ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಆಯುಷ್ಮಾನ್‌ ಭಾರತ್ ಯೋಜನೆಯಡಿ ಪ್ರತಿದಿನ 50ಕ್ಕೂ ಅಧಿಕ ಜನರಿಗೆ ಹೃದಯ ಚಿಕಿತ್ಸೆ

|

Updated on: Dec 06, 2023 | 8:42 PM

ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಪ್ರತಿದಿನ 50 ಕ್ಕೂ ಹೆಚ್ಚು ಜನರಿಗೆ ಹೃದಯ ಚಿಕಿತ್ಸೆ ಮಾಡುವ ಮುಖಾಂತರ ಜೀವಗಳ ರಕ್ಷಣೆಗೆ ಮುಂದಾಗಿದ್ದಾರೆ. ಬಡವರು ಹಾಗೂ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಕೇಂದ್ರದ ಆಯುಷ್ಮಾನ್ ಭಾರತ್ ಯೋಜನೆಯು, ಸಾವಿರಾರು ಹೃದಯ ಸಂಬಂಧಿತ ರೋಗಿಗಳಿಗೆ ವರದಾನವಾಗಿದೆ.

ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಆಯುಷ್ಮಾನ್‌ ಭಾರತ್ ಯೋಜನೆಯಡಿ ಪ್ರತಿದಿನ 50ಕ್ಕೂ ಅಧಿಕ ಜನರಿಗೆ ಹೃದಯ ಚಿಕಿತ್ಸೆ
ಜಯದೇವದಲ್ಲಿ ಆಯುಷ್ಮಾನ್‌ ಭಾರತ್ ಯೋಜನೆಯಡಿ 50ಕ್ಕೂ ಅಧಿಕ ಜನರಿಗೆ ಚಿಕಿತ್ಸೆ
Follow us on

ಮೈಸೂರು, ಡಿ.06: ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆ (Jayadeva Hospital)ಯಲ್ಲಿ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್(Ayushman Bharat) ಯೋಜನೆಯಲ್ಲಿ ಪ್ರತಿದಿನ 50 ಕ್ಕೂ ಹೆಚ್ಚು ಜನರಿಗೆ ಹೃದಯ ಚಿಕಿತ್ಸೆ ನೀಡುವ ಮುಖಾಂತರ ಜೀವಗಳ ರಕ್ಷಣೆಗೆ ಮುಂದಾಗಿದ್ದಾರೆ. ಬಡವರು ಹಾಗೂ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಕೇಂದ್ರದ ಆಯುಷ್ಮಾನ್ ಭಾರತ್ ಯೋಜನೆಯು, ಸಾವಿರಾರು ಹೃದಯ ಸಂಬಂಧಿತ ರೋಗಿಗಳಿಗೆ ವರದಾನವಾಗಿದೆ. ಯಾವುದೇ ವೆಚ್ಚವಿಲ್ಲದೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ಪಡೆದು ಜೀವ ಉಳಿಸಿಕೊಂಡಿದ್ದಾರೆ.

ಈ ಕುರಿತು ಮಾತನಾಡಿದ ಆಯುಷ್ಮಾನ್ ಯೋಜನೆಯ ವೈದ್ಯಕೀಯ ಸಂಯೋಜಕ ಡಾ. ಶಶಿರ್ ‘ಜಯದೇವ ಆಸ್ಪತ್ರೆಯಲ್ಲಿ ಪ್ರತಿದಿನ ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಪ್ರತಿದಿನ 35 ರಿಂದ 40 ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಗಳಿಗೆ ಅಂಜಿಯೋ ಪ್ಲಾಸ್ಟರ್, ಬೈಪಾಸ್ ಸರ್ಜರಿ ಸೇರಿದಂತೆ ಹೃದಯ ಸಂಬಂಧಿತ ಎಲ್ಲಾ ಶಸ್ತ್ರ ಚಿಕಿತ್ಸೆಗಳನ್ನು ಉಚಿತವಾಗಿ ಮಾಡಲಾಗುತ್ತಿದ್ದು, ಜೊತೆಗೆ ಔಷಧಿಯು ಉಚಿತವಾಗಿ ನೀಡಲಾಗುತ್ತಿದೆ. ಗುಣಮುಖರಾದ ನಂತರ ಆಸ್ಪತ್ರೆಯಿಂದ ಮನೆಗೆ ತೆರಳುವ ವೇಳೆ ರೋಗಿಗಳಿಗೆ ಬಸ್ ಚಾರ್ಜ್ ನೀಡಿ ಮನೆಗೆ ಕಳಿಸಿಕೊಡಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ:ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನ ಯಶಸ್ವಿ; ಇಲ್ಲಿದೆ ವಿವರ

