AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕಕ್ಕೂ ಕಾಲಿಟ್ಟ ‘ಐ ಲವ್ ಮೊಹಮ್ಮದ್’ ಫ್ಲೆಕ್ಸ್​ ವಿವಾದ: ಏನಿದು? ಶುರುವಾಗಿದ್ದು ಎಲ್ಲಿಂದ?

ಉತ್ತರ ಪ್ರದೇಶ, ಗುಜರಾತ್ ಸೇರಿದಂತೆ ದೇಶದಲ್ಲೀಗ ‘ಐ ಲವ್‌ ಮೊಹಮ್ಮದ್’ ವರ್ಸಸ್ ‘ಐ ಲವ್ ಮಹಾದೇವ್’ ಜಟಾಪಟಿ ಶುರುವಾಗಿದೆ. ದಾವಣೆಗೆರೆಯಲ್ಲಿ ಬುಧವಾರ ರಾತ್ರಿ ನಡೆದಿದ್ದ ‘ಐ ಲವ್‌ ಮೊಹಮ್ಮದ್’ ಫ್ಲೆಕ್ಸ್ ಗಲಾಟೆ ಬೆನ್ನಲ್ಲೇ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಕರ್ನಾಟಕಕ್ಕೂ ಕಾಲಿಟ್ಟ ‘ಐ ಲವ್ ಮೊಹಮ್ಮದ್’ ಫ್ಲೆಕ್ಸ್​ ವಿವಾದ: ಏನಿದು? ಶುರುವಾಗಿದ್ದು ಎಲ್ಲಿಂದ?
‘ಐ ಲವ್ ಮೊಹಮ್ಮದ್’ ಫ್ಲೆಕ್ಸ್​ ಹಾಗೂ ‘ಐ ಲವ್ ಮಹದೇವ್’ ಪೋಸ್ಟರ್
Ganapathi Sharma
|

Updated on:Sep 26, 2025 | 10:32 AM

Share

ಬೆಂಗಳೂರು, ಸೆಪ್ಟೆಂಬರ್ 26: ದಾವಣಗೆರೆಯ (Davanagere) ಕಾರ್ಲ್ ಮಾರ್ಕ್ಸ್ ನಗರದಲ್ಲಿ ಬುಧವಾರ ರಾತ್ರಿ ಭಾರಿ ಗಲಾಟೆ, ಕಲ್ಲು ತೂರಾಟ ನಡೆದು ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಿತ್ತು. ನೂರಾರು ಸಂಖ್ಯೆಯಲ್ಲಿ ಸೇರಿರುವ ಜನರ ಗುಂಪು ತಳ್ಳಾಟ, ವಾಗ್ಯುದ್ಧದಲ್ಲಿ ನಿರತವಾಗಿತ್ತು. ಅಷ್ಟೇ ಏಕೆ, ಕಲ್ಲು ತೂರಾಟ ಕೂಡ ನಡೆದಿತ್ತು. ‘ಐ ಲವ್ ಮೊಹಮ್ಮದ್ (I Love Muhammad)’ ಎಂಬ ಬರಹವುಳ್ಳ ಫ್ಲೆಕ್ಸ್ ಹಾಕಿದ್ದೇ ಇದಕ್ಕೆಲ್ಲ ಕಾರಣ. ಫ್ಲೆಕ್ಸ್​ ಅನ್ನು ಹರಿಯಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಕೆಲ ಕಿಡಿಗೇಡಿಗಳು ಸುಳ್ಳು ಸುದ್ದಿ ಹರಿಬಿಟ್ಟಿದ್ದರು. ಇದರ ಬೆನ್ನಲ್ಲೇ ನೂರಾರು ಜನ ಗುಂಪುಗೂಡಿದ್ದಾರೆ. ಇದೇ ವೇಳೆ, ಹಿಂದೂಗಳ ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದೆ ಎಂಬ ಆರೋಪವೂ ಕೇಳಿಬಂತು. ಗಲಾಟೆಯಲ್ಲಿ ನಾಲ್ವರಿಗೆ ಗಾಯಗಳಾಗಿದ್ದು, ವಾಹನಗಳು ಜಖಂಗೊಂಡಿವೆ. ಸದ್ಯ ಎರಡೂ ಕೋಮಿನ 107 ಜನರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಏನಿದು ಐ ಲವ್ ಮೊಹಮ್ಮದ್ ಫ್ಲೆಕ್ಸ್ ಅಭಿಯಾನ?

