ಇದು ಬೇಲಿಯೇ ಎದ್ದು ಹೊಲ ಮೇಯ್ದ ಕತೆ; ನಕಲಿ ಕೀ ಬಳಸಿ ತನ್ನದೇ ಕಚೇರಿಯಿಂದ ಹಣ ದೋಚಿದ ಅಧಿಕಾರಿ

ಹೊಸಪೇಟೆ ನಗರದ ಗಾಂಧಿ ಕಾಲೋನಿಯಲ್ಲಿರುವ ಪುಲರ್ ಟನ್ ಇಂಡಿಯಾ ಕ್ರೆಡಿಟ್ ಕಂಪನಿ ಲಿಮಿಟೆಡ್ ನಲ್ಲಿ ಕಳ್ಳತನವಾಗಿತ್ತು. ಲಾಕರ್​​ನಲ್ಲಿದ್ದ 13 ಲಕ್ಷ 66 ಸಾವಿರಕ್ಕೂ ಅಧಿಕ ಹಣ ಕಳ್ಳತನವಾಗಿರುವ ಬಗ್ಗೆ ಹೊಸಪೇಟೆಯ ಬಡಾವಣೆ ಪೊಲೀಸ್ ಠಾಣೆಗೆ ಕಂಪನಿಯ ಮ್ಯಾನೇಜರ್ ದೂರು ಸಲ್ಲಿಸಿದ್ದರು.

ಇದು ಬೇಲಿಯೇ ಎದ್ದು ಹೊಲ ಮೇಯ್ದ ಕತೆ; ನಕಲಿ ಕೀ ಬಳಸಿ ತನ್ನದೇ ಕಚೇರಿಯಿಂದ ಹಣ ದೋಚಿದ ಅಧಿಕಾರಿ
ಸಾಂದರ್ಭಿಕ ಚಿತ್ರ
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 07, 2020 | 9:56 PM

ಬಳ್ಳಾರಿ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವ ಗಾದೆ ಇದೆ. ಹೊಸಪೇಟೆಯಲ್ಲಿ ಇದು ಅಕ್ಷರಶಃ ಸತ್ಯವಾಗಿದೆ. ಇಲ್ಲಿನ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಲಾಕರ್​​ನ ನಕಲಿ ಕೀ ಬಳಸಿ ಲಕ್ಷ ಲಕ್ಷ ಹಣ ಲಪಟಾಯಿಸಿದ್ದಾರೆ.

ಹೊಸಪೇಟೆ ನಗರದ ಗಾಂಧಿ ಕಾಲೋನಿಯಲ್ಲಿರುವ ಪುಲರ್ ಟನ್ ಇಂಡಿಯಾ ಕ್ರೆಡಿಟ್ ಕಂಪನಿ ಲಿಮಿಟೆಡ್​ನಲ್ಲಿ ಕಳ್ಳತನವಾಗಿತ್ತು. ಲಾಕರ್​​ನಲ್ಲಿದ್ದ 13 ಲಕ್ಷ 66 ಸಾವಿರಕ್ಕೂ ಅಧಿಕ ಹಣ ಕಳ್ಳತನವಾಗಿರುವ ಬಗ್ಗೆ ಹೊಸಪೇಟೆಯ ಬಡಾವಣೆ ಪೊಲೀಸ್ ಠಾಣೆಗೆ ಕಂಪನಿಯ ಮ್ಯಾನೇಜರ್ ದೂರು ಸಲ್ಲಿಸಿದ್ದರು. ದೂರು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದರು. ಕಂಪನಿಯ ಸಿಸಿ ಕ್ಯಾಮರಾ ಕೂಡ ಪರಿಶೀಲನೆ ನಡೆಸಿದ್ದರು.

