ಕಳೆದುಹೋದ ಮೊಬೈಲನ್ನು ಹತ್ತೇ ನಿಮಿಷದಲ್ಲಿ ಹುಡುಕಿ ಕೊಟ್ಟ ಬೆಂಗಳೂರು ಪೊಲೀಸರು! ಯುವತಿಯ ಪೋಸ್ಟ್ ವೈರಲ್
ಬೆಂಗಳೂರು ಮಹದೇವಪುರ ಪೊಲೀಸರು ಫೀನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ಯುವತಿಯೊಬ್ಬರ ಕಳೆದುಹೋದ ಮೊಬೈಲ್ ಅನ್ನು ಕೇವಲ 10 ನಿಮಿಷಗಳಲ್ಲಿ ಪತ್ತೆಹಚ್ಚಿ ವಾಪಸ್ ಕೊಟ್ಟಿದ್ದಾರೆ. ಈ ಸಂಬಂಧ ಬೆಂಗಳೂರಿನ ಜನ ಹಾಗೂ ಪೊಲೀಸರ ಬಗ್ಗೆ ಅನ್ಯ ರಾಜ್ಯದ ಯುವತಿ ಮಾಡಿರುವ ಫೇಸ್‌ಬುಕ್ ಪೋಸ್ಟ್ ವೈರಲ್ ಆಗಿದ್ದು, ಪೊಲೀಸರ ಕಾರ್ಯಕ್ಷಮತೆಗೆ ಶ್ಲಾಘನೆ ವ್ಯಕ್ತವಾಗಿದೆ.

ಬೆಂಗಳೂರು, ಸೆಪ್ಟೆಂಬರ್ 26: ಕಳೆದುಹೋದ ಮೊಬೈಲ್ ಫೋನ್ ಅನ್ನು ಬೆಂಗಳೂರಿನ (Bengaluru) ಮಹದೇವಪುರ ಪೊಲೀಸರು ಕೇವಲ 10 ನಿಮಿಷಗಳ ಅವಧಿಯಲ್ಲಿ ಹುಡುಕಿಕೊಟ್ಟ ಬಗ್ಗೆ ಯುವತಿಯೊಬ್ಬರು ಫೇಸ್ಬುಕ್ನಲ್ಲಿ ಮಾಡಿರುವ ಪೋಸ್ಟ್ ಈಗ ವೈರಲ್ ಆಗುತ್ತಿದೆ. ಒಂದೆಡೆ, ಬೆಂಗಳೂರು ಪೊಲೀಸರ ವೃತ್ತಿಪರತೆ ಮತ್ತು ಕಾರ್ಯಕ್ಷಮತೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದರೆ ಮತ್ತೊಂದೆಡೆ, ನಮ್ಮ ಸ್ವತ್ತುಗಳ ಬಗ್ಗೆ ಸಾರ್ವಜನಿಕ ಪ್ರದೇಶಗಳಲ್ಲಿ ಹೇಗೆ ಎಚ್ಚರಿಕೆ ವಹಿಸಬೇಕು ಎಂಬ ಬಗ್ಗೆಯೂ ಚರ್ಚೆಗಳಾಗುತ್ತಿವೆ. ಪೊಲೀಸರು ಮೊಬೈಲ್ ಹುಡುಕಿಕೊಟ್ಟ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬೆಬಿನಾ ಶ್ರೀಚಂದನ್ ಎಂಬವರು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅತ್ತ ವೈಟ್‌ಫೀಲ್ಡ್ ಪೊಲೀಸರೂ ‘ಸ್ವಿಫ್ಟ್ ಆ್ಯಂಡ್ ಡೆಡಿಕೇಟೆಡ್ ಪೊಲೀಸಿಂಗ್’ ಎಂದು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
ಬೆಬಿನಾ ಶ್ರೀಚಂದನ್ ಫೇಸ್‌ಬುಕ್ ಪೋಸ್ಟ್ನಲ್ಲೇನಿದೆ?
