ಭಾರತ ನನಗೆ ಅಚ್ಚುಮೆಚ್ಚು, ಗೋಕರ್ಣ ಅಂದ್ರೆ ಪಂಚ ಪ್ರಾಣ -ಇಟಲಿಯ ಶಿಕ್ಷಕನಾದ ಹವ್ಯಾಸಿ ಕೃಷಿಕ!

ತಮ್ಮ ದೇಶಕ್ಕೆ ಮರಳಾಗಲಿಲ್ಲ ಎಂದು ಚೂರೂ ಕೊರಗದೆ ಇದ್ದ ಸ್ಥಳದಲ್ಲೇ ಏನಾದರೂ ಮಾಡಬೇಕೆಂದು ನಿರ್ಧರಿಸಿ ತಾವು ವಾಸವಿರುವ ಮನೆಯ ಹಿತ್ತಲ್ಲಿನಲ್ಲಿ ಕೃಷಿಯಲ್ಲಿ ತೊಡಗಿಕೊಂಡು ಸೈ ಎನಿಸಿಕೊಂಡ ಕೆಲವು ವಿದೇಶಿಗರೂ ಇದ್ದಾರೆ. ಅಂಥದ್ದೇ ಓರ್ವ ಪ್ರವಾಸಿಗ ಇಟಲಿ ದೇಶದ ನಿವಾಸಿ ಮೌರಿಯಾ .

ಭಾರತ ನನಗೆ ಅಚ್ಚುಮೆಚ್ಚು, ಗೋಕರ್ಣ ಅಂದ್ರೆ ಪಂಚ ಪ್ರಾಣ -ಇಟಲಿಯ ಶಿಕ್ಷಕನಾದ ಹವ್ಯಾಸಿ ಕೃಷಿಕ!
ಇಟಲಿ ದೇಶದ ಮೌರಿಯಾ ಕೃಷಿಯಲ್ಲಿ ತೊಡಗಿಕೊಂಡಿರುವ ಛಾಯಾಚಿತ್ರ
shruti hegde

| Edited By: sadhu srinath

Dec 11, 2020 | 12:39 PM

ಉತ್ತರ ಕನ್ನಡ: ಲಾಕ್​ಡೌನ್ ಅವಧಿಯಲ್ಲಿ ಕೆಲಸ ಕಳೆದು ಕೊಂಡವರು ಹಲವರು. ಉದ್ಯೋಗ ಇಲ್ಲದೆ ಪರದಾಡಿದ ಕೆಲವರು ತಮ್ಮ ಊರುಗಳಿಗೆ ವಾಪಸ್ ಹೋಗಿದ್ದೂ ಉಂಟು . ಹೀಗೆ, ಸಂಕಷ್ಟಗಳ ಸರಮಾಲೆಯೇ ಜನರನ್ನು ಹಿಂಡಿ ಹಿಪ್ಪೆ ಮಾಡಿದ್ದ ಸಮಯವದು. ಕೇವಲ ದೇಶದವರಷ್ಟೇ ಅಲ್ಲ, ಜಿಲ್ಲೆಯ ಗೋಕರ್ಣಕ್ಕೆ ಬಂದಿದ್ದ ಕೆಲ ವಿದೇಶಿ ಪ್ರವಾಸಿಗರು ಸಹ ಲಾಕ್​ಡೌನ್ ವೇಳೆ ತಮ್ಮ ದೇಶಕ್ಕೆ ತೆರಳಲಾಗದೆ ಇಲ್ಲೇ ಉಳಿಯಬೇಕಾಯ್ತು. ಆದರೆ, ತಮ್ಮ ದೇಶಕ್ಕೆ ಮರಳಾಗಲಿಲ್ಲ ಎಂದು ಚೂರೂ ಕೊರಗದೆ ಇದ್ದ ಸ್ಥಳದಲ್ಲೇ ಏನಾದರೂ ಮಾಡಬೇಕೆಂದು ನಿರ್ಧರಿಸಿ ತಾವು ವಾಸವಿರುವ ಮನೆಯ ಹಿತ್ತಲ್ಲಿನಲ್ಲಿ ಕೃಷಿಯಲ್ಲಿ ತೊಡಗಿಕೊಂಡು ಸೈ ಎನಿಸಿಕೊಂಡ ಕೆಲವು ವಿದೇಶಿಗರೂ ಇದ್ದಾರೆ. ಅಂಥದ್ದೇ ಓರ್ವ ಪ್ರವಾಸಿಗ ಇಟಲಿ ದೇಶದ ನಿವಾಸಿ ಮೌರಿಯಾ .