ಉತ್ತರ ಪ್ರದೇಶ, ಗುಜರಾತ್ ಸೇರಿ ಹಲವು ರಾಜ್ಯಗಳಲ್ಲಿ ‘ಐ ಲವ್ ಮೊಹಮ್ಮದ್’ ಬ್ಯಾನರ್​​ಗಳನ್ನು ಹಿಡಿದು ರ್ಯಾಲಿಗಳನ್ನು ಮಾಡಲಾಗಿದೆ. ಇದು ಶುರುವಾಗಿದ್ದು ಉತ್ತರ ಪ್ರದೇಶದ ಕಾನ್ಪುರದಲ್ಲಿ. ಅಲ್ಲಿ ಪ್ರವಾದಿ ಮೊಹಮ್ಮದ್ ಅವರ ಜನ್ಮದಿನವಾದ ಈದ್ ಮಿಲಾದ್ ಉನ್ ನಬಿ ಹಬ್ಬದ ಪ್ರಯುಕ್ತ ಮೆರವಣಿಗೆ ನಡೆದಿತ್ತು. ಮೆರವಣಿಗೆಯಲ್ಲಿ ‘ಐ ಲವ್ ಮೊಹಮ್ಮದ್’ ಎಂಬ ಬರಹ ಇರುವ ನಾಮಫಲಕ ಬಳಸಲಾಗಿತ್ತು. ಆದರೆ, ಇದಕ್ಕೆ ಹಿಂದೂ ಸಮಾಜದ ಕೆಲವರಿಂದ ಆಕ್ಷೇಪ ವ್ಯಕ್ತವಾಗಿತ್ತು. ಮುಸ್ಲಿಂ ಯುವಕರು ಹಿಂದೂ ಧಾರ್ಮಿಕ ಪೋಸ್ಟರ್ ಹರಿದಿದ್ದಾರೆಂದು ಆರೋಪಿಸಲಾಗಿತ್ತು. ಗಲಾಟೆ ಶುರುವಾದ ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಫಲಕ ತೆಗೆಸಿದ್ದರು. ಸಾಮರಸ್ಯ ಕದಡಿದ ಆರೋಪದಲ್ಲಿ 24 ಜನರ ವಿರುದ್ಧ ಎಫ್​ಐಆರ್ ದಾಖಲಿಸಿದ್ದರು. ಪೊಲೀಸರ ಈ ಕ್ರಮಕ್ಕೆ ಕಾನ್ಪುರ ಮುಸ್ಲಿಮರು ಆಕ್ರೋಶ ವ್ಯಕ್ತಪಡಿಸಿ ಧರಣಿ ಮಾಡಿದ್ದರು. ಶಾಂತಿಯುತವಾಗಿ ಐ ಲವ್ ಮೊಹಮ್ಮದ್ ಪೋಸ್ಟರ್ ಪ್ರದರ್ಶನ ಮಾಡಲು ಕರೆ ನೀಡಿದ್ದರು.