ಸಿಸಿಟಿವಿ ಇರುವ ವಿಚಾರ ಗೊತ್ತುಮಾಡಿಕೊಂಡಿದ್ದ ಇವರು, ಸಿಸಿಟಿವೆಗೆ ಬಟ್ಟೆ ಮುಚ್ಚಿದ್ದರು. ಅಷ್ಟೇ ಅಲ್ಲ, ತಾವು ಯಾರೆಂದು ಬೇರೆಯವರಿಗೆ ಗೊತ್ತಾಗಬಾರದು ಎನ್ನುವ ಕಾರಣಕ್ಕೆ ಮಂಕಿ ಕ್ಯಾಪ್​​ಗಳನ್ನು ಧರಿಸಿದ್ದರು. ಕಂಪನಿ ಲಾಕರ್ ಬಳಿ ಹೋಗಿ ಕೀನಿಂದ ಲಾಕರ್ ಓಪನ್ ಮಾಡಿ ಲಕ್ಷ ಲಕ್ಷ ಹಣವನ್ನ ದೋಚಿಕೊಂಡು ಹೋಗಿದ್ದರು. ಇದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು.

ಪೊಲೀಸರಿಗೆ ಅನುಮಾನ: ಪೊಲೀಸರು ಪರಿಶೀಲನೆ ವಿವಿಧ ಹಂತಗಳಲ್ಲಿ ತನಿಖೆ ನಡೆಸಿದ್ದರು. ಆದರೆ, ಕಳ್ಳರ ಬಗ್ಗೆ ಯಾವುದೇ  ಸುಳಿವು ಸಿಕ್ಕಿರಲಿಲ್ಲ. ಪೊಲೀಸರಿಗೆ ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಮೇಲೆ ಅನುಮಾನ ಉಂಟಾಗಿತ್ತು. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಂಪನಿಯ ಮಾಜಿ ಮ್ಯಾನೇಜರ್ ಹಾಗೂ ಹಾಲಿ ಕ್ರೆಡಿಟ್ ಆಫೀಸರ್ ಕಂಪನಿಯಲ್ಲಿ ಕಳ್ಳತನ ಮಾಡಿರುವುದು ಪತ್ತೆಯಾಗಿದೆ.

ಕಳ್ಳತನ ನಡೆದಿದ್ದು ಹೇಗೆ: ಈ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವಿಠ್ಠಲ ಚಿಟ್ಟಿ ಅವರನ್ನು ಸಸ್ಪೆಂಡ್ ಮಾಡಲಾಗಿತ್ತು. ಈ ವೇಳೆ ಕಂಪನಿಯ ಲಾಕರ್​​ನ ಎರಡು ಕೀ ಗಳ ಪೈಕಿ ಒಂದು ಕೀ ಕೊಟ್ಟು ಇನ್ನೊಂದು ಕೀ ಕಳೆದು ಹೋಗಿದೆ ಎಂದು ನಾಟಕವಾಡಿದ್ದರು. ನಂತರ ಕಳ್ಳತನಕ್ಕೆ ಸ್ಕೆಚ್​ ಹಾಕಿದ್ದರು. ಇದಕ್ಕೆ ಸಾಥ್ ನೀಡಿದ್ದು ಪ್ರಸ್ತುತ ಕ್ರೆಡಿಟ್ ಅಫೀಸರ್ ಆಗಿ ಕೆಲ್ಸ ಮಾಡುತ್ತಿರುವ ಯು. ರವಿಕುಮಾರ್. ವಿಠ್ಠಲ ಹಾಗೂ ರವಿಕುಮಾರ್ ಜೊತೆಗೂಡಿ ಈ ಕಂಪನಿಯ ಲಾಕರ್ ನಲ್ಲಿ ಹಣ ಕಳ್ಳತನ ಮಾಡಿ ಪರಾರಿಯಾಗಿದ್ದರು. ಈಗ ಇಬ್ಬರು ಕಿಲಾಡಿಗಳ ಬಂಧನ ಮಾಡಲಾಗಿದ್ದು, ಬಂಧಿತರಿಂದ 13 ಲಕ್ಷ 66 ಸಾವಿರ ಜಪ್ತಿ ಮಾಡಲಾಗಿದೆ. ಜತೆಗೆ,ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಕ್ರಮ ಗಣಿಗಾರಿಕೆ: ಕಲ್ಮಶಗೊಂಡಿದೆ ಬಳ್ಳಾರಿಯ ಐತಿಹಾಸಿಕ ಹರಿಶಂಕರ ತೀರ್ಥ