ಮೈಸೂರು, ಫೆ.26: ಸರಿಯಾದ ಪ್ರಮಾಣದಲ್ಲಿ ಮಳೆ ಆಗದ ಹಿನ್ನಲೆ ರಾಜ್ಯದಲ್ಲಿ ನೀರಿನ ಕೊರತೆ ಉಂಟಾಗಿದೆ. ಬೇಸಿಗೆ ಆರಂಭಕ್ಕೂ ಮುನ್ನವೇ ರಾಜ್ಯದ ಡ್ಯಾಂಗಳ ನೀರಿನ ಮಟ್ಟ ಕಡಿಮೆ ಆಗಿದೆ. ಮೈಸೂರು ಜಿಲ್ಲೆಯ ಕಬಿನಿ (Kabini) ಜಲಾಶಯದಲ್ಲಿ ದಿನೇ ದಿನೇ ನೀರಿನ ಮಟ್ಟ ಕುಸಿದಿದೆ. ಸದ್ಯ 70 ಅಡಿಗೆ ಜಲಾಶಯದ ನೀರಿನ ಮಟ್ಟ ಕುಸಿದಿದೆ. ಇದು 84 ಅಡಿ ಗರಿಷ್ಠ ಸಾಮರ್ಥ್ಯದ ಜಲಾಶಯ. ಸದ್ಯ ಕಬಿನಿ ಜಲಾಶಯದಲ್ಲಿ 12 ಟಿಎಂಸಿ ನೀರು ಸಂಗ್ರಹಣೆಯಾಗಿದೆ.
19.52TMC ನೀರು ಸಂಗ್ರಹಣೆ ಸಾಮರ್ಥ್ಯ ಹೊಂದಿರುವ, ವರ್ಷಕ್ಕೆ ಎರಡು ಬಾರಿ ತುಂಬುವ ರಾಜ್ಯದ ಏಕೈಕ ಜಲಾಶಯ ಕಬಿಸಿ. ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದಲ್ಲಿ ಕುಡಿಯಲು ಕೇವಲ 8.5 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಉಳಿದ 3.5TMC ನೀರು ಡೆಡ್ ಸ್ಟೊರೇಜ್. ಕಬಿನಿ ಜಲಾಶಯದಿಂದ ಬೆಂಗಳೂರು, ಮೈಸೂರಿಗೆ ನೀರು ಪೂರೈಕೆಯಾಗುತ್ತೆ. ಕಬಿನಿ ಜಲಾಶಯದಿಂದ ಪ್ರತಿದಿನ 500 ಕ್ಯೂಸೆಕ್ ನೀರು ಬಿಡುಗಡೆಯಾಗುತ್ತೆ. ಬೆಂಗಳೂರಿಗೆ 300 ಕ್ಯೂಸೆಕ್, ಮೈಸೂರು, ಚಾಮರಾಜನಗರಕ್ಕೆ 200 ಕ್ಯೂಸೆಕ್ ನೀರು ಬಿಡುಗಡೆ ಆಗುತ್ತೆ. ಸದ್ಯ ಜೂನ್ ತಿಂಗಳವರೆಗೆ ಕುಡಿಯುವ ನೀರಿಗೆ ತೊಂದರೆ ಇಲ್ಲ. ಆದರೆ ಜೂನ್ ನಂತರ ನೀರಿನ ಸಮಸ್ಯೆ ಎದುರಾಗಬಹುದು.
