ಬೆಂಗಳೂರು: ಸಾಮಾಜಿಕ ಕಾರ್ಯಗಳಲ್ಲಿ ಸದಾ ತೊಡಗಿಸಿಕೊಂಡಿರುವ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರು ರಾಜ್ಯದಲ್ಲಿ ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ನೆರವು ನೀಡಲು ಮುಂದಾಗಿದ್ದಾರೆ. ಈ ಸಂಬಂಧ ಸಚಿವ ಸುರೇಶ್ ಕುಮಾರ್ ಫೇಸ್‌ಬುಕ್ ಪೋಸ್ಟ್ ಮಾಡಿದ್ದಾರೆ.
ನಿನ್ನೆ ಬೆಳಗ್ಗೆ ನನಗೆ ಇನ್ಫೋಸಿಸ್ ಫೌಂಡೇಷನ್ನಿಂದ ಕರೆ ಬಂದಿತ್ತು. ಸುಧಾಮೂರ್ತಿ ಅವರು ಮಾತನಾಡಿ ದೇಶ-ವಿದೇಶಗಳಲ್ಲಿ ಆತಂಕ ತಂದಿರುವ ಕೊರೊನಾ ವೈರಸ್ ವ್ಯಾಪಕವಾಗಿ ಹರಡದಂತೆ ನಮ್ಮ ರಾಜ್ಯದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು.
ಒಂದು ಆಸ್ಪತ್ರೆಯನ್ನು ತಮಗೆ ವಹಿಸಿದರೆ ಅದನ್ನು ಚಿಕಿತ್ಸೆಗಾಗಿ ತಮ್ಮ ಸಂಸ್ಥೆಯ ವೆಚ್ಚದಲ್ಲಿ ಪೂರ್ಣಪ್ರಮಾಣದಲ್ಲಿ ಸಜ್ಜುಗೊಳಿಸುವುದಾಗಿ, ಅಗತ್ಯ ಉಪಕರಣಗಳನ್ನೂ ಒದಗಿಸುವುದಾಗಿ ಹೇಳಿದರು. ಅಷ್ಟೇ ಅಲ್ಲ, ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಆರೋಗ್ಯ ಸಚಿವ ಶ್ರೀರಾಮುಲು ಅವರೊಂದಿಗೂ ತಮ್ಮ ಈ ಪಾತ್ರದ ಕುರಿತು ಚರ್ಚಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಿಗೂ ಈ ಬಗ್ಗೆ ಪತ್ರ ಬರೆದಿದ್ದಾರೆ. ಸದ್ಯದಲ್ಲಿಯೇ ಈ ಕುರಿತು ಉನ್ನತಮಟ್ಟದ ಸಭೆ ನಡೆಯಲಿದೆ.
ಮಕ್ಕಳ ಹಿತವನ್ನು ಗಮನದಲ್ಲಿಟ್ಟುಕೊಂಡು ಶಾಲೆಗಳಿಗೆ ರಜೆ ಘೋಷಿಸಿರುವ ಕ್ರಮ ವಿವರಿಸಿದೆ. ಇಷ್ಟು ಬೇಗ ಕ್ರಮ ತೆಗೆದುಕೊಂಡಿರುವ ಬಗ್ಗೆ ಸುಧಾಮೂರ್ತಿ ಅವರು ಸಂತಸ ವ್ಯಕ್ತಪಡಿಸಿದರು. ಈ ಹೃದಯವಂತಿಕೆ ನನ್ನ ಹೃದಯ ತುಂಬಿತು. ನಿಜವಾದ ಮಾತೃಕಾಳಜಿ ಈ ಮಹಾತಾಯಿಯದು ಎಂದು ಸುರೇಶ್ ಕುಮಾರ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
Published On - 9:10 am, Fri, 13 March 20