IT raid: ಬಿ.ಎಸ್. ಯಡಿಯೂರಪ್ಪ ಆಪ್ತನ ಮನೆ ಮೇಲೆ ಐಟಿ ದಾಳಿ; ಬಿಎಂಟಿಸಿ ಕಂಡಕ್ಟರ್ ಆಗಿದ್ದ ಆಪ್ತ ಉಮೇಶ್ ಹಿನ್ನೆಲೆ ಏನು?
BS Yediyurappa: ಬೆಂಗಳೂರಿನ ಭಾಷ್ಯಂ ಸರ್ಕಲ್‌ನಲ್ಲಿರುವ ಬಿಎಸ್ ಯಡಿಯೂರಪ್ಪ ಆಪ್ತ ಸಹಾಯಕ ಉಮೇಶ್ ಮನೆ ಮತ್ತು ಕಚೇರಿ ಸೇರಿ 4 ಕಡೆಗಳಲ್ಲಿ ಐಟಿ ದಾಳಿ ನಡೆದಿದೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬಿಜೆಪಿ ಪ್ರಭಾವೀ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಆಪ್ತನ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಬಿಎಸ್ ಯಡಿಯೂರಪ್ಪ ಆಪ್ತ ಸಹಾಯಕ ಉಮೇಶ್ ಮನೆ ಮೇಲೆ ದಾಳಿ ನಡೆದಿದೆ.
ಬೆಂಗಳೂರಿನ ಭಾಷ್ಯಂ ಸರ್ಕಲ್‌ನಲ್ಲಿರುವ ಬಿಎಸ್ ಯಡಿಯೂರಪ್ಪ ಆಪ್ತ ಸಹಾಯಕ ಉಮೇಶ್ ಮನೆ ಮತ್ತು ಕಚೇರಿ ಸೇರಿ 4 ಕಡೆಗಳಲ್ಲಿ ಐಟಿ ದಾಳಿ ನಡೆದಿದೆ. ಉಮೇಶ್ ಅವರು ಮಾಜಿ ಸಿಎಂ ಯಡಿಯೂರಪ್ಪ, ಸಂಸದ ರಾಘವೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಮೂವರಿಗೂ ಪಿಎ ರೀತಿ ಕೆಲಸ ಮಾಡುತ್ತಿದ್ದರು. ರಾಘವೇಂದ್ರ ಬೆಂಗಳೂರಿಗೆ ಬಂದಾಗ ರಾಘವೇಂದ್ರ ಅವರ ಕೆಲಸಗಳ ನಿರ್ವಹಣೆ ಮಾಡುತ್ತಿದ್ದರು. ಯಡಿಯೂರಪ್ಪ ವಿಪಕ್ಷ ನಾಯಕರಾಗಿದ್ದಾಗ ಮತ್ತು ಮುಖ್ಯಮಂತ್ರಿ ಆಗಿದ್ದಾಗ ಅವರಿಗೆ ಉಮೇಶ್ ಪಿಎ ಆಗಿದ್ದರು.
ಉಮೇಶ್ ಬಿಎಂಟಿಸಿ ಬಸ್ ಕಂಡಕ್ಟರ್ ಕಂ ಡ್ರೈವರ್ ಆಗಿದ್ದ: BSY ಮುಖ್ಯಮಂತ್ರಿ ಆಗಿದ್ದಾಗ ಪಿಎ ಆಗಿದ್ದ ಉಮೇಶ್ ಅದಕ್ಕೂ ಮೊದಲು ಬಿಎಂಟಿಸಿ ಬಸ್ ಕಂಡಕ್ಟರ್ ಕಂ ಡ್ರೈವರ್ ಆಗಿದ್ದ. ಯಲಹಂಕದ ಪುಟ್ಟೇನಹಳ್ಳಿ ಬಿಎಂಟಿಸಿ ಡಿಪೋದಲ್ಲಿ ಕೆಲಸ ಮಾಡುತ್ತಿದ್ದ. ಡೆಪ್ಯುಟೇಷನ್ ಮೇಲೆ ಬಿಎಸ್‌ವೈ ಆಪ್ತನಾಗಿ ಕೆಲಸ ಮಾಡ್ತಿದ್ದ ಉಮೇಶ್ ಭಾಷ್ಯಂ ಸರ್ಕಲ್ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ.
ಭಾಷ್ಯಂ ಸರ್ಕಲ್‌ನಲ್ಲಿ ಉಮೇಶ್ ಸುಮಾರು 10 ವರ್ಷದಿಂದ ಬಾಡಿಗೆ ಮನೆಯಲ್ಲಿದ್ದಾರೆ. ಆ ಬಾಡಿಗೆ ಮನೆಯಲ್ಲಿಯೇ ಆದಾಯ ತೆರಿಗೆ ಇಲಾಖೆಯ 10 ಅಧಿಕಾರಿಗಳಿಂದ ಉಮೇಶ್ ವಿಚಾರಣೆ ನಡೆದಿದೆ. ಇನ್ನು ಯಡಿಯೂರಪ್ಪ ಅವರು ಶಿವಮೊಗ್ಗಕ್ಕೆ ತೆರಳಿದ್ದಾರೆ.
ಯಾರೀತ ಉಮೇಶ್?