ಬೆಬಿನಾ ಶ್ರೀಚಂದನ್ ಅವರ ಫೇಸ್‌ಬುಕ್ ಪೋಸ್ಟ್ನ ಪ್ರಕಾರ, ಅವರು ಕಳೆದ ಶನಿವಾರ ರಾತ್ರಿ 9:40 ರ ಸುಮಾರಿಗೆ ಫೀನಿಕ್ಸ್ ಮಾರ್ಕೆಟ್ ಸಿಟಿಯ ಫನ್ ಝೋನ್‌ನಲ್ಲಿದ್ದರು. ಮಾಲ್ ಮುಚ್ಚುವ ಸಮಯವಾದ್ದರಿಂದ, ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರ ಇದ್ದರು. ಬೆಬಿನಾ ಶ್ರೀಚಂದನ್ ಕಾರ್ ಗೇಮ್ ಆಡಿ ಮುಗಿಸಿ ಒಂದು ಸಣ್ಣ ಫೋಟೋ ತೆಗೆದಿದ್ದಾರೆ. ಆ ಸಂದರ್ಭದಲ್ಲಿ OnePlus 12R ಅನ್ನು ಪಕ್ಕದಲ್ಲಿ ಬಿಟ್ಟು ಕ್ಲಾ ಮಷಿನ್ಸ್ ನೋಡಲು ಹೋಗಿದ್ದಾರೆ. ಅದದ ಒಂದೆರಡು ನಿಮಿಷಗಳಲ್ಲಿ, ಫೋನ್ ಬಿಟ್ಟು ಹೋಗಿರುವುದು ಅವರ ಅರಿವಿಗೆ ಬರುತ್ತದೆ. ಆದರೆ, ವಾಪಸ್ ಹಿಂದೆ ಹೋಗಿ ನೋಡಿದಾಗ ಫೋನ್ ಅಲ್ಲಿರುವುದಿಲ್ಲ. ಹಲವು ಬಾರಿ ಕರೆ ಮಾಡಿದಾಗ ಕೆಲವೊಮ್ಮೆ ಅದು ರಿಂಗಣಿಸುತ್ತಿತ್ತು, ಕೆಲವೊಮ್ಮೆ ಬ್ಯುಸಿ ಎಂಬ ಸಂದೇಶ ಬರುತ್ತಿತ್ತು. ತಕ್ಷಣ ಅವರು ಫನ್ ಸಿಟಿ ಭದ್ರತಾ ತಂಡವನ್ನು ಸಂಪರ್ಕಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಅಷ್ಟರಲ್ಲಿ, ಅವರ ಸ್ನೇಹಿತರೊಬ್ಬರು 100 (ತುರ್ತು ಸಹಾಯವಾಣಿ) ಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಹತ್ತಿರದ ಪೊಲೀಸ್ ಠಾಣೆಯ ಒಬ್ಬರು ಅಧಿಕಾರಿ ಬೆಬಿನಾರನ್ನು ಸಂಪರ್ಕಿಸಿ, ಎಲ್ಲ ವಿವರಗಳನ್ನು ಸಂಗ್ರಹಿಸಿದ್ದಾರೆ. ಕೇವಲ 10 ನಿಮಿಷಗಳಲ್ಲಿ ಅವರು ಫೋನ್ ಅನ್ನು ಪತ್ತೆಹಚ್ಚಿ ಕರೆ ಮಾಡಿದ್ದಾರೆ.
