ಕಲಬುರಗಿ, (ಸೆಪ್ಟೆಂಬರ್ 03): ಮೋಸ ಹೋಗುವವರ ಇರೋವರಗೆ ಮೋಸ ಮಾಡೋರು ಇದ್ದೇ ಇರುತ್ತಾರೆ. ಆದರೆ ಇತ್ತೀಚೆಗೆ ವಂಚಕರು ಮುಗ್ದ ಜನರನ್ನು ವಂಚಿಸಲು ಹತ್ತಾರು ದಾರಿಗಳನ್ನು ಕಂಡುಕೊಂಡಿದ್ದಾರೆ. ಇದೀಗ ಸರ್ಕಾರಿ ಯೋಜನೆಗಳ ಹೆಸರಲ್ಲಿ ಮುಗ್ದ ರೈತರಿಗೆ ವಂಚನೆ ಮಾಡುವುದನ್ನು ಆರಂಭಿಸಿದ್ದಾರೆ. ಪಿಎಂ ಕುಸುಮ ಯೋಜನೆಯ(PM KUSUM Scheme) ಸಬ್ಸಿಡಿ ಹಣದ ಹೆಸರಲ್ಲಿ ಕಲಬುರಗಿ(Kalaburagi) ಜಿಲ್ಲೆಯ ರೈತನೋರ್ವನಿಗೆ(Farmer) ವಂಚಕರು ಬರೋಬ್ಬರಿ ಎರಡು ಲಕ್ಷ ಆರವತ್ತೆಂಟು ಸಾವಿರ ರೂಪಾಯಿ ವಂಚಿಸಿದ್ದಾರೆ.
ಕಲಬುರಗಿ ನಗರದ ವೀರೇಂದ್ರ ಪಾಟೀಲ್ ನಗರದ ನಿವಾಸಿಯಾಗಿರುವ ರಾಮಚಂದ್ರ ಗಂದೇನವರ್ ಎನ್ನುವವರ, ಕೃಷಿ ಮತ್ತು ಖಾಸಗಿ ಕೆಲಸ ಮಾಡಿಕೊಂಡಿದ್ದಾರೆ. ಇವರು ಕಳೆದ ಆಗಸ್ಟ್ 21 ರಂದು ತಮ್ಮ ಪೇಸಬುಕ್ ನೋಡುತ್ತಿದ್ದಾಗ ಅದರಲ್ಲಿ ಪಿಎಂ ಕುಸುಮ ಯೋಜನೆಯ ಜಾಹೀರಾತು ಬಂದಿದೆ. ಜಾಹೀರಾತಿನಲ್ಲಿ 5.50 ಲಕ್ಷ ಮೌಲ್ಯದ ಸೋಲಾರ ಪಂಪ್ಸೆಟ್ ಗೆ ಯೋಜನೆಯಡಿ ಎರಡು ಲಕ್ಷ ಸಬ್ಸಿಡಿ ಇರುವುದಾಗಿ ಮಾಹಿತಿಯನ್ನು ನೋಡಿದ್ದಾರೆ. ಅದನ್ನು ನೋಡಿದ ರಾಮಚಂದ್ರ ಅವರು ಜಾಹೀರಾತಿನಲ್ಲಿ ತೋರಿಸಿದ ನಂಬರ್ ಗೆ ಕರೆ ಮಾಡಿ ಯೋಜನೆ ಬಗ್ಗೆ ವಿಚಾರಿಸಿದ್ದಾರೆ. ಕರೆ ಸ್ವೀಕರಿಸಿದ್ದ ಪವನ್ ಕುಮಾರ್ ಎನ್ನುವಾತ, ನಾನು ಹದಿನೈದು ವರ್ಷಗಳಿಂದ ಈ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಅಂತ ಹೇಳಿ ಪಿಎಂ ಕುಸುಮ ಯೋಜನೆ ಬಗ್ಗೆ ಮಾಹಿತಿ ನೀಡಿದ್ದಾನೆ. ಜೊತೆಗೆ ನೀವು ಸಹಾಯಧನ ಪಡೆಯಬೇಕಾದರೆ ನಿಮ್ಮ ಎಲ್ಲಾ ದಾಖಲಾತಿಗಳನ್ನು ವಾಟ್ಸಪ್ ಗೆ ಕಳುಹಿಸಿ ಅಂತ ಹೇಳಿದ್ದಾನೆ. ಹೀಗಾಗಿ ರೈತ ರಾಮಚಂದ್ರ ಅವರು ತಮ್ಮ ಆಧಾರ ಕಾರ್ಡ್ , ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆಯ ಮಾಹಿತಿ, ಎರಡು ಪೋಟೋಗಳನ್ನು ವಾಟ್ಸಪ್ ಮೂಲಕ ಕಳುಹಿಸಿದ್ದಾರೆ.
