ರಾಜಣ್ಣ ಬಳಿಕ ಮತ್ತೊಬ್ಬ ಹಿರಿಯ ಶಾಸಕನಿಗೆ ಕಾಂಗ್ರೆಸ್ ಹೈಕಮಾಂಡ್ ಶಾಕ್: ನಿಗಮ ಮಂಡಳಿ ಅಧ್ಯಕ್ಷ ಸ್ಥಾನದಿಂದ ಗೇಟ್​ಪಾಸ್

ಪಕ್ಷ ವಿರೋಧಿ ಹೇಳಿಕೆಗಳು ಮತ್ತು ಸರ್ಕಾರಕ್ಕೆ ಮುಜುಗರ ಉಂಟಾಗುವಂತಹ ಮಾತುಗಳನ್ನಾಡುವ ನಾಯಕರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಕಠಿಣ ಕ್ರಮ ಮುಂದುವರಿಸಿದೆ. ಕೆಎನ್ ರಾಜಣ್ಣರನ್ನು ಸಂಪುಟದಿಂದ ತೆರವುಗೊಳಿಸಿದ ಬಳಿಕ ಇದೀಗ ಶಾಸಕ ರಾಜು ಕಾಗೆ ಅವರನ್ನು ನಿಗಮ ಮಂಡಳಿ ಅಧ್ಯಕ್ಷ ಸ್ಥಾನದಿಂದ ಕೈ ಬಿಡಲಾಗಿದೆ.

ರಾಜಣ್ಣ ಬಳಿಕ ಮತ್ತೊಬ್ಬ ಹಿರಿಯ ಶಾಸಕನಿಗೆ ಕಾಂಗ್ರೆಸ್ ಹೈಕಮಾಂಡ್ ಶಾಕ್: ನಿಗಮ ಮಂಡಳಿ ಅಧ್ಯಕ್ಷ ಸ್ಥಾನದಿಂದ ಗೇಟ್​ಪಾಸ್
ಕಾಗವಾಡ ಶಾಸಕ ರಾಜು ಕಾಗೆ
Edited By:

Updated on: Sep 26, 2025 | 12:32 PM

ಬೆಳಗಾವಿ, ಸೆಪ್ಟೆಂಬರ್ 26: ಸಹಕಾರ ಸಚಿವರಾಗಿದ್ದ ಕೆಎನ್ ರಾಜಣ್ಣರನ್ನು ಸಂಪುಟದಿಂದ ಕೈಬಿಟ್ಟ ಬಳಿಕ ಮತ್ತೋರ್ವ ಹಿರಿಯ ಕಾಂಗ್ರೆಸ್ (Congress) ಶಾಸಕರಿಗೆ ಕಾಂಗ್ರೆಸ್ ಹೈಕಮಾಂಡ್ ಶಾಕ್ ನೀಡಿದೆ. ಪಕ್ಷ ವಿರೋಧಿ ಹಾಗೂ ಸರ್ಕಾರಕ್ಕೆ ಮುಜುಗರ ಉಂಟು ಮಾಡುವಂಥ ಹೇಳಿಕೆ ನೀಡಿದ ಕಾಗವಾಡ ಶಾಸಕ ರಾಜು ಕಾಗೆ (Raju Kage) ಅವರನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ. ರಾಜು ಕಾಗೆ ಬದಲಾಗಿ ಅರುಣ್ ಪಾಟೀಲ ಅವರನ್ನು ನೂತನ ಅಧ್ಯಕ್ಷರಾಗಿ ನೇಮಕ ಮಾಡುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಅವರು ಸಿಎಂ ಸಿದ್ದರಾಮಯ್ಯಗೆ ಅಂತಿಮ ಪಟ್ಟಿಯನ್ನು ರವಾನಿಸಿದ್ದಾರೆ. ಈ ಮೂಲಕ ಸರ್ಕಾರಕ್ಕೆ ಮುಜುಗರ ಉಂಟುಮಾಡುವಂಥ ಹೇಳಿಕೆಗಳನ್ನು ನೀಡುವವರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಪ್ರಬಲ ಸಂದೇಶ ರವಾನಿಸಿದೆ.

