ವಿಜಯನಗರ: ನಾಯಿ ಹುಡುಕಿ ಕೊಡುವಂತೆ ಪೊಲೀಸರಿಗೆ ದೂರು ಕೊಟ್ಟ ಮಹಿಳೆ.!
ಬೀದಿ ನಾಯಿಗಳ ಅಟ್ಡಹಾಸದಿಂದ ಜಿಲ್ಲೆಯ ಜನರು ಒಂದೆಡೆ ಭಯಬೀತರಾಗಿದ್ದರೆ. ಇನ್ನೊಂದೆಡೆ ನಗರಸಭೆ, ಜಿಲ್ಲಾಡಳಿತ ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಹರಸಾಹಸ ಪಡುತ್ತಿದೆ. ಈ ಮಧ್ಯೆ ಮಹಿಳೆಯೊಬ್ಬರು ತಮ್ಮ ನಾಯಿ ಕಳ್ಳತನವಾಗಿದೆ, ಹುಡುಕಿಕೊಡಿ ಎಂದು ಪೊಲೀಸ್ ಮೆಟ್ಟಿಲೇರಿರುವ ಘಟನೆ ನಡೆದಿದೆ.
ವಿಜಯನಗರ: ಬೀದಿ ನಾಯಿಗಳ ಅಟ್ಟಹಾಸದ ಮಧ್ಯೆ ಮಹಿಳೆಯೊಬ್ಬರು ತಮ್ಮ ಪ್ರೀತಿಯ ಶ್ವಾನಗಳು ಕಳೆದುಹೋಗಿವೆ ಹುಡುಕಿಕೊಡಿ ಎಂದು ಪೊಲೀಸ್ ಠಾಣೆ ಮೇಟ್ಟಿಲೇರಿದ ಘಟನೆಯೊಂದು ವರದಿಯಾಗಿದೆ. ಪ್ರೀತಿಯಿಂದ ಸಾಕಿದ ಎರಡು ಹೆಣ್ಣು ನಾಯಿಗಳು ಕಳೆದು ಹೋಗಿವೆ. ಅವುಗಳನ್ನು ಕಳವು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಂಡು, ಶ್ವಾನಗಳನ್ನ ಹುಡುಕಿಕೊಡುವಂತೆ ಜಿಲ್ಲೆಯ ಹೊಸಪೇಟೆ ಎಂ.ಜೆ. ನಗರದ 4ನೇ ಕ್ರಾಸ್ ಬಡಾವಣೆಯ ನಿವಾಸಿ ಶ್ರೀದೇವಿ ಎನ್.ಪಿ. ಅವರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಶ್ವಾನ ಕಳ್ಳತನ, ಕಕ್ಕಾಬಿಕ್ಕಿಯಾದ ಪೊಲೀಸರು
ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ಬಂದು ನಾಯಿ ಕಳೆದಿದೆ ಎಂದು ದೂರು ಕೊಟ್ಟಾಗ, ಪೊಲೀಸರು ಒಂದಷ್ಟು ಗೊಂದಲಕ್ಕಿಡಾಗಿ ಅಲ್ಲೇ ಎಲ್ಲೋ ಇರಬೇಕು ಮೊದಲು ಹುಡುಕಿ ಎಂದು ಹೇಳಿ ಕಳುಹಿಸಿದ್ದಾರೆ. ನಂತರ ಮತ್ತೊಮ್ಮೆ ಠಾಣೆಗೆ ಬಂದಾಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದೂರು ಸ್ವೀಕಾರ ಮಾಡಿದ್ದಾರೆ. ಶ್ರೀದೇವಿ ಅವರು ನೀಡಿದ ದೂರಿನ ಪ್ರಕಾರ ಫೆ.22ರ ರಾತ್ರಿ 10.30ರ ಸುಮಾರಿಗೆ ಎರಡು ನಾಯಿಗಳು ಕಾಣೆಯಾಗಿವೆಯಂತೆ. ಎಂದಿನಂತೆ ಎರಡು ನಾಯಿಗಳನ್ನು ಮೂತ್ರ ವಿಸರ್ಜನೆಗಾಗಿ ಮನೆಯಿಂದ ಹೊರಗೆ ಬಿಟ್ಟಿದ್ದು, ಅರ್ಧಗಂಟೆ ಕಳೆದರೂ ಅವು ವಾಪಸ್ ಬರದ ಕಾರಣ, ನೆರೆಮನೆಯವರನ್ನು ವಿಚಾರಿಸಿದ್ದಾರೆ. ಈ ವೇಳೆ ಬಿಳಿ ಬಣ್ಣದ ವ್ಯಾನ್‌ನಲ್ಲಿ ನಾಯಿಗಳನ್ನು ಒಯ್ದಿದ್ದಾರೆ ಎಂದು ಹೇಳಿದ್ದಾರೆ. ತಕ್ಷಣ, ಕೌನ್ಸಿಲರ್ ಮಂಜುನಾಥ್ ಅವರನ್ನು ಸಂಪರ್ಕಿಸಿದಾಗ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲು ನಗರಸಭೆಯವರು ಕೊಂಡೊಯ್ದಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಬಳ್ಳಾರಿಯಲ್ಲಿ ಮುಂದುವರೆದ ಹುಚ್ಚು ನಾಯಿಗಳ ಅಟ್ಟಹಾಸ: ಮತ್ತೊಂದು ಮಗು ಬಲಿ
ಶ್ವಾನಗಳ ಸಂತಾನಹರಣಕ್ಕೆ ನಗರಸಭೆ ಕಾರ್ಯಾಚರಣೆ
ಶ್ವಾನ ಪ್ರೀಯೆಯಾಗಿರುವ ಶ್ರೀದೇವಿ ಅವರು ತಮ್ಮ ನಾಯಿಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಆದರೆ ಈ ಬಗ್ಗೆ ಪರಿಶೀಲನೆ ಮಾಡದೇ ನಗರಸಭೆಯವರು ಬಲವಂತವಾಗಿ ನಾಯಿಗಳನ್ನು ಹಿಡಿದುಕೊಂಡು ಹೋಗಿದ್ದಾರೆಂದು ನಗರಸಭೆ ಅಧಿಕಾರಿಗಳ ವಿರುದ್ಧ ಶ್ರೀದೇವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಯಿಗಳನ್ನು ತೆಗೆದುಕೊಂಡು ಹೋಗುವಾಗ ಸ್ಥಳೀಯ ನಗರಸಭೆ ಸದಸ್ಯ ಮಂಜುನಾಥ್ ಅಲ್ಲೇ ಇದ್ದರು. ಕೆಲವರು ತಡೆಯಲು ಪ್ರಯತ್ನಿಸಿದಾಗ, ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿ, ನಾಯಿಗಳನ್ನು ಕರೆತರುತ್ತಾರೆ ಎಂದು ಶ್ವಾನಗಳನ್ನ ತಗೆದುಕೊಂಡು ಹೋಗಲಾಗಿದೆಯಂತೆ.
ಈ ಬಗ್ಗೆ ನಗರಸಭೆ ಪೌರಾಯುಕ್ತ ಮನೋಹರ್ ನಾಗರಾಜ, ಪರಿಸರ ಎಂಜಿನಿಯರ್ ಆರತಿ ಅವರನ್ನು ವಿಚಾರಿಸಿದಾಗ ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರಂತೆ. ಹೀಗಾಗಿ ನಗರಸಭೆ ಸದಸ್ಯ ಮಂಜುನಾಥ್ರ ವಿರುದ್ಧ ಸಹ ಕ್ರಮ ಕೈಗೊಳ್ಳಬೇಕು. ಎರಡು ನಾಯಿಗಳನ್ನು ಮರಳಿ ಪಡೆಯಲು ಸಹಾಯ ಮಾಡಬೇಕೆಂದು ಶ್ರೀದೇವಿ ದೂರಿನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:22 pm, Tue, 28 February 23