ಕೊರೊನಾವನ್ನೇ ಉಸಿರು ಕಟ್ಟಿಸಿ ಭಕ್ತಿಯಲ್ಲಿ ಮಿಂದೆದ್ದ ಭಕ್ತರು.. ಕೊರೊನಾ ನಡುವೆಯೂ ಅದ್ದೂರಿಯಾಗಿ ನಡೀತು ತಿಪ್ಪೇರುದ್ರಸ್ವಾಮಿ ಜಾತ್ರೆ
ಅಲ್ಲಿ ಜನಸಾಗರವೇ ಸೇರಿತ್ತು. ಮಧ್ಯ ಕರ್ನಾಟಕದ ಬೃಹತ್ ಜಾತ್ರೆಗೆ ಆ ಕ್ಷೇತ್ರ ಸಾಕ್ಷಿಯಾಗಿತ್ತು. ಕೊರೊನಾ ಭೀತಿಯಿಂದ ಜಿಲ್ಲಾಡಳಿತ ಜಾತ್ರೆ ರದ್ದುಗೊಳಿಸಿದ್ರು, ಅದ್ಧೂರಿಯಾಗೇ ಆ ಜಾತ್ರೆ ನಡೆಯಿತು. ಕೊರೊನಾ ಭಯವಿಲ್ಲದೇ ಜನ ಸಂಭ್ರಮದಲ್ಲಿ ಮುಳುಗಿದ್ರು.
ಚಿತ್ರದುರ್ಗ: ಜನ ಜನ ಜನ.. ಕಣ್ಣು ಹಾಯಿಸಿದ ಕಡೆಯಲ್ಲಿ ಜನ ಸಾಗರ. ಕಾಲಿಡಲು ಜಾಗ ವಿಲ್ಲದಷ್ಟು ಭಕ್ತ ಸಮೂಹ. ಸಾವಿರಾರೂ ಭಕ್ತರ ನಡುವೆ ಬರುತ್ತಿರುವ ಅಲಂಕಾರಗೊಂಡ ತೇರು. ಹೂವಿನಿಂದ ಕಂಗೊಳಿಸುತ್ತಿರುವ ತಿಪ್ಪೇರುದ್ರಸ್ವಾಮಿ. ಈ ರೀತಿಯ ದೃಶ್ಯ ವೈಭವ ಕಂಡು ಬಂದಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ. ಆರಾಧ್ಯ ದೈವ ಶ್ರೀಗುರು ತಿಪ್ಪೇರುದ್ರಸ್ವಾಮಿ ಜಾತ್ರೆ ಪ್ರತಿವರ್ಷದಂತೆ ಈ ವರ್ಷವೂ ಅದ್ಧೂರಿಯಾಗಿ ನಡೆಯಿತು. ಜಿಲ್ಲಾಡಳಿತ ತಿಂಗಳ ಹಿಂದೆಯೇ ಜಾತ್ರೆ, ರಥೋತ್ಸವ ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಜಾತ್ರೆಗೆ ಹೊರ ಜಿಲ್ಲೆ, ಹೊರ ರಾಜ್ಯದ ಭಕ್ತರು ಬಾರದಂತೆ ಮನವಿ ಮಾಡಿತ್ತು. ಆದ್ರೆ ಈ ತಿಪ್ಪೇರುದ್ರ ಸ್ವಾಮಿ ಜಾತ್ರೆಗೆ ಭಕ್ತ ಸಮೂಹ ಸಾಗರದಂತೆ ಹರಿದು ಬಂದಿತ್ತು.
ಜಿಲ್ಲಾಡಳಿತ ಎಷ್ಟೇ ಆದೇಶ ನೀಡಿದರು ಜನರು ಮಾತ್ರ ಜಾತ್ರೆಗೆ ಬಂದು ಭಕ್ತಿಯಲ್ಲಿ ಮಿಂದೆದ್ದಿದ್ದಾರೆ. ಅನೇಕರು ತಿಪ್ಪೇರುದ್ರಸ್ವಾಮಿಗೆ ಪ್ರಿಯವಾದ ಕೊಬ್ಬರಿಸುಟ್ಟು ಹರಕೆ ತೀರಿಸಿದರು. ಹಾಗೇ ರಥೋತ್ಸವದಲ್ಲಿ ಭಾಗಿಯಾದ ಭಕ್ತರು ತೇರನ್ನ ಎಳೆದು ಪುನೀತರಾದ್ರು.
ಒಟ್ಟಾರೆಯಾಗಿ ಜಿಲ್ಲಾಡಳಿತ ಜಾತ್ರೆ ರದ್ದುಗೊಳಿಸಿದ್ದರೂ ಸಹ ಭಕ್ತರ ಉತ್ಸಾಹ ಮಾತ್ರ ಕರಗಿರಲಿಲ್ಲ. ಹೀಗಾಗಿ, ಜಾತ್ರೆ ಎಂದಿನಂತೆ ಜನಜಾತ್ರೆಯಾಗಿಯೇ ನಡೆದಿದ್ದು ವಿಶೇಷ. ಆದ್ರೆ ಕೊರೊನಾ ಹರಡದಂತೆ ತಿಪ್ಪೇರುದ್ರಸ್ವಾಮಿಯೇ ಕಾಪಾಡಬೇಕು.
ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ 2ನೇ ಅಲೆ: ಸಾರ್ವಜನಿಕ ಸ್ಥಳಗಳಲ್ಲಿ ಜಾತ್ರೆ, ಧಾರ್ಮಿಕ ಉತ್ಸವಕ್ಕೆ ನಿರ್ಬಂಧ
Published On - 7:32 am, Tue, 30 March 21