ಬಳ್ಳಾರಿಯಲ್ಲಿ ಮುಂದುವರೆದ ಹುಚ್ಚು ನಾಯಿಗಳ ಅಟ್ಟಹಾಸ: ಮತ್ತೊಂದು ಮಗು ಬಲಿ
ಹುಚ್ಚು ನಾಯಿ ಕಡಿತಕ್ಕೆ ಮತ್ತೊಂದು ಮಗು ಸಾವನ್ನಪ್ಪಿರುವ ಘಟನೆ ಬಳ್ಳಾರಿ ನಗರದಲ್ಲಿ ನಡೆದಿದೆ. ತಯಿಬಾ (4) ಮೃತ ಮಗು.
ಬಳ್ಳಾರಿ: ಕಳೆದ ಕೆಲವುದಿನಗಳ ಹಿಂದೆ ಮಗುವೊಂದನ್ನು ಬೀದಿ ನಾಯಿಗಳು ಕಚ್ಚಿ (Dog Bite) ಮಗುವನ್ನು ಕಿತ್ತು ತಿಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿತ್ತು. ಹಾಗೆ ಜಿಲ್ಲೆಯಲ್ಲಿಯೇ ಕಳೆದ ಎರಡು ತಿಂಗಳ ಹಿಂದೆ ಬಾದನಹಟ್ಟಿ ಗ್ರಾಮದಲ್ಲಿ ನಾಯಿ ಕಡಿತಕ್ಕೆ 2 ಮಕ್ಕಳು ಬಲಿಯಾಗಿದ್ದವು. ಅದರಂತೆ ಈಗ ಮತ್ತೆ ಹುಚ್ಚು ನಾಯಿ ಕಡಿತಕ್ಕೆ ಮತ್ತೊಂದು ಮಗು ಸಾವನ್ನಪ್ಪಿರುವ ಘಟನೆ ಬಳ್ಳಾರಿ (Bellary) ನಗರದಲ್ಲಿ ನಡೆದಿದೆ. ತಯಿಬಾ (4) ಮೃತ ಮಗು. ಹುಚ್ಚು ನಾಯಿಯೊಂದು ಫೆಬ್ರವರಿ 7 ರಂದು ವಟ್ಟಪ್ಪಗೆರೆ ಪ್ರದೇಶದ 30 ಜನರ ಮೇಲೆ ದಾಳಿ ಮಾಡಿತ್ತು.
ಆಗ ಬಳ್ಳಾರಿ ನಗರದ 31 ನೇ ವಾರ್ಡ್ ನ ನಿವಾಸಿ ಕಿಶಾರ್ ಎನ್ನುವರ ಮಗು ಗಾಯಗೊಂಡಿತ್ತು. ಅಂದು ಬಳ್ಳಾರಿಯ ವಿಮ್ಸ್ನಲ್ಲಿ ಚಿಕಿತ್ಸೆ ಪಡೆದು, ಬಳಿಕ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಮಗು ನಿನ್ನೆ ಬೆಳಿಗ್ಗೆ (ಫೆ.25) ಸಾವನ್ನಪ್ಪಿದೆ. ಬಳ್ಳಾರಿಯಲ್ಲಿ ಪದೇ ಪದೇ ಹುಚ್ಚು ನಾಯಿ ದಾಳಿ ಆಗುತ್ತಿದ್ದರು ಪಾಲಿಕೆ ಅಧಿಕಾರಿಗಳು ಮಾತ್ರ ಕ್ರಮ ಕೈಗೊಳ್ಳುತ್ತಿಲ್ಲ.
ಇದನ್ನೂ ಓದಿ: ಒಳ್ಳಾರಿಯಲ್ಲಿ ಮಲಗಿದ್ದವರ ಮೇಲೆ ಹುಚ್ಚು ನಾಯಿ ದಾಳಿ: 20 ಮಂದಿ ಆಸ್ಪತ್ರೆಗೆ ದಾಖಲು, ನಾಯಿಗಾಗಿ ತಲಾಶ್
ಫೆ. 21 ರಂದು ಜಿಲ್ಲೆಯ ಮರಿಯಮ್ಮನಹಳ್ಳಿ ಪಟ್ಟಣದ 12ನೇ ವಾರ್ಡಿನಲ್ಲಿ ಹುಚ್ಚು ನಾಯಿಯೊಂದು ಸಾರ್ವಜನಿಕರ ಮೇಲೆ ದಾಳಿ ಮಾಡಿತ್ತು. ಘಟನೆಯಲ್ಲಿ 5 ವಿದ್ಯಾರ್ಥಿಗಳು ಸೇರಿದಂತೆ 6 ಮಂದಿ ಗಾಯಗೊಂಡಿದ್ದರು. ಪಟ್ಟಣದ 12ನೇ ವಾರ್ಡ್ ವ್ಯಾಪ್ತಿಯಯಲ್ಲಿನ ನವೋದಯ ಕೋಚಿಂಗ್ ಮುಗಿಸಿ ಮನೆಗೆ ತೆರಳುವ ವಿದ್ಯಾರ್ಥಿಗಳು ಸೇರಿದಂತೆ ಹಲವು ಜನರ ಮೇಲೆ ಹುಚ್ಚು ನಾಯಿಯು ಏಕಾಏಕಿ ದಾಳಿ ನಡೆಸಿದ್ದು, ಬೆನ್ನು, ತೊಡೆ, ಕೈ, ಕಾಲು, ಮುಖದ ಭಾಗಕ್ಕೆ ಕಚ್ಚಿತ್ತು. ಸದ್ಯ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇತ್ತೀಚಿಗೆ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು, ಜನರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಮನೆಯಿಂದ ಹೊರ ಬಂದು ಓಡಾಡಲು ಭಯಪಡುತ್ತಿದ್ದಾರೆ.
ಕೆಲವು ತಿಂಗಳ ಹಿಂದೆ ಕಲಬುರಗಿ ಅಫಜಲಪುರ (Afjalpur) ತಾಲೂಕಿನ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದ ಸನ್ನಿಧಿಯಲ್ಲಿ ರಸ್ತೆ ಬದಿ ಮಲಗಿದ್ದ ವೃದ್ಧೆಯನ್ನು ನಾಯಿಗಳು ಕಚ್ಚಿ ತಿಂದಿರುವ ಮನಕಲಕುವ ಘಟನೆ ನಡೆದಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