ರಾಜು ಕಾಗೆ ಇತ್ತೀಚೆಗೆ ನೀಡಿದ ಹೇಳಿಕೆಯಲ್ಲಿ, “ನನ್ನ ಕ್ಷೇತ್ರಕ್ಕೆ 25 ಕೋಟಿ ವಿಶೇಷ ಅನುದಾನ ಬಿಡುಗಡೆ ಆಗಿದ್ದರೂ, ಎರಡು ವರ್ಷ ಕಳೆದರೂ ಕಾಮಗಾರಿ ಆರಂಭವಾಗಿಲ್ಲ. ಸಮಸ್ಯೆ ಬಗೆಹರಿಯದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆನು” ಎಂದು ಎಚ್ಚರಿಕೆ ನೀಡಿದ್ದರು.

ಆಳಂದ ಶಾಸಕ ಬಿ.ಆರ್ ಪಾಟೀಲ ಎರಡು ತಿಂಗಳ ಹಿಂದೆ ವಸತಿ ಇಲಾಖೆಯ ಭ್ರಷ್ಟಾಚಾರ ಬಗ್ಗೆ ಧ್ವನಿ ಎತ್ತಿದ್ದರು. ಅದಾದ ನಂತರ, ಬಿ.ಆರ್ ಪಾಟೀಲರಂತೆಯೇ ನನ್ನ ಸ್ಥಿತಿಯೂ ಇದೆ ಎಂದು ರಾಜು ಕಾಗೆ ಹೇಳಿದ್ದರು.

ಏನು ಹೇಳಿದ್ದರು ರಾಜು ಕಾಗೆ?

ಕೆಲ ಸಮಯ ಹಿಂದೆ ಸರ್ಕಾರಕ್ಕೆ ಮುಜುಗರ ಉಂಟುಮಾಡುವಂತಹ ಹೇಳಿಕೆಯನ್ನು ರಾಜು ಕಾಗೆ ನೀಡಿದ್ದರು. ನನಗೆ ಸರ್ಕಾರದಿಂದ 25 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಆಗಿದೆ. 13 ಕೋಟಿ ರೂಪಾಯಿಯಲ್ಲಿ 72 ಸಮುದಾಯ ಭವನ, 12 ಕೋಟಿ ರೂಪಾಯಿಯಲ್ಲಿ ರಸ್ತೆ ನಿರ್ಮಾಣಕ್ಕೆ ಚಾಲನೆ ‌ನೀಡಿದ್ದೆ. ಚಾಲನೆ ನೀಡಿ ಎರಡು ವರ್ಷ ಕಳೆದರೂ ಈವರೆಗೆ ಕಾಮಗಾರಿ ಆರಂಭವಾಗಿಲ್ಲ. ವರ್ಕ್ ಆರ್ಡರ್ ಕೊಡದಿರುವುದಕ್ಕೆ ನನಗೆ ನೋವಾಗಿದೆ ಎಂದು ಕಾಗೆ ಅಸಾಮಾಧಾನ ವ್ಯಕ್ತಪಡಿಸಿದ್ದರು. ಎರಡ್ಮೂರು ದಿನಗಳಲ್ಲಿ ನನ್ನ ಸಮಸ್ಯೆ ಬಗ್ಗೆ ಸಿಎಂ ಭೇಟಿ ಆಗಿ ಚರ್ಚಿಸುತ್ತೇನೆ. ಈ ವೇಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಅಚ್ಛರಿಪಡಬೇಕಿಲ್ಲ ಎಂದಿದ್ದರು.

ಇದನ್ನೂ ಓದಿ: ರಾಜು ಕಾಗೆಯೇ NWKRTC ಅಧ್ಯಕ್ಷ: ಗೊಂದಲ ಆಗಿದ್ದು ಪ್ರಿಂಟ್​ ಮಿಸ್ಟೇಕ್​ನಿಂದ!

ಕಾಗವಾಡ ಶಾಸಕ ರಾಜು ಕಾಗೆ ಜೂನ್ 23 ರಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇದರಿಂದ ರಾಜ್ಯ ಸರ್ಕಾರ ತೀವ್ರ ಮುಜುಗರಕ್ಕೆ ಒಳಗಾಗಿತ್ತು. ಆ ಬಳಿಕ ರಾಜು ಕಾಗೆ ಜೊತೆಗೆ ಪ್ರತ್ಯೇಕ ಸಭೆ ನಡೆಸಿ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲ ಮನವೊಲಿಸಿದ್ದರು. ಬಹಿರಂಗ ಹೇಳಿಕೆ ನೀಡದಂತೆಯೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಸುರ್ಜೆವಾಲ ಎಚ್ಚರಿಕೆ ನೀಡಿದ ನಂತರ ಕಾಗೆ ಮೌನವಹಿಸಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:14 am, Fri, 26 September 25