ಅಂದ ಹಾಗೆ, ಮೌರಿಯಾ  ಕಳೆದ 6 ವರ್ಷಗಳಿಂದ ಗೋಕರ್ಣಕ್ಕೆ ಬಂದು ಹೋಗುತ್ತಿದ್ದರು. ಅಂತೆಯೇ, ಈ ಬಾರಿ ಸಹ ಲಾಕ್​ಡೌನ್ ಮುನ್ನ ಗೋಕರ್ಣಕ್ಕೆ ಬಂದಿದ್ದರು. ಮೂರು ತಿಂಗಳ ಕಾಲ ಇಲ್ಲೇ ಇರಬೇಕಿದ್ದ ಮೌರಿಯಾ ತನ್ನ ದೇಶಕ್ಕೆ ಹಿಂದಿರುಗಬೇಕಿತ್ತು. ಆದರೆ, ಲಾಕ್​ಡೌನ್ ಈತನನ್ನು ಇಲ್ಲಿಯೇ ಉಳಿಯುವಂತೆ ಮಾಡಿತು. ಈ ನಡುವೆ, ಈತನ ಜೊತೆ ಬಂದಿದ್ದ ಕೆಲವು ವಿದೇಶಿಗರು ಲಾಕ್​ಡೌನ್​ ನಂತರ ಹಲವು ಇಲಾಖೆಗಳ ಸಹಾಯದಿಂದ ತಮ್ಮ ತಮ್ಮ ಊರುಗಳಿಗೆ ಮರಳಿದ್ದರು. ಆದರೆ, ಮೌರಿಯಾ ಹಾಗೂ ಅವರ ಗೆಳತಿ ತಮ್ಮ ದೇಶದಲ್ಲಿ ಉಂಟಾದ ತಾಂತ್ರಿಕ ತೊಂದರೆಯಿಂದ ಇಲ್ಲೇ ಉಳಿಯುವ ಪರಿಸ್ಥಿತಿ ಬಂದೊದಗಿತು.

ಗೋಕರ್ಣದ ರುದ್ರಪಾದದ ವಸತಿ ಗೃಹವೊಂದರಲ್ಲಿ ಉಳಿದುಕೊಂಡ ಮೌರಿಯಾ ಕೇವಲ ತಿಂಡಿ ಊಟ ಮಾಡಿಕೊಂಡು ಹಾಗೇ ಉಳಿದರೆ ಏನು ಪ್ರಯೋಜನ ಎಂದು ಯೋಚಿಸಿ ಈ ಭಾಗದಲ್ಲಿ ತರಕಾರಿ ಬೆಳೆಯವ ಸೀಜನ್ ಪ್ರಾರಂಭವಾಗಿದ್ದನ್ನು ಗಮನಿಸಿದರು. ಸ್ಥಳೀಯರಂತೆ ತಾನೂ ತರಕಾರಿ ಬೆಳೆಸಬಹುದು ಎಂದು ಯೋಚಿಸಿದ ಮೌರಿಯಾ ತಾನು ಉಳಿದುಕೊಂಡಿದ್ದ ಮನೆಯ ಬಳಿಯಿದ್ದ ಚಿಕ್ಕ ಜಾಗದಲ್ಲಿ ವಿವಿಧ ಬಗೆಯ ತರಕಾರಿ ಬೆಳಯಲು ಪ್ರಾರಂಭಿಸಿದರು.

ತಾನೇ ಗುದ್ದಲಿ ಹಿಡಿದು ಓಳಿ ಕಡಿದು, ಬೀಜ ಬಿತ್ತಿ, ತರಹೇವಾರಿ ತರಕಾರಿ ಬೆಳೆಸಿದ್ದಾರೆ. ಟೊಮ್ಯಾಟೋ, ಪಾಲಕ್, ಹರಿಗೆ, ಹಸಿಮೆಣಸು, ಬದನೇಕಾಯಿ, ಹಾಗಲಕಾಯಿ ಸೇರಿದಂತೆ ವಿವಿಧ ಜಾತಿಯ ತರಕಾರಿ ಬೆಳೆದು ಎಲ್ಲರಿಗೂ ಮಾದರಿಯಾಗಿದ್ದಾರೆ. ತಾವು ವಾಸುಸುತ್ತಿದ್ದ ಮನೆಯಲ್ಲಿ ಶೇಖರಣೆ ಆಗುತ್ತಿದ್ದ ಹಸಿ ತ್ಯಾಜ್ಯವನ್ನ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸಿ ಗಿಡಗಳಿಗೆ ಹಾಕುತ್ತಿದ್ದಾರೆ. ಮೌರಿಯಾ ಉಳಿದುಕೊಂಡಿರುವ ವಸತಿ ಗೃಹದ ಮಾಲೀಕರಿಂದ ಪಕ್ಕದ ಜಾಗವನ್ನ ಪಡೆದು ಕೃಷಿಯಲ್ಲಿ ತೊಡಗಿದ್ದಾರೆ. ಸ್ಥಳೀಯರು ಕೂಡ ಮೌರಿಯಾರ ಸಾವಯವ ತೋಟ ನೋಡಿ ಖುಷಿಪಟ್ಟಿದ್ದಾರೆ.