ಆಯುಷ್ಮಾನ್ ಭಾರತ್ ಯೋಜನೆಯ ಉಪಯೋಗ ಪಡೆದ ಫಲಾನುಭವಿಗಳು

‘ಕೆಲ ದಿನಗಳ ಹಿಂದೆ ನನಗೆ ಎದೆ ನೋವು ಕಾಣಿಸಿಕೊಂಡಿತ್ತು. ಬೇರೆ ಆಸ್ಪತ್ರೆಗೆ ತೆರಳಿದ್ದರೆ ಲಕ್ಷಾಂತರ ರೂಗಳು ಖರ್ಚಾಗುತ್ತಿತ್ತು. ನನ್ನ ಬಳಿ ಅಷ್ಟು ಹಣ ಆಗಿರಲಿಲ್ಲ. ನಾನು ಆಯುಷ್ಮಾನ್ ಯೋಜನೆ ಮುಖಾಂತರ ಜಯದೇವ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಪಡೆದು ಗುಣಮುಖನಾಗಿದ್ದೇನೆ. ಆಯುಷ್ಮಾನ್ ಯೋಜನೆ ಇಲ್ಲದಿದ್ದರೆ ನನ್ನ ಜೀವ ಉಳಿಯುತ್ತಿರಲಿಲ್ಲ. ಆಯುಷ್ಮಾನ್ ಯೋಜನೆಯಿಂದ ನನಗೆ ಹೆಚ್ಚಿನ ಅನುಕೂಲಕರವಾಗಿದೆ ಎಂದು ಆಯುಷ್ಮಾನ್ ಯೋಜನೆ ಅಡಿಯಲ್ಲಿ ಉಚಿತವಾಗಿ ಚಿಕಿತ್ಸೆ ಪಡೆದ ರೋಗಿ ಚೆನ್ನಗಾ ಶೆಟ್ಟಿ ಎಂಬುವವರು ತಿಳಿಸಿದ್ದಾರೆ.