ಸಾಮಾಜಿಕ ಮಾಧ್ಯಮಗಳಲ್ಲೂ ವೈರಲ್ ಆಯ್ತು ‘ಐ ಲವ್ ಮೊಹಮ್ಮದ್’

ಉತ್ತರ ಪ್ರದೇಶದ ಈ ಘಟನೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿಯೂ ‘ಐ ಲವ್ ಮೊಹಮ್ಮದ್’ ಘೋಷವಾಕ್ಯ ವೈರಲ್ ಆಯಿತು. ಮುಂಬೈ, ತೆಲಂಗಾಣ, ಹೈದರಾಬಾದ್, ಮಹಾರಾಷ್ಟ್ರದ ನಾಗ್ಪುರ, ವೋಮಿನ್​ಪುರದಲ್ಲೂ ‘ಐ ಲವ್ ಮೊಹಮ್ಮದ್’ ಹೆಸರಿನಲ್ಲಿ ರ್ಯಾಲಿಗಳು ನಡೆದವು.

‘ಐ ಲವ್ ಮೊಹಮ್ಮದ್’ Vs ‘ ಐ ಲವ್ ಮಹದೇವ್’

ಏತನ್ಮಧ್ಯೆ, ಐ ಲವ್ ಮೊಹಮ್ಮದ್ ಪೋಸ್ಟರ್‌ಗೆ ಪ್ರತಿಯಾಗಿ ಐ ಲವ್ ಮಹದೇವ್ ಎಂದು ಹಿಂದೂ ಪರ ಕಾರ್ಯಕರ್ತರು ಅಭಿಯಾನ ಆರಂಭಿಸಿದ್ದಾರೆ. ಇದೇ ವಿಚಾರವಾಗಿ ಗುಜರಾತ್‌ನ ಗಾಂಧಿನಗರ ಜಿಲ್ಲೆಯ ದಹೇಗಾಮ್‌ನ ಬಹಿಯಾಲ್ ಗ್ರಾಮದಲ್ಲಿ ಗರ್ಭಾ ಆಚರಣೆ ವೇಳೆ ಎರಡು ಸಮುದಾಯಗಳ ನಡುವೆ ಘರ್ಷಣೆ ಭುಗಿಲೆದ್ದಿದ್ದು, ಅನೇಕರು ಗಾಯಗೊಂಡಿದ್ದಾರೆ. ‘ಐ ಲವ್ ಮಹಾದೇವ್’ ಎಂಬ ಯುವಕನ ಪೋಸ್ಟ್​ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಈ ಘರ್ಷಣೆ ಭುಗಿಲೆದ್ದಿದೆ. ಮುಸ್ಲಿಂ ಸಮುದಾಯದ ಯುವಕರು, ಆ ಯುವಕನ ಅಂಗಡಿಯನ್ನು ಧ್ವಂಸ ಮಾಡಿದ್ದಾರೆ. ಪೊಲೀಸ್ ಪಡೆಗಳ ಮೇಲೂ ದಾಳಿ ನಡೆಸಿದ್ದಾರೆ. ಘರ್ಷಣೆ ಸಂಬಂಧ ಪೊಲೀಸರು 70ರಿಂದ 80 ಜನರನ್ನು ಬಂಧಿಸಿದ್ದಾರೆ.

ಕರ್ನಾಟಕದಲ್ಲಿ ರಾಜಕೀಯ ಸ್ವರೂಪ ಪಡೆಯುತ್ತಾ ಪ್ರಕರಣ?