ಇದನ್ನೂ ಓದಿ: Drinking Water Crisis; ಚಿಕ್ಕೋಡಿಯಲ್ಲಿ ಜೀವ ಪಣಕ್ಕಿಟ್ಟು ಮೆಟ್ಟಿಲ್ಲಿಲ್ಲದ ಬಾವಿಗೆ ಇಳಿದು ನೀರು ತರುವ ಸ್ಥಿತಿ
ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಬಳಿ, ತುಂಗಭದ್ರಾ ನದಿಗೆ ಅಡ್ಡಲಾಗಿ ಡ್ಯಾಂ ನಿರ್ಮಿಸಲಾಗಿದೆ. ದಶಕಗಳ ಹಿಂದೆಯೇ ನಿರ್ಮಾಣವಾಗಿರುವ ಈ ಡ್ಯಾಂ, ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಯ ಜನರಿಗೆ ಕುಡಿಯುವ ನೀರು ಮತ್ತು ಕೃಷಿಗೆ ಪ್ರಮುಖ ಆಧಾರವಾಗಿದೆ. ಅನೇಕ ಕಾರ್ಖಾನೆಗಳಿಗೆ ಕೂಡಾ ಇದೇ ನೀರನ್ನು ಬಳಸಲಾಗುತ್ತಿದೆ. ಕಳೆದ ಮೂರ್ನಾಲ್ಕು ವರ್ಷ ತುಂಬಿ ಹರಿದಿದ್ದ ತುಂಗಭದ್ರಾ ನದಿ, ಈ ಬಾರಿ ಬರಗಾಲದ ಹೊಡೆತಕ್ಕೆ ಸಿಲುಕಿದೆ. ಇದರ ಪರಿಣಾಮ, ಈಗಾಗಲೇ ತುಂಗಭದ್ರಾ ನದಿ ಬರಿದಾಗಿದ್ದು, ಖಾಲಿ ಖಾಲಿಯಾಗಿದೆ. ಇನ್ನೊಂದೆಡೆ ಡ್ಯಾಂ ಕೂಡಾ ಬೇಸಿಗೆ ಆರಂಭಕ್ಕೂ ಮುನ್ನವೇ ಖಾಲಿಯಾಗುವ ಹಂತಕ್ಕೆ ಬಂದಿದೆ. ಇದು ನಾಲ್ಕು ಜಿಲ್ಲೆಯ ಜನರು ಕಂಗಾಲಾಗುವಂತೆ ಮಾಡಿದೆ. ಕೊಪ್ಪಳ,ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಗಳು ಬಿಸಿಲನಾಡು ಅಂತ ಕರೆಸಿಕೊಳ್ಳುವ ಪ್ರದೇಶ. ಬೇಸಿಗೆಯಲ್ಲಿ ಈ ಭಾಗದಲ್ಲಿ ಎಷ್ಟು ನೀರು ಇದ್ರು ಕಡಿಮೆಯೇ. ಆದ್ರೆ ಇದೇ ಭಾಗದಲ್ಲಿ ಇದೀಗ ಬೇಸಿಗೆ ಆರಂಭಕ್ಕೂ ಮುನ್ನವೇ ಜಲ ತತ್ವಾರ ಆರಂಭವಾಗಿದೆ. ಇದರ ನಡುವೆ ಡ್ಯಾಂ ಖಾಲಿಯಾಗುತ್ತಿರುವುದು ಜನರ ಆತಂಕವನ್ನು ಹೆಚ್ಚಿಸಿದೆ. ಇನ್ನು 105.79 ಟಿಎಂಸಿ ನೀರು ಸಾಮರ್ಥ್ಯದ ತುಂಗಭದ್ರಾ ಜಲಾಶಯದಲ್ಲಿ ಸದ್ಯ ಇರೋದು ಕೇವಲ 9.11 ಟಿಎಂಸಿ ನೀರು ಮಾತ್ರ. ಇದೇ ಸಮಯದಲ್ಲಿ ಕಳೆದ ವರ್ಷ ಡ್ಯಾಂ ನಲ್ಲಿ 34.22 ಟಿಎಂಸಿ ನೀರು ಇತ್ತು. ಆದ್ರೆ ಈ ಬಾರಿ ಬರಗಾಲದಿಂದ ಡ್ಯಾಂ ಒಮ್ಮೆಯೂ ಸಂಪೂರ್ಣವಾಗಿ ತುಂಬಿಲ್ಲಾ. ಡ್ಯಾಂ ನೀರು ಖಾಲಿಯಾಗುವ ಹಂತಕ್ಕೆ ಬಂದಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