ಪಂಚಮಸಾಲಿಗೆ 2ಎ ಮೀಸಲಾತಿ: ಮಾ.4ರಂದು ಬೆಂಗಳೂರು ವ್ಯಾಪ್ತಿಯ ರಾಜ್ಯ, ರಾಷ್ಟ್ರೀಯ ಹೆದ್ದಾರಿ ತಡೆಗೆ ಸ್ವಾಮೀಜಿ ಕರೆ

| Updated By: ರಮೇಶ್ ಬಿ. ಜವಳಗೇರಾ

Updated on: Mar 02, 2023 | 2:00 PM

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಧರಣಿ 48ನೇ ದಿನಕ್ಕೆ ಕಾಲಿಟ್ಟಿದ್ದು, ಇದೀಗ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಬಸವ ಜಯಮೃತ್ಯುಂಜಯಶ್ರೀ ತೀರ್ಮಾನಿಸಿದ್ದಾರೆ.

ಪಂಚಮಸಾಲಿಗೆ 2ಎ ಮೀಸಲಾತಿ: ಮಾ.4ರಂದು ಬೆಂಗಳೂರು ವ್ಯಾಪ್ತಿಯ ರಾಜ್ಯ, ರಾಷ್ಟ್ರೀಯ ಹೆದ್ದಾರಿ ತಡೆಗೆ ಸ್ವಾಮೀಜಿ ಕರೆ
Follow us on

ಬೆಂಗಳೂರು: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ (2A reservation)ಆಗ್ರಹಿಸಿ ಮತ್ತೆ ಹೋರಾಟ ಭುಗಿಲೆದ್ದಿದ್ದು, ಇದೇ ಮಾ.4ರಂದು ಬೆಂಗಳೂರು ವ್ಯಾಪ್ತಿಯಲ್ಲಿ ಬರುವ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ರಾಜ್ಯ, ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡುವಂತೆ ಬಸವ ಜಯಮೃತ್ಯುಂಜಯಶ್ರೀ (Basava Jaya Mrityunjaya swamiji) ಕರೆ ಕೊಟ್ಟಿದ್ದಾರೆ.

2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯದ ಧರಣಿ ಮುಂದುವರೆದಿದೆ. ಬೆಂಗಳೂರಿನ ಫ್ರೀಡಂಪಾರ್ಕ್​ನಲ್ಲಿ ಬಸವ ಜಯಮೃತ್ಯುಂಜಯಶ್ರೀ ನೇತೃತ್ವದಲ್ಲಿ ಧರಣಿ ನಡೆದಿದ್ದು, ಇಂದು 48ನೇ ದಿನಕ್ಕೆ ಕಾಲಿಟ್ಟಿದೆ. ಆದರೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಆಕ್ರೋಶಗೊಂಡ ಜಯಮೃತ್ಯುಂಜಯಶ್ರೀ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ತೀರ್ಮಾನಿಸಿದ್ದಾರೆ.

ಈ ಹಿಂದೆ ಶಿಗ್ಗಾಂವಿಯಲ್ಲಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು. ಹೋರಾಟ ಈಗ ಬೆಂಗಳೂರಿಗೆ ಶಿಫ್ಟ್‌ ಆಗಿದ್ದು, ಬೆಂಗಳೂರಿನ ಫ್ರೀಡಂಪಾರ್ಕ್​ನಲ್ಲಿ ನಡೆಯುತ್ತಿರುವ ಧರಣಿ 48ನೇ ದಿನಕ್ಕೆ ಕಾಲಿಟ್ಟಿದೆ. ಇದೀಗ ಮತ್ತೊಂದು ಹಂತದ ಹೋರಾಟಕ್ಕೆ ಕರೆ ಕೊಟ್ಟಿದ್ದಾರೆ.

ರಾಜ್ಯದಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವಂತೆ ಕಳೆದ ಎರಡು ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಈ ಸರ್ಕಾರದ ಅವಧಿಯಲ್ಲಿಯೇ ಮೀಸಲಾತಿ ಒಡೆಯುವ ನಿಟ್ಟಿನಲ್ಲಿ ದೊಡ್ಡ ಮಟ್ಟದ ಹೋರಾಟ ಆರಂಭಿಸಲಾಗಿತ್ತು. ಇದಕ್ಕೆ ಮಣಿದಿದ್ದ ಸರ್ಕಾರ ಬೆಳಗಾವಿ ಅಧಿವೇಶನದ ಕೊನೆಯ ದಿನ ಸಚಿವ ಸಂಪುಟದಲ್ಲಿ ಚರ್ಚಿಸಿ ಲಿಂಗಾಯತ, ಒಕ್ಕಲಿಗ ಮತ್ತು ಪಂಚಮಸಾಲಿ ಸಮುದಾಯಕ್ಕೆ ಪ್ರತ್ಯೇಕ ಪ್ರವರ್ಗವನ್ನು ಸೃಷ್ಟಿಸಿ ಮೀಸಲಾತಿ ನೀಡಲು ಮುಂದಾಗಿತ್ತು. ಆದರೆ, ಈ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್‌ ಮಧ್ಯಂತರ ಆದೇಶ ನೀಡಿದೆ.