ಅದು ವಿಶ್ವವಿಖ್ಯಾತ ಪ್ರವಾಸಿ ತಾಣ.. ವೀಕೆಂಡ್ ನಲ್ಲಿ ಅಲ್ಲಿಗೆ ಹೋಗಿ ವಾಯು ವಿಹಾರ ಮಾಡಿದ್ರೆ ಏನೋ ಮನಸಿಗೆ ಆನಂದ-ಉಲ್ಲಾಸ.. ಪ್ರಕೃತಿ ಪ್ರಿಯರಿಗಂತೂ ಹೇಳಿ ಮಾಡಿಸಿದ ಜಾಗ. ಆದ್ರೆ ಸ್ವಚ್ಚ ಸುಂದರ ಮನಮೋಹಕವಾಗಿದ್ದ ಆ ಜಾಗವನ್ನು ತೋಟಗಾರಿಕೆ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ ಮಾಡಿದ್ದೆ ತಡ… ಸಮರ್ಪಕವಾಗಿ ಗಿರಿಧಾಮ ನಿರ್ವಹಣೆ ಮಾಡದ ಕಾರಣ ಸುಂದರವಾಗಿದ್ದ ಆ ಸ್ಥಳ ಈಗ ಹಾಳು ಕೊಂಪೆಯಂತಾಗಿದ್ದು, ಪ್ರವಾಸಿಗರು ಬೇಸರ ಪಟ್ಟುಕೊಳ್ತಿದ್ದಾರೆ. ಅಷ್ಟಕ್ಕೂ ಅದ್ಯಾವ ಸ್ಥಳ ಅಂತೀರಾ ಈ ವರದಿ ನೋಡಿ!!
ಪ್ರಕೃತಿ ಸೌಂದರ್ಯ, ಸೂರ್ಯೋದಯದ ವಿಹಂಗಮ ನೋಟ, ತಂಪಾದ ಹವಾಗುಣ, ತುಂತುರು ಮಳೆ, ಬೆಳ್ಳಿ ಮೋಡಗಳ ನಿನಾದಕ್ಕೆ ಖ್ಯಾತಿಯಾಗಿರೊ… ಇದು, ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿ ಗಿರಿಧಾಮ. ವೀಕೆಂಡ್ ನಲ್ಲಿ ನಂದಿ ಗಿರಿಧಾಮಕ್ಕೆ ಹೋಗಿ ವಾಯುವಿಹಾರ ಮಾಡಿದ್ರೆ ಏನೋ ಮನಸಿಗೆ ಆನಂದ-ಉಲ್ಲಾಸವಾಗುವ ತಾಣ. ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದ ಸುಂದರ ತಾಣ ತೋಟಗಾರಿಕೆ ಇಲಾಖೆ ನಿರ್ವಹಣೆಯಲ್ಲಿ ಇತ್ತು. ಆದ್ರೆ ರಾಜ್ಯ ಸರ್ಕಾರ ಇತ್ತೀಚೆಗೆ ಗಿರಿಧಾಮದ ವಸತಿ ಗೃಹಗಳು, ಹೋಟಲ್ ಕಟ್ಟಡಗಳನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ ಮಾಡಿದೆ.
