ಕಾಂಗ್ರೆಸ್ ಜಿಲ್ಲಾ ಘಟಕಗಳ ಅಧ್ಯಕ್ಷರ ಬದಲಾವಣೆ ಚರ್ಚೆ; ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸಂಘಟನೆಗೆ ಹೊಸ ಸೂತ್ರ?
ರಮೇಶ್ ಜಾರಕಿಹೊಳಿಯನ್ನು ನಾವು ಕರೆಯುವುದೇ ಇಲ್ಲ. ಹೀಗಾಗಿ ಅವರು ಮತ್ತೆ ಕಾಂಗ್ರೆಸ್‌ಗೆ ಬರುವ ಪ್ರಶ್ನೆಯೇ ಇಲ್ಲ. ನಾವು ಕರೆದಾಗ ಮಾತ್ರ ಅವರು ಬರುವುದಕ್ಕೆ ಸಾಧ್ಯ ಎಂದೂ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಜಿಲ್ಲಾ ಘಟಕಗಳ ಅಧ್ಯಕ್ಷರ ಬದಲಾವಣೆಯ ಕುರಿತಾಗಿ ಇಂದು (ಜೂನ್ 26) ಚರ್ಚೆ ನಡೆಸಲಾಗಿದೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಮಾತುಕತೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಅವಧಿ ಮುಗಿದಿರುವ ಜಿಲ್ಲಾ ಘಟಕಗಳ ಅಧ್ಯಕ್ಷರು, 2 ಅವಧಿಯಿಂದ ಅಧ್ಯಕ್ಷರಾಗಿದ್ದರೆ ಬದಲಾವಣೆ ನಡೆಸುವ ಬಗ್ಗೆ ಚರ್ಚೆ ಮಾಡಲಾಗಿದೆ. ಈ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ನಾವು ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಬೇಕು. ಸಭೆಯಲ್ಲಿ ಮಾಹಿತಿ ಸಂಗ್ರಹಿಸಿ ಅಧ್ಯಕ್ಷರಿಗೆ ನೀಡುತ್ತೇವೆ. ಒಂದು ವಾರದಲ್ಲಿ ವರದಿ ನೀಡಲು ಅಧ್ಯಕ್ಷರು ಹೇಳಿದ್ದಾರೆ. ಬ್ಲಾಕ್ ಕಾಂಗ್ರೆಸ್‌ನಲ್ಲಿ ಎಲ್ಲರನ್ನೂ ಬದಲಾವಣೆ ಮಾಡಲ್ಲ. ಕೆಲವರನ್ನು ಮಾತ್ರ ಬದಲಾವಣೆ ಮಾಡಬೇಕಾಗಿದೆ. ಹೊಸಬರೂ ಬರಬೇಕು, ಹಳಬರೂ ಇರಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಶೀಘ್ರದಲ್ಲಿಯೇ ಇದರ ಬಗ್ಗೆ ನಿರ್ಧಾರ ಹೊರಬೀಳಲಿದೆ. ರಮೇಶ್ ಜಾರಕಿಹೊಳಿಯನ್ನು ನಾವು ಕರೆಯುವುದೇ ಇಲ್ಲ. ಹೀಗಾಗಿ ಅವರು ಮತ್ತೆ ಕಾಂಗ್ರೆಸ್‌ಗೆ ಬರುವ ಪ್ರಶ್ನೆಯೇ ಇಲ್ಲ. ನಾವು ಕರೆದಾಗ ಮಾತ್ರ ಅವರು ಬರುವುದಕ್ಕೆ ಸಾಧ್ಯ ಎಂದೂ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಸಭೆ ಬಳಿಕ ಈಶ್ವರ ಖಂಡ್ರೆ ಮಾಹಿತಿ ತಳಮಟ್ಟದಲ್ಲಿ ಕಾಂಗ್ರೆಸ್ ಬಲವರ್ಧನೆ ಬಗ್ಗೆ ಚರ್ಚಿಸಿದ್ದೇವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಕಾಂಗ್ರೆಸ್ ಜಿಲ್ಲಾ ಘಟಕ ಸದೃಢ ಮಾಡುವ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಸಭೆ ಬಳಿಕ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿಕೆ ನೀಡಿದ್ದಾರೆ.
