ಪ್ರಜ್ವಲ್ ರೇವಣ್ಣ ಪ್ರಕರಣ: ಅಂದಿನಿಂದ ಈವರೆಗೆ ಏನೇನಾಯ್ತು? ಟೈಮ್​​ಲೈನ್ ಇಲ್ಲಿದೆ

ಬೆಂಗಳೂರಿನ ವಿಶೇಷ ನ್ಯಾಯಾಲಯವು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಮತ್ತು 10 ಲಕ್ಷ ರೂಪಾಯಿ ದಂಡ ವಿಧಿಸಿದೆ. ಈ ಪ್ರಕರಣ 2024ರ ಏಪ್ರಿಲ್‌ನಲ್ಲಿ ಬೆಳಕಿಗೆ ಬಂದಿತ್ತು. ಪ್ರಕರಣದ ಸಮಗ್ರ ಟೈಮ್‌ಲೈನ್, ತನಿಖೆ ಮತ್ತು ನ್ಯಾಯಾಲಯದ ತೀರ್ಪಿನ ಸಾರಾಂಶ ಇಲ್ಲಿದೆ.

ಪ್ರಜ್ವಲ್ ರೇವಣ್ಣ ಪ್ರಕರಣ: ಅಂದಿನಿಂದ ಈವರೆಗೆ ಏನೇನಾಯ್ತು? ಟೈಮ್​​ಲೈನ್ ಇಲ್ಲಿದೆ
ಪ್ರಜ್ವಲ್ ರೇವಣ್ಣ

Updated on: Aug 02, 2025 | 7:31 PM

ಬೆಂಗಳೂರು, ಆಗಸ್ಟ್​ 02: ಕೆ.ಆರ್​.ನಗರ ಮೂಲದ ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ನಂತರ ಅಪಹರಿಸಿದ್ದ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (Special Court) ಮಹತ್ವದ ತೀರ್ಪು ನೀಡಿದೆ. ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ (Prajwal Revanna) ಜೀವನ ಪರ್ಯಂತ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ದಂಡ ವಿಧಿಸಿದೆ. ಇಂದಿನಿಂದಲೇ ಪ್ರಜ್ವಲ್ ರೇವಣ್ಣಗೆ ಜೈಲು ಶಿಕ್ಷೆ ಆರಂಭವಾಗಲಿದೆ. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ಅಂದಿನಿಂದ ಇಲ್ಲಿಯವರೆಗೆ ಏನೆಲ್ಲ ನಡೆಯಿತು? ಇಲ್ಲಿದೆ ಟೈಮ್​ ಲೈನ್​

