AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ: ಗಣೇಶೋತ್ಸವದಲ್ಲಿ ಶಿವಾಜಿ ಬ್ಯಾನರ್‌ ತೆರವು ಮಾಡಲು ಮುಂದಾದ ಪೊಲೀಸರು, ಪರಿಸ್ಥಿತಿ ಉದ್ವಿಗ್ನ

ಗಣೇಶೋತ್ಸವ ಹಬ್ಬವನ್ನು ಹಿಂದೂಗಳು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದು, ಬೆಣ್ಣೆ ನಗರಿ ದಾವಣಗೆರೆಯಲ್ಲಿ ಗಣೇಶೋತ್ಸವದಲ್ಲಿ ವರ್ಷದಿಂದ ವರ್ಷಕ್ಕೆ ಶಾಂತಿ ಕದಡುವ ಕೆಲಸವಾಗುತ್ತಿದೆ. ಅದರಲ್ಲೂ ಕಳೆದ ಬಾರಿ ಗಣೇಶ ಮೆರವಣಿಗೆಯಲ್ಲಿ ಕಲ್ಲು ತೂರಾಟ ನಡೆಸಿದ ಸ್ಥಳದಲ್ಲೇ ಈಗ ಫ್ಲೆಕ್ಸ್ ಕಿರಿಕ್ ಶುರುವಾಗಿದ್ದು, ಸ್ಥಳದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

ದಾವಣಗೆರೆ: ಗಣೇಶೋತ್ಸವದಲ್ಲಿ ಶಿವಾಜಿ ಬ್ಯಾನರ್‌ ತೆರವು ಮಾಡಲು ಮುಂದಾದ ಪೊಲೀಸರು, ಪರಿಸ್ಥಿತಿ ಉದ್ವಿಗ್ನ
ಸ್ಥಳದಲ್ಲಿ ಜಮಾಯಿಸಿರುವ ಜನರು
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: Ganapathi Sharma|

Updated on: Aug 29, 2025 | 7:43 AM

Share

ದಾವಣಗೆರೆ, ಆಗಸ್ಟ್ 29: ದಾವಣಗೆರೆ (Davanagere) ನಗರದ ಮಟ್ಟಿಕಲ್ಲು ಪ್ರದೇಶದಲ್ಲಿ ಗಣೆಶೋತ್ಸವ (Ganeshotsav) ಆಚರಣೆ ವೇಳೆ ಎರಡು ಕೋಮುಗಳ ನಡುವೆ ಗಲಾಟೆ ನಡೆದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಛತ್ರಪತಿ ಶಿವಾಜಿ ಅಫ್ಜಲ್ ಖಾನ್​ನನ್ನು ಕೊಲ್ಲುವ ಫ್ಲೆಕ್ಸ್ ಹಾಕಿದ್ದು ವಿವಾದಕ್ಕೆ ಕಾರಣವಾಗಿದೆ. ಶಿವಾಜಿ ಕೊಂಕಣ ಪ್ರದೇಶವನ್ನು ಆಕ್ರಮಣ ಮಾಡಿದಾಗ ಔರಂಗಜೇಬ್ ಸೇನಾಧಿಪತಿಯಾಗಿ ಆಫ್ಜಲ್ ಖಾನ್​ನನ್ನು ನಿಯೋಜನೆ ಮಾಡುತ್ತಾನೆ. ಮಾತುಕತೆ ನೆಪದಲ್ಲಿ ಶಿವಾಜಿ ಬಂಧಿಸಲು ಉಪಾಯ ಮಾಡಿದಾಗ ಶಿವಾಜಿ ತನಗಿಂತ ಸದೃಢನಾದ ಆಫ್ಜಲ್ ಖಾನ್​ನನ್ನುಹುಲಿ ಉಗುರಿನ ಕತ್ತಿಯಿಂದ ಕೊಲೆ ಮಾಡುತ್ತಾನೆ. ಇದಕ್ಕೆ ಸಂಬಂಧಿಸಿದ ಫ್ಲೆಕ್ಸ್ ಅನ್ನು ಮಟ್ಟಿಕಲ್ಲಿನಲ್ಲಿ ಈ ಬಾರಿ ಗಣೇಶೋತ್ಸವದಲ್ಲಿ ಅಲ್ಲಿನ ಹಿಂದೂ ಯುವಕರು ಅಳವಡಿಸಿದ್ದಾರೆ.

