ರೋಹಿಣಿ ಸಿಂಧೂರಿ ವಿರುದ್ಧ ಮತ್ತೊಂದು ಪೋಸ್ಟ್​ ಹಾಕಿದ ಡಿ.ರೂಪಾ, ಕಾಮೆಂಟ್ ಮಾಡಿ ಆಕ್ಷೇಪಿಸಿದ ಜನ

ಐಪಿಎಎಸ್ ಅಧಿಕಾರಿ ಡಿ.ರೂಪಾ, ಇಂದು ಮತ್ತೊಂದು ಪೋಸ್ಟ್​ನಲ್ಲಿ ರೋಹಿಣಿ ಅವರ ನಡೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

  • Updated On - 10:09 pm, Thu, 24 June 21 Edited By: Ghanashyam D M | ಡಿ.ಎಂ.ಘನಶ್ಯಾಮ
ರೋಹಿಣಿ ಸಿಂಧೂರಿ ವಿರುದ್ಧ ಮತ್ತೊಂದು ಪೋಸ್ಟ್​ ಹಾಕಿದ ಡಿ.ರೂಪಾ, ಕಾಮೆಂಟ್ ಮಾಡಿ ಆಕ್ಷೇಪಿಸಿದ ಜನ
ಐಪಿಎಸ್ ಅಧಿಕಾರಿ ಡಿ.ರೂಪಾ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ


ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿ ನಿವಾಸದಲ್ಲಿ ಈಜುಕೊಳ ನಿರ್ಮಿಸಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಕ್ರಮವನ್ನು ನಿನ್ನೆಯಷ್ಟೇ (ಜೂನ್ 23) ಕಟುವಾಗಿ ಆಕ್ಷೇಪಿಸಿದ್ದ ಐಪಿಎಎಸ್ ಅಧಿಕಾರಿ ಡಿ.ರೂಪಾ, ಇಂದು ಮತ್ತೊಂದು ಪೋಸ್ಟ್​ನಲ್ಲಿ ರೋಹಿಣಿ ಅವರ ನಡೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರೂಪಾ ಅವರ ಪೋಸ್ಟ್​ಗೆ ಕಾಮೆಂಟ್ ಮಾಡಿರುವ ಸಾರ್ವಜನಿಕರು, ‘ನೀವೂ ಒಬ್ಬ ಸರ್ಕಾರಿ ಅಧಿಕಾರಿಯಾಗಿ ಹೀಗೆ ಮತ್ತೊಬ್ಬ ಅಧಿಕಾರಿಯನ್ನು ತೆಗಳುವುದು ಸರಿಯೇ’ ಎಂದು ಪ್ರಶ್ನಿಸಿದ್ದಾರೆ.

‘ನನ್ನ ಸಂಬಂಧಿಕರೊಬ್ಬರು ಈ ಪೇಪರ್ ಕ್ಲಿಪಿಂಗ್ ಕಳಿಸಿ, ಈಜುಕೊಳ ನಿರ್ಮಾಣಕ್ಕೆ ಪರ್ಮಿಷನ್ ಇದೆಯಲ್ಲ’ ಎಂದು ಪ್ರಶ್ನಿಸಿದ್ದರು. ಬಹುಶಃ ಸಾಮಾನ್ಯ ಜನರಿಗೆ ಇದರಲ್ಲಿ ಇರುವ ಸಮಜಾಯಿಷಿ ಅರ್ಥ ಆಗಿಲ್ಲ. ಇದನ್ನು ಗೋಲ್ಗೋಲ್ ಆಗಿ ಹೇಳಿ ಅಧಿಕಾರಿಯು ಜನರ ದಾರಿ ತಪ್ಪಿಸುತ್ತಿರುವ ಸಾಧ್ಯತೆಯಿದೆ ಎಂದು ರೂಪಾ ಅಭಿಪ್ರಾಯಪಟ್ಟಿದ್ದಾರೆ.

ಪ್ರತಿ ಜಿಲ್ಲೆಗಳಲ್ಲಿಯೂ ನಿರ್ಮಿತಿ ಕೇಂದ್ರಗಳಿವೆ. ಜಿಲ್ಲಾಧಿಕಾರಿಯೇ ನಿರ್ಮಿತಿ ಕೇಂದ್ರದ ಅಧ್ಯಕ್ಷರಾಗಿರುತ್ತಾರೆ. ಅವರ ಮನೆಯ ಅಂಗಳದಲ್ಲಿ ಈಜುಕೊಳ ಕಟ್ಟಿಸುವುದು ಅವರಿಗೆ ಕಷ್ಟವೇ ಅಲ್ಲ. ವಿಷಯ ಅದಲ್ಲ. (ಈಜುಕೊಳ ನಿರ್ಮಾಣಕ್ಕೆ) ಕಾರ್ಪೋರೇಶನ್ ಪರವಾನಗಿ ಬೇಡವೇ? ಅದು ಇತ್ತೆ? ಇರಲ್ಲಿಲ್ಲ. ತಪ್ಪಲ್ಲವೇ? ಜನ ಸಾಮಾನ್ಯನಿಗೆ ಒಂದು, ಡಿಸಿಗೆ ಬೇರೆ ನ್ಯಾಯವೇ? ಕಾರ್ಪೋರೇಶನ್ ಪರವಾನಗಿ ಇಲ್ಲ, ಹಾಗಾದ್ರೆ ಒಡೆಯಬೇಕಲ್ಲ? ಅಥವಾ ದಂಡ ಕಟ್ಟಿಸಬೇಕಲ್ಲ? ಈ ಅಧಿಕಾರಿಯಿಂದ ದಂಡ ವಸೂಲಿ ಮಾಡುತ್ತಾರೆಯೇ?

ಈ ಅಧಿಕಾರಿಯು ಕೊಟ್ಟಿರುವ ಇನ್ನೊಂದು ದಾರಿ ತಪ್ಪಿಸುವ ಹೇಳಿಕೆ, ಇದು Covid ಸಮಯದಲ್ಲಿ ನಿರ್ಮಿಸಿಲ್ಲ. Covid ಮುಗಿದಿದೆ ಅಂತ ಸರ್ಕಾರ ಘೋಷಿಸಿದೆಯೇ? ಶಾಲಾ ಕಾಲೇಜು ತೆರೆದಿದೆಯೇ? ಮಾಸ್ಕ್ ಹಾಕೋದು ನಿಲ್ಲಿಸಿ ಅಂತ ಸರ್ಕಾರ ಹೇಳಿದೆಯೇ? ಮತ್ತೆ ಇವರು Covid ಸಮಯ ಇರಲಿಲ್ಲ ಅಂತ ಹೇಳೋದು ಒಪ್ಪಲು ಸಾಧ್ಯವೇ?

ಅಪಾರ್ಟ್​ಮೆಂಟ್​ಗಳಲ್ಲೇ ಈಜುಕೊಳ ತೆಗೆಯಲು ಪರವಾನಗಿ ಇಲ್ಲ. ಡಿಸಿಗೊಂದು ನ್ಯಾಯ, ಜನರಿಗೊಂದು ನ್ಯಾಯವೇ? ಒಬ್ಬ ಡಿಸಿ ಈಜುಕೊಳ ಕಟ್ಟಿದಾಗ, ಬಾಕಿ ಜಿಲ್ಲೆಯ ಡಿಸಿಗಳೂ ಕಟ್ಟಬಹುದಲ್ಲವೆ. ಅವರನ್ನು ನೋಡಿ SPಗಳು ಅಂದರೆ ಪೊಲೀಸ್ ವರಿಷ್ಠ ಅಧಿಕಾರಿಗಳೂ ಕಟ್ಟಬಹುದಲ್ಲವೆ? ಹಾಗೆ ಎಲ್ಲರೂ ತಮ್ಮ ತಮ್ಮ ಬಂಗಲೆಯಲ್ಲಿ ಸಾರ್ವಜನಿಕ ಹಣ ಉಪಯೋಗಿಸಿ ಕಟ್ಟುವುದನ್ನು ಒಪ್ಪಲು ಸಾಧ್ಯವೇ? ಅದೂ ಇಂದಿನ ಪರಿಸ್ಥಿತಿಯಲ್ಲಿ? ಡಿಸಿ ಬಂಗಲೆಯಲ್ಲಿ ಸಾಮಾನ್ಯ ಜನರು ಉಪಯೋಗಿಸಲು ಅವಕಾಶ ಇದೆಯೇ? ಇಲ್ಲವಲ್ಲ?

ನೈತಿಕತೆ ಅಂದರೆ, ನಾನು ಮಾಡುವ ಕೆಲಸ ಬೇರೆಯವರೂ ಮಾಡಿದರೆ, ಅದು ಸಮಾಜದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಮನಗಂಡು ಇಡುವ ಹೆಜ್ಜೆಯೇ ನೈತಿಕ ಹೆಜ್ಜೆ. ಎಲ್ಲರಿಗಿಂತ ನಾವು ನಿಸ್ಪೃಹರು, ನಮಗಿಂತ ಪ್ರಾಮಾಣಿಕರು ಬೇರೆ ಇಲ್ಲ ಎಂದು ತಿಳಿದುಕೊಳ್ಳುವ (ಗ್ರಹಿಸುವ) ಅಧಿಕಾರಿಗಳು ತಮ್ಮ ಪ್ರತಿ ಹೆಜ್ಜೆಯನ್ನೂ ಗಮನಿಸಿ ಇಡಬೇಕಾಗುತ್ತದೆ. ಜನಪ್ರಿಯತೆ ಹೆಚ್ಚಿನ ಜವಾಬ್ದಾರಿ ತರುತ್ತದೆ. ನೀವು ನೈತಿಕವಾಗಿ ಬೇರೆಯವರಿಗಿಂತ ಮೇಲ್ಮಟ್ಟದಲ್ಲಿ ಇರಲೇಬೇಕಾಗುತ್ತದೆ. ಅಂಥವರಿಗೆ ಈ ಸಂದರ್ಭದಲ್ಲಿ ಈಜುಕೊಳ ಬೇಕೋ ಬೇಡವೋ ಎಂಬುದು ತಿಳಿಯುವುದಿಲ್ಲವೇ? ಮಾನವೀಯತೆ, ಪ್ರಾಮಾಣಿಕತೆ, ನೈತಿಕತೆ ಇರುವ ಎಂಥವರಿಗೂ ತಿಳಿಯುವ ವಿಚಾರ ಇದು ಎಂದು ಡಿ.ರೂಪಾ ತಮ್ಮ ಪೋಸ್ಟ್ ಮುಗಿಸಿದ್ದಾರೆ.

ರೂಪಾ ಅವರ ಪೋಸ್ಟ್​ಗೆ ಪ್ರತಿಕ್ರಿಯಿಸಿರುವ ಎಚ್​.ಕೆ.ಪ್ರಹ್ಲಾದ್​ ಎನ್ನುವವರು, ‘ಒಬ್ಬ ಹಿರಿಯ ಅಧಿಕಾರಿಗಳಾಗಿ ಮತ್ತೊಬ್ಬ ಅಧಿಕಾರಿಯ‌ ಮೇಲೆ ಹಗೆ ಸಾಧಿಸುವ ಛಲವೇಕೆ? ಆ ಹಣ ಖರ್ಚಾಗದೆ ಉಳಿದಿತ್ತಂತೆ. ನಿಗದಿತ ಹಣವನ್ನು ನಿಗದಿಪಡಿಸಿದ ಕೆಲಸಕ್ಕೆ ಬಳಸಬೇಕೆಂದು ಸರ್ಕಾರಿ ನಿಯಮಗಳಿರುವುದು ಮರೆತ್ರಾ? ಮೇಡಂ ಕೋವಿಡ್ ಸಮಯದಲ್ಲಿ ಕೋಟ್ಯಂತರ ರೂಪಾಯಿ ಲಪಟಾಯಿಸಿದ ಭಂಡರ ಕುರಿತು ಸ್ವಲ್ಪ ಮಾತಾಡಿ. ಬೇಡವಾದ ಪಟ್ಟಗಳಿಗೆಲ್ಲ ಅರ್ಹತೆ ನೀಡ್ತಾರೆ. ನಿಮ್ಮ ದಕ್ಷತೆಗೊಂದು ಸಲಾಮ್. ಆದರೆ ಬೇಡ ಅವರು ಕೂಡ ನಿಮ್ಮಂತೆಯೇ ಉನ್ನತ ಮಟ್ಟದ ಅಧಿಕಾರಿ ಅವರ ನೈತಿಕತೆ ಬಗ್ಗೆ ಪ್ರಶ್ನೆ ಎತ್ತಿದರೆ ನಿಮಗೆ ಶೊಭೆನಾ ಮೇಡಂ’ ಎಂದು ಪ್ರಶ್ನಿಸಿದ್ದಾರೆ.

(IPS Officer D Roopa Posts another Facebook Post on IAS Officer Rohini Sindhuri)

ಇದನ್ನೂ ಓದಿ: ಕೊರೊನಾ ಕಾಲದಲ್ಲಿ ಈಜುಕೊಳ ಕಟ್ಟಿದ್ದು ನೈತಿಕ ಅಧಃಪತನ: ರೋಹಿಣಿ ಸಿಂಧೂರಿ ವಿರುದ್ಧ ಡಿ.ರೂಪಾ ಟ್ವೀಟ್

ಇದನ್ನೂ ಓದಿ: Rohini Sindhuri: ಮೈಸೂರು ಜಿಲ್ಲಾಧಿಕಾರಿ ನಿವಾಸದಲ್ಲಿ ಈಜುಕೊಳ ನಿರ್ಮಾಣ ವಿಚಾರ, ಸಂಪೂರ್ಣ ವಿವರಣೆ ನೀಡಿದ ರೋಹಿಣಿ ಸಿಂಧೂರಿ