಲ್​ನ ಹೆಚ್ಚುವರಿ ಮೊತ್ತವನ್ನಷ್ಟೇ ಪಾವತಿಸಿದವರು ಇನ್ನೊಮ್ಮೆ ಗಮನಹರಿಸುವುದು ಒಳಿತು.

ಇದನ್ನೂ ಓದಿ: BESCOM: ಜೂನ್ ತಿಂಗಳಲ್ಲಿ ಹೆಚ್ಚು ವಿದ್ಯುತ್ ಬಿಲ್ ಬಂದಿದೆಯೇ? ಬೆಸ್ಕಾಂ ಸ್ಪಷ್ಟೀಕರಣ ಇಲ್ಲಿದೆ

ಏಪ್ರಿಲ್​​​ನ ಹೆಚ್ಚುವರಿ ಮೊತ್ತ ಪಾವತಿಸಿದ ನಾಲ್ಕೈದು ದಿನಗಳಲ್ಲಿ ಮೇ ತಿಂಗಳ ವಿದ್ಯುತ್ ಬಿಲ್ ಆನ್​ಲೈನ್ ಆ್ಯಪ್​​ನಲ್ಲಿ ಕಾಣಿಸಿಕೊಳ್ಳಲಿದೆ ಎಂದು ಬೆಸ್ಕಾಂ ಮೂಲಗಳು ಹೇಳಿವೆ. ಹೀಗಾಗಿ ಮತ್ತೊಮ್ಮೆ ಆ್ಯಪ್ ಪರಿಶೀಲಿಸಿ ಮೇ ತಿಂಗಳ ಬಿಲ್ ಚುಕ್ತಾ ಮಾಡಿಕೊಳ್ಳುವುದು ಒಳಿತು. ಇದರಿಂದ ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯುವುದು ಸಲೀಸಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:33 pm, Wed, 21 June 23

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us