Energy Week: ದೇಶದ ಇವಿ ರಾಜಧಾನಿ ಕರ್ನಾಟಕ: ಬಸವರಾಜ ಬೊಮ್ಮಾಯಿ

|

Updated on: Feb 06, 2023 | 12:38 PM

Basavaraja Bommai Speech: ಕರ್ನಾಟಕವು ನವೀಕರಿಸಬಹುದಾದ ಇಂಧನವನ್ನು ಅತಿಹೆಚ್ಚು ಉತ್ಪಾದಿಸುತ್ತಿದೆ. 15 ಸಾವಿರ ಮೆಗಾವಾಟ್ ವಿದ್ಯುತ್ ಪರಿಸರ ಸ್ನೇಹಿ ವಿಧಾನಗಳಲ್ಲಿ ಉತ್ಪಾದನೆಯಾಗುತ್ತಿದೆ. ಒಟ್ಟು ವಿದ್ಯುತ್​ ಉತ್ಪಾದನೆಯ ಅರ್ಧದಷ್ಟು ಪರಿಸರ ಸ್ನೇಹಿ ವಿಧಾನದಲ್ಲಿಯೇ ಉತ್ಪಾದನೆಯಾಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

Energy Week: ದೇಶದ ಇವಿ ರಾಜಧಾನಿ ಕರ್ನಾಟಕ: ಬಸವರಾಜ ಬೊಮ್ಮಾಯಿ
ನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಭಾರತದಲ್ಲಿ ಅತಿ ಹೆಚ್ಚು ವಿದ್ಯುತ್ ಚಾಲಿತ ವಾಹನಗಳು ಕರ್ನಾಟಕದಲ್ಲಿವೆ. ನವೀಕರಿಸಬಹುದಾದ ಇಂಧನವನ್ನು (Renewable Energy) ಕರ್ನಾಟಕವೇ ಅತಿ ಹೆಚ್ಚು ಉತ್ಪಾದಿಸುತ್ತಿದೆ. ನಮ್ಮ ದೇಶದ ಇವಿ ರಾಜಧಾನಿಯಾಗಿ ಕರ್ನಾಟಕವೇ ಹೊರಹೊಮ್ಮಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (CM Basavaraja Bommai) ಹೇಳಿದರು. ನೆಲಮಂಗಲ ಬಳಿ ಮಾದಾವರದಲ್ಲಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ ಇಂದು ಸೋಮವಾರ ನಡೆದ ಇಂಧನ ಸಪ್ತಾಹ ಕಾರ್ಯಕ್ರಮದಲ್ಲಿ (India Energy Week 2023) ಬೊಮ್ಮಾಯಿ ಮಾತನಾಡುತ್ತಿದ್ದರು.

ಕರ್ನಾಟಕವು ನವೀಕರಿಸಬಹುದಾದ ಇಂಧನವನ್ನು ಅತಿಹೆಚ್ಚು ಉತ್ಪಾದಿಸುತ್ತಿದೆ. 15 ಸಾವಿರ ಮೆಗಾವಾಟ್ ವಿದ್ಯುತ್ ಪರಿಸರ ಸ್ನೇಹಿ ವಿಧಾನಗಳಲ್ಲಿ ಉತ್ಪಾದನೆಯಾಗುತ್ತಿದೆ. ಒಟ್ಟು ವಿದ್ಯುತ್​ ಉತ್ಪಾದನೆಯ ಅರ್ಧದಷ್ಟು ಪರಿಸರ ಸ್ನೇಹಿ ವಿಧಾನದಲ್ಲಿಯೇ ಉತ್ಪಾದನೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಪರಿಸರ ಇಂಧನಗಳ ಹೊಸ ಅವತಾರಗಳಿಗೆ ಕರ್ನಾಟಕ ತೆರೆದುಕೊಳ್ಳಲಿದೆ. ಹೈಡ್ರೋಜನ್ ಮತ್ತು ಅಮೋನಿಯಾ ಉತ್ಪಾದನೆಗೆ ವಿಶೇಷ ಒತ್ತು ಸಿಗಲಿದೆ ಎಂದು ಬೊಮ್ಮಾಯಿ ತಿಳಿಸಿದರು.

ಕರ್ನಾಟಕದಲ್ಲಿ ಗರಿಷ್ಠ ಪ್ರಮಾಣದಲ್ಲಿ ವಿದ್ಯುತ್ ಚಾಲಿತ ವಾಹನಗಳು ಸಂಚರಿಸುತ್ತಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಮಾದರಿಯ ವಾಹನಗಳು ಪರಿಚಯವಾಗಲಿದೆ. ಎಥೆನಾಲ್ ಬೆರೆತ ಇಂಧನದ ವಿಚಾರದಲ್ಲಿ ಕರ್ನಾಟಕ ಮಹತ್ವದ ಸಾಧನೆ ಮಾಡಿದೆ. ಆರ್ಥಿಕ ಪ್ರಗತಿ ಮತ್ತು ಸಾಮಾಜಿಕ ಅಭಿವೃದ್ಧಿ ಇಂಧನ ಅತ್ಯಗತ್ಯ. ಪ್ರಧಾನಿ ಮೋದಿ ಅವರು ಇಂಧನದಲ್ಲಿ ಬದಲಾವಣೆಗೆ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಅತಿಹೆಚ್ಚು ಶಕ್ತಿ, ಅತಿ ಕಡಿಮೆ ಮಾಲಿನ್ಯ ಎನ್ನುವ ಮೋದಿ ಕನಸನ್ನು ಕರ್ನಾಟಕ ನನಸು ಮಾಡುತ್ತದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಇದನ್ನೂ ಓದಿ: Indian Oil PET Bottle: ಇಂಡಿಯನ್ ಆಯಿಲ್‌ನ ಅನ್‌ಬಾಟಲ್ಡ್ ಉಪಕ್ರಮದ ಸಮವಸ್ತ್ರ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ಕೊವಿಡ್ ನಂತರ ಹೊಸ ಗುರಿ; ಬಸವರಾಜ ಬೊಮ್ಮಾಯಿ

