ಬಾಗಲಕೋಟೆಯಲ್ಲಿ ದೇಶದ ಅತಿದೊಡ್ಡ ಮಾಸ್ಕ್ ಅನಾವರಣ; ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರೆ ವೇಳೆ ಬೆಂಗಳೂರಿನ ಅಮ್ಮ ಫೌಂಡೇಶನ್​ನಿಂದ ಅಭಿಯಾನ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 31, 2021 | 10:54 PM

ಕೊರೊನಾ ಬಗ್ಗೆ ಪಾದಯಾತ್ರೆ ವೇಳೆ ಜಾಗೃತಿ ಮೂಡಿಸುವ ಯೋಜನೆ ಮಾಡಿದ್ದು, ಜಾಗೃತಿ ಸಂದೇಶ ಸಾರಿದ್ದಾರೆ. ಇದಕ್ಕಾಗಿ 8 ಅಡಿ ಉದ್ದ 6 ಅಡಿ ಅಗಲದ ಅತಿ ದೊಡ್ಡ ಮಾಸ್ಕ್ ತಯಾರಿಸಲಾಗಿದೆ. ಈ ಮಾಸ್ಕ್​ನ ಮೇಲೆ ಕೊವಿಡ್ ಜಾಗೃತಿ ಸಂದೇಶದ ಬರಹವಿದ್ದು, ಜೊತೆಗೆ 108 ಅಡಿ ಉದ್ದನೆಯ ಶ್ರೀಶೈಲ ಮಲ್ಲಯ್ಯನ ಧ್ವಜ ಮಾಡಿದ್ದಾರೆ.

ಬಾಗಲಕೋಟೆಯಲ್ಲಿ ದೇಶದ ಅತಿದೊಡ್ಡ ಮಾಸ್ಕ್ ಅನಾವರಣ; ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರೆ ವೇಳೆ ಬೆಂಗಳೂರಿನ ಅಮ್ಮ ಫೌಂಡೇಶನ್​ನಿಂದ ಅಭಿಯಾನ
ಮಾಸ್ಕ್​ನ ಮೇಲೆ ಕೊವಿಡ್ ಜಾಗೃತಿ ಸಂದೇಶದ ಬರಹದ ಮೂಲಕ ಜಾಗೃತಿ
Follow us on

ಬಾಗಲಕೋಟೆ: ಮಹಾಮಾರಿ ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಸರ್ಕಾರ ಮಾಸ್ಕ್, ಸ್ಯಾನಿಟೈಸರ್ ಹಾಗೂ ದೈಹಿಕ ಅಂತರ ಕಾಯ್ದುಕೊಳ್ಳಿ ಎಂದು ಕೋವಿಡ್ ನಿಯಮ ಪಾಲನೆಗೆ ಸೂಚಿಸಿದೆ. ಆದರೂ ಜನಸಾಮಾನ್ಯರು ಕೊವಿಡ್ ನಿಯಮ ಪಾಲನೆ ಮಾಡುತ್ತಿಲ್ಲ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಬಾಗಲಕೋಟೆ ಜನರು ಮುಂದಾಗಿದ್ದಾರೆ. ಇಲ್ಲಿನ ಜನರು ಪ್ರತಿ ವರ್ಷ ಆಂಧ್ರದ ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ಪಾದಯಾತ್ರೆ ಮೂಲಕ ಹೋಗುತ್ತಾರೆ. ಆದರೆ ಈ ಬಾರಿ ಕೊರೊನಾ ಜಾಗೃತಿಗಾಗಿ ದೇಶದಲ್ಲಿ ಅತೀ ದೊಡ್ಡ ಮಾಸ್ಕ್, ಮಲ್ಲಿಕಾರ್ಜುನ ಧ್ವಜದ ಮೂಲಕ ಭಕ್ತರು ಪಾದಯಾತ್ರೆ ಹೊರಟಿದ್ದು, ಜನರನ್ನು ಎಚ್ಚರಿಸುವ ಕಾರ್ಯ ಮಾಡುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಉತ್ತರ ಕರ್ನಾಟಕ ಭಾಗದಿಂದ ಲಕ್ಷಾಂತರ ಭಕ್ತರು ಪಾದಯಾತ್ರೆ ಹೋಗುತ್ತಾರೆ. ಇನ್ನು ರಾಜಧಾನಿ ಬೆಂಗಳೂರಿನಿಂದ 25ಜನರು ಅಮೀನಗಡ ಪಟ್ಟಣಕ್ಕೆ ಬಂದು ಇಲ್ಲಿಂದ 450 ಕಿಲೋ ಮೀಟರ್ ಪಾದಯಾತ್ರೆ ಹೋಗುತ್ತಾರೆ. ಅಮೀನಗಡದ ಯುವ ಉದ್ಯಮಿ ಮಂಜುನಾಥ್ ಬಂಡಿ ಹಾಗೂ ಅಮೀನಗಡದ ಪಾದಯಾತ್ರೆ ಸದ್ಭಕ್ತ ಮಂಡಳಿ ಹಾಗೂ ಬೆಂಗಳೂರಿನ ಅಮ್ಮ ಫೌಂಡೇಶನ್ ಈ ಬಾರಿ ಪಾದಯಾತ್ರೆಯಲ್ಲೂ ವೈಶಿಷ್ಟ್ಯ ಮೆರೆದಿದೆ.

