
ಬೆಂಗಳೂರು, (ಜುಲೈ 18): ಕರ್ನಾಟಕದಲ್ಲಷ್ಟೇ ಅಲ್ಲದೇ ದೇಶ-ವಿದೇಶಗಳಲ್ಲೂ ಜನರ ಮೆಚ್ಚುಗೆ ಗಳಿಸಿರುವ ನಂದಿನಿ ಹಾಲಿಗೆ ( Nandini milk)ಇನ್ಮುಂದೆ ಹೊಸ ರೂಪ ನೀಡಲು ಕೆಎಂಎಫ್ (Karnataka Milk Federation (KMF) ಮುಂದಾಗಿದೆ. ಈಗ ಪಾಲಿಥಿನ್ ಕವರ್ ನಲ್ಲಿ ಪ್ಯಾಕ್ ಆಗಿ ಹೊರಬರುತ್ತಿರುವ ನಂದಿನಿ ಹಾಲಿಗೆ ಇದೀಗ ಪರಿಸರ ಸ್ನೇಹಿ ಟಚ್ ಕೊಡಲು ಬಮೂಲ್ (ಬೆಂಗಳೂರು ಹಾಲು ಒಕ್ಕೂಟ) ಮುಂದಾಗಿದೆ. ಹೌದು….ಇನ್ಮುಂದೆ ಪಾಲಿಥಿನ್ ಪ್ಯಾಕೆಟ್ ಗಳ ಬದಲಾಗಿ ಜೈವಿಕ ಅಂಶಗಳಾಗಿ ವಿಘಟನೆಯಾಗಬಲ್ಲ (ಮಣ್ಣಿನಲ್ಲಿ ಬೇಗ ಕೊಳೆಯುವ ಪ್ಯಾಕೆಟ್) ಪ್ಯಾಕೆಟ್ ನಲ್ಲಿ ನಂದಿನಿ ಹಾಲು ಬರಲಿದೆ. ಪ್ರಯೋಗಿಕವಾಗಿ ಇದೇ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಮಾತ್ರ ಹೊಸ ರೂಪದೊಂದಿಗೆ ನಂದಿನಿ ಹಾಲಿನ ಪ್ಯಾಕೆಟ್ ಬಿಡುಗಡೆಯಾಗಲಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕದಾದ್ಯಂತ ಬಿಡುಗಡೆಯಾಗಲಿದೆ.
ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಎಂಬ ಭೂತಕ್ಕೆ ಕಡಿವಾಣ ಹಾಕಲು ರಾಜ್ಯ ಸರಕಾರ ಪ್ಲಾಸ್ಟಿಕ್ ನಿಷೇಧ ಮಾಡಿದ್ದರೂ ಸಹ ಹಾಲು ಪೂರೈಕೆಯಲ್ಲಿ ಬಳಸಲಾಗುವ ಪಾಲಿಥಿನ್ ಕವರ್‌ಗಳನ್ನು ನಿಷೇಧ ಮಾಡಿರಲಿಲ್ಲ. ಕಾರಣ ಪ್ರತಿದಿನ ಮುಂಜಾನೆ ಪ್ರತಿ ಮನೆಗೆ ನಂದಿನಿ ಹಾಲನ್ನು ಪೂರೈಕೆ ಮಾಡಲು ಪಾಲಿಥಿನ್ ಪ್ಯಾಕೆಟ್ ಬದಲಿಗೆ ಪರ್ಯಾಯ ವಸ್ತು ಇರಲಿಲ್ಲ. ಇದೀಗ ಪರಿಸರ ಸ್ನೇಹಿ ಬಯೋಡಿಗ್ರೇಡಬಲ್ (ಜೈವಿಕ ಅಂಶಗಳಾಗಿ ವಿಘಟನೆಯಾಗಬಲ್ಲ) ಪ್ಯಾಕೆಟ್ ದೊರೆತ್ತಿದ್ದು, ಇದರಲ್ಲೇ ಹಾಲು ತುಂಬಿ ಮಾರಾಟ ಮಾಡಲು ಕೆಎಂಎಫ್ ಮುಂದಾಗಿದೆ. ಮೆಕ್ಕೆಜೋಳ ಹಾಗೂ ಕಬ್ಬಿನಿಂದ ಈ ಪ್ಯಾಕೇಟ್ಗಳು ತಯಾರಾಗುವುದರಿಂದ ಕೇವಲ 90 ದಿನಗಳಲ್ಲೇ ಮಣ್ಣಿನಲ್ಲಿ ಕರಗುತ್ತವೆ.