1 ವರ್ಷ ಪ್ರಕರಣ ಸಂಬಂಧ ಏನೆಲ್ಲ ನಡೆಯಿತು

  • 2024ರ ಏಪ್ರಿಲ್​: ಮಾಜಿ ಸಂಸದ ಪ್ರಜ್ವಲ್​ ರೇವಣ್ಣ ನಡೆಸಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದವು. ಈ ವಿಡಿಯೋಗಳಲ್ಲಿ ಇದ್ದಾರೆ ಎನ್ನಲಾದ ಸಂತ್ರಸ್ತೆಯೊಬ್ಬರು ಹೊಳೆನರಸೀಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
  • 2024ರ ಏಪ್ರಿಲ್​ 20: ಚುನಾವಣೆ ಸಂದರ್ಭದಲ್ಲಿ ಪ್ರಜ್ವಲ್​ ರೇವಣ್ಣ ಅವರ ವರ್ಚಸ್ಸಿಗೆ ದಕ್ಕೆಯನ್ನುಂಟು ಮಾಡಲು ಪೆನ್​ಡ್ರೈವ್​ ಹಂಚಲಾಗುತ್ತಿದೆ ಎಂದು ಆರೋಪಿಸಿ ಚುನಾವಣೆ ಏಜೆಂಟ್ ಒಬ್ಬರು ದೂರು ದಾಖಲಿಸಿದ್ದರು.
  • 2024ರ ಏಪ್ರಿಲ್​ 26: ಮಾಜಿ ಸಂಸದ ಪ್ರಜ್ವಲ್​ ರೇವಣ್ಣ ಅವರು ತಮ್ಮ ರಾಜತಾಂತ್ರಿಕ ಪಾಸ್​ಪೋರ್ಟ್​ ಬಳಸಿ ವಿದೇಶಕ್ಕೆ ಹಾರಿದ್ದರು. ನಂತರ ರಾಜ್ಯ ಸರ್ಕಾರ ಪ್ರಜ್ವಲ್​ ರೇವಣ್ಣ ಅವರ ಪಾಸ್​ಪೋರ್ಟ್​ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ಕೇಂದ್ರ ಸರ್ಕಾರವು ಪ್ರತಿಕ್ರಿಯೆ ಕೋರಿ ಪ್ರಜ್ವಲ್‌ ರೇವಣ್ಣಗೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿತ್ತು. ಆಗ, ಪ್ರಜ್ವಲ್​ ರೇವಣ್ಣ ವಿದೇಶದಲ್ಲೇ ಕೂತು ವಿಡಿಯೋ ಮೂಲಕ, ಎಸ್​ಐಟಿ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದರು.
  • 2024ರ ಏಪ್ರಿಲ್​ 27: ಹಾಸನ ಜಿಲ್ಲೆಯಲ್ಲಿ ಅಶ್ಲೀಲ ವೀಡಿಯೋ ತುಣುಕುಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿತ್ತು. ಎಸ್.ಐ.ಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗದ ಅಧ್ಯಕ್ಷರು ಸರ್ಕಾರಕ್ಕೆ ಪತ್ರ ಬರೆದಿದ್ದರು.
  • 2024ರ ಏಪ್ರಿಲ್​ 30: ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರದಾಡುತ್ತಿದ್ದಂತೆ ಮತ್ತು ಸರ್ಕಾರ ಎಸ್​ಐಟಿ ರಚಿಸುತ್ತಿದ್ದಂತೆ ಜೆಡಿಎಸ್​ ಪಕ್ಷವು ಪ್ರಜ್ವಲ್​ ರೇವಣ್ಣರನ್ನು ಪಾರ್ಟಿಯಿಂದ ಉಚ್ಛಾಟನೆ ಮಾಡಿತ್ತು.
  • 2024ರ ಮೇ 02: ಪ್ರಜ್ವಲ್​ ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕೆ.ಆರ್ ನಗರ ಮೂಲದ ಮಹಿಳೆ  ದೂರು ದಾಖಲಿಸಿದ್ದರು. ಪ್ರಜ್ವಲ್‌ ರೇವಣ್ಣ ಕೊರೊನಾ ಸಂದರ್ಭದಲ್ಲಿ 2019 ಹಾಗೂ 2020ರಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ನೀಡಿದ್ದರು. ಇದಕ್ಕೂ ಮುನ್ನ ದೂರುದಾರ ಮಹಿಳೆಯನ್ನು ಅಪಹರಿಸಲಾಗಿತ್ತು.
  • 2024 ರ ಮೇ 03: ಸಂತ್ರಸ್ತ ಮಹಿಳೆಯನ್ನು ಅಪಹರಿಸಲಾಗಿದೆ ಎಂದು ದೂರು ದಾಖಲಾಗುತ್ತಿದ್ದಂತೆ ಮಹಿಳೆಯನ್ನು ಅಪಹರಣಾಕಾರರು ಬಿಟ್ಟು ಕಳುಹಿಸಿದ್ದರು. ದೂರುದಾರ ಮಹಿಳೆಯನ್ನು ಮೈಸೂರಿನ ಫಾರ್ಮ್​ಹೌಸ್​ ಬಳಿ ರಕ್ಷಿಸಲಾಗಿತ್ತು.
  • 2024ರ ಮೇ 04: ದೂರುದಾರ ಮಹಿಳೆಯನ್ನು ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್​ ಡಿ ರೇವಣ್ಣ ಅವರನ್ನು ಬಂಧಿಸಲಾಗಿತ್ತು.
  • 2024ರ ಮೇ 05: ಅತ್ಯಾಚಾರ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಎಸ್​ಐಟಿ ಬ್ಲೂ ಕಾರ್ನರ್​ ನೋಟಿಸ್​ ಜಾರಿ ಮಾಡಿತ್ತು.
  • 2024ರ ಮೇ 31: ಬ್ಲೂ ಕಾರ್ನರ್​ ನೋಟಿಸ್​ ಜಾರಿ ಮಾಡುತ್ತಿದ್ದಂತೆ ವಿದೇಶದಿಂದ ಬಂದ ಪ್ರಜ್ವಲ್​ ರೇವಣ್ಣರನ್ನು ಮಹಿಳಾ ಅಧಿಕಾರಿಗಳನ್ನೇ ಒಳಗೊಂಡ ಮಹಿಳಾ ತಂಡ ವಿಮಾನ ನಿಲ್ದಾಣದಲ್ಲೇ ಬಂಧಿಸಿತ್ತು.
  • 2024ರ ಸೆಪ್ಟೆಂಬರ್ 08: ಅತ್ಯಾಚಾರ ಪ್ರಕರಣದ ತನಿಖೆ ನಡೆಸಿದ ಎಸ್​ಐಟಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
  • 2024 ರ ನವೆಂಬರ್ 11: ಬಂಧನಕ್ಕೆ ಒಳಗಾಗಿರುವ ಪ್ರಜ್ವಲ್​ ರೇವಣ್ಣ ಅವರು ಜಾಮೀನು ಆಗ್ರಹಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು. ಸುಪ್ರಿಂಕೋರ್ಟ್​ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.
  • 2025ರ ಮೇ 02: ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಆರಂಭಿಸಿತು.
  • 2025ರ ಜುಲೈ 18: ವಿಚಾರಣೆ ಪೂರ್ಣಗೊಂಡು ನ್ಯಾಯಾಲಯ ತೀರ್ಪು ಕಾಯ್ದಿರಿಸಿತ್ತು.
  • 2025ರ ಆಗಸ್ಟ್​ 01: ಪ್ರಜ್ವಲ್​ ರೇವಣ್ಣ ದೋಷಿ
  • 2025 ರ ಆಗಸ್ಟ್​ 02: ಪ್ರಜ್ವಲ್​ ರೇವಣ್ಣಗೆ ಶಿಕ್ಷೆ ಪ್ರಕಟ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ
ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್; ಜೀವಾವಧಿ ಶಿಕ್ಷೆ ಪ್ರಕಟಿಸಿದ ಕೋರ್ಟ್
ಪ್ರಜ್ವಲ್​ಗೆ ಶಿಕ್ಷೆ ಏನು? ಕೋರ್ಟ್​​ ವಾದ-ಪ್ರತಿವಾದದ ವಿವರ ಇಲ್ಲಿದೆ
ಪ್ರಜ್ವಲ್ ರೇವಣ್ಣ ಅಪರಾಧಿ: ಕೋರ್ಟ್​ ತೀರ್ಪು ಸ್ವಾಗತಿಸಿದ ಬಿಜೆಪಿ ಮುಖಂಡ
ದೋಷಿಯಾಗಿರುವ ಪ್ರಜ್ವಲ್ ವಿರುದ್ಧ ಇನ್ನೆಷ್ಟು ಅತ್ಯಾಚಾರ ಕೇಸ್​ ಇವೆ?

Published On - 6:07 pm, Sat, 2 August 25