ಕೊರೊನಾ ಬಗ್ಗೆ ಪಾದಯಾತ್ರೆ ವೇಳೆ ಜಾಗೃತಿ ಮೂಡಿಸುವ ಯೋಜನೆ ಮಾಡಿದ್ದು, ಜಾಗೃತಿ ಸಂದೇಶ ಸಾರಿದ್ದಾರೆ. ಇದಕ್ಕಾಗಿ 8 ಅಡಿ ಉದ್ದನೆಯ 6ಅಡಿ ಅಗಲದ ಅತೀ ದೊಡ್ಡ ಮಾಸ್ಕ್ ತಯಾರಿಸಲಾಗಿದೆ. ಈ ಮಾಸ್ಕ್​ ಮೇಲೆ ಕೊವಿಡ್ ಜಾಗೃತಿ ಸಂದೇಶದ ಬರಹವಿದ್ದು, ಜೊತೆಗೆ 108 ಅಡಿ ಉದ್ದನೆಯ ಶ್ರೀಶೈಲ ಮಲ್ಲಯ್ಯನ ಧ್ವಜ ಮಾಡಿದ್ದಾರೆ. ಇನ್ನು ಶ್ರೀಶೈಲದತ್ತ ಪಾದಯಾತ್ರೆ ಹೊರಡುವ ಮೂಲಕ ಜನರಲ್ಲಿ ಕೊರೊನಾ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

108 ಅಡಿ ಉದ್ದನೆಯ ಶ್ರೀಶೈಲ ಮಲ್ಲಯ್ಯನ ಧ್ವಜ

ಬಾಗಲಕೋಟೆಯ ಖ್ಯಾತ ಕಲಾವಿದ ಅಸ್ಲಾಂ ಕಲಾದಗಿ ಅವರು ಆಕರ್ಷಕ ಮಲ್ಲಯ್ಯನ ಚಿತ್ರ ಮತ್ತು ಮಾಸ್ಕ್ ಜಾಗ್ರತೆಯ ಸಂದೇಶಗಳನ್ನು ಚಿತ್ರಿಸಿದ್ದು, ಇದು ಪಾದಯಾತ್ರೆ ವೇಳೆ ನೋಡುಗರ ಕಣ್ಮನ ಸೆಳೆದಿದೆ. ಅಮೀನಗಡದ ಪ್ರಭು ಶಂಕರೇಶ್ವರ ಮಠದ ಜಗದ್ಗುರು ಶ್ರೀ ಶಂಕರ ಶ್ರೀ ರಾಜೇಂದ್ರ ಮಹಾಸ್ವಾಮಿಗಳು ಮತ್ತು ಶ್ರೀಶೈಲ ಜಗದ್ಗುರು, ಪೀಠದ ಶಾಖಾ ಮಠ ಬಳ್ಳಾರಿ ಜಿಲ್ಲೆಯ ಸಂಡೂರ ತಾಲೂಕಿನ ಡಿ.ಅಂತಾಪುರದ ಕುಮಾರ ಪಂಡಿತಾರಾಧ್ಯ ಸ್ವಾಮೀಜಿ ಗಳು ಸಾನಿಧ್ಯ ವಹಿಸಿದರು.

