ಚಾಕುವಿನಿಂದ ಇರಿದು ಪರ್ಸ್​ ದೋಚಿದ ಖದೀಮರು ಪೊಲೀಸ್ ಬಲೆಗೆ ಬಿದ್ದಿದ್ದು ಹೇಗೆ ಗೊತ್ತಾ?

| Updated By: ರಾಜೇಶ್ ದುಗ್ಗುಮನೆ

Updated on: Dec 26, 2020 | 3:59 PM

ತಮಿಳುನಾಡು ಮೂಲದ ಕೆಲ ಹುಡುಗರ ಗುಂಪು ಶೋಕಿ ಜೀವನ ಮಾಡುವ ಸಲುವಾಗಿ ಆನೇಕಲ್​ನ ಕೆಲ ಭಾಗಗಳಲ್ಲಿ ರಾತ್ರಿ ವೇಳೆ ದರೋಡೆ ಮಾಡುತ್ತಿದ್ದರು. ಕೆಲ ತಿಂಗಳ ಹಿಂದೆ ಮುನಿರಾಜು ಎಂಬುವವರ ಬಳಿ ಸಹ ಇದೇ ರೀತಿಯಾಗಿ ದರೋಡೆ ಮಾಡಿ ಅವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದರು. ಇದೀಗ ಕಳ್ಳರನ್ನು ನಮ್ಮ ಜಿಗಣಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಭಾಗದ ಎಸ್​ಪಿ ರವಿ.ಡಿ.ಚನ್ನಣ್ಣನವರ್ ಹೇಳಿದ್ದಾರೆ

ಚಾಕುವಿನಿಂದ ಇರಿದು ಪರ್ಸ್​ ದೋಚಿದ ಖದೀಮರು ಪೊಲೀಸ್ ಬಲೆಗೆ ಬಿದ್ದಿದ್ದು ಹೇಗೆ ಗೊತ್ತಾ?
ದರೋಡೆಕೊರರನ್ನು ಬಂಧಿಸಿದ ಪೊಲೀಸರು
Follow us on

ಆನೇಕಲ್: ಮಾರ್ಗ ಮಧ್ಯೆ ಅಡ್ಡಗಟ್ಟಿ ದೋಚಿಕೊಂಡು ಹೋಗುವ ಕಳ್ಳರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಇದರಿಂದಾಗಿ ರಸ್ತೆಗಳಲ್ಲಿ ಒಬ್ಬಂಟಿಯಾಗಿ ಓಡಾಡುವುದೇ ಕಷ್ಟವಾಗಿ ಹೋಗಿದೆ. ಸದ್ಯ ಇಂತಹದ್ದೇ ಘಟನೆ ಬೆಂಗಳೂರಿನ ಹೊರ ವಲಯದ ಆನೇಕಲ್​ನಲ್ಲಿ ನಡೆದಿದ್ದು, ದುಷ್ಕರ್ಮಿಗಳ ತಂಡ ವ್ಯಕ್ತಿಗೆ ಚಾಕುವಿನಿಂದ ಇರಿದು ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ಹೀಗೆ ದುಷ್ಕರ್ಮಿಗಳಿಂದ ಚಾಕು ಇರಿತಕ್ಕೆ ಒಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೆಸರು ಮುನಿರಾಜು. ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಹಿನ್ನಕ್ಕಿ ವಾಸಿಯಾದ ಈತ ಜಿಗಣಿ ಕೈಗಾರಿಕಾ ಪ್ರದೇಶದ ಕಂಪನಿಯೊಂದರಲ್ಲಿ ನೌಕರನಾಗಿದ್ದಾನೆ. ಕೆಲ ತಿಂಗಳ ಹಿಂದೆ ಎಂದಿನಂತೆ ಸೆಕೆಂಡ್ ಶಿಫ್ಟ್ ಕೆಲಸ ಮುಗಿಸಿ ಆನೇಕಲ್ ತಾಲೂಕಿನ ಲಿಂಗಾಪುರಹಿನ್ನಕ್ಕಿ ಮಾರ್ಗವಾಗಿ ಮನೆ ಕಡೆ ಬೈಕ್​ನಲ್ಲಿ ಹೊರಟಿದ್ದಾನೆ. ಹಿನ್ನಕ್ಕಿ ಕೆರೆ ಮತ್ತು ಸೂರ್ಯನಗರ ಎರಡನೇ ಹಂತದ ಬಡಾವಣೆ ತಿರುವಿನಲ್ಲಿ ಐವರು ದುಷ್ಕರ್ಮಿಗಳ ತಂಡ ಮುನಿರಾಜುವನ್ನು ಅಡ್ಡಗಟ್ಟಿದ್ದಾರೆ. ಆತನ ಬಳಿ ಇರುವ ಮೊಬೈಲ್, ಪರ್ಸ್ ಮತ್ತು ಬ್ಯಾಗ್ ನೀಡುವಂತೆ ಧಮ್ಕಿ ಹಾಕಿದ್ದಾರೆ. ಒಪ್ಪದಿದ್ದಾಗ ಹೊಟ್ಟೆ ಮತ್ತು ಬೆನ್ನು ಸೇರಿದಂತೆ ಹಲವು ಕಡೆ ಐದಾರು ಬಾರಿ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.