ಶಿವಮೊಗ್ಗ ಮೂಲದ ಉಮೇಶ್, ಬಾಷ್ಯಂ ಸರ್ಕಲ್ ನಲ್ಲಿ 15 x 40 ಅಳತೆಯ ಮನೆಯೊಂದರಲ್ಲಿ ಬಾಡಿಗೆಗೆ ಇದ್ದಾರೆ. ಈ ಮನೆಗೆ ಬಂದು ಸುಮಾರು 8 ವರ್ಷ ಆಗಿರಬಹುದು. ಆದರೆ ಇಷ್ಟು ಚಿಕ್ಕ ಮನೆಗೇ ಭಾರೀ ಪ್ರಮಾಣದ ಸರ್ಕಾರಿ ಭದ್ರತೆ ಹಾಕಿಸಿಕೊಂಡಿದ್ದರು. ಆಯನೂರು ಮೂಲದ ಉಮೇಶ್ ಅವರು ಆಯನೂರು ಮಂಜುನಾಥ್ ಅವರಿಗೆ ಮೊದಲು ಪಿಎ ಆಗಿದ್ದರು.
ಯಡಿಯೂರಪ್ಪ ಜೊತೆ 2008 ರಿಂದಲೂ ಇದ್ದಾರೆ. ಉಮೇಶ್ ಈಗಲೂ ಕೂಡ ಸರ್ಕಾರಿ ವಾಹನವನ್ನ ಬಳಸುತ್ತಿದ್ದಾರೆ. ವರ್ಗಾವಣೆ, ಕಡತ ವಿಲೇವಾರಿಯಂತಹ ಕೆಲಸ ಉಮೇಶ್ ಮಾಡುತ್ತಿದ್ದರು ಅನ್ನೋ ಆರೋಪಗಳು ಇವೆ. ನೀರಾವರಿ ಇಲಾಖೆಯ ಪ್ರಮುಖ ಕಡತಗಳನ್ನ ವಿಲೇವಾರಿ ಮಾಡುತ್ತಿದ್ದ ಅನ್ನೋ ಆರೋಪವೂ ಈತನ ಮೇಲಿದೆ.
ಯಡಿಯೂರಪ್ಪಗಿಂತ ವಿಜಯೇಂದ್ರಗೇ ಹೆಚ್ಚು ಅಪ್ತ ಬಿಎಸ್ ಯಡಿಯೂರಪ್ಪ ಅವರಿಗಿಂತ ಬಿ ವೈ ವಿಜಯೇಂದ್ರ ಅವರಿಗೇ ಹೆಚ್ಚು ಅಪ್ತ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. ಬಿಎಸ್ ವೈ ಮುಖ್ಯಮಂತ್ರಿಯಾಗಿದ್ದಾಗ ಎರಡು ಅವಧಿಯಲ್ಲೂ ಉಮೇಶ್ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಈತನ ಸಹೋದರ ಮಲ್ಲೇಶ್ವರ ಎಂಬುವವರು ಆಯನೂರು ಗ್ರಾ ಪಂ ಸದಸ್ಯ ನಾಗಿದ್ದಾನೆ. ಸದ್ಯದ ಮಾಹಿತಿ ಪ್ರಕಾರ ಆಯನೂರಿನಲ್ಲಿರುವ ಉಮೇಶ್ ಮನೆಗೆ ಯಾವುದೇ ಐಟಿ ದಾಳಿ ನಡೆದಿಲ್ಲ.
ಚಾರ್ಟೆಡ್ ಅಕೌಂಟೆಂಟ್ ಅಮಲಾ ಮನೆ ಮೇಲೆ IT ರೇಡ್
ರಾಜಧಾನಿ ಬೆಂಗಳೂರಿನಲ್ಲಿಂದು ದಸರಾ ಆರಂಭದ ಹೊತ್ತಿನಲ್ಲೇ ಬೆಂಗಳೂರು ನಗರದಲ್ಲಿ 50ಕ್ಕೂ ಹೆಚ್ಚು ಕಡೆ ಐಟಿ ದಾಳಿ ನಡೆದಿದೆ. ಕರ್ನಾಟಕ ಗೋವಾ ಘಟಕದ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಉದ್ಯಮಿಗಳು ಮತ್ತು ಗುತ್ತಿಗೆದಾರರ ಮನೆಗಳು ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ತಂಡೋಪಾದಿಯಲ್ಲಿ ದಾಳಿಗಳನ್ನು ನಡೆಸಿದ್ದಾರೆ. ದಾಖಲಾತಿಗಳ ಪರಿಶೀಲನೆ ನಡೆದಿದೆ. 300ಕ್ಕೂ ಹೆಚ್ಚು ಆದಾಯ ತೆರಿಗೆ ಅಧಿಕಾರಿಗಳು 120 ವಾಹನಗಳಲ್ಲಿ ಆಗಮಿಸಿದ್ದಾರೆ.
Ex CM BSY ಆಪ್ತನ ಮನೆ ಮೇಲೆ IT Raid ಬಗ್ಗೆ ವಿಶ್ವನಾಥ್ ರಿಯಾಕ್ಷನ್|H.Vishwanath|Tv9kannada
Published On - 10:24 am, Thu, 7 October 21