ಪ್ರಸ್ತುತ ಹಾಲಿನ ಪ್ಯಾಕೆಟ್‌ಗೆ ಬಳಸುವ ಪಾಲಿಥಿನ್ ಕವರ್ ಮಣ್ಣಲ್ಲಿ ಕರಗಲು ಹಲವು ದಿನಗಳೇ ಬೇಕು. ಒಂದು ದಿನಕ್ಕೆ ಲಕ್ಷಾಂತರ ಕವರ್‌ಗಳನ್ನು ಬಳಸುವ ನಾವು ತಿಂಗಳು, ವರ್ಷಗಳನ್ನು ಲೆಕ್ಕ ಹಾಕದರೆ ಅಂಕಿಸಂಖ್ಯೆಗಳ ಪ್ರಮಾಣವನ್ನು ಊಹಿಸುವುದು, ಅದರಿಂದ ಪರಿಸದರ ಮೇಲಾಗುವ ದುಷ್ಪರಿಣಾಮಗಳನ್ನು ಯೋಚಿಸಿವುದು ಸಹ ಕಷ್ಟಸಾಧ್ಯ. ಇದೆಲ್ಲವನ್ನು ಮನಗಂಡು ಬಮೂಲ್ ಇದಕ್ಕೆ ಪರಿಹಾರ ಕಾಣಬೇಕೆಂಬ ಉದ್ದೇಶದಲ್ಲಿ ಕನಕಪುರದ ಶಿವನಹಳ್ಳಿ ಬಳಿ ಸ್ಥಾಪಿಸಿರುವ ಮೆಗಾಡೇರಿ ಪ್ಲಾಂಟ್‌ನಲ್ಲಿ ಹೊಸದಾಗಿ ಡಿ ಕಂಪೋಸಬಲ್ ಕವರ್‌ಗಳನ್ನು ಬಳಕೆ ಮಾಡಲು ಮುಂದಾಗಿದೆ. ಈ ಕವರ್‌ಗಳು ಪರಿಸರ ಸ್ನೇಹಿಯಾಗಿದ್ದು, ಹಾಲಿನ ಬಳಕೆ ಬಳಿಕ ಬೇಗನೇ ಮಣ್ಣಲ್ಲಿ ಕರಗುತ್ತೆ ಎನ್ನಲಾಗಿದೆ.
ವಿದೇಶಿ ತಂತ್ರಜ್ಞಾನದಲ್ಲಿ ತಯಾರಾಗಿರುವ ಬಯೋ ಡಿ ಕಂಪೋಸಬಲ್ ಕವರ್‌ಗಳನ್ನು ಜೋಳದಿಂದ ತಯಾರು ಮಾಡಲಾಗುತ್ತದೆ. ಇವು ಇತರೆ ಸಾವಯವ ವಸ್ತುಗಳಂತೆ ವಾತಾವರಣದಲ್ಲಿ ಬಹುಬೇಗ ವಿಘಟನೆ ಹೊಂದುತ್ತವೆ. ಪ್ರಸ್ತುತ ಬಳಕೆ ಮಾಡುತ್ತಿರುವ ಪಾಲಿಥಿನ್ ಮಣ್ಣಲ್ಲಿ ಕರಗಲು ವರ್ಷಗಳೇ ಬೇಕು. ಆದರೆ ಬಮೂಲ್ ಬಳಕೆ ಮಾಡಲು ಮುಂದಾಗಿರುವ ಬಯೋ ಡಿ ಕಾಂಪೋಸಬಲ್ ಕೇವಲ ಐದಾರು ತಿಂಗಳಲ್ಲೇ ಮಣ್ಣಲ್ಲಿ ಕರಗಲಿದೆ. ಈ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿಯಾಗಿ ಹೊರಬರಲಿದೆ.
ದೇಶದ ಹಾಲು ಉದ್ಯಮದಲ್ಲಿ ಪ್ರಭುತ್ವ ಸ್ಥಾಪಿಸಿರುವ ಅಮೂಲ್‌ನಿಂದಲೂ ಸಾಧ್ಯವಾಗದ ಕೆಲಸವನ್ನು ಬಮೂಲ್ ಮಾಡುತ್ತಿದ್ದು, ದೇಶದಲ್ಲೆ ಮೊದಲ ಪ್ರಯತ್ನ ಇದಾಗಿದೆ. ಪರಿಸರ ದಿನಾಚರಣೆಯಂದು ಬಮೂಲ್ ನಿರ್ದೇಶಕ ಡಿ.ಕೆ.ಸುರೇಶ್ ಬಯೋ ಡಿ ಕಾಂಪೋಸಬಲ್ ಕವರ್‌ಗಳಲ್ಲಿ ಹಾಲು ಪ್ಯಾಕ್ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಇದು ಕೇವಲ ಪ್ರಾಯೋಗಿಕವಾಗಿದ್ದು ಪ್ರಾರಂಭದಲ್ಲಿ 2 ಲಕ್ಷ ಬಯೋ ಡಿ ಕಾಂಪೋಸಬಲ್ ಕವರ್‌ಗಳನ್ನು ಬಳಕೆ ಮಾಡಲಿದ್ದು, ಮುಂದಿನ ದಿನಗಳಲ್ಲಿ ಒಕ್ಕೂಟ ವ್ಯಾಪ್ತಿಯ ಎಲ್ಲಾ ಕಡೆಯೂ ಇದನ್ನು ಬಳಕೆ ಮಾಡುವ ನಿರ್ಧಾರ ಮಾಡಲಾಗಿದೆ.
ಪರಿಸರ ಸ್ನೇಹಿ ಬಯೋ ಡಿ ಕಾಂಪೋಸಬಲ್ ಕವರ್‌ಗಳ ಬೆಲೆ ಪಾಲಿಥಿನ್ ಕವರ್‌ಗಳ ಬೆಲೆಗಿಂತ ಜಾಸ್ತಿಯಿದ್ದು, ಇವುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕಿದೆ. ಪಾಲಿಥಿನ್ ಕವರ್ ದರ ಕಡಿಮೆ ಇದ್ದರೂ ಪರಿಸರದ ಮೇಲೆ ಅದು ಉಂಟು ಮಾಡುತ್ತಿರುವ ದುಷ್ಪರಿಣಾಮವನ್ನು ಯೋಚಿಸಿದಾಗ ದರ ಜಾಸ್ತಿಯಾದರೂ ಸರಿ ಇವುಗಳನ್ನೇ ಬಳಕೆ ಮಾಡಬೇಕೆಂದು ತೀರ್ಮಾನಿಸಲಾಗಿದೆ.
Published On - 4:04 pm, Fri, 18 July 25