ಕೊವಿಡ್ ಸಂಕಷ್ಟದ ಸಮಯದಲ್ಲಿ ಜನರಿಗೆ ಸ್ಪಂದನೆ ಸಿಗಬೇಕು. ರಾಜ್ಯ, ಕೇಂದ್ರ ಸರ್ಕಾರಗಳ ವೈಫಲ್ಯ ಜನರಿಗೆ ತಿಳಿಸುವುದು. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡುವುದು. ರೈತ ವಿರೋಧಿ ನೀತಿ ಈ ಎಲ್ಲಾ ವಿಚಾರಗಳ ಬಗ್ಗೆ ಜನರಿಗೆ ತಿಳಿಸುವ ಬಗ್ಗೆ ಚರ್ಚಿಸಿದ್ದೇವೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಸದಸ್ಯರ ನೇಮಕ ವಿಚಾರ, ಶಾಸಕರು, ಮಾಜಿ ಶಾಸಕರ ಅಭಿಪ್ರಾಯ ಪಡೆಯುತ್ತಿದ್ದೇವೆ. ಎಲ್ಲರ ಅಭಿಪ್ರಾಯವನ್ನು ಪಡೆದು ನೇಮಕ ಮಾಡುತ್ತಿದ್ದೇವೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಖಂಡ್ರೆ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್‌ನ ಮುಂದಿನ ಸಿಎಂ ಅಭ್ಯರ್ಥಿ ಬಗ್ಗೆ ಚರ್ಚೆ ವಿಚಾರವಾಗಿ ಈಶ್ವರ್ ಖಂಡ್ರೆ ಪ್ರತಿಕ್ರಿಯಿಸಿದ್ದಾರೆ. ಅಪ್ರಸ್ತುತ ವಿಚಾರಗಳ ಬಗ್ಗೆ ಚರ್ಚೆ ಮಾಡಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ, ಭಿನ್ನಾಭಿಪ್ರಾಯ ಇಲ್ಲ. ಸೋನಿಯಾ ಗಾಂಧಿ ನೇತೃತ್ವದಲ್ಲಿ ಎಲ್ಲರಿಂದ ಕೆಲಸ ನಡೆಯುತ್ತದೆ. ಜನವಿರೋಧಿ ಬಿಜೆಪಿ ಸರ್ಕಾರ ತೆಗೆಯಲು ಕೆಲಸ ಮಾಡ್ತೇವೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕ ಈಶ್ವರ ಖಂಡ್ರೆ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷ ಸಂಘಟನೆ ಪುನಶ್ಚೇತನ?! ಪಕ್ಷ ಸಂಘಟನೆಯ ಮೊದಲ ಹೆಜ್ಜೆಯಾಗಿ ಕಾಂಗ್ರೆಸ್ ಕಾರ್ಯಾಧ್ಯಕ್ಷರಿಗೆ ಟಾಸ್ಕ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಕ್ರಿಯಾಶೀಲರಲ್ಲದ ಜಿಲ್ಲಾಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪಟ್ಟಿ ಸಿದ್ದಪಡಿಸಲು ನಿರ್ಧಾರ ಮಾಡಲಾಗಿದೆ. ಯಾವುದೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳದವರಿಗೆ ಕೊಕ್ ನೀಡಲಾಗುವುದು. ಬಳಿಕ ಹೊಸ ಉತ್ಸಾಹಿ ನಾಯಕರನ್ನು ಜಿಲ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುವುದು.
ಆಯಾಯ ವಿಧಾನಸಭಾ ಕ್ಷೇತ್ರದ ಶಾಸಕರೊಂದಿಗೂ ಕೂಡ ಅರ್ಹರ ಬಗ್ಗೆ ಮಾಹಿತಿ ಸಂಗ್ರಹಿಸಿ ಚರ್ಚೆ ನಡೆಸಲಾಗುವುದು. ಬಳಿಕ ಡಿಸಿಸಿ, ಬಿಸಿಸಿ ಅಧ್ಯಕ್ಷರ ಬದಲಾವಣೆಗೆ ಇಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಐವರು ಕಾರ್ಯಾಧ್ಯಕ್ಷರು ತೀರ್ಮಾನ ತೆಗೆದುಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಅಕಸ್ಮಾತ್ ಶಾಸಕರ ಅಭಿಪ್ರಾಯ ಪಡೆಯದಿದ್ದರೆ ಮತ್ತೆ ಭಿನ್ನಮತ ಸ್ಪೋಟಗೊಳ್ಳುವ ಆತಂಕ ಇದೆ. ಈಗ ಇರುವ ಹಲವು ಡಿಸಿಸಿ, ಬಿಸಿಸಿಗಳು ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ನೇಮಕವಾದವರು. ಸಿದ್ದರಾಮಯ್ಯ ಪ್ರಭಾವದಿಂದ ಅಧ್ಯಕ್ಷರಾಗಿ ಉಳಿದವರು ಹಲವರು ಇದ್ದಾರೆ. ಹಿರಿಯ ನಾಯಕರ ಅಭಿಪ್ರಾಯ ಪಡೆಯದೇ ಬದಲಾವಣೆ ಮಾಡಿದರೆ ಮಾತ್ರ ಮತ್ತೆ ಡಿ.ಕೆ. ಶಿವಕುಮಾರ್ಗೆ ಸಂಕಷ್ಟ ಎದುರಾಗಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಕಾಂಗ್ರೆಸ್ ನಾಯಕರ ಹೋರಾಟಕ್ಕೆ ಪ್ರತಿಫಲ; ವಿಧಾನಸೌಧ ಬಳಿ ಇದ್ದ ಜವಾಹರಲಾಲ್ ನೆಹರು ಪ್ರತಿಮೆ ಸ್ಥಳಾಂತರ
Published On - 3:45 pm, Sat, 26 June 21