ಬೆಂಗಳೂರು, ಆಗಸ್ಟ್ 28: ಹೊಗೆ ಹೊರಸೂಸುವಿಕೆ ಕಡಿಮೆ ಮಾಡುವ ಕ್ರಮಗಳನ್ನು ಕೈಗೊಳ್ಳದ ಕಾರಣ ಕರ್ನಾಟಕದ (Karnataka) 2ನೇ ಸ್ತರದ ನಗರಗಳಲ್ಲಿ ವಾಯುಮಾಲಿನ್ಯದ (Air Pollution) ಪ್ರಮಾಣ 2030ರ ವೇಳೆಗೆ ಶೇ 40ರಷ್ಟು ಹೆಚ್ಚಾಗಲಿದೆ ಎಂದು ವಿಜ್ಞಾನ, ತಂತ್ರಜ್ಞಾನ ಮತ್ತು ನೀತಿ ಅಧ್ಯಯನ ಕೇಂದ್ರದ (CSTEP) ಅಧ್ಯಯನ ವರದಿಯೊಂದರಿಂದ ತಿಳಿದುಬಂದಿದೆ. ‘ಇಂಡಿಯಾ ಕ್ಲೀನ್ ಏರ್ ಶೃಂಗಸಭೆ (India Clean Air Summit)’ಯಲ್ಲಿ ಅಧ್ಯಯನದ ಡೇಟಾವನ್ನು ಹಂಚಿಕೊಳ್ಳಲಾಗಿದೆ. ದೇಶಾದ್ಯಂತ 17 ರಾಜ್ಯಗಳ 76 ನಗರಗಳ ಹೊರಸೂಸುವಿಕೆ ನಿಯಂತ್ರಣಕ್ಕೆ ಕಾರ್ಯತಂತ್ರ ರೂಪಿಸುವ ಸಲುವಾಗಿ ಭಾಗವಾಗಿ ಸಿಎಸ್ಟಿಇಪಿ ತಜ್ಞರು ದಾವಣಗೆರೆ, ಕಲಬುರಗಿ ಮತ್ತು ಹುಬ್ಬಳ್ಳಿ-ಧಾರವಾಡಗಳಲ್ಲಿ ಪರಿಶೀಲನೆ ನಡೆಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಮಿತಿ ಮೀರಿದ ಕೈಗಾರಿಕೆಗಳಿಂದಾಗಿ ದಾವಣಗೆರೆಯು ಅತಿ ಹೆಚ್ಚು ಮಾಲಿನ್ಯಕಾರಕ ಕಣಗಳ ಹೊರಸೂಸುವಿಕೆಯನ್ನು ಹೊಂದಿದೆ ಎಂದು ತಜ್ಞರು ಹೇಳಿದ್ದಾರೆ.
ಹೆಚ್ಚುತ್ತಿರುವ ವಾಯುಮಾಲಿನ್ಯ ತಡೆಗೆ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಮಾಲಿನ್ಯಕಾರಕ ಕಣಗಳ ಹೊರಸೂಸುವಿಕೆಗಳು ಶೇಕಡಾ 31-38 ರರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮೂರು ನಗರಗಳ ಪೈಕಿ ಕಲಬುರಗಿಯಲ್ಲಿ ಗರಿಷ್ಠ ಶೇ 38ರಷ್ಟು ಏರಿಕೆ ಕಾಣುವ ಸಾಧ್ಯತೆ ಇದ್ದು, ನಂತರ ಹುಬ್ಬಳ್ಳಿ-ಧಾರವಾಡದಲ್ಲಿ ಶೇ 34 ಮತ್ತು ದಾವಣಗೆರೆಯಲ್ಲಿ ಶೇ 31 ರಷ್ಟು ವಾಯುಮಾಲಿನ್ಯ ಹೆಚ್ಚಳವಾಗುವ ಸಾಧ್ಯತೆ ಇದೆ.
ನಗರಗಳು ಆದ್ಯತೆಯ ಕ್ರಮಗಳನ್ನು ಅಳವಡಿಸಿಕೊಂಡರೆ ಅಂತಹ ಸನ್ನಿವೇಶವನ್ನು ತಪ್ಪಿಸಬಹುದು ಮತ್ತು ಪ್ರಸ್ತುತ ಮಾಲಿನ್ಯ ಮಟ್ಟವನ್ನು ಕಡಿಮೆ ಮಾಡಬಹುದು ಎಂದು ಸಿಎಸ್‌ಟಿಇಪಿಯ ವಾಯು ಗುಣಮಟ್ಟ ವಿಭಾಗದ ಹಿರಿಯ ಸಂಶೋಧನಾ ವಿಜ್ಞಾನಿ ಪ್ರತಿಮಾ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಯಾದಗಿರಿ: ಕಲುಷಿತ ನೀರು ಹಾಗೂ ಫುಡ್ ಪಾಯಿಸನ್ನಿಂದ ಮಕ್ಕಳು ಸೇರಿ 13 ಜನರಿಗೆ ವಾಂತಿ ಭೇದಿ
ವಾಯುಮಾಲಿನ್ಯ ತಡೆಗೆ ಕೈಗೊಳ್ಳಬಹುದಾದ ಕೆಲವು ಪ್ರಮುಖ ಕ್ರಮಗಳಲ್ಲಿ, ಕಲ್ಲಿದ್ದಲಿನಿಂದ ಇತರ ಇಂಧನ ಬಳಕೆಗೆ ಆದ್ಯತೆ ನೀಡುವುದು, ಉತ್ತಮ ರಸ್ತೆ ಮೂಲಸೌಕರ್ಯ ಕಲ್ಪಿಸುವುದು, ಕೈಗಾರಿಕೆಗಳು ಮತ್ತು ಸಾರಿಗೆ ವ್ಯವಸ್ಥೆಗಳಿಗೆ ಕಟ್ಟುನಿಟ್ಟಾದ ಹೊರಸೂಸುವಿಕೆ ನಿಯಂತ್ರಣ ಮಾನದಂಡಗಳನ್ನು ನಿಗದಿಪಡಿಸುವುದು ಸೇರಿವೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