ಸದ್ಯ ದಾವಣಗೆರೆಯಲ್ಲಿ ನಡೆದಿರುವ ಗಲಭೆ ಹಾಗೂ ಉದ್ವಿಗ್ನ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಆದರೆ, ‘ಐ ಲವ್ ಮೊಹಮ್ಮದ್’ ಫ್ಲೆಕ್ಸ್ ಅಭಿಯಾನ ವಿಚಾರ ಕರ್ನಾಟಕದಲ್ಲಿ ರಾಜಕೀಯ ಸ್ವರೂಪ ಪಡೆದುಕೊಳ್ಳುವ ಎಲ್ಲ ಸಾಧ್ಯತೆಗಳು ಗೋಚರಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಈ ವಿಚಾರವನ್ನು ಸಾಮಾಜಿಕ ಮಾಧ್ಯಮ ಎಕ್ಸ್​ ಮೂಲಕ ಈಗಾಗಲೇ ಪ್ರಸ್ತಾಪಿಸಿದ್ದು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಿಂದೂ ಸಮುದಾಯದ ಮೇಲಿನ ಕೋಮುವಾದಿ ದುಷ್ಟರ ದಾಳಿ ಸರಣೀ ರೂಪದಲ್ಲಿ ಮುಂದುವರೆಯುತ್ತಲೇ ಇದೆ. ದಾವಣಗೆರೆಯಲ್ಲಿ ಕೋಮು ಉದ್ವಿಗ್ನತೆ ಪ್ರಚೋದಿಸುವ ಬ್ಯಾನರ್ ಅಳವಡಿಸಿ ಹಿಂದೂ ಸಮುದಾಯದ ಮನೆಗಳನ್ನು ಟಾರ್ಗೆಟ್ ಮಾಡಿ ಕಲ್ಲು ತೂರಾಟ ನಡೆಸಿ ಆತಂಕಮಯ ವಾತಾವರಣ ಸೃಷ್ಟಿಸಿ ಹಿಂದುಗಳ ಮೇಲೆ ದೌರ್ಜನ್ಯ ಎಸಗಿರುವ ಘಟನೆ ಅತ್ಯಂತ ಖಂಡನೀಯ ಎಂದು ಉಲ್ಲೇಖಿಸಿದ್ದಾರೆ.

ಮತ್ತೊಂದೆಡೆ ಶಾಸಕ ಬಸನೌಗಡ ಪಾಟೀಲ್ ಯತ್ನಾಳ್ ದಾವಣಗೆರೆಯಲ್ಲಿ ಮಾತನಾಡಿ, ಈದ್ ಮಿಲಾದ್ ವೇಳೆ ಯಾವ ಹಿಂದೂಗಳೂ ಕಲ್ಲೆಸೆದಿಲ್ಲ. ಹಾಗಿದ್ದಾಗ ನೀವ್ಯಾಕೆ ನಮ್ಮ ಹಬ್ಬಗಳ ವೇಳೆ ಕಲ್ಲು ತೂರಾಟ ಮಾಡುತ್ತೀರಿ? ಹಾಗಿದ್ದಾಗ ನೀವು ಕಟ್ಟಿರುವ ಅಕ್ರಮ ಮಸೀದಿಗಳನ್ನು ಜೆಸಿಬಿಯಿಂದ ಧ್ವಂಸ ಮಾಡಿಸಬಾರದೇನು ಎಂದು ಪ್ರಶ್ನಿಸಿದ್ದಾರೆ. ಮುಂದುವರಿದು, ನಿಮ್ಮದೇ ಸರ್ಕಾರ ಇದೆ, ಇನ್ನೊಂದೆರಡು ವರ್ಷ ಹಾರಾಡಿ. ಐ ಲವ್ ಅನ್ನಿ, ಐ ಲವ್ ಯೂ ಯೂ ಎನ್ನಿ. ಎರಡು ವರ್ಷದ ನಂತರ ಹಿಂದೂ ರಕ್ಷಣೆ ಮಾಡುವ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದರು.

ಇದನ್ನೂ ಓದಿ: ದಾವಣಗೆರೆ: ಗಣೇಶೋತ್ಸವದಲ್ಲಿ ಶಿವಾಜಿ ಬ್ಯಾನರ್‌ ತೆರವು ಮಾಡಲು ಮುಂದಾದ ಪೊಲೀಸರು, ಪರಿಸ್ಥಿತಿ ಉದ್ವಿಗ್ನ

ಒಟ್ಟಿನಲ್ಲಿ ‘ಐ ಲವ್ ಮೊಹಮ್ಮದ್’ Vs ‘ ಐ ಲವ್ ಮಹದೇವ್’ ವಿವಾದ ಕರ್ನಾಟಕದಲ್ಲಿ ಮುಂದೆ ಯಾವ ಸ್ವರೂಪ ಪಡೆಯಲಿದೆ ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:24 am, Fri, 26 September 25