ಕೊವಿಡ್ ನಂತರ ಬದುಕಿನ ಹಲವು ಮುಖಗಳು ಬದಲಾಗಿವೆ. ಇದನ್ನು ಗಮನಿಸಿದ ಪ್ರಧಾನಿ ನರೇಂದ್ರ ಮೋದಿ ಹೊಸ ಗುರಿಗಳನ್ನು ಕೊಟ್ಟಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾಗಿ ವಿದ್ಯುತ್ ಉತ್ಪಾದನೆ ಮತ್ತು ವಿತರಣೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದವರು ಮೋದಿ. ‘ನೆಟ್ ಝೀರೊ’ ಎನ್ನುವುದು ಇಡೀ ಜಗತ್ತಿನ ಎದುರು ಇರುವ ದೊಡ್ಡ ಸವಾಲು. 2047ಕ್ಕೆ ಭಾರತವು ಈ ಗುರಿ ಮುಟ್ಟಬೇಕು ಎಂದು ಪ್ರಧಾನಿ ಸೂಚಿಸಿದ್ದರು. ದೇಶವು ಈ ಗುರಿ ಮುಟ್ಟಲು ಕರ್ನಾಟಕವು ತನ್ನ ಕೊಡುಗೆ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೊಮ್ಮಾಯಿ ಅವರಿಗೆ ಮುನ್ನ ಈ ಕಾರ್ಯಕ್ರಮದಲ್ಲಿ ಮೊದಲು ಮಾತನಾಡಿದ ಕೇಂದ್ರ ಇಂಧನ ಸಚಿವ ಹರ್​ದೀಪ್ ಸಿಂಗ್ ಪುರಿ, ಇಂಧನ ಕ್ಷೇತ್ರದಲ್ಲಿ ಭಾರತ ಸಾಧಿಸುತ್ತಿರುವ ಪ್ರಗತಿಯನ್ನು ಬಣ್ಣಿಸಿದರು.

ಇದನ್ನೂ ಓದಿ: India Energy Week 2023: 2030ರ ಒಳಗೆ ಭಾರತದಲ್ಲಿ ವಾಯುಮಾಲಿನ್ಯ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತೆ -ಕೇಂದ್ರ ಇಂಧನ ಸಚಿವ ಹರ್​ದೀಪ್ ಸಿಂಗ್ ಪುರಿ

ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಸಿಂಗ್ ಗೆಹ್ಲೋತ್, ರಾಜ್ಯದ ಹಲವು ಸಚಿವರು ಮೊದಲಾದವರು ಉಪಸ್ಥಿತರಿದ್ದರು. ಈ ವೇಳೆ ಇಂಡಿಯನ್ ಆಯಿಲ್ ಸಂಸ್ಥೆಯ ಅಧ್ಯಕ್ಷರು ಪ್ರಧಾನಿಗಳಿಗೆ ಪಿಇಟಿ ಬಾಟಲಿಗಳ ರೀಸೈಕ್ಲಿಂಗ್​ನಿಂದ ತಯಾರಿಸಲಾದ ಪೇಟಾ ಮತ್ತು ಕೋಟ್ ವಸ್ತ್ರವನ್ನು ಉಡುಗೆಯಾಗಿ ನೀಡಿದರು. ಇವೇ ತ್ಯಾಜ್ಯ ವಸ್ತುಗಳಿಂದ ದೇಶದ ಸಶಸ್ತ್ರ ಪಡೆಗಳಿಗೆ ಸಮವಸ್ತ್ರ ತಯಾರಿಸುವ ಅನ್​ಬಾಟಲ್ ಯೋಜನೆಯನ್ನು ಇಂಡಿಯನ್ ಆಯಿಲ್ ಹಮ್ಮಿಕೊಂಡಿದೆ.

ಇನ್ನು, ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂದರ್ಭದಲ್ಲಿ ಟ್ವಿನ್ ಕುಕ್​ಟಾಪ್ ಸೌರ ಕುಕ್ಕರ್ ಅನ್ನು ಲೋಕಾರ್ಪಣೆ ಮಾಡಿದರು. ಇಂಡಿಯನ್ ಆಯಿಲ್ ಸಂಸ್ಥೆಯೇ ಈ ಸೋಲಾರ್ ಕುಕ್ಕರ್ ಅನ್ನು ಆವಿಷ್ಕರಿಸಿದೆ.

Published On - 12:31 pm, Mon, 6 February 23