ಅದರಂತೆ ಹೃದಯ ಶಸ್ತ್ರ ಚಿಕಿತ್ಸೆ ಒಳಗಾದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ನಂಜುಂಡಸ್ವಾಮಿ, ‘ನನಗೆ ಎದೆ ನೋವು ಕಾಣಿಸಿಕೊಂಡು ಜಯದೇವ ಆಸ್ಪತ್ರೆಗೆ ಬಂದಾಗ, ಆಯುಷ್ಮಾನ್ ಯೋಜನೆಯ ಮುಖಾಂತರ ಯಾವುದೇ ಖರ್ಚು ವೆಚ್ಚವಿಲ್ಲದೆ ಉಚಿತವಾಗಿ ಚಿಕಿತ್ಸೆ ನೀಡಿ, ಉಚಿತವಾಗಿ ಊಟ ಉಪಹಾರ ನೀಡಿ ನನಗೆ ಗುಣಮುಖರಾಗಿ ಮಾಡಿದ್ದಾರೆ ಎಂದರು. ಮತ್ತೊಬ್ಬ ಕೆ.ಆರ್ ನಗರ ತಾಲೂಕು ಹೊಸ ಅಗ್ರಹಾರದಿಂದ ಜಯದೇವ ಆಸ್ಪತ್ರೆಗೆ ಆಗಮಿಸಿದ್ದೇವೆ. ನಮ್ಮ ತಂದೆಯವರಿಗೆ ಕಳೆದ ಎರಡು ದಿನಗಳ ಹಿಂದೆ ಹೃದಯಘಾತವಾಯಿತು. ಜಯದೇವ ಆಸ್ಪತ್ರೆಗೆ ಆಗಮಿಸುತ್ತಿದ್ದಂತೆ ಆಯುಷ್ಮಾನ್ ಯೋಜನೆ ಮುಖಾಂತರ ಉಚಿತವಾಗಿ ಉತ್ತಮ ಚಿಕಿತ್ಸೆ ನೀಡಿ ಗುಣಮುಖರಾಗಿಸಿದ್ದಾರೆ ಎಂದು ಮಹೇಶ್ ಎಂಬುವವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ಇದನ್ನೂ ಓದಿ:ಪ್ರಧಾನಿ ಮೋದಿ ಚಾಲ್ತಿ ನೀಡಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆ ವಿಶೇಷತೆಗಳು, ಅದರ ಪ್ರಯೋಜನಗಳು ಏನು?

ಇನ್ನು ಪ್ರತಿದಿನ ನಮ್ಮ ಕೇಂದ್ರದಲ್ಲಿ 45 ರಿಂದ 50 ಜನರಿಗೆ ಆಯುಷ್ಮಾನ್ ಯೋಜನೆಯ ನೋಂದಾವಣೆ ಮಾಡಿಸಿ ಜಯದೇವ ಆಸ್ಪತ್ರೆಗೆ ಕಳಿಸಲಾಗುತ್ತಿದೆ. ಬಡತನ ರೇಖೆಗಿಂತ ಕೆಳಗಿರುವವರು ಚಿಕಿತ್ಸೆಯನ್ನು ಉಚಿತವಾಗಿ ಪಡೆಯಬಹುದು. ಬಿಪಿಎಲ್ ಕಾರ್ಡ್ ಹೊಂದಿದ್ದರೆ, ಆಸ್ಪತ್ರೆಗೆ ದಾಖಲಾದ ವೇಳೆ ಅವರಿಗೆ ತುರ್ತು ಚಿಕಿತ್ಸಾ ಘಟಕದಲ್ಲೇ ಆಯುಷ್ಮಾನ್ ಕಾರ್ಡನ್ನು ಮಾಡಿ ಚಿಕಿತ್ಸೆ ನೀಡುವ ಕಾರ್ಯ ಮಾಡುತ್ತಿದ್ದೇವೆ. ಹಾಗೂ ಬಿಪಿಎಲ್ ಕಾರ್ಡ್ ಹೊಂದಿದ ಕಾರ್ಡುದಾರರು ಪ್ರತಿಯೊಬ್ಬರೂ 5 ಲಕ್ಷದ ವರೆಗೆ ಆಯುಷ್ಮಾನ್ ಯೋಜನೆ ಮುಖಾಂತರ ಉಚಿತ ಚಿಕಿತ್ಸೆ ಪಡೆಯಬಹುದು ಎಂದು ಸಾಮಾನ್ಯ ಸೇವಾ ಕೇಂದ್ರದ ನೋಂದಾವಣೆ ಮಾಡುವ ಸಿಬ್ಬಂದಿ ಯಶೋಧ ಎಂಬುವವರು ಹೇಳಿದರು.

