
ಬೆಂಗಳೂರು, ಸೆಪ್ಟೆಂಬರ್26: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಪುರಾತನವಾದ ಸಾಕಷ್ಟು ಮಾರುಕಟ್ಟೆಗಳು ಇಂದಿಗೂ ಇವೆ. ಆದರೆ ಜನಸಾಮಾನ್ಯರು ವ್ಯವಹಾರ ಮಾಡಬಹುದಾದ ಸ್ಥಿತಿಯಲ್ಲಿ ಇಲ್ಲ. ಬೆಂಗಳೂರಿನ ಹೃದಯ ಭಾಗದಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ಸಾಕಷ್ಟು ಮಾರುಕಟ್ಟೆಗಳು ಇವೆ. ಆದರೆ ಇವುಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ, ಸೊರಗುವ ಹಾಗೆ ಮಾಡಿರುವುದು ಪಾಲಿಕೆ ಅಧಿಕಾರಿಗಳು. ಉತ್ತಮ ವಾಣಿಜ್ಯ ಸಂಕೀರ್ಣ ಆಗುವ ಲಕ್ಷಣವಿದ್ದರೂ, ಪಾಲಿಕೆ ಅಧೀನದ ಮಾರುಕಟ್ಟೆಗಳು ನವೀಕರಣ ಕಾಣದೇ ಹದಗೆಟ್ಟು ಹೋಗುತ್ತಿವೆ. ಶಾಂತಿನಗರ ವಿಧಾನಸಭಾ ಕ್ಷೇತ್ರದ ಹೊಸೂರು ಮುಖ್ಯರಸ್ತೆಯಲ್ಲಿ ಇರುವ ಜಾನ್ಸನ್ ಮಾರುಕಟ್ಟೆ ಅದಕ್ಕೆ ಮತ್ತೊಂದು ನಿದರ್ಶನ ಎಂಬಂತಿದೆ.
ಈ ಮಾರುಕಟ್ಟೆಯಲ್ಲಿ ಸರಿ ಸುಮಾರು 50 ಮಳಿಗೆಗಳಿಗೆ ಸ್ಥಳಾವಕಾಶ ಇದ್ದರೂ, ಸದ್ಯಕ್ಕೆ ಕಾರ್ಯಾಚರಣೆ ಮಾಡುತ್ತಿರುವುದು 20 ಮಳಿಗೆಗಳು ಮಾತ್ರ. ಅದು ಮುಖ್ಯ ದ್ವಾರದ ಅಂಗಡಿಗಳಲ್ಲಿ ಮಾತ್ರ ಉತ್ತಮ ವ್ಯಾಪಾರ ವಹಿವಾಟು ಇದೆ. ಅದು ಬಿಟ್ಟರೆ ಮಾರುಕಟ್ಟೆಯ ಒಳಗೆ ಬರಲೂ ಗ್ರಾಹಕರು ಮನಸ್ಸು ಮಾಡುತ್ತಿಲ್ಲ. ಸರ್ಕಾರದ ಅನುದಾನಗಳು ನೀರಲ್ಲಿ ಹೋಮ ಮಾಡಿದಂತಾಗಿವೆ. ಮಾರುಕಟ್ಟೆ ಒಳಗೆ ಶುಚಿತ್ವವೇ ಕಣ್ಮರೆಯಾಗಿದ್ದು, ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದು ನಾರುತ್ತಿದೆ. ಕಂಡ ಕಂಡಲ್ಲಿ ಗುಟ್ಕಾ, ಪಾನ್ ಉಗಿಯಲಾಗಿದೆ. ಮಾರುಕಟ್ಟೆ ಬಹುತೇಕ ಭಾಗ ಧೂಳು ಹಿಡಿದಿದೆ. ಧೂಮಪಾನ ಮಾಡುವವರು ಇಲ್ಲಿ ಅತಿಯಾಗಿದ್ದಾರೆ. ಹೀಗಾಗಿ ಇಲ್ಲಿ ಜನ ಓಡಾಡುವುದು ಕೂಡ ಕಷ್ಟವಾಗಿದೆ.
ಜನರ ಬಳಿ ನಾನಾ ನೆಪ ಹೇಳಿ ತೆರಿಗೆ ವಸೂಲಿ ಮಾಡುವ ಪಾಲಿಕೆ ತನಗೆ ಇರುವ ಆದಾಯದ ಮೂಲವನ್ನೇ ಸರಿ ಮಾಡಿಕೊಳ್ಳಲು ಆಗುತ್ತಿಲ್ಲ. ಅದಕ್ಕೆ ಇದೇ ಒಳ್ಳೆಯ ಉದಾಹರಣೆ. ರಿಚ್ಮಂಡ್ ಟೌನ್, ಶಾಂತಿನಗರ, ಎಂಜಿ ರಸ್ತೆಗೆ ಸಮೀಪದಲ್ಲೇ ಇರುವ ಈ ಮಾರುಕಟ್ಟೆಯನ್ನು ಉತ್ತಮ ರೀತಿಯಲ್ಲಿ ಅಭಿವೃದ್ದಿ ಮಾಡುವಲ್ಲಿ BBMP ಮತ್ತು ಸರ್ಕಾರ ಗಮನವಹಿಸಬೇಕಿದೆ. ಗ್ರಾಹಕರು, ವ್ಯಾಪಾರಿಗಳು ಮಾತ್ರವಲ್ಲದೆ ಪಾಲಿಕೆಗೂ ಒಳ್ಳೆಯ ಲಾಭವಾಗಲಿದೆ. ನಗರದ ಜನರ ಹಿತ ದೃಷ್ಟಿಯಿಂದ ಇನ್ನಾದರೂ ನಿರ್ಲಕ್ಷ್ಯ ಬಿಟ್ಟು ಐತಿಹಾಸಿಕ ಹಿನ್ನೆಲೆಯುಳ್ಳ ಜಾನ್ಸನ್ ಮಾರುಕಟ್ಟೆ ಅಭಿವೃದ್ಧಿಗೆ ಪಾಲಿಕೆ ಗಮನಹರಿಸಬೇಕು.
ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು
Published On - 11:14 am, Fri, 26 September 25