ಭಯಗೊಂಡ ಮುನಿರಾಜು ಬ್ಯಾಗ್, ಪರ್ಸ್, ಮೊಬೈಲ್ ಮತ್ತು ಬೈಕನ್ನು ಬಿಟ್ಟು ಅಲ್ಲಿಂದ ತಪ್ಪಿಸಿಕೊಂಡು ಸುಮಾರು ಅರ್ಧ ಕಿ.ಮಿ ದೂರದ ಗ್ರಾಮಕ್ಕೆ ಬಂದು ಗ್ರಾಮಸ್ಥರಿಗೆ ತಿಳಿಸಿದ್ದಾನೆ. ಕೂಡಲೇ ಗ್ರಾಮಸ್ಥರು ಗಾಯಾಳುವನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಸದ್ಯ ಮುನಿರಾಜು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಗಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಕಳ್ಳರನ್ನು ಬಂಧಿಸಿದ ಪೊಲೀಸರು

ಪೊಲೀಸರು ಈ ಪ್ರಕರಣದ ವಿಚಾರಣೆಯ ಹಿಂದೆ ಬಿದ್ದಾಗ 19 ರಿಂದ 20 ವಯಸ್ಸಿನ ಯುವಕರು ಈ ಕೃತ್ಯದಲ್ಲಿ ಭಾಗಿಯಾಗಿರುವುದು ತಿಳಿದಿದ್ದು, ಆರೋಪಿಗಳಾದ ಐಸಾಕ್(ಸ್ಯಾಂಡಿ), ಸಂಜಯ್(ಸಂಜು), ಸಂದೀಪ್(ಸ್ಯಾಂಡಿ), ರುದ್ರಪ್ಪ(ರೇಣುಕುಮಾರ್) ಹಾಗೂ ಇನ್ನೊಬ್ಬ ಬಾಲಾಪರಾಧಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ 2 ಬೈಕ್, ಹಲ್ಲೆಗೆ ಬಳಸಿದ ಚಾಕು, ಮೊಬೈಲ್ ಹಾಗೂ ಪರ್ಸ್​ಅನ್ನು ಜಿಗಣಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜೈಲುಪಾಲಾದ ಆರೋಪಿಗಳು

ತಮಿಳುನಾಡು ಮೂಲದ ಕೆಲ ಹುಡುಗರ ಗುಂಪು ಶೋಕಿ ಜೀವನ ಮಾಡುವ ಸಲುವಾಗಿ ಆನೇಕಲ್​ನ ಕೆಲ ಭಾಗಗಳಲ್ಲಿ ರಾತ್ರಿ ವೇಳೆ ದರೋಡೆ ಮಾಡುತ್ತಿದ್ದರು, ಕೆಲ ತಿಂಗಳ ಹಿಂದೆ ಮುನಿರಾಜು ಎಂಬುವವರ ಬಳಿ ಸಹ ಇದೇ ರೀತಿಯಾಗಿ ದರೋಡೆ ಮಾಡಿ ಅವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದರು. ಇದೀಗ ಕಳ್ಳರನ್ನು ನಮ್ಮ ಜಿಗಣಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಭಾಗದ ಎಸ್​ಪಿ ರವಿ.ಡಿ.ಚನ್ನಣ್ಣನವರ್ ಹೇಳಿದ್ದಾರೆ.

ಸ್ಥಳ ಪರಿಶೀಲನೆ ನಡೆಸುತ್ತಿರುವ ಪೊಲೀಸರು

ಇನ್ನು ಆರೋಪಿಗಳಲ್ಲಿ ಮೂವರು ತಮಿಳುನಾಡಿನ ಸಿಪ್ಕಾಟ್ ಪೊಲೀಸ್ ಠಾಣೆಯಲ್ಲಿ ಕೊಲೆ ಆರೋಪದ ಮೇಲೆ ಜೈಲಿಗೆ ಸೇರಿ ಇತ್ತೀಚಿಗೆ ಜಾಮೀನಿನ ಮೂಲಕ ಹೊರಗೆ ಬಂದಿದ್ದಾರೆ. ಜೈಲಿನಿಂದ ಹೊರಬಂದ ನಂತರ ಮತ್ತೆ ದರೋಡೆ ಪ್ರಕರಣದಲ್ಲಿ ಭಾಗಿಯಾಗಿ ಬಂಧನಕ್ಕೊಳಗಾಗಿದ್ದು, ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.  

ಬೆಂಗಳೂರಲ್ಲಿ ಹಾಡಹಗಲೇ ಖದೀಮರ ರಾಬರಿ, ಡ್ಯಾಗರ್ ಹಿಡಿದು ಹಣ, ಮೊಬೈಲ್ ಲೂಟಿ ಮಾಡ್ತಾರೆ..