
ಬೆಳಗಾವಿ, (ಅಕ್ಟೋಬರ್ 14): ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ರಮೇಶ್ ಕತ್ತಿ (Ramesh Katti), ಜಾರಕಿಹೊಳಿ ಬ್ರದರ್ಸ್ (Jarkiholi Brothers) ವಿರುದ್ಧ ಮೀಸೆ ತಿರುವಿದ್ದರು. ಇದಾಗಿ ಒಂದೇ ವಾರಕ್ಕೆ ಜಾರಕಿಹೊಳಿ ಸಹೋದರರು ಪುಟಿದೆದ್ದಿದ್ದಾರೆ. ಬೆಳಗಾವಿ ಡಿಸಿಸಿ ಬ್ಯಾಂಕ್‌ನ (Belagavi DCC Bank Election) 16 ಸ್ಥಾನಗಳ ಪೈಕಿ ಜಾರಕಿಹೊಳಿ ಬಣದ 9 ಸದಸ್ಯರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಆ ಮೂಲಕ ಡಿಸಿಸಿ ಬ್ಯಾಂಕ್‌ನ ಆಡಳಿತ ಜಾರಕಿಹೊಳಿ ಪ್ಯಾನಲ್ ಪಾಲಾಗುವುದು ಪಕ್ಕಾ ಆಗಿದೆ. ಆದ್ರೆ ಇದೇ ಪ್ಯಾನಲ್‌ನಲ್ಲಿದ್ದ ಬಿಜೆಪಿ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ( BJP Leader Annasaheb Jolle) ಅವಿರೋಧ ಆಯ್ಕೆ ಆಗಿಲ್ಲ. ಹೀಗಾಗಿ ಅವರನ್ನ ಗೆಲ್ಲಿಸಲೇ ಬೇಕು ಅಂತಾ ಪಣ ತೊಟ್ಟಿರೋ ಜಾರಕಿಹೊಳಿ ಬ್ರದರ್ಸ್ ಒಂದಾಗಿ ರೆಸಾರ್ಟ್ ರಾಜಕೀಯ ಆರಂಭಿಸಿದ್ದಾರೆ.
ಹೌದು..ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಗೆಲುವಿಗಾಗಿ ಜಾರಕಿಹೊಳಿ ಬ್ರದರ್ಸ್ ಒಂದಾಗಿದ್ದಾರೆ. ಇದಕ್ಕೆ ಪೂರಕವೆಂಬಂತೆ ಸಚಿವ ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಮೂವರು ಒಂದೇ ಹೋಟೆಲ್‌ನಲ್ಲಿ ಗೌಪ್ಯ ಸಭೆ ನಡೆಸಿ ರಾಜಕೀಯ ತಂತ್ರ ರೂಪಿಸಿದ್ದಾರೆ.
ನಿಪ್ಪಾಣಿಯಲ್ಲಿ ಜೊಲ್ಲೆ ಹಾಗೂ ಉತ್ತಮ್ ಪಾಟೀಲ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಇಲ್ಲಿ 119 ಮತಗಳಿದ್ದು, ಇದರಲ್ಲಿ ಜೊಲ್ಲೆ ಪರ 80 ಮತದಾರರಿದ್ದಾರೆ. ಇಷ್ಟಾದ್ರೂ ಕೊನೆ ಕ್ಷಣದಲ್ಲಿ ಏನು ಬೇಕಾದ್ರೂ ಆಗಬಹುದು ಎನ್ನುವ ಆತಂಕ ಇದೆ. ಹೀಗಾಗಿ ಮತದಾರರನ್ನ ಗೋವಾ, ಅಯೋಧ್ಯೆ ಮತ್ತು ಪಂಢರಾಪುರಕ್ಕೆ ಟ್ರಿಪ್ ಕಳಿಸಲಾಗಿದೆ. ಈ ರೆಸಾರ್ಟ್ ರಾಜಕೀಯ ನಿಪ್ಪಾಣಿ, ಅಥಣಿ, ಹುಕ್ಕೇರಿ, ಕಿತ್ತೂರು, ಬೈಲಹೊಂಗಲ, ರಾಮದುರ್ಗ, ರಾಯಬಾಗಕ್ಕೂ ಹಬ್ಬಿದೆ. ಇನ್ನು ಲಕ್ಷ್ಮಣ ಸವದಿ ಅವಿರೋಧ ಆಯ್ಕೆ ಆಗದಿರುವುದು ಶಾಸಕ ರಾಜುಕಾಗೆ ಅಸಮಾಧಾನಕ್ಕೆ ಕಾರಣವಾಗಿದೆ.
ಅಕ್ಟೋಬರ್ 19ಕ್ಕೆ ಡಿಸಿಸಿ ಬ್ಯಾಂಕ್‌ನ ಏಳು ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅವತ್ತು ಸಂಜೆಯೇ ಫಲಿತಾಂಶ ಹೊರ ಬೀಳಲಿದೆ. ಅಥಣಿಯಲ್ಲಿ ಶಾಸಕ ಸವದಿ, ಹುಕ್ಕೇರಿಯಲ್ಲಿ ಮಾಜಿ ಸಂಸದ ರಮೇಶ ಕತ್ತಿ, ನಿಪ್ಪಾಣಿಯಲ್ಲಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅಖಾಡದಲ್ಲಿದ್ದು, ಅಂದೇ ಘಟಾನುಘಟಿಗಳ ಭವಿಷ್ಯ ನಿರ್ಧಾರವಾಗಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:19 pm, Tue, 14 October 25