ರೋಹಿಣಿ ಸಿಂಧೂರಿ ಬಾಯಲ್ಲಿ ಮಾತ್ರ ಭೂ ಮಾಫಿಯಾ ವಿರುದ್ಧ ಜೋರಾಗಿ ಮಾತನಾಡಿದ್ದರು; ಐಪಿಎಸ್ ಅಧಿಕಾರಿ ಡಿ ರೂಪಾ ಬೇಸರ
ತೋಳ ಬಂತು ತೋಳ ಎನ್ನುವ ಕಥೆ ಆಯಿತೇ ಹೊರತು, ತೋಳ ಹಿಡಿಯುವ ಕೆಲಸ ಆಗಲೇ ಇಲ್ಲ ಅನ್ನೋದು ವಿಪರ್ಯಾಸ, ನಿರಾಶೆ. ಸ್ವಿಮ್ಮಿಂಗ್ ಪೂಲ್ ವಿಚಾರ ತುಂಬ ಸಣ್ಣದೇ. ರಿಜನಲ್ ಕಮಿಷನರ್ ರ ನಿನ್ನೆ ವರದಿಯ ಪ್ರಕಾರ, ಪೂಲ್ ಕಟ್ಟಲು ಪರವಾನಗಿ ಇಲ್ಲದ್ದು ಅಕ್ರಮ.
ಕೊವಿಡ್ ಕಾಲದಲ್ಲಿ ಈಜುಕೊಳ ಕಟ್ಟಿಸಿದ ಕುರಿತು ಇತ್ತೀಚಿಗಷ್ಟೇ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದ ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ಮತ್ತೊಮ್ಮೆ ಈಗ ಭೂಮಾಫಿಯಾ ತಡೆಗಟ್ಟದಿರುವ ಬಗ್ಗೆ ಟೀಕಿಸಿದ್ದಾರೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಜತೆಗೆ ಈ ಮುನ್ನ ತಮ್ಮ ಒಡನಾಟ ಮತ್ತು ಮಾಡಿದ ಸಹಾಯಗಳನ್ನು ತೆರೆದಿಟ್ಟಿರುವ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್, ಸದ್ಯ ರೋಹಿಣಿ ಸಿಂಧೂರಿ ನಡೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅವರು ಬರೆದುಕೊಂಡ ವಿವರಗಳು ಹೀಗಿವೆ: “ಒಂದು ಇಂಚು ಭೂಮಿ ಕೂಡ ಭೂ ಮಾಫಿಯಾ ದಿಂದ ವಶಪಡಿಸಿಕೊಳ್ಳಲಿಲ್ಲ. 10 ತಿಂಗಳು ಡಿಸಿ ಆದವರಿಗೆ ಒತ್ತುವರಿ ಮಾಡಿದ ಭೂ ಕಳ್ಳರ ವಿರುಧ್ಧ ಕ್ರಮ ಕೈಗೊಳ್ಳುವುದು ಕಷ್ಟವಲ್ಲ. demolition ಮಾಡಿಯೋ, ಜಪ್ತಿ ಮಾಡಿಯೋ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವುದು ಸಾಧ್ಯ. ಅದು ಮೈಸೂರಲ್ಲಿ ಆಗಲಿಲ್ಲ. ತೋಳ ಬಂತು ತೋಳ ಎನ್ನುವ ಕಥೆ ಆಯಿತೇ ಹೊರತು, ತೋಳ ಹಿಡಿಯುವ ಕೆಲಸ ಆಗಲೇ ಇಲ್ಲ ಅನ್ನೋದು ವಿಪರ್ಯಾಸ, ನಿರಾಶೆ. ಸ್ವಿಮ್ಮಿಂಗ್ ಪೂಲ್ ವಿಚಾರ ತುಂಬ ಸಣ್ಣದೇ. ರಿಜನಲ್ ಕಮಿಷನರ್ ರ ನಿನ್ನೆ ವರದಿಯ ಪ್ರಕಾರ, ಪೂಲ್ ಕಟ್ಟಲು ಪರವಾನಗಿ ಇಲ್ಲದ್ದು ಅಕ್ರಮ. ಅಕ್ರಮ ಅಕ್ರಮವೇ. ಯಾರೇ ಮಾಡಿರಲಿ. ಎಷ್ಟೇ ಗೌಣ ಇರಲಿ.ಭೂ ಮಾಫಿಯಾ ವಿರುದ್ಧವೂ ಕ್ರಮ ಆಗಬೇಕು, ಅನೇಕ ಹಗರಣಗಳಲ್ಲಿ ಇನ್ನೂ ಕ್ರಮ ಆಗಿಲ್ಲ, ಅದೂ ಆಗಬೇಕು” ಎಂದು ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ನನ್ನ ಅಭಿಪ್ರಾಯ ನನ್ನದು. ಇದನ್ನು ಇಲ್ಲಿ ಏಕೆ ಹೇಳಿದ್ರಿ, ಅದನ್ನೇಕೆ ಹೇಳಲ್ಲಿಲ್ಲ ಅನ್ನೋರ್ಗೆ ನನ್ನ ಕೊನೆಯ ಉತ್ತರ. ಪ್ರಜಾಪ್ರಭುತ್ವದಲ್ಲಿ ನಾಗರಿಕ ರೀತಿಯಲ್ಲಿ ವಿಷಯಗಳ ಅಭಿಪ್ರಾಯ ತಿಳಿಸುವ ಸ್ವಾತಂತ್ರ ಎಲ್ಲರಿಗೂ ಇರುತ್ತದೆ. ಇದುವರೆಗೂ ರೋಹಿಣಿ ಸಿಂಧೂರಿ ಬಗ್ಗೆ ನಾನು ಮಾತಾಡಿಲ್ಲ. ಆವರ ಬಗ್ಗೆ ಈಗ ಮಾತಾಡುವುದು ಕೆಲವರಿಗೆ ಟೀಕೆ ಅನ್ನಿಸಬಹುದು. ಆದರೆ, ರೋಹಿಣಿ ಗೆ ಇದುವರೆಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಾನು, ನನ್ನ ಪತಿ ಮುನೀಶ್ ಮೌಡ್ಗಿಲ್, ಐಎಎಸ್ ಅವರು ಸಹಾಯ, ಬೆಂಬಲ ನೀಡಿದ್ದೇವೆ ಅನ್ನೋದು ನಿಮಗೆ ತಿಳಿದಿಲ್ಲ, ಆಕೆಗೆ ತಿಳಿದಿದೆ” ಎಂದು ಬರೆದುಕೊಂಡಿರುವ ರೂಪಾ ಮೌದ್ಗಿಲ್ ಕೆಲವು ಹಳೆಯ ಕಥೆಗಳನ್ನು ತೆರೆದಿಟ್ಟಿದ್ದಾರೆ. ಸುಮಾರು 2014-15 ರಲ್ಲಿ ಸಿಂಧೂರ ನನ್ನ ಪತಿಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೂ. ನನ್ನ ಪತಿ MNREGA director ಆಗಿದ್ದರು. ಈಕೆಯನ್ನು ನನ್ನ ಪತಿಯ ಆಫೀಸಿನಲ್ಲಿ ಭೇಟಿ ಕೂಡ ಆಗಿದ್ದೆ. ನಂತರ ಆಕೆ ಮಂಡ್ಯ ZP CEO ಆಗಿ ಹೋದರು.DK Ravi ಅವರು ತೀರಿಕೊಂಡಾಗ ಎಲ್ಲಾ ಮೀಡಿಯಾ ಗಳೂ ಇವರ ಹಿಂದೆ ಮುಗಿಬಿದ್ದವು. ಆರಂಭದಲ್ಲಿ ಸಿಂಧೂರಿ ಯನ್ನು ತಪ್ಪಿತಸ್ಥರೆಂದು ಮೀಡಿಯಾಗಳು ಬಿತ್ತರ ಗೊಳಿಸಿದವು. ಈಕೆಯ ವಿರುದ್ಧ ತನಿಖೆ ಪ್ರಾರಂಭವಾಗಿ ಸೌಮೇಂದು ಮುಖರ್ಜಿ ಐಪಿಎಸ್ ಅವರು ಇಂಟರ್ರೋಗೇಶನ್ ನಡೆಸುವ ಸಂದರ್ಭ. ಆಗ ಒಂದು ವಾಹಿನಿಯಲ್ಲಿ ನಾನು ಸ್ಕ್ರೋಲ್ ಓದಿದೆ, ಸಿಂಧೂರಿ ಅವರ ಇಂಟರ್ರೋಗೇಶನ್/ ಎನ್ಕ್ವೈರಿ, ಐಎಎಸ್ ಅಸೋಸಿಯೇಷನ್ ಕಟ್ಟಡ, ಇನ್ಫೆಂಟ್ರಿ ರೋಡ್ ನಲ್ಲಿ 8:00 ಗಂಟೆಗೆ ಪ್ರಾರಂಭವಾಗುತ್ತದೆ ಎಂದು. ಇದನ್ನು ಓದಿ ನಾನು ನನ್ನ ಪತಿಯವರಿಗೆ ಮನೀಶ್ ಅವರಿಗೆ ಫೋನಾಯಿಸಿ ನೋಡಿ ಈ ರೀತಿ ಒಬ್ಬ ಹೆಣ್ಣುಮಗಳ ಹಿಂದೆ ನೆಗೆಟಿವ್ ರೀತಿಯಲ್ಲಿ ಮೀಡಿಯಾಗಳು ಹಿಂದೆ ಬೀಳುವುದು ಒಳ್ಳೆಯದಲ್ಲ , ನೀವು ನಿಮ್ಮ ಕಚೇರಿಯಲ್ಲಿ ಎನ್ಕ್ವೈರಿ ಗೆ ಮೀಡಿಯಾಗೆ ಗೊತ್ತಾಗದಂತೆ ಏರ್ಪಡಿಸಿ ಎಂದು. ಅತ್ಯಂತ ಸಂವೇದನಾಶೀಲ ವ್ಯಕ್ತಿಯಾದ ನನ್ನ ಪತಿಯವರು ತಕ್ಷಣ ತಮ್ಮ batchmate ಆದ ಸೌಮೆಂದು ಮುಖರ್ಜಿ ಅವರಿಗೆ ಫೋನಾಯಿಸಿ ಇಂಟರ್ರೋಗೇಶನ್/ ಎನ್ಕ್ವೈರಿಯನ್ನು ನನ್ನ ಕಚೇರಿಯಲ್ಲಿ ಮೀಡಿಯಾ ಇಂದ ದೂರವಿದ್ದು, ಮಾಡಿ ಎಂದು ತಿಳಿಸಿ ಅವರನ್ನು ಅಲ್ಲಿಗೆ ಕರೆಸಿದರು. ಅಂತೆಯೇ ರೋಹಿಣಿ ಅವರ ಪತಿ ಜೊತೆ ಎನ್ಕ್ವೈರಿ ಗೆ ಹಾಜರಾದರು . ನನ್ನ ಪತಿಯವರು ತಮ್ಮ ಕುರ್ಚಿ ಟೇಬಲ್ಲು ಬಿಟ್ಟು ಕೊಠಡಿಯಿಂದ ಹೊರಗೆ ತೆರಳಿ ಅಲ್ಲಿ ಗೌಪ್ಯವಾಗಿ ಮಾಡಲು ಅನುವು ಮಾಡಿಕೊಟ್ಟ ಸಹೃದಯಿ. ಅದೇ ಸಂದರ್ಭದಲ್ಲಿ ನನ್ನ ಪತಿಯವರು ಖಾಸಗಿ ಸುದ್ದಿವಾಹಿನಿಯ ಮುಖ್ಯಸ್ಥರೊಬ್ಬರ ಜತೆಗೂ ಮಾತನಾಡಿ ಮೀಡಿಯಾಗಳು ಈ ರೀತಿ ಅವರನ್ನು ಒಬ್ಬ ಸ್ತ್ರೀಯನ್ನು ಈ ರೀತಿ ಬಿಂಬಿಸುವುದು ತಪ್ಪು ಮತ್ತು ಈ ಪ್ರಕರಣಕ್ಕೆ ಅನೇಕ ಆಯಾಮಗಳಿವೆ ಎಂದು ತಿಳಿಸಿದರು . ಬಹುಶಹ ರೋಹಿಣಿ ಅವರು ಬೇರೆ ಅಧಿಕಾರಿಗಳಿಗೂ ರಿಕ್ವೆಸ್ಟ್ ಮಾಡಿಕೊಂಡಿದ್ದರು ಏನು ಅದು ನನಗೆ ತಿಳಿದಿಲ್ಲ . ಆದರೆ ನನ್ನ ಪತಿಯವರನ್ನು ಅವರು ಮನವಿ ಮಾಡಿ ಕೇಳಿಕೊಂಡಿದ್ದಾರೆ. ಹಾಗಾಗಿ, ನನ್ನ ಪತಿಯವರು ಹಿಂದೆ ಮುಂದೆ ಲೆಕ್ಕಿಸದೆ, ಮಾನವೀಯತೆ ದೃಷ್ಟಿಯಿಂದ ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥರ ಜೊತೆ ಮಾತಾಡಿದ್ದರು ಹಾಗು ಕೇಸ್ ಇತ್ಯರ್ಥ ಆಗದೇ ಇವರನ್ನು ನೆಗಟಿವ್ ಆಗಿ ಬಿಂಬಿಸಬಾರದು ಎಂದು ಹೇಳಿ ಕೆಲವು ಇತರ ಮಾಹಿತಿಗಳನ್ನು ಕೊಟ್ಟಿದ್ದರು.
ಹಾಸನದಿಂದ ರೋಹಿಣಿ ಅವರನ್ನು ಒಂದು ವರ್ಷಕ್ಕೆ ಮುಂಚೆ ಎತ್ತಂಗಡಿ ಮಾಡಿದಾಗ ಅವರು ಕೋರ್ಟ್ ಹೋಗುವ ಸಂದರ್ಭದಲ್ಲಿ ಕೋರ್ಟಿಗೆ ಸಲ್ಲಿಸಬೇಕಾದ ಅಫಿಡವಿಟ್/ಅರ್ಜಿ ದಾಖಲಾತಿ ಮುಂತಾದ ಗಳನ್ನು ನನ್ನ ಪತಿ ಅವರಿಂದ ಭಾಗಶಃ ಅಂದರೆ ಕೆಲವು ಅಂಶಗಳನ್ನು ಬರೆಯಿಸಿಕೊಂಡಿದ್ದರು. ನನ್ನ ಪತಿಯವರು ಕಾನೂನು ವಿಚಾರದಲ್ಲಿ ನಿಷ್ಣಾತ ಎಂದು ತಿಳಿದು ಅವರು ದಾಖಲೆಗಳನ್ನು ನನ್ನ ಪತಿಯವರ ಬಳಿ ಪಕ್ಕಾ ಮಾಡಿಸಿಕೊಂಡಿದ್ದರು.ನಂತರ, ರೋಹಿಣಿ ಕಾರ್ಮಿಕ ಇಲಾಖೆಯಲ್ಲಿ ಮಣಿವಣ್ಣನ್ ಐಎಎಸ್ ಅವರ ಜೊತೆ ಕಲಹ ಮಾಡಿದರು. ಆ ಸಂದರ್ಭದಲ್ಲಿ ಕೂಡ ನಾನು ಹಾಗೂ ನನ್ನ ಪತಿ ರೋಹಿಣಿಯವರ ಪರೋಕ್ಷ ಬೆಂಬಲಕ್ಕೆ ನಿಂತೆವು. ನಾನು ಪರೋಕ್ಷವಾಗಿ ಅವರಿಗೆ ಬೆಂಬಲ ವ್ಯಕ್ತಪಡಿಸಿ ಅವರ ಹೆಸರು ಹೇಳದೆಯೆ ಟ್ವೀಟ್ ಕೂಡ ಮಾಡಿದ್ದೆ.
ಇಷ್ಟೆಲ್ಲಾ ನಾವಿಬ್ಬರು ದಂಪತಿಗಳು ಈ ವ್ಯಕ್ತಿಗೆ ಬೆಂಬಲ ಏಕೆ ನೀಡಿದೆವು ಎಂದರೆ ಅವರ ಮೇಲೆ ನಮಗೊಂದು ಭರವಸೆಯಿತ್ತು. ಅದೇ ಆಶಾದಾಯಕ ಭಾವನೆ ಇವರು ಮೈಸೂರಿಗೆ ವರ್ಗಾವಣೆಗೊಂಡಾಗ ಕೂಡ ಇತ್ತು . ಆದರೆ ಯಾವ ಭೂ ಮಾಫಿಯಾ ಮೇಲೆಯೂ ಕೂಡ ಇವರು ಕ್ರಮ ತೆಗೆದುಕೊಳ್ಳದೆ ಕೇವಲ ಬಾಯಲ್ಲಿ ಮಾತ್ರ ಭೂ ಮಾಫಿಯಾ ಬಗ್ಗೆ ಜೋರಾಗಿ ಮಾತಾಡಿದ ಜೊತೆಗೆ ಮೈಸೂರಲ್ಲಿ ಸರಿಯಾದ ಕ್ರಮಗಳ ತೆಗೆದುಕೊಂಡಿದ್ದರೆ, ಇಷ್ಟೊಂದು ಸಾವುಗಳು ಮೈಸೂರಲ್ಲಿ ಆಗುತ್ತಿರಲಿಲ್ಲ ಎಂಬ ಕಟುಸತ್ಯ ನನ್ನ ಅಭಿಪ್ರಾಯ ವ್ಯಕ್ತ ಪಡಿಸಲು ನಾಂದಿ.”ಎಂದು ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಹೀಗೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಜತೆಗೆ ಈ ಮುನ್ನ ತಮ್ಮ ಒಡನಾಟ ಮತ್ತು ಮಾಡಿದ ಸಹಾಯಗಳನ್ನು ತೆರೆದಿಟ್ಟಿರುವ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್, ಸದ್ಯ ರೋಹಿಣಿ ಸಿಂಧೂರಿ ನಡೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ ಮತ್ತೊಂದು ಪೋಸ್ಟ್ ಹಾಕಿದ ಡಿ.ರೂಪಾ, ಕಾಮೆಂಟ್ ಮಾಡಿ ಆಕ್ಷೇಪಿಸಿದ ಜನ
ಕೊರೊನಾ ಕಾಲದಲ್ಲಿ ಈಜುಕೊಳ ಕಟ್ಟಿದ್ದು ನೈತಿಕ ಅಧಃಪತನ: ರೋಹಿಣಿ ಸಿಂಧೂರಿ ವಿರುದ್ಧ ಡಿ.ರೂಪಾ ಟ್ವೀಟ್
( IPS D Roopa Moudgil wrote about IAS Rohini Sindhuri in facebook)
Published On - 3:41 pm, Sat, 26 June 21