ಆದ್ರೆ ಉದ್ಯಾನವನಗಳನ್ನು ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ಬಿಟ್ಟಿದೆ. ಆದರೆ ಗಿರಿಧಾಮ ಆದಾಯ ಪ್ರವಾಸೋದ್ಯಮ ಇಲಾಖೆಗೆ ಸೇರುವ ಕಾರಣ ತೋಟಗಾರಿಕೆ ಇಲಾಖೆ ಉದ್ಯಾನವನಗಳ ನಿರ್ವಹಣೆಗೆ ನಿರಾಸಕ್ತಿ ತಾಳಿದೆ. ನೂರಾರು ಎಕರೆ ಉದ್ಯಾನವನ ನಿರ್ವಹಣೆಗೆ ಹಣವಿಲ್ಲದ ಕಾರಣ ಈಗ ಗಿರಿಧಾಮದಲ್ಲಿ ಎಲ್ಲಿ ನೋಡಿದ್ರೂ .. ಎತ್ತ ನೋಡಿದ್ರೂ… ಬೀರ್ ಬಾಟಲಿಗಳು, ನಿಷೇಧಿತ ಪ್ಲಾಸ್ಟಿಕ್ ಬಾಟಲಿಗಳು, ಅಲ್ಲಲ್ಲಿ ಬಿದ್ದಿರುವ ಡಸ್ಟ್ ಬಿನ್ ಗಳು, ಮುರಿದು ಬಿದ್ದ ಆಸನಗಳು ಕಾಣ್ತಿವೆ ಇದ್ರಿಂದ ಪ್ರವಾಸಿಗರು ಯಾಕಾದ್ರೂ… ಗಿರಿಧಾಮಕ್ಕೆ ಬಂದಿದ್ದೇವೆ ಅಂತ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಸ್ವಚ್ಚ ಸುಂದರ ಮನಮೋಹಕವಾಗಿದ್ದ ನಂದಿ ಗಿರಿಧಾಮ, ಹಾಳು ಕೊಂಪೆಯಾಗಿರುವುದನ್ನು ಮನಗಂಡ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಸೇರಿದಂತೆ ಗಿರಿಧಾಮಕ್ಕೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಗಿರಿಧಾಮಕ್ಕೆ ಭೇಟಿ ನೀಡಿ ಗಿರಿಧಾಮವನ್ನು ಪರಿಶೀಲನೆ ನಡೆಸಿದ್ದರು. ಗಿರಿಧಾಮದ ಉದ್ಯಾನವನಗಳ ನಿರ್ವಹಣೆ ಹಾಗೂ ಸ್ವಚ್ಚತೆಯನ್ನು ತೋಟಗಾರಿಕೆ ಇಲಾಖೆ ನಿರ್ವಹಿಸಬೇಕು, ಆದ್ರೆ ಲೋಪದೋಷ ಕಂಡು ಬಂದಿದೆ. ಇದ್ರಿಂದ ಇದೇ ಭಾನುವಾರ ಜಿಲ್ಲಾಡಳಿತದ ಸಹಯೋಗದಲ್ಲಿ ಗಿರಿಧಾಮ ಸ್ವಚ್ಚತೆ ಅಭಿಯಾನ ಕೈಗೊಂಡಿದ್ದಾಗಿ ತಿಳಿಸಿದ್ರು.
ನಂದಿ ಗಿರಿಧಾಮಕ್ಕೆ ಬರುವ ಪ್ರವಾಸಿಗರಿಂದ ಪ್ರವೇಶ ಶುಲ್ಕ, ಬಸ್ ಶುಲ್ಕ, ನೀರಿನ ಶುಲ್ಕ ಅಂತ ಹೆಜ್ಜೆ ಹೆಜ್ಜೆಗೂ ದುಬಾರಿ ಹಣ ವಸೂಲಿ ಮಾಡುವ ಪ್ರವಾಸೋದ್ಯಮ ಇಲಾಖೆ, ಕೇವಲ ಅತಿಥಿ ಗೃಹಗಳ ನಿರ್ವಹಣೆ ಮಾಡಿಕೊಂಡು ಜಣ ಜಣ ಕಾಂಚಣ ಎಣಿಸುತ್ತಿದೆ. ಆದರೆ ಆದಾಯವಿಲ್ಲದ ತೋಟಗಾರಿಕೆ ಇಲಾಖೆ ಕಣ್ಮುಂದೆ ಗಿಡ ಮರ ಬಳ್ಳಿ ಒಣಗಿ ಹಾಳಾಗುತ್ತಿರುವ ದೃಶ್ಯ, ಉದ್ಯಾನವನಗಳ ಕೊಳಕನ್ನು ನೋಡಿಕೊಂಡು ಕೈಚೆಲ್ಲಿ ಕುಳಿತಿದೆ.
-ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಫುರ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: ರಾಧಿಕಾ ಪಂಡಿತ್ ಮನೆಯಲ್ಲಿ ಯುಗಾದಿ ಸಂಭ್ರಮ; ಹೋಳಿಗೆ ಊಟ ಸವಿದ ಯಶ್ ಕುಟುಂಬ
Radhika Pandit: ಪತ್ನಿ ರಾಧಿಕಾ ಪಂಡಿತ್ ಕೆನ್ನೆಗೆ ಮುತ್ತಿಟ್ಟ ಯಶ್; ಫೋಟೋ ವೈರಲ್