ಹಾವೇರಿ: ಕಾಡು ಬಿಟ್ಟು ಗ್ರಾಮವೊಂದಕ್ಕೆ ನುಗ್ಗಿದ ನರಿ ಇಬ್ಬರ ಮೇಲೆ ದಾಳಿ ನಡೆಸಿದ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ಆಕ್ರೋಶಗೊಂಡು ಜನರು ನರಿಯನ್ನು ಅಟ್ಟಾಡಿಸಿ ಕೊಂದುಹಾಕಿದ್ದಾರೆ. ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕರ್ಜಗಿಯಲ್ಲಿ ಸಲೀಂ ಯಲಗಚ್ಚ 12 ವರ್ಷ ಮತ್ತು ವೀರಣ್ಣ ಬಾಡದ 35 ವರ್ಷ ಎಂಬುವರ ಮೇಲೆ ನರಿ ದಾಳಿ ನಡೆಸಿದ್ದು, ಗಾಯಾಳುಗಳನ್ನು ಗ್ರಾಮದ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಲಾಗಿದೆ.
ರಾಜ್ಯದಲ್ಲಿ ಗ್ರಾಮಗಳಿಗೆ ನುಗ್ಗುತ್ತಿರುವ ತೋಳಗಳು ಜನರ ಮೇಲೆ ದಾಳಿ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ನಿನ್ನೆ ಹಾವೇರಿ ತಾಲೂಕಿನ ಕರ್ಜಗಿಯಲ್ಲಿ ಪ್ರಕರಣ ನಡೆದಿದ್ದರೆ ಈ ಹಿಂದೆ ಅನೇಕ ದಾಳಿಗಳು ಬೇರೆ ಜಿಲ್ಲೆಗಳಲ್ಲಿ ನಡೆದಿವೆ. ಆಗಸ್ಟ್ ತಿಂಗಳ 23ರಂದು ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದಲ್ಲಿ 9 ತಿಂಗಳ ಗಂಡು ಮಗು ನಾಪತ್ತೆಯಾಗಿತ್ತು. ಇದಾದ ಎರಡು ದಿನಗಳ ನಂತರ ಅರೆಬರೆ ತಿಂದ ಮಗುವಿನ ದೇಹ ಪತ್ತೆಯಾಗಿದ್ದು, ತೋಳ ದಾಳಿ ನಡೆಸಿ ಕೊಂದು ಹಾಕಿದ ಶಂಕೆ ವ್ಯಕ್ತವಾಗಿದೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನಲ್ಲಿ ಚಿಲ್ಕರಾಗಿ ಹಾಗೂ ಇರಕಲ್ ಗ್ರಾಮದಲ್ಲೂ ಜನರ ಮೇಲೆ ತೋಳ ದಾಳಿ ನಡೆಸಿತ್ತು. ಘಟನೆಯಲ್ಲಿ 12 ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿತ್ತು. ಬಹಿರ್ದೆಸೆಗೆ ತೆರಳಿದ್ದವರ ಮೇಲೆ ಮೊದಲು ದಾಳಿ ನಡೆಸಿದ ತೋಳ ಬಳಿಕ ಗ್ರಾಮಕ್ಕೆ ನುಗ್ಗಿ ಸಿಕ್ಕಸಿಕ್ಕವರ ಮೇಲೆ ದಾಳಿ ನಡೆಸಿತ್ತು. ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ಈ ಘಟನೆ ನಡೆದಿದ್ದು, ಬೆಳಗ್ಗೆ 5 ಗಂಟೆ ಸಮಯಕ್ಕೆ ತೋಳ ದಾಳಿ ಶುರು ಮಾಡಿ ಕೊನೆಗೆ ಇರಕಲ್ ಗ್ರಾಮದಲ್ಲಿ ಸಾವನ್ನಪ್ಪಿತ್ತು.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಟೆಂಗುಂಟಿ ಗ್ರಾಮದಲ್ಲಿ ತೋಳದ ಕಾಟಕ್ಕೆ ಬೇಸತ್ತ ಜನರು, ಕೊನೆಗೆ ಅದಕ್ಕೊಂದು ಗತಿ ಕಾಣಿಸಿಯೇ ಬಿಟ್ಟಿದ್ದರು. ಮಾರ್ಚ್ 13ರ ರಾತ್ರಿ ವೃದ್ದರು, ಮಹಿಳೆಯರು ಸೇರಿದಂತೆ ಹತ್ತು ಜನರ ಮೇಲೆ ದಾಳಿ ನಡೆಸಿ ತಲೆ ಕೈಕಾಲುಗಳಿಗೆ ಗಾಯಗೊಳಿಸಿತ್ತು. ಇದರಿಂದ ರೊಚ್ಚಿಗೆದ್ದ ಜನರು ತೋಳವನ್ನು ಅಟ್ಟಾಡಿಸಿಕೊಂಡು ಹೋಗಿ ಮನಬಂದಂತೆ ಹೊಡೆದ ಕೊನೆಗೆ ಗತಿ ಕಾಣಿಸಿದ್ದರು. ಈ ಹಿಂದೆ ಚಾಮರಾಜನಗರದಲ್ಲಿ ತೋಳವೊಂದು ಪತ್ತೆಯಾಗುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸುತ್ತು.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