ಹಾಸನ, ತುಮಕೂರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ವಿಕಸಿತ ಭಾರತ್ ಸಂಕಲ್ಪ ಯಾತ್ರೆಯು ರಾಜ್ಯದ ಮೈಸೂರು, ಬಳ್ಳಾರಿ, ಕೊಪ್ಪಳ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಈಗಾಗಲೇ ಸಂಚರಿಸಿದೆ. ಇಂದು(ಡಿ.06) ಹಾಸನ, ತುಮಕೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನವು ಯಶಸ್ವಿಯಾಗಿ ಜರುಗಿದೆ.

ವಿವಿಧ ಜಿಲ್ಲೆಗಳಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

ಅರಸೀಕೆರೆ ಹಾಗೂ ಅರಕಲಗೂಡು ತಾಲ್ಲೂಕುಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

ಹಾಸನ ಜಿಲ್ಲೆಯ ಅರಸೀಕೆರೆ ಹಾಗೂ ಅರಕಲಗೂಡು ತಾಲ್ಲೂಕುಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಸಂಚರಿಸಿದ್ದು, ಅರಸೀಕೆರೆ ತಾಲೂಕಿನ ಚಾಗಚಗೆರೆ ಮತ್ತು ಲಾಲನಕೆರೆ ಹಾಗೂ ಅರಕಲಗೂಡು ತಾಲೂಕಿನ ಕಡವಿನ ಹೊಸಳ್ಳಿ ಮತ್ತು ಸರಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾತ್ರೆ ಸಂಚರಿಸಿ, ಗ್ರಾಮೀಣ ಭಾಗದ ಜನರಿಗೆ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸಿತು. ಈ ವೇಳೆ ಗ್ರಾಮೀಣ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸ್ಥಳೀಯರು ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಅರಕೆರೆ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

ತುಮಕೂರು ಜಿಲ್ಲೆಯ ಅರಕೆರೆ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ನಬಾರ್ಡ್​ನ ಡಿಡಿಎಂ ಶ್ರೀಮತಿ ಕೀರ್ತಿಪ್ರಭ ಮುಖ್ಯ ಅತಿಥಿಯಾಗಿ ಭಾಗವಹಿಸಿ ನಬಾರ್ಡ ಯೋಜನೆಗಳ ಕುರಿತ ಮಾಹಿತಿ ನೀಡಿದರು. ಬಳಿಕ ಕೀಟನಾಶಕಗಳ ಬಳಕೆ ಮತ್ತು ದ್ರವರೂಪದ ಸಿಂಪಡಣೆಗಾಗಿ ಡ್ರೋನ್ ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು.

ಅರ್ಹ ಫಲಾನುಭವಿಗಳನ್ನು ತಲುಪಬೇಕು; ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಉದ್ದೇಶ

ಕೇಂದ್ರ ಸರ್ಕಾರದ ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎನ್ನುವ ಉದ್ದೇಶದಿಂದ ವಿಕಸಿತ ಭಾರತ ಸಂಕಲ್ಪ ಯಾತ್ರೆ ದೇಶಾದ್ಯಂತ ನಡೆಯುತ್ತಿದೆ. ಯೋಜನೆಗಳು ಅರ್ಹ ಫಲಾನುಭವಿಗಳನ್ನು ತಲುಪಬೇಕು ಎಂದು ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಲಿಕಾರು ಸ್ಥಳೀಯ ನಾಯಕ ಸುನೀಲ್ ಪನಪಿಲ ಹೇಳಿದರು. ಈ ವೇಳೆ ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳು ಯಾತ್ರಾ ವಾಹನವನ್ನು ಸ್ವಾಗತಿಸಿದರು. ನಾರಾವಿಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿ ಚಂದ್ರಪ್ರಕಾಶ್ ಕಾರ್ಯಕ್ರಮ ಸಂಯೋಜಿಸಿ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಇದೇ ವೇಳೆ ಸಜಿಪ ನಡು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರಾದ ಮೆಂಡೋನ್ಸ ಲಾರೆನ್ಸ್ ಲೆಸ್ಲಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಲಾಯಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:42 pm, Wed, 6 December 23