ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ, ತೈಲ ಬೆಲೆ ಗಗನಕ್ಕೇರಿದೆ. ಇದರ ವಿರುದ್ಧ ಜೆಡಿಎಸ್ ಪಕ್ಷ ಹೋರಾಟ ನಡೆಸಲಿದೆ ಎಂದು ಬೆಂಗಳೂರಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಬೆಲೆ ಏರಿಕೆ ವಿರುದ್ಧ ಸೋಮವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಕೈಗೊಳ್ಳುತ್ತೇವೆ. ಬೆಳಗ್ಗೆ 11 ಗಂಟೆಗೆ ಜೆ.ಪಿ. ಭವನದಿಂದ ಪಾದಯಾತ್ರೆ ನಡೆಸುತ್ತೇವೆ. ಮೌರ್ಯ ವೃತ್ತದ ಗಾಂಧಿ ಪ್ರತಿಮೆವರೆಗೆ ಱಲಿ ನಡೆಸುತ್ತೇವೆ. ಬಳಿಕ ಡಿಸಿಗೆ ಮನವಿ ಕೊಡುತ್ತೇವೆ ಎಂದು ಹೆಚ್.ಕೆ. ಕುಮಾರಸ್ವಾಮಿ ತಿಳಿಸಿದ್ದಾರೆ.
ಕೊವಿಡ್ ಸಂಕಷ್ಟದ ವೇಳೆ ಅನಗತ್ಯ ರಾಜಕೀಯ ಬಯಸುವುದಿಲ್ಲ. ಇದನ್ನೇ ಬಿಜೆಪಿ ಬಗ್ಗೆ ಮೃದು ಧೋರಣೆ ಎಂಬುದು ಸರಿಯಲ್ಲ. ಆಡಳಿತ ಪಕ್ಷಕ್ಕೆ ಸಲಹೆ ನೀಡುವುದಕ್ಕೆ ನಾವು ಸೀಮಿತವಾಗಿದ್ದೆವು. ಇನ್ನು ಸುಮ್ಮನಿರಲು ಆಗಲ್ಲ, ಹೋರಾಟ ಅನಿವಾರ್ಯವಾಗಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಬೆಂಗಳೂರಿನಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲೂ ಜೆಡಿಎಸ್ನಿಂದ ಪ್ರತಿಭಟನೆ ನಡೆಯಲಿದೆ. ಸೋಮವಾರ ಪಕ್ಷದಿಂದ ಬೃಹತ್ ಪಾದಯಾತ್ರೆ ನಡೆಸುತ್ತೇವೆ. ಕಾಂಗ್ರೆಸ್, ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಕಿತ್ತಾಟ ನಡೆಯುತ್ತಿದೆ.
ಕಾಂಗ್ರೆಸ್ನಲ್ಲಿ ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದಂತಾಗಿದೆ. ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇದೆ. ಬಿಜೆಪಿ ಬಗ್ಗೆ ನಮಗೆ ಯಾವುದೇ ಸಾಫ್ಟ್ ಕಾರ್ನರ್ ಇಲ್ಲ. ನಾವು ಕ್ವಾರಂಟೈನ್ನಲ್ಲಿಲ್ಲ, ಬೀದಿಗಿಳಿದು ಹೋರಾಡುತ್ತೇವೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಜಿಲ್ಲಾ ಘಟಕಗಳ ಅಧ್ಯಕ್ಷರ ಬದಲಾವಣೆ ಚರ್ಚೆ; ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸಂಘಟನೆಗೆ ಹೊಸ ಸೂತ್ರ?
ಬಿಜೆಪಿ ರಾಜ್ಯ ಕಾರ್ಯಕಾರಿಣಿ: ಕೊರೊನಾ ನಿರ್ವಹಣೆ, ಪಶ್ಚಿಮ ಬಂಗಾಳ ಹಿಂಸಾಚಾರ, ರಾಜಕೀಯ ನಿರ್ಣಯಗಳ ಬಗ್ಗೆ ಚರ್ಚೆ