ಬೆಂಗಳೂರು: ನಾಳೆ (ಮಾರ್ಚ್ 11) ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಖರೀದಿ ಭರಾಟೆ ಜೋರಾಗಿ ನಡೆಯುತ್ತಿದೆ. ಹೂವು, ಹಣ್ಣು, ಬಿಲ್ವಪತ್ರೆ, ಪೂಜಾ ಸಾಮಾಗ್ರಿ ಖರೀದಿಗಾಗಿ ಪಟ್ಟಣದ ಮಂದಿ ಮುಗಿಬಿದ್ದಿದ್ದಾರೆ. ಕೆ.ಆರ್ ಮಾರ್ಕೆಟ್, ಗಾಂಧಿಬಜಾರ್, ಮಲ್ಲೇಶ್ವರಂನಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಶಿವನ ಭಕ್ತರು ಶಿವನನ್ನು ಆರಾಧಿಸುವುದಕ್ಕೆ ಸಜ್ಜಾಗಿ ನಿಂತಿದ್ದಾರೆ. ಕೊರೊನಾ ಪರಿಯೇ ಇಲ್ಲದೇ ಶಿವನನ್ನು ಆರಾಧಿಸಲು ಇಂದಿನಿಂದ ಜನ ಮುಂದಾಗಿದ್ದು, ಮಾಸ್ಕ್, ಸಾಮಾಜಿಕ ಅಂತರ ಮರೆತು ಖರೀದಿಗೆ ಮುಂದಾಗಿದ್ದಾರೆ.
ಕೆ.ಆರ್ ಮಾರ್ಕೆಟ್ನಲ್ಲಿ ಇಂದಿನಿಂದ ಪೂಜಾ ಸಾಮಗ್ರಿಗಳು ಮಾರಾಟವಾಗುತ್ತಿದ್ದು, ಒಂದು ಮಾರು ಸೇವಂತಿಗೆ ಹೂವು 120 ರಿಂದ 150 ರೂಪಾಯಿ, ಒಂದು ಮಾರು ಮಲ್ಲಿಗೆ 120 ರೂಪಾಯಿ, ಒಂದು ಮಾರು ಕನಕಾಂಬರ 80 ರೂಪಾಯಿ ಹಾಗೂ ಬಿಡಿ ಹೂವು ಕೆಜಿಗೆ 150 ರಿಂದ 200 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.
ಚಾಮರಾಜನಗರದಲ್ಲಿ ಮಾದಪ್ಪನ ದರ್ಶನಕ್ಕೆ ನಿರ್ಬಂಧ
ಹನೂರು ತಾಲೂಕಿನ ಮಲೆ ಮಹದೇಶ್ವರ ಮಾದಪ್ಪನ ಬೆಟ್ಟದಲ್ಲಿ, ಇಂದಿನಿಂದ 4 ದಿನಗಳ ಕಾಲ ಮಾದಪ್ಪನ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ಶಿವರಾತ್ರಿ ಹಬ್ಬ ಹಿನ್ನೆಲೆ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಸ್ಥಳೀಯ ನಿವಾಸಿಗಳಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಗಿದೆ. ದೇಶದಾದ್ಯಂತ ಪ್ರಸಿದ್ಧಿ ಹೊಂದಿರುವ ಲಕ್ಷಾಂತರ ಮಂದಿ ಭಕ್ತರು ಭಾಗವಹಿಸುವ ಸಾಧ್ಯತೆ ಇದ್ದು, ಹೊರಗಿನಿಂದ ಬರುವ ಭಕ್ತರಿಗೆ ಮಾದಪ್ಪನ ದರ್ಶನಕ್ಕೆ ಅವಕಾಶ ನಿರಾಕರಿಸಲಾಗಿದೆ.
ಇದನ್ನೂ ಓದಿ: Maha Shivaratri 2021: ಮಹಾಶಿವರಾತ್ರಿ ಆಚರಣೆಯ ಹುಟ್ಟು ಹೇಗಾಯ್ತು?: ಇಲ್ಲಿದೆ ಸಂಪೂರ್ಣ ಮಾಹಿತಿ
ಇದನ್ನೂ ಓದಿ: Maha Shivaratri 2021: ಶಿವ ಶಿವಾ.. ಶಿವರಾತ್ರಿಗೆ ಇನ್ನೂ ಒಂದು ವಾರ ಇರುವಾಗಲೇ ರಣಬಿಸಿಲಿನ ಆರ್ಭಟ ಶುರು!