Drinking Water Crisis; ಚಿಕ್ಕೋಡಿಯಲ್ಲಿ ಜೀವ ಪಣಕ್ಕಿಟ್ಟು ಮೆಟ್ಟಿಲ್ಲಿಲ್ಲದ ಬಾವಿಗೆ ಇಳಿದು ನೀರು ತರುವ ಸ್ಥಿತಿ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗೌಡೇನವಾಡಿ ವಸತಿ ತೋಟದಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಜನರು ಬಾವಿ ನೀರಿನ ಮೇಲೆ ಅವಲಂಬಿಸಿದ್ದಾರೆ. ಮೆಟ್ಟಿಲಿಲ್ಲದ ಮೂವತ್ತು ಅಡಿ ಬಾವಿಗಿಳಿದು ನೀರು ತುಂಬಬೇಕಿದೆ. ಮಹಿಳೆಯರು ಸೇರಿದಂತೆ ಎಲ್ಲರೂ ಜೀವ ಕೈಯಲ್ಲಿ ಹಿಡಿದು ಬಾವಿಗೆ ಇಳಿದು ನೀರು ತುಂಬುತ್ತಾರೆ.

ಚಿಕ್ಕೋಡಿ, ಫೆ.26: ಬೇಸಿಗೆ ಆರಂಭಕ್ಕೂ ಮುನ್ನವೇ ರಾಜ್ಯದಲ್ಲಿ ನೀರಿಗಾಗಿ ಹಾಹಾಕಾರ ಎದ್ದಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ನೀರಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ (Drinking Water Crisis). ಕೃಷ್ಣಾ ನದಿ ಕೂಗಳತೆ ದೂರದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗೌಡೇನವಾಡಿ ವಸತಿ ತೋಟದಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಜೀವ ಜಲಕ್ಕಾಗಿ ಜೀವ ಕೈಯಲ್ಲಿ ಹಿಡಿದು ನೀರು ತುಂಬಿಸೋ ಸ್ಥಿತಿ ಇಲ್ಲಿದೆ.
ಇನ್ನೂರಕ್ಕೂ ಅಧಿಕ ಮನೆಗಳಿರುವ ಈ ತೋಟದಲ್ಲಿ ನೀರಿಲ್ಲದೇ ಜನ ಪರಿತಪ್ಪಿಸುತ್ತಿದ್ದಾರೆ. ಬೋರ್ ವೆಲ್ಗಳು ಬತ್ತಿ ಹೋಗಿವೆ, ಹೀಗಾಗಿ ಜನರು ಬಾವಿ ನೀರಿನ ಮೇಲೆ ಅವಲಂಬಿಸಿದ್ದಾರೆ. ಆದರೆ ಬಾವಿಯಿಂದ ನೀರು ತೆಗೆಯಬೇಕು ಎಂದರೆ ಜನರು ತಮ್ಮ ಜೀವವನ್ನೇ ಪಣಕ್ಕಿಡಬೇಕಿದೆ. ಮೆಟ್ಟಿಲಿಲ್ಲದ ಮೂವತ್ತು ಅಡಿ ಬಾವಿಗಿಳಿದು ನೀರು ತುಂಬಬೇಕಿದೆ. ಮಹಿಳೆಯರು ಸೇರಿದಂತೆ ಎಲ್ಲರೂ ಜೀವ ಕೈಯಲ್ಲಿ ಹಿಡಿದು ಬಾವಿಗೆ ಇಳಿದು ನೀರು ತುಂಬುತ್ತಾರೆ. ಸ್ವಲ್ಪ ಯಾಮಾರಿದ್ರೂ ಕಾಲು ಜಾರಿ ಪಾತಾಳಕ್ಕೆ ಬೀಳುವ ಭಯ ಇರುತ್ತೆ. ಆದರೂ ಜೀವ ಜಲಕ್ಕಾಗಿ ಜೀವವನ್ನೇ ಪಣಕ್ಕಿಡುತ್ತಿದ್ದಾರೆ.