ಬೆಂಗಳೂರು ನಾಗಾರ್ಜುನ ವಿ. ವಿ. ಯ ಡೈರೆಕ್ಟರ್ ಶ್ರೀ ಮನೋಹರ್ ನರೋಜಿ, ರಾಷ್ಟ್ರೀಯ ವಾಲಿಬಾಲ್ ಮಾಜಿ ಆಟಗಾರ ರೋಹಿತ್ ಕೆಂಪೇಗೌಡ, ರಾಷ್ಟ್ರೀಯ ಓಟಗಾರ್ತಿ ಪ್ರಮೀಳಾ ಗಟ್ಟಿ, ಸಂಪನ್ಮೂಲಗಳ ವ್ಯಕ್ತಿ ರಮೇಶ್ ಉಮ್ರಾಣಿ, ಜ್ಞಾನಜ್ಯೋತಿ ಕಾಲೇಜ್ ಪ್ರಾಂಶುಪಾಲರಾದ ರಮೇಶ್ ಸೇರಿದಂತೆ ಅಮೀನಗಡ ಪಟ್ಟಣದ ಅನೇಕ ಗಣ್ಯ ಮಾನ್ಯರ ಸಮ್ಮುಖದಲ್ಲಿ 150ಕೆ. ಜಿ. ಹೂಗಳ ಪುಷ್ಪಾರ್ಚನೆ ಮೂಲಕ ಪಥಸಂಚಲನ ಸಾಗಿತು.

ಶ್ರೀ ಶಂಕರ ಶ್ರೀ ರಾಜೇಂದ್ರ ಮಹಾಸ್ವಾಮಿಗಳು ಮತ್ತು ಶ್ರೀಶೈಲ ಜಗದ್ಗುರು

ಇನ್ನು ಕೋವಿಡ್ ಬಗ್ಗೆ ಜಾಗೃತಿ ಮೂಡಿಸುವ ಇಂತಹ ಕಾರ್ಯದಲ್ಲೂ ಕೆಲವರು ಮಾಸ್ಕ್ ಧರಿಸಿರಲಿಲ್ಲ. ಜೊತೆಗೆ ಸಾಮಾಜಿಕ ಅಂತರ ಕೂಡ ಮರೆತಿದ್ದು, ವಿಪರ್ಯಾಸ. ಆದರೆ ಒಂದು ಒಳ್ಳೆಯ ಉದ್ದೇಶ ಪಾದಯಾತ್ರೆ ಮೂಲಕ ನಡೆಯುತ್ತಿದ್ದು, ಜನರು ಹರ್ಷ ವ್ಯಕ್ತಪಡಿಸಿದರು. ಭಕ್ತಿ- ಭಾವ, ಸಂಪ್ರದಾಯ, ಉತ್ತರ ಕರ್ನಾಟಕದಲ್ಲಿದ್ದು, ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರೆಯಲ್ಲಿ ಭಾಗಿಯಾಗುವುದಕ್ಕೆ ಸಂತಸವಾಗುತ್ತಿದೆ.ಈ ಬಾರಿ ಕೊರೊನಾ ಜಾಗೃತಿ ಮೂಡಿಸುತ್ತಿದ್ದು ಮತ್ತಷ್ಟು ಸಂತಸ ಸಂತೃಪ್ತಿ ಮೂಡಿಸಿದ ಎಂದು ಬೆಂಗಳೂರಿನ ಭಕ್ತರಾದ ರೋಹಿತ್ ಕೆಂಪೇಗೌಡ ಹೇಳಿದ್ದಾರೆ.

ಇದನ್ನೂ ಓದಿ: ಕೊರೊನಾವನ್ನೇ ಉಸಿರು ಕಟ್ಟಿಸಿ ಭಕ್ತಿಯಲ್ಲಿ ಮಿಂದೆದ್ದ ಭಕ್ತರು.. ಕೊರೊನಾ ನಡುವೆಯೂ ಅದ್ದೂರಿಯಾಗಿ ನಡೀತು ತಿಪ್ಪೇರುದ್ರಸ್ವಾಮಿ ಜಾತ್ರೆ