ಇಟಲಿಯ ಶಿಕ್ಷಕ.. ಈಗ ಗೋಕರ್ಣದಲ್ಲಿ ಹವ್ಯಾಸಿ ಕೃಷಿಕ! ನಾನು ಮೂಲತಃ ಶಿಕ್ಷಕ. ಆದರೆ, ನನ್ನ ದೇಶದಲ್ಲಿ ಕೃಷಿ ಚಟುವಟಿಕೆಯನ್ನು ಹವ್ಯಾಸವಾಗಿ ರೂಢಿಸಿಕೊಂಡಿದ್ದೆ. ಈ ವರ್ಷ ನಿಗದಿತ ಸಮಯಕ್ಕೆ ಸ್ವದೇಶಕ್ಕೆ ತೆರಳಲು ಆಗದ ಹಿನ್ನೆಲೆಯಲ್ಲಿ ಇದ್ದ ಸ್ಥಳದಲ್ಲೇ ಕೃಷಿಯಲ್ಲಿ ನಿರತನಾಗಿದ್ದೇನೆ. ನನ್ನ ದೇಶಕ್ಕೆ ಮರಳುವ ಆಸೆ ಇದೆ. ಈ ನಡುವೆ, ತಿಂಗಳಿಗೊಮ್ಮೆ ವೀಸಾ ಮುಂದುವರಿಸಬೇಕಾಗಿದೆ. ಜೊತೆಗೆ, ಪೊಲೀಸರು ಆಗಾಗ ವಿಚಾರಿಸುತ್ತಿರುತ್ತಾರೆ. ಹಾಗಾಗಿ, ನನಗೆ ಆತಂಕವಾಗುತ್ತದೆ. ಇದೆಲ್ಲವನ್ನು ಮರೆಯಲು ಈ ಚಟುವಟಿಕೆಯಲ್ಲಿ ತೊಡಗಿದ್ದೇನೆ. ನಾನು ಬೆಳೆಯುವ ಬೆಳೆಗೆ ಸಾವಯವ ಗೊಬ್ಬರವನ್ನೇ ಬಳಸುತ್ತಿದ್ದೇನೆ ಎಂದು ಮೌರಿಯಾ ಹೇಳಿದ್ದಾರೆ.

ಕೃಷಿ ಕಾರ್ಯಕ್ಕೆ ಗೆಳತಿ ಜಾಸ್ಮಿನ್​ ಸಾಥ್ ಅಂದ ಹಾಗೆ, ಮೌರಿಯಾ ಜೊತೆ ಅವರ ಗೆಳತಿಯಾದ ಪೋಲ್ಯಾಂಡ್ ದೇಶದ ನಿವಾಸಿ ಜಾಸ್ಮಿನ್ ಸಹ ಕೈಜೋಡಿಸಿದ್ದಾರೆ. ಈಕೆ ಮೌರಿಯಾರೊಂದಿಗೆ ವಾಸವಿದ್ದು ತರಕಾರಿ ಗಿಡಗಳಿಗೆ ನೀರುಣಿಸುವುದು, ಗೊಬ್ಬರ ಹಾಕುವುದು ಸೇರಿದಂತೆ ವಿವಿಧ ಚಟುವಟಿಕೆಯಲ್ಲಿ ಜೊತೆಯಾಗುತ್ತಾಳೆ. ವೃತ್ತಿಯಲ್ಲಿ ಫಿಜಿಯೋಥೆರಪಿಸ್ಟ್​ ಮತ್ತು ಯೋಗ ಶಿಕ್ಷಕಿಯಾಗಿರುವ ಜಾಸ್ಮಿನ್ ಸಾವಯವ ಕೃಷಿ ಮಾಡುವುದೆಂದರೆ ಬಹಳ ಇಷ್ಟ ಎಂದು ಸಹ ಹಂಚಿಕೊಂಡಿದ್ದಾರೆ.