ಚಿಕ್ಕೋಡಿಯಲ್ಲಿ ನೀರಿಗಾಗಿ ಹಾಹಾಕಾರ
ಬಾವಿಯ ನೀರು ಕಲುಷಿತವಾದ್ರೂ, ಗಾಲೀಜಾಗಿದ್ದರೂ ಅನಿವಾರ್ಯವೆಂಬಂತೆ ಅದೇ ನೀರನ್ನು ಕುಡಿದು ಜನ ಬದುಕುತ್ತಿದ್ದಾರೆ. ಹೀಗೆ ಬಾವಿಯಿಂದ ನೀರು ತುಂಬಿ ಎರಡು ಕಿ.ಮೀ. ದೂರ ನಡೆದುಕೊಂಡು ಬಂದು ಮನೆ ಸೇರಬೇಕಿದೆ. ಕೆಲಸ ಕಾರ್ಯ ಬಿಟ್ಟು ನಿತ್ಯ ನೀರು ತುಂಬುವುದೇ ಇವರ ಕೆಲಸವಾಗಿದೆ. ಸಾಕಷ್ಟು ಬಾರಿ ಸ್ಥಳೀಯ ಶಾಸಕ ಗಣೇಶ್ ಹುಕ್ಕೇರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ವರೆಗೂ ಸ್ಪಂದಿಸದ ಶಾಸಕರು, ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದಾರೆ.

ಮೆಟ್ಟಿಲಿಲ್ಲದ ಬಾವಿಯಿಂದ ನೀರು ತರುತ್ತಿರುವ ಜನ
ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ 2ನೇ ಬಲಿ, ಹೆಚ್ಚಾದ ಆತಂಕ
ರಾಯಚೂರಿನ ಕೃಷ್ಣಾ ನದಿ ಸಂಪೂರ್ಣ ಖಾಲಿ
ಬಿಸಲುನಗರಿ ರಾಯಚೂರಿನಲ್ಲಿ ಈ ಬಾರೀ ನೀರಿಗೆ ಹಾಹಾಕಾರ ಶುರುವಾಗೋ ಲಕ್ಷಣಗಳು ಗೋಚರಿಸುತ್ತಿವೆ. ಬಿಸಿಲುಗಾಲ ಆರಂಭಕ್ಕೂ ಮುನ್ನವೇ ಜನ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಬೇಸಿಗೆ ನೆತ್ತಿ ಸುಡುತ್ತಿದ್ರೆ ಬಾಯಾರಿಕೆ ಜನರನ್ನ ಕೊಲ್ಲೋ ಸ್ಥಿತಿ ನಿರ್ಮಾಣವಾಗ್ತಿದೆ. ಕೃಷ್ಣಾ ನದಿ ಸಂಪೂರ್ಣ ಖಾಲಿಯಾಗಿದ್ದು ನದಿ ತೀರದ ಜನ ಕಂಗಾಲಾಗುವಂತೆ ಮಾಡಿದೆ. ನೀರಿಲ್ಲದೇ ನದಿಯಲ್ಲಿನ ಜಲಚರಗಳು ಸಾವನ್ನಪ್ಪುತ್ತಿವೆ. ತುಂಬಿ ಹರಿಯೋ ಕೃಷ್ಣೆಯನ್ನ ನೋಡಿದ್ದ ಜನ ಈಗ ಹನಿ ನೀರಿಲ್ಲದ ನದಿಯತ್ತ ನೋಡಿದ್ರೆ ಕಣ್ಣಂಚು ಒದ್ದೆಯಾಗುತ್ತೆ. ಇದೇ ಕೃಷ್ಣಾ ನದಿ ನಂಬಿಕೊಂಡಿದ್ದ ಈ ಭಾಗದ ಗ್ರಾಮಸ್ಥರಿಗೆ ನೀರಿನ ಸಮಸ್ಯೆ ಎದುರಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