ಬೆಂಗಳೂರು, ಜುಲೈ 17: ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಡ್ಡಾಯಗೊಳಿಸುವ ಮಸೂದೆಗೆ ಉದ್ಯಮಿಗಳಿಂದ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಆ ಬಗ್ಗೆ ಸಮಾಲೋಚನೆ ನಡೆಸುವುದಾಗಿ ಕರ್ನಾಟಕ ಸರ್ಕಾರ ತಿಳಿಸಿದೆ. ಈ ವಿಚಾರವಾಗಿ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಮಸೂದೆಯ ಷರತ್ತುಗಳ ಬಗ್ಗೆ ಉದ್ಯಮ ತಜ್ಞರು ಮತ್ತು ಇತರ ಇಲಾಖೆಗಳ ಬಳಿ ಸಮಾಲೋಚನೆ ನಡೆಸಿ ನಂತರವೇ ಅದನ್ನು ಜಾರಿಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ ಎಂದರು.
ಯಾರೂ ಭಯಪಡುವ ಅಗತ್ಯವಿಲ್ಲ. ನಾವು ಸುದೀರ್ಘ ಸಮಾಲೋಚನೆಗಳನ್ನು ನಡೆಸುತ್ತೇವೆ ಮತ್ತು ಒಮ್ಮತಕ್ಕೆ ಬರಲಿದ್ದೇವೆ. ಸ್ಥಳೀಯ ನಿವಾಸಿಗಳಿಗೆ ಉದ್ಯೋಗಗಳನ್ನು ಒದಗಿಸುವುದು ಮತ್ತು ಜತೆ ಜತೆಗೇ ಹೂಡಿಕೆಗಳನ್ನು ಆಕರ್ಷಿಸುವುದು ರಾಜ್ಯ ಸರ್ಕಾರದ ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಈ ಮಸೂದೆಯು ಕಾರ್ಮಿಕ ಇಲಾಖೆಯ ಸಲಹೆಯಾಗಿದೆ. ಈ ಬಗ್ಗೆ ಕೈಗಾರಿಕೆ ಅಥವಾ ಮಾಹಿತಿ ತಂತ್ರಜ್ಞಾನ ಇಲಾಖೆಯೊಂದಿಗೆ ಯಾವುದೇ ಚರ್ಚೆ ನಡೆದಿಲ್ಲ. ಆದ್ದರಿಂದ, ನಮ್ಮೊಂದಿಗೆ ಮತ್ತು ಇತರ ಮುಖಂಡರೊಂದಿಗೆ ಸಮಾಲೋಚನೆ ನಡೆಸುವಂತೆ ನಾವು ಸಿಎಂಗೆ ಮನವಿ ಮಾಡಿದ್ದೇವೆ. ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ನೀಡುವುದನ್ನು ನಾವು ಹೇಗೆ ಸಾಧ್ಯವಾಗಿಸಬಹುದು ಎಂಬ ಬಗ್ಗೆ ಒಮ್ಮತಕ್ಕೆ ಬರಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಉದ್ಯಮದ ದಿಗ್ಗಜರಾದ ಕಿರಣ್ ಮಜುಂದಾರ್ ಶಾ ಮತ್ತು ಮೋಹನ್ ದಾಸ್ ಪೈ ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ: ಮಸೂದೆಯ ವಿವರ ಇಲ್ಲಿದೆ ನೋಡಿ
ಭಯಪಡುವ ಅಗತ್ಯವಿಲ್ಲ. ಕರ್ನಾಟಕ ಪ್ರಗತಿಪರ ರಾಜ್ಯ. ಮಸೂದೆಯ ಷರತ್ತುಗಳು ಒಂದು ಸಲಹೆಯಷ್ಟೇ. ಉದ್ಯಮ ವಲಯವು ಅದರ ಅಗತ್ಯವಿಲ್ಲ ಎಂದು ಭಾವಿಸಿದರೆ, ನಾವು ಅದನ್ನು ಗಮನಿಸುತ್ತೇವೆ. ನಾವು ಪೈ ಹಾಗೂ ಮಜುಂದಾರ್ ಅವರೊಂದಿಗೆ ಸಮಾಲೋಚನೆ ನಡೆಸುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
#WATCH | Bengaluru: On Karnataka Government approves bill to make it mandatory to hire 100 per cent Kannadigas in private firms in ‘C and D’ grade posts, Karnataka Minister MB Patil says, “I have seen that many people have apprehension regarding this…We will resolve this… https://t.co/qDQgUeSAXx pic.twitter.com/Ayb0NzKTeU
— ANI (@ANI) July 17, 2024
ಮೀಸಲಾತಿ ವಿಚಾರವಾಗಿ ಕೈಗಾರಿಕೋದ್ಯಮಿಗಳ ಜತೆ ಪುನರ್ ಚರ್ಚೆಗೆ ಸಿದ್ಧ ಎಂದು ಸಚಿವ ಎಂಬಿ ಪಾಟೀಲ್ ಕೂಡ ಹೇಳಿದ್ದಾರೆ. ನಾವು ಚೀನಾದಂತಹ ದೇಶದೊಂದಿಗೆ ಸೆಣಸಾಡಬೇಕಿದೆ. ಕನ್ನಡಿಗರನ್ನೂ ದೃಷ್ಟಿಯಲ್ಲಿ ಇಟ್ಟುಕೊಂಡು ಸಿಎಂ, ಡಿಸಿಎಂ ಹಾಗೂ ಕಾರ್ಮಿಕ ಸಚಿವರು, ಕಾನೂನು ಸಚಿವರ ಜೊತೆಗೆ ಚರ್ಚಿಸುತ್ತೇನೆ. ಕನ್ನಡಿಗರ ರಕ್ಷಣೆಯ ಜೊತೆಗೆ ಉದ್ಯಮಗಳ ರಕ್ಷಣೆಯೂ ಆಗಬೇಕಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