ಸ್ವಲ್ಪ ಸಮಯದ ನಂತರ ಪೊಲೀಸರು ಮೊಬೈಲ್ ಅನ್ನು ಅಲ್ಲೇ ಹತ್ತಿರದಲ್ಲಿ ಮಗುವಿನೊಂದಿಗೆ ಇದ್ದ ಮಹಿಳೆಯಿಂದ ವಶಪಡಿಸಿಕೊಂಡಿದ್ದಾರೆ. ಮಗು ಫೋನ್ ಎತ್ತಿಕೊಂಡು ಅದರೊಂದಿಗೆ ಆಟವಾಡುತ್ತಿತ್ತು ಎಂದು ಆ ಮಹಿಳೆ ಹೇಳಿದ್ದರು ಎಂದು ತಿಳಿಸಿದ್ದಾರೆ ಎಂಬುದಾಗಿಯೂ ಬೆಬಿನಾ ಫೇಸ್‌ಬುಕ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ಬೆಬಿನಾ ಶ್ರೀಚಂದನ್ ಫೇಸ್‌ಬುಕ್ ಪೋಸ್ಟ್
‘ಏನೇ ಇರಲಿ, ನನ್ನ ಫೋನ್ ಇಷ್ಟು ಬೇಗ ವಾಪಸ್ ಸಿಕ್ಕಿದ್ದರಿಂದ ನನಗೆ ಸ್ವಲ್ಪ ಸಮಾಧಾನವಾಯಿತು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಕಳೆದುಹೋದ ಫೋನ್ ಪ್ರಕರಣವನ್ನು ಇಷ್ಟು ವೇಗ, ದಕ್ಷತೆ ಮತ್ತು ವೃತ್ತಿಪರತೆಯಿಂದ ಪರಿಹರಿಸಲಾಗುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಕರ್ನಾಟಕದವನಲ್ಲದ ವ್ಯಕ್ತಿಯಾಗಿ, ಬೆಂಗಳೂರಿನಲ್ಲಿ ಭಾಷಾ ಅಡೆತಡೆಗಳು ಅಥವಾ ಪಕ್ಷಪಾತದ ಬಗ್ಗೆ ಜನರು ನಕಾರಾತ್ಮಕ ವಿಷಯಗಳನ್ನು ಹೇಳುವುದನ್ನು ನಾನು ಆಗಾಗ್ಗೆ ಕೇಳಿದ್ದೇನೆ. ಆದರೆ ಇಲ್ಲಿ ನನ್ನ ವಿಷಯಕ್ಕೆ ಬಂದಾಗ ಪೊಲೀಸರ ವೃತ್ತಿಪರತೆ ಮತ್ತು ಜನರ ಬೆಂಬಲ ದೊರೆಯಿತು. ಪ್ರತಿಯೊಬ್ಬ ಅಧಿಕಾರಿಯೂ ಗೌರವಾನ್ವಿತರು, ಸಹಾಯಕರು ಮತ್ತು ತ್ವರಿತವಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಅನುಭವವು ಬೆಂಗಳೂರು ನಗರ ಪೊಲೀಸ್, ಮಹದೇವಪುರ ಪೊಲೀಸ್ ಠಾಣೆ, ವೈಟ್‌ಫೀಲ್ಡ್ ಬಗ್ಗೆ ನನಗೆ ಅಪಾರ ಗೌರವವನ್ನುಂಟು ಮಾಡಿದೆ’ ಎಂದು ಬೆಬಿನಾ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ನಮ್ಮ ಕ್ಲಿನಿಕ್ನಲ್ಲಿ ಇಲಿ, ಹೆಗ್ಗಣಗಳಿಗೂ ಸಿಗುತ್ತೆ ಔಷಧ! ಅರ್ದ ಮೂಟೆ ಐವಿ ಫ್ಲೂಯಿಡ್ ಖಾಲಿ ಮಾಡಿದ ಹೆಗ್ಗಣಗಳು
ವೈಟ್‌ಫೀಲ್ಡ್‌ನ ಫೀನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ಮೊಬೈಲ್ ಫೋನ್ ಕಳೆದುಹೋಗಿದೆ ಎಂಬ ದೂರಿಗೆ ಮಹದೇವಪುರ ಪೊಲೀಸ್ ಠಾಣಾ ಅಧಿಕಾರಿಗಳು ತ್ವರಿತವಾಗಿ ಪ್ರತಿಕ್ರಿಯಿಸಿದರು. ದೂರು ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ, ಪೊಲೀಸ್ ತಂಡವು ಎಲ್ಲಾ ವಿವರಗಳನ್ನು ಸಂಗ್ರಹಿಸಿ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿತು ಮತ್ತು ಫೋನ್ ಅನ್ನು ಪತ್ತೆಹಚ್ಚಿತು ಎಂದು ವೈಟ್‌ಫೀಲ್ಡ್ ಡಿಸಿಪಿ ಟ್ವೀಟ್ ಮಾಡಿದ್ದಾರೆ.




