ಬೆಂಗಳೂರು: ಜೆಡಿಎಸ್ (JDS) ವರಿಷ್ಠ, ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ (HD Deve Gowda) ಅವರು ತಮ್ಮ ಆರೋಗ್ಯಕ್ಕೆ ಸಂಬಂಧಿಸಿ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಯಾರೂ ಗಾಬರಿಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಮಾಮೂಲಿ ತಪಾಸಣೆಗಾಗಿ ಆಸ್ಪತ್ರೆಗೆ ಬಂದಿದ್ದೇನೆ. ಗಾಬರಿಗೊಳ್ಳುವ ಅಗತ್ಯವಿಲ್ಲ. ಮುಂದಿನ ಕೆಲವೇ ದಿನಗಳಲ್ಲಿ ಮನೆಗೆ ಮರಳಲಿದ್ದೇನೆ ಎಂದು ಅವರು ಮಂಗಳವಾರ ರಾತ್ರಿ ಟ್ವೀಟ್ ಮಾಡಿದ್ದಾರೆ. ಅವರು ಮಂಗಳವಾರ ಬೆಳಗ್ಗೆ 10.30ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು. ಕಾಲುನೋವಿಗೆ ಚಿಕಿತ್ಸೆ ಪಡೆಯುವುದಕ್ಕಾಗಿ ದೇವೇಗೌಡರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿತ್ತು. ಈ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಕೂಡ ಮಾಹಿತಿ ನೀಡಿದ್ದರು.
I have come to the hospital for a routine check up. There is no need for any panic or anxiety. I will be back home in a couple of days.
— H D Devegowda (@H_D_Devegowda) February 28, 2023
ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರು ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ದಾಖಲಾಗಿದ್ದು, ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಮಾಜಿ ಪ್ರಧಾನಿಗಳಾಗಿರುವ ಶ್ರೀ ಎಚ್.ಡಿ. ದೇವೇಗೌಡರು ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ದಾಖಲಾಗಿದ್ದು, ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ.@H_D_Devegowda
— Basavaraj S Bommai (@BSBommai) February 28, 2023
ದೇವೇಗೌಡರು ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ ಕೂಡ ಮಾಹಿತಿ ನೀಡಿದ್ದರು. ದೇವೇಗೌಡರು ಇಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿದ್ದಾರೆ. ಆಸ್ಪತ್ರೆಯಿಂದ ಬಂದ ಬಳಿಕ ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ನೀಡಿಕೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದರು. ದೇವೇಗೌಡರ ಆರೋಗ್ಯ ಸ್ಥಿತಿ ಅಷ್ಟೊಂದು ಉತ್ತಮವಾಗಿಲ್ಲ ಎಂದು ಎರಡು ದಿನಗಳ ಹಿಂದೆಯೇ ಕುಮಾರಸ್ವಾಮಿ ತಿಳಿಸಿದ್ದರು. ಹಾಸನ ಕ್ಷೇತ್ರದ ಟಿಕೆಟ್ ಹಂಚಿಕೆ ಬಗ್ಗೆ ದೇವೇಗೌಡರ ಸಮ್ಮುಖದಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ. ಈ ವಿಚಾರವಾಗಿ ದೇವೇಗೌಡರಿಗೆ ಹೆಚ್ಚಿನ ಹೊರೆ ನೀಡುವುದು ತನಗಿಷ್ಟವಿಲ್ಲ. ದೇವೇಗೌಡರ ಆರೋಗ್ಯವೇ ಮುಖ್ಯ ಎಂದು ಕುಮಾರಸ್ವಾಮಿ ಹೇಳಿದ್ದರು.
ಇದನ್ನೂ ಓದಿ: HD Deve Gowda: ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ ಆಸ್ಪತ್ರೆಗೆ ದಾಖಲು
ದೇವೇಗೌಡರಿಗೆ ಕಾಲು, ಮಂಡಿ ನೋವಿದೆ. ಮನೆಯಲ್ಲಿ ವಿಶ್ರಾಂತಿ ದೊರೆಯುತ್ತಿಲ್ಲ. ಅವರು ಪ್ರವಾಸಕ್ಕೆ ಹೋಗಲೇಬೇಕೆಂದು ಹೇಳುತ್ತಿದ್ದಾರೆ. ಅವರನ್ನು ಕಾಣಲು ಜನ ಬರುವುದು ಜಾಸ್ತಿ ಆಗಿದೆ. ಮನೆಯಲ್ಲಿಯೂ ಅವರಿಗೆ ವಿಶ್ರಾಂತಿ ದೊರೆಯದ ಪರಿಸ್ಥಿತಿ ಸೃಷ್ಟಿಯಾಗಿದೆ. ಹೀಗಾಗಿ ಆಸ್ಪತ್ರೆಯಲ್ಲಿ ಇದ್ದರೆ ಒಳ್ಳೆಯದು, ಸ್ಪಂದಿಸಬಹುದು ಎಂದು ದಾಖಲಿಸಲಾಗಿದೆ ಅಷ್ಟೆ. ನಾನು ಪ್ರವಾಸದಲ್ಲಿ ಇರುವುದರಿಂದ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲು ಆಗಿಲ್ಲ. ಆಸ್ಪತ್ರೆ ವರದಿ ನೋಡಿದ ಬಳಿಕ ಮಾತನಾಡುತ್ತೇನೆ ಎಂದು ಚಿಕ್ಕಮಗಳೂರಿನಲ್ಲಿ ಸಿಎಂ ಇಬ್ರಾಹಿಂ ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:07 pm, Tue, 28 February 23