‘ಭಾರತ ನನಗೆ ಅಚ್ಚುಮೆಚ್ಚಿನ ದೇಶ. ಅಲ್ಲಿನ ಗೋಕರ್ಣವೆಂದರೆ ಪಂಚ ಪ್ರಾಣ’ ಹಲವು ವರ್ಷಗಳಿಂದ ಭಾರತದ ವಿವಿಧ ಪುರಾಣ ಪ್ರಸಿದ್ಧ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುತ್ತಿದ್ದೇವೆ. ಉತ್ತರ ಹಾಗೂ ದಕ್ಷಿಣ ಭಾರತದ ಹಲವೆಡೆ ಭೇಟಿ ಕೊಟ್ಟಿದ್ದೇವೆ. ಇಲ್ಲಿನ ಆಚಾರ, ವಿಚಾರ, ಸಂಸ್ಕೃತಿ ನಮಗೆ ಮಾದರಿಯಾಗಿದೆ. ಭಾರತ ನನ್ನ ನೆಚ್ಚಿನ ದೇಶ ಎಂದು ಮೌರಿಯಾ ಹೇಳಿದ್ದಾರೆ. ಪುರಾಣ ಪ್ರಸಿದ್ಧ ಕ್ಷೇತ್ರ, ಸುಂದರ ಕಡಲತೀರ, ಆತ್ಮೀಯವಾದ ಸ್ಥಳೀಯರಿರುವ ಗೋಕರ್ಣ ನನ್ನ ಪ್ರಾಣವಿದ್ದಂತೆ ಎಂದು ಮೌರಿಯಾ ಮತ್ತು ಜಾಸ್ಮಿನ್ ತಮ್ಮ ಸಂತಸ ವ್ಯಕ್ತಪಡಿಸಿದರು.

ಜೊತೆಗೆ, ಮಾಂಸಹಾರ ಸೇವನೆ ಬಿಟ್ಟು ಬಹಳ ವರ್ಷವಾಗಿದ್ದು ಕೇವಲ ಸಸ್ಯಾಹಾರಿ ಊಟ ಸೇವಿಸುತ್ತಿದ್ದೇವೆ. ಇಲ್ಲಿ ಬೆಳೆದ ಬೆಳೆಯಿಂದ ಅಡುಗೆ ತಯಾರಿಸಿ ಸೇವಿಸುತ್ತೇವೆ. ಎಂದು ಮೌರಿಯಾ ಹೇಳಿದರು. ‘ದಯವಿಟ್ಟು ಫೋಟೋ ಕ್ಲಿಕ್ಕಿಸಬೇಡಿ’ ಮೌರಿಯಾ ಮತ್ತು ಜಾಸ್ಮಿನ್​ರನ್ನು ಭೇಟಿಯಾಗಿ ಅವರ ಫೋಟೋ ತೆಗೆದುಕೊಳ್ಳಬೇಕು ಎಂದು ಟಿವಿ9 ಕೇಳಿಕೊಂಡಾಗ, ದಯವಿಟ್ಟು ಬೇಡ. ನಮಗೆ ಭಯವಾಗುತ್ತದೆ. ಪೊಲೀಸರಿಂದ ಯಾವುದಾದರೂ ತೊಂದರೆಯಾಗುತ್ತದೆ ಎಂಬ ಭೀತಿಯಿದೆ ಎಂದು ಕೈಮುಗಿದು ವಿನಂತಿಸಿದರು. ಆದರೆ, ನಾವು ಸರಿಯಾಗಿದ್ದರೆ ಯಾವುದೇ ಭಯವಿಲ್ಲ. ದಯವಿಟ್ಟು ಹೆದರಬೇಡಿ ಎಂದು ಧೈರ್ಯ ತುಂಬಿದ ಬಳಿಕ ಒಂದಷ್ಟು ಫೋಟೋ ಕ್ಲಿಕ್ಕಿಸಲು ಒಪ್ಪಿಗೆ ನೀಡಿದರು.

ಒಟ್ನಲ್ಲಿ, ಗೋಕರ್ಣ ಎಂದರೆ ಕೇವಲ ವೀಕೆಂಡ್​ನಲ್ಲಿ ಮೋಜು ಮಸ್ತಿಗಾಗಿ ಹೇಳಿ ಮಾಡಿಸಿದ ಸ್ಥಳ ಅಲ್ಲ. ಮೌರಿಯಾರಂತಹ ವಿದೇಶಿಗರು ಸಾಧನೆಗೈದಿರುವ ಸ್ವಯಂಕೃಷಿಯ ಭೂಮಿಯಾಗಿಯೂ ಮಾರ್ಪಟ್ಟಿದೆ. -ಜಗದೀಶ್ ಹೊನಗೋಡು

ಹಳ್ಳಿ ಹೈದ ರೂಪಿಸಿದ ಸೋಲಾರ್ ಟ್ರಾಪ್​ ಈಗ ವಿದೇಶಿ ಕೃಷಿ ವಿವಿಗಳಲ್ಲಿ ಪಠ್ಯ: ಸರಳ ವಿನ್ಯಾಸ, ಅದ್ಭುತ ಕೆಲಸ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada