ತನ್ವೀರ್ ಪೀರಾಗೆ ಐಸಿಸ್ ನಂಟು: ಯತ್ನಾಳ್ ಸಾಬೀತುಪಡಿಸಿದರೆ ದೇಶ ಬಿಟ್ಟು ಹೋಗುತ್ತೇನೆ ಎಂದ ಮುಸ್ಲಿಂ ಧರ್ಮಗುರು
ಮುಸ್ಲಿಂ ಧರ್ಮಗುರು ತನ್ವೀರ್ ಪೀರಾ ಐಸಿಸ್ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡಿದ್ದರು. ಒಂದು ವೇಳೆ ಬಸನಗೌಡ ಪಾಟೀಲ್ ಯತ್ನಾಳ ಅವರ ಹೇಳಿಕೆ ಸಾಬೀತಾದರೆ ನಾನು ಈ ದೇಶವನ್ನು ತ್ಯಾಗ ಮಾಡಿ ಪಲಾಯನ ಮಾಡುತ್ತೇನೆ ಎಂದು ಮುಸ್ಲೀಂ ಧರ್ಮಗುರು ಸಯ್ಯದ್ ಮೊಹಮ್ಮದ್ ತನ್ವೀರ್ ಪೀರಾ ಹಾಸ್ಮೀ ಹೇಳಿದರು.

ವಿಜಯಪುರ, ಡಿಸೆಂಬರ್ 06: ಮುಸ್ಲಿಂ (Muslim) ಧರ್ಮಗುರು ತನ್ವೀರ್ ಪೀರಾ (Tanvir Peera) ಐಸಿಸ್ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಆರೋಪ ಮಾಡಿದ್ದರು. ಒಂದು ವೇಳೆ ಬಸನಗೌಡ ಪಾಟೀಲ್ ಯತ್ನಾಳ ಅವರ ಹೇಳಿಕೆ ಸಾಬೀತಾದರೆ ನಾನು ಈ ದೇಶವನ್ನು ತ್ಯಾಗ ಮಾಡಿ ಪಲಾಯನ ಮಾಡುತ್ತೇನೆ. ಸಾಬೀತು ಮಾಡದಿದ್ದರೆ ಬಸನಗೌಡ ಪಾಟೀಲ್ ಯತ್ನಾಳ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಾಕಿಸ್ತಾನಕ್ಕೆ ಫಲಾಯನ ಮಾಡಬೇಕೆಂದು ಮುಸ್ಲೀಂ ಧರ್ಮಗುರು ಸಯ್ಯದ್ ಮೊಹಮ್ಮದ್ ತನ್ವೀರ್ ಪೀರಾ ಹಾಸ್ಮೀ ಸವಾಲು ಹಾಕಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು ” ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನನ್ನ ಮೇಲೆ ಮಾಡಿರುವ ಆರೋಪಗಳಲ್ಲಿ ಸತ್ಯಾಂಶಗಳಿಲ್ಲ. ಡಿಸೆಂಬರ್ 4 ರಂದು ಹುಬ್ಬಳ್ಳಿಯಲ್ಲಿ ನಡೆದ ಅವಲಾದ ಗೌಸ ಎ ಆಜಮ್ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದೆ. ಇದೇ ವೇದಿಕೆಯಲ್ಲಿ ವಿವಿಧ ದರ್ಗಾದ ಪೀಠಾಧೀಶರು ರಾಜಕೀಯ ಧುರೀಣರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಹೆಚ್ಕೆ ಪಾಟೀಲ್ ಹಾಗೂ ಇತರೆ ಮಂತ್ರಿಗಳು ಮತ್ತು ಶಾಸಕರು ಉಪಸ್ಥಿತರಿದ್ದರು ಎಂದು ತಿಳಿಸಿದರು.
ಮುಖ್ಯಮಂತ್ರಿಗಳು ಯಾವುದೇ ಕೋಮಿನವರಿಗೆ ಅಥವಾ ಸಮಾಜದವರಿಗೆ ಸೀಮಿತವಾಗಿಲ್ಲ. ರಾಜಕಾರಣದಲ್ಲಿ ಎಲ್ಲ ಧರ್ಮ ಮತ್ತು ಜಾತಿಗಳ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಖ್ಯಮಂತ್ರಿ ಅವರ ಜನಪ್ರೀಯತೆಯನ್ನು ನೋಡಲಾರದೆ ಹತಾಶರಾಗಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ನನ್ನ ವಿರುದ್ಧ ಹೇಳಿಕೆ ನೀಡಿದ್ದಾರೆ. ಯತ್ನಾಳ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶ ಇರುವದಿಲ್ಲ ಟಾಂಗ್ ಕೊಟ್ಟರು.
ಇದನ್ನೂ ಓದಿ: ಸಿಎಂ ಜತೆ ವೇದಿಕೆ ಹಂಚಿಕೊಂಡಿದ್ದ ತನ್ವೀರ್ ಪೀರಾ ವಿರುದ್ಧ ತನಿಖೆ ನಡೆಸುವಂತೆ ಅಮಿತ್ ಶಾಗೆ ಪತ್ರ ಬರೆದ ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಸ್ಲಿಂ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಕೊಟ್ಟಿದ್ದಾರೆ. ಇದರ ಉದ್ದೇಶ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸುದಕ್ಕೆ ಮಾತ್ರ. ನನಗೆ ಐಸಿಸ್ ಉಗ್ರರ ಜೊತೆ ನಂಟಿದೆ ಎಂಬುದನ್ನು ಕೇಂದ್ರ ಮತ್ತು ರಾಜ್ಯದ ಎಲ್ಲಾ ತನಿಖಾ ಸಂಸ್ಥೆಗಳಿಗೆ ಯತ್ನಾಳ ದಾಖಲೆ ಸಮೇತ ಸಾಬೀತು ಮಾಡಲಿ. ವಿಜಯಪುರ ನಗರ ಶಾಸಕರು ಒಂದು ವಾರದೊಳಗೆ ಐಸಿಸ್ ಉಗ್ರರ ಜೊತೆಗೆ ನನ್ನ ನಂಟಿದೆ ಎಂಬುದನ್ನು ದಾಖಲೆ ಸಮೇತ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಶಾಸಕರ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಪಾಕಿಸ್ತಾನಕ್ಕೆ ಪಲಾಯನ ಮಾಡಬೇಕು ಎಂದು ಹೇಳಿದ್ದಾರೆ.
ನಾನಷ್ಟೇ ಅಲ್ಲಾ ನನ್ನ ಭಕ್ತರು, ಶಿಷ್ಯರಿಗೂ ಐಸಿಸ್ ಜೊತೆ ನಂಟಿದೆಯೆಂದು ಸಾಬೀತು ಪಡಿಸಿದರೆ ನಾನು ದೇಶವನ್ನು ತ್ಯಾಗ ಮಾಡುತ್ತೇನೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆ ಖಂಡಿಸುವ ಸಮ್ಮೇಳನದಲ್ಲಿ ದೇಶದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದೇನೆ. ನಾನು ಐಸಿಸ್ ಜೊತೆ ನಂಟಿದೆಯಂದು ಸಾರ್ವಜನಿಕರಿಗೆ ತಪ್ಪು ಸಂದೇಶವನ್ನು ಬಸನಗೌಡ ಯತ್ನಾಳ್ ಪಾಟೀಲ್ ನೀಡುತ್ತಿದ್ದಾರೆ. ಮಾಧ್ಯಮದಲ್ಲಿ ಬಿಂಬಿಸುವ ಫೋಟೋಗಳು ನನ್ನದೆ ಆದಂತಹ ಆಫಿಶಿಯಲ್ ಫೇಸ್ಬುಕ್ ಅಕೌಂಟನಲ್ಲಿರುವ ಫೋಟೋಗಳು. ಪೋಟೋಗಳು 10-12 ವರ್ಷ ಹಿಂದಿನವು. ಇರಾಕ ದೇಶದ ಅಂತರಾಷ್ಟ್ರೀಯ ಪ್ರಸಿದ್ಧ ಮಹಾನ್ ಸೂಫಿ ಮಹೆಬೂಬ ಎ ಸುಭಾನಿ ಗೌಸ ಎ ಆಜಮ ಅವರ ದರ್ಶನಕ್ಕೆ ಹೋದಾಗಿನ ಪೋಟೋಗಳು ಎಂದು ಸ್ಪಷ್ಟನೆ ನೀಡಿದರು.
ಅಲ್ಲಿನ ದರ್ಗಾದ ಪೀಠಾದಿಪತಿ ಖಾಲೀದ ಜಿಲಾನಿ ಅವರ ಆರ್ಶೀವಚನ ಪಡೆಯುವ ಸಂದರ್ಭದಲ್ಲಿ ತೆಗೆದಂತಹ ಫೋಟೋಗಳು. ಮತ್ತೊಂದು ಫೋಟೋದಲ್ಲಿ ಖಾಲೀದ ಜಿಲಾನಿಯವರ ಅಂಗರಕ್ಷಕ ನನ್ನನ್ನು ಅವರ ಪೀಠಕ್ಕೆ ಕರೆದುಕೊಂಡು ಹೋಗುವ ಸಮಯದಲ್ಲಿ ತೆಗೆದ ಫೋಟೋ ಎಂದು ಧರ್ಮಗುರು ಸಯ್ಯದ್ ಮೊಹಮ್ಮದ್ ತನ್ವೀರ್ ಪೀರಾ ಹಾಸ್ಮೀ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