ಇದು ಕೋಮು ಪ್ರಚೋನೆಗೆ ದಾರಿ ಮಾಡಿಕೊಡುತ್ತದೆ ಎಂದು ಆರ್​ಎಂಸಿ ಠಾಣೆಯ ಪೊಲೀಸರು ತೆರವು ಮಾಡಲು ಬಂದಿದ್ದು ಇದಕ್ಕೆ ಯುವಕರು ವಿರೋಧ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ತೆರವು ಮಾಡುವುದಿಲ್ಲ. ಯುವಕರಿಗೆ ಇತಿಹಾಸ ತಿಳಿಸುವ ಕೆಲಸ ಪ್ರತಿ ವರ್ಷ ಮಾಡುತ್ತೇವೆ ವಿನಃ ಯಾವುದೇ ಕೋಮು ಪ್ರಚೋದನೆ ಮಾಡೋದಿಲ್ಲ ಎಂದು ಹೇಳಿದರೂ ಪೊಲೀಸರು ತೆರವು ಮಾಡಲು ಮುಂದಾಗಿದ್ದಾರೆ. ಆಗ ಪೊಲೀಸರ ಹಾಗೂ ಹಿಂದೂ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಗಿದೆ. ಕೊನೆಯದಾಗಿ ಪೊಲೀಸರು ಫ್ಲೆಕ್ಸ್ ತೆರವಿಗೆ ಬೆಳಗ್ಗೆ 10.30 ರ ವರೆಗೆ ಕಾಲಾವಕಾಶ ನೀಡಿದ್ದಾರೆ.

ಕಳೆದ ವರ್ಷ ನಡೆದಿತ್ತು ಕಲ್ಲು ತೂರಾಟ

ಇನ್ನು ಮಟ್ಟಿಕಲ್, ಬೇತೂರು ರಸ್ತೆ ಅತಿ ಸೂಕ್ಷ್ಮ ಪ್ರದೇಶಗಳಾಗಿದ್ದು, ಕಳೆದ ವರ್ಷ ಇದೇ ಸ್ಥಳದಲ್ಲಿ ಗಣೇಶ ಮೆರವಣಿಗೆಯಲ್ಲಿ ಕಲ್ಲು ತೂರಾಟವಾಗಿತ್ತು. ಈಗ ಅ ರೀತಿಯ ಘಟನೆಗಳು ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದು, ಅಪೇಕ್ಷಾರ್ಹ ಫ್ಲೆಕ್ಸ್ ಅಳವಡಿಕೆ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಟಿಪ್ಪು ಸುಲ್ತಾನ್ ಫ್ಲೆಕ್ಸ್ ತೆರವಿಗೆ ಆಗ್ರಹ

ಆದರೆ, ಹಿಂದೂ ಕಾರ್ಯಕರ್ತರು ಸಭೆ ಸೇರಿ, ಯಾವುದೇ ಕಾರಣಕ್ಕೂ ಫ್ಲೆಕ್ಸ್ ತೆರವು ಮಾಡುವುದಿಲ್ಲ. ಹಾಗೇನಾದರೂ ಮಾಡಬೇಕು ಎಂದರೆ ಜಿಲ್ಲೆಯಲ್ಲಿರುವ ಟಿಪ್ಪುಸುಲ್ತಾನ್ ಹಾಗೂ ಔರಂಗಜೇಬ್ ಫ್ಲೆಕ್ಸ್ ತೆರವು ಮಾಡಿ ಎಂದು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: ಸ್ವಿಟ್ಜರ್ಲೆಂಡ್‌‌ ಪ್ರಜೆಯಿಂದ ಗಣೇಶೋತ್ಸವ: ಮುಸ್ಲಿಂ ಮನೆಯಲ್ಲಿ ಕ್ರೈಸ್ತನಿಂದ ಪ್ರತಿಷ್ಠಾಪನೆಯಾದ ಗಣಪತಿ ಇಲ್ಲಿ ನೋಡಿ

ಒಟ್ಟಾರೆಯಾಗಿ ದಾವಣಗೆರೆಯ ಮಟ್ಟಿಕಲ್​ನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಯಾವುದೇ ಕಾರಣಕ್ಕೂ ಫ್ಲೆಕ್ಸ್ ತೆರವು ಮಾಡುವುದಿಲ್ಲ ಎಂದು ಹಿಂದೂ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ಬೆಳಗ್ಗೆ 10.30 ರ ನಂತರ ಏನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