ಬೆಂಗಳೂರು: ದಸರಾ ಆರಂಭದ ಹೊತ್ತಿನಲ್ಲೇ ಬೆಂಗಳೂರು ನಗರದಲ್ಲಿ 50ಕ್ಕೂ ಹೆಚ್ಚು ಕಡೆ ಐಟಿ ದಾಳಿ ನಡೆದಿದೆ. ಕರ್ನಾಟಕ ಗೋವಾ ಘಟಕದ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಉದ್ಯಮಿಗಳು ಮತ್ತು ಗುತ್ತಿಗೆದಾರರ ಮನೆಗಳು ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ತಂಡೋಪಾದಿಯಲ್ಲಿ ದಾಳಿಗಳನ್ನು ನಡೆಸಿದ್ದಾರೆ. ದಾಖಲಾತಿಗಳ ಪರಿಶೀಲನೆ ನಡೆದಿದೆ. 300ಕ್ಕೂ ಹೆಚ್ಚು ಆದಾಯ ತೆರಿಗೆ ಅಧಿಕಾರಿಗಳು 120 ವಾಹನಗಳಲ್ಲಿ ಆಗಮಿಸಿದ್ದಾರೆ.
ಕೊಡಿಗೇಹಳ್ಳಿ ಸಹಕಾರ ನಗರದಲ್ಲಿರುವ ರಾಹುಲ್ ಎಂಟರ್ ಪ್ರೈಸಸ್ ಮೇಲೆ ಐಟಿ ದಾಳಿ ನಡೆದಿದೆ. ರಾಹುಲ್ ಎಂಟರ್‌ಪ್ರೈಸಸ್ ಸಿಮೆಂಟ್, ಸ್ಟೀಲ್ ಡೀಲರ್ ಕಚೇರಿಯಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮೂರು ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ ಆಗಮಿಸಿರುವ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ.
ಚಾರ್ಟೆಡ್ ಅಕೌಂಟೆಂಟ್ ಅಮಲಾ ಮನೆ ಮೇಲೆ IT ರೇಡ್
ಬೆಂಗಳೂರಿನ ಹೆಗಡೆ ನಗರದಲ್ಲಿರುವ ಎನ್.ಆರ್. ರಾಯಲ್ ಅಪಾರ್ಟ್‌ಮೆಂಟ್ ನಲ್ಲಿರುವ ಚಾರ್ಟೆಡ್ ಅಕೌಂಟೆಂಟ್ ಅಮಲಾ ಮನೆ ಮೇಲೆ IT ರೇಡ್ ನಡೆದಿದೆ. 10ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ದಾಳಿ, ಪರಿಶೀಲನೆ ನಡೆದಿದೆ.
ಯಡಿಯೂರಪ್ಪ ಆಪ್ತನ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ
ಮಾಜಿ ಮುಖ್ಯಮಂತ್ರಿ, ಬಿಜೆಪಿ ಪ್ರಭಾವೀ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಆಪ್ತನ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಬಿಎಸ್ ಯಡಿಯೂರಪ್ಪ ಆಪ್ತ ಸಹಾಯಕ ಉಮೇಶ್ ಮನೆ ಮೇಲೆ ದಾಳಿ ನಡೆದಿದೆ.
ಬೆಂಗಳೂರಿನ ಭಾಷ್ಯಂ ಸರ್ಕಲ್‌ನಲ್ಲಿರುವ ಬಿಎಸ್ ಯಡಿಯೂರಪ್ಪ ಆಪ್ತ ಸಹಾಯಕ ಉಮೇಶ್ ಮನೆ ಮತ್ತು ಕಚೇರಿ ಸೇರಿ 4 ಕಡೆಗಳಲ್ಲಿ ಐಟಿ ದಾಳಿ ನಡೆದಿದೆ. ಉಮೇಶ್ ಅವರು ಮಾಜಿ ಸಿಎಂ ಯಡಿಯೂರಪ್ಪ, ಸಂಸದ ರಾಘವೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಮೂವರಿಗೂ ಪಿಎ ರೀತಿ ಕೆಲಸ ಮಾಡುತ್ತಿದ್ದರು. ರಾಘವೇಂದ್ರ ಬೆಂಗಳೂರಿಗೆ ಬಂದಾಗ ರಾಘವೇಂದ್ರ ಅವರ ಕೆಲಸಗಳ ನಿರ್ವಹಣೆ ಮಾಡುತ್ತಿದ್ದರು. ಯಡಿಯೂರಪ್ಪ ವಿಪಕ್ಷ ನಾಯಕರಾಗಿದ್ದಾಗ ಮತ್ತು ಮುಖ್ಯಮಂತ್ರಿ ಆಗಿದ್ದಾಗ ಅವರಿಗೆ ಉಮೇಶ್ ಪಿಎ ಆಗಿದ್ದರು.
Published On - 8:17 am, Thu, 7 October 21