ಮಾಹಿತಿ ಪಡೆದ ವಂಚಕ ಅಲ್ಲಿಂದ ತನ್ನ ಮೋಸದ ಆಟವನ್ನು ಆರಂಭಿಸಿದ್ದಾನೆ. ಪಿಎಂ ಕುಸುಮ ಯೋಜನೆಯ ರಿಜಿಸ್ಟ್ರೇಶನ್ ಫೀಸ್ ಅಂತ ನನಗೆ ಎಂಟು ಸಾವಿರ ಹಾಗೂ ಜಿಎಸ್ಟಿ ಜಾರ್ಜ್ 21,798 ರೂಪಾಯಿ, ರೈತನ ವಂತಿಗೆ ಅಂತ 55,500 ರೂಪಾಯಿ, ಸಾರಿಗೆ ವೆಚ್ಚ 42,800 ರೂಪಾಯಿ ಹಾಕಿ ಅಂತ ಹೇಳಿದ್ದಾನೆ. ವಂಚಕನ ಮಾತನ್ನು ನಂಬಿದ ರೈತ ರಾಮಚಂದ್ರ ವಂಚಕ ನೀಡಿದ್ದ ಮೊಬೈಲ್ ನಂಬರ್ ಗೆ ಪೋನ್ ಪೇ ಮೂಲಕ ಹಣ ಜಮೆ ಮಾಡಿದ್ದಾರೆ. ಮತ್ತೆ ಆತನ ಕೆನಾರ ಬ್ಯಾಂಕ್ ಅಕೌಂಟ್ ನಂಬರಿಗೆ ಕೂಡಾ ಹಣ ಜಮೆ ಮಾಡಿದಾರೆ. ಆದ್ರೆ ವಂಚಕ ಮತ್ತೆ ಹತ್ತಾರು ನೆಪಗಳನ್ನು ಹೇಳಿ, ಮತ್ತೆ ಮತ್ತೆ ಹಣ ಕೇಳಲು ಆರಂಭಿಸಿದ್ದರಿಂದ ರೈತ ರಾಮಚಂದ್ರ ಹಣ ಹಾಕದೇ ಮತ್ತೋರ್ವ ವ್ಯಕ್ತಿಗೆ ಕರೆ ಮಾಡಿದ್ದಾರೆ. ಆದ್ರೆ, ಆತ ನ್ಯಾಯ ಕೊಡಿಸುವ ನೆಪದಲ್ಲಿ ರೈತ ರಾಮಚಂದ್ರ ಅವರಿಗೆ ವಂಚನೆ ಮಾಡಿದ್ದಾನೆ.
ಪಿಎಂ ಕುಸುಮ ಯೋಜನೆಗಾಗಿ ವಂಚಕನಿಗೆ ಹಣ ಹಾಕಿದ್ದ ರಾಮಚಂದ್ರ ಮತ್ತೆ ಸುಶಿಲ್ ಕುಮಾರ್ ಎನ್ನುವರಿಗೆ ಕರೆ ಮಾಡಿದ್ದಾರೆ. ಸುಶಿಲ್ ಕುಮಾರ್, ತಾನು ಯೋಜನೆಯ ವೆರಿಪಿಕೇಶನ್ ಆಫೀಸರ್ ಇದ್ದೇನೆ ಎಂದು ತನ್ನನ್ನು ಪರಿಚಯ ಮಾಡಿಕೊಂಡಿದ್ದಾನೆ. ತಾನು ನಿಮ್ಮ ಹಣವನ್ನು ಮರಳಿ ಹಾಕಿಸುವುದಾಗಿ ಹೇಳಿದ್ದಾನೆ. ಈಗಾಗಲೇ ವಂಚನೆಗೊಳಗಾಗಿದ್ದ ರಾಮಚಂದ್ರ ಮತ್ತೋರ್ವ ವಂಚಕನ ಮಾತನ್ನು ಮತ್ತೆ ನಂಬಿದ್ದಾರೆ. ತಾನು ಕೊಟ್ಟಿದ್ದ ಹಣ ಮರಳಿ ಬರುತ್ತೆ ಎಂದು ತಿಳಿದು ಸುಶಿಲ್ ಕುಮಾರ್ ಮಾತನ್ನು ನಂಬಿದ್ದಾರೆ. ಆದ್ರೆ ವಂಚಕ ಸುಶಿಲ್ ಕುಮಾರ್ ನೀವು ಕೊಟ್ಟ ಹಣವನ್ನು ಮರಳಿ ಹಾಕಿಸಲು ಚಾರ್ಜ್ ಆಗುತ್ತೆ, ಅದಕ್ಕಾಗಿ 52,410 ರೂಪಾಯಿ ಹಾಕಿ ಎಂದು ಹೇಳಿ,ತನ್ನ ಅಕೌಂಟ್ ಗೆ ಹಣ ಹಾಕಿಸಿಕೊಂಡಿದ್ದಾನೆ. ಮೇಲಿಂದ ಮೇಲೆ ಮತ್ತೆ ಕರೆ ಮಾಡಿ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಾನೆ. ಆಗ ರಾಮಚಂದ್ರ ಅವರಿಗೆ ಮೋಸ ಹೋಗಿರುವುದು ಮನವರಿಕೆಯಾಗಿದೆ. ಆದ್ರೆ ಮನವರಿಕೆ ಆಗುವರಗೆ ರೈತ ರಾಮಚಂದ್ರ ವಂಚಕರಿಗೆ ಬರೋಬ್ಬರಿ 2,68,408 ರೂಪಾಯಿ ಹಣವನ್ನು ಜಮೆ ಮಾಡಿದ್ದಾರೆ.
ಇನ್ನು ಪಿಎಂ ಕುಸುಮ ಯೋಜನೆಯ ಹೆಸರಲ್ಲಿ ರೈತ ರಾಮಚಂದ್ರ ಅವರಿಗೆ ವಂಚಿಸಿರುವ ಬೆಂಗಳೂರು ಮೂಲದ ಪವನಕುಮಾರ್, ಸೌರಭ್ ಕುಮಾರ್ ಮತ್ತು ದೆಹಲಿ ಮೂಲದ ಸುಶಿಲ್ ಕುಮಾರ್ ವಿರುದ್ದ ಕಲಬುರಗಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆದರೆ ಅನೇಕ ಯೋಜನೆಗಳು ಸುಲಭವಾಗಿ ಸಿಗುತ್ತವೆ, ಹೆಚ್ಚಿನ ಸಬ್ಸಿಡಿ ಇದೆ ಎಂದು ತಿಳಿದು ರೈತರು ವಂಚನೆಗೊಳಗಾಗುತ್ತಿದ್ದಾರೆ. ಹೀಗಾಗಿ ಯಾರಾದರೂ ನಿಮಗೆ ಹಣದ ವ್ಯವಹಾರಕ್ಕೆ ಮುಂದಾದರೆ ಮೊದಲು ಜಿಲ್ಲೆಯ ಸರ್ಕಾರಿ ಕಚೇರಿಗೆ ಹೋಗಿ ಮಾಹಿತಿ ಪಡೆದುಕೊಳ್ಳುವುದು ಉತ್ತಮ ಎಂದು ಪೊಲೀಸರು ಸಲಹೆ ನೀಡಿದ್ದಾರೆ.
ಇನ್ನಷ್ಟು ಕಲಬುರಗಿ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