ಕಲಬುರಗಿಯಲ್ಲಿ ಮಳೆ ಆರ್ಭಟ; ಗೋಡೆ ಕುಸಿದು 80ಕ್ಕೂ ಅಧಿಕ ಕುರಿ, ಮೇಕೆಗಳ ಸಾವು

Kalaburagi Rain: ಮಳೆಯಿಂದ ಗೋಡೆ ಕುಸಿದು 80ಕ್ಕೂ ಅಧಿಕ ಕುರಿಗಳು ಹಾಗೂ ಮೇಕೆಗಳು ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ಕೊರವಿ ಗ್ರಾಮದಲ್ಲಿ ನಡೆದಿದೆ. ಮಲ್ಲಪ್ಪ ಪೂಜಾರಿ ಮತ್ತು ಅಣ್ಣಪ್ಪ ಪೂಜಾರಿ ಎಂಬುವರಿಗೆ ಸೇರಿದ್ದ ಕುರಿ ಹಾಗೂ ಮೇಕೆಗಳು ಕಳೆದ ರಾತ್ರಿ ಸುರಿದ ಮಳೆಯಿಂದ ಏಕಾಏಕಿ ಗೋಡೆ ಕುಸಿದ ಪರಿಣಾಮ ಕಲ್ಲಿನಡಿ ಸಿಲುಕಿ ಮೃತಪಟ್ಟಿವೆ.

ಕಲಬುರಗಿಯಲ್ಲಿ ಮಳೆ ಆರ್ಭಟ; ಗೋಡೆ ಕುಸಿದು 80ಕ್ಕೂ ಅಧಿಕ ಕುರಿ, ಮೇಕೆಗಳ ಸಾವು
ಕುರಿ, ಮೇಕೆಗಳನ್ನು ಕಳೆದುಕೊಂಡು ಕಂಗಾಲಾದ ಕುಟುಂಬ
Follow us
| Updated By: ಆಯೇಷಾ ಬಾನು

Updated on: Sep 04, 2023 | 7:38 AM

ಕಲಬುರಗಿ, ಸೆ.04: ಕಲಬುರಗಿ ಜಿಲ್ಲೆಯಲ್ಲಿ ಮಳೆ ಅಬ್ಬರ ಮತ್ತೆ ಹೆಚ್ಚಾಗಿದೆ(Kalaburagi Rain). ನಿನ್ನೆ ಮಧ್ಯಾಹ್ನದಿಂದ ಬಿಡುವು ನೀಡಿದ್ದ ವರುಣದೇವ ಇಂದು ಬೆಳ್ಳೆಂಬೆಳಗ್ಗೆಯಿಂದಲೇ ಆರ್ಭಟ ಜೋರು ಮಾಡಿದ್ದಾನೆ. ಇಂದು ಕೂಡಾ ಕಲಬುರಗಿ ಜಿಲ್ಲೆಗೆ ಯಲ್ಲೋ ಅಲರ್ಟ್ ನೀಡಲಾಗಿದೆ. ಕಲಬುರಗಿ ನಗರ ಸೇರಿ ಹಲವೆಡೆ ಜಿಟಿಜಿಟಿ ಮಳೆಯಾಗುತ್ತಿದೆ. ಇದರ ನಡುವೆ ಮಳೆಯಿಂದ ಗೋಡೆ ಕುಸಿದು 80ಕ್ಕೂ ಅಧಿಕ ಕುರಿಗಳು ಹಾಗೂ ಮೇಕೆಗಳು ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ಕೊರವಿ ಗ್ರಾಮದಲ್ಲಿ ನಡೆದಿದೆ.

ಮಲ್ಲಪ್ಪ ಪೂಜಾರಿ ಮತ್ತು ಅಣ್ಣಪ್ಪ ಪೂಜಾರಿ ಎಂಬುವರಿಗೆ ಸೇರಿದ್ದ ಕುರಿ ಹಾಗೂ ಮೇಕೆಗಳು ಕಳೆದ ರಾತ್ರಿ ಸುರಿದ ಮಳೆಯಿಂದ ಏಕಾಏಕಿ ಗೋಡೆ ಕುಸಿದ ಪರಿಣಾಮ ಕಲ್ಲಿನಡಿ ಸಿಲುಕಿ ಮೃತಪಟ್ಟಿವೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಗೋಡೆ ತೇವಗೊಂಡಿತ್ತು. ಹೀಗಾಗಿ ನಿನ್ನೆ ಸಂಜೆ ಮನೆಯೊಂದರಲ್ಲಿ ಮೇಕೆ ಹಾಗೂ ಕುರಿಗಳನ್ನು ಒಂದೆಡೆ ಕೂಡಿಹಾಕಲಾಗಿತ್ತು. ಆದ್ರೆ ಗೋಡೆ ಕುಸಿದು ಕುರಿ, ಮೇಕೆಗಳು ಮೃತಪಟ್ಟಿವೆ. ಲಕ್ಷಾಂತರ ಮೌಲ್ಯದ ಕುರಿ, ಮೇಕೆಗಳನ್ನು ಕಳೆದುಕೊಂಡ ಕುಟುಂಬ ಕಂಗಾಲಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಟಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಡೆಂಗ್ಯೂ ರೋಗ ಪ್ರಕರಣ ಸಂಖ್ಯೆಯಲ್ಲಿ ಏರಿಕೆ; ಬೆಂಗಳೂರಿನಲ್ಲಿ ಅಧಿಕ ಬಾಧಿತರು

ಸಿಡಿಲು ಬಡಿದು ಮಹಿಳೆ ಸಾವು

ಸಿಡಿಲು ಬಡಿದ ಪರಿಣಾಮ ಮಹಿಳೆಯೋರ್ವಳು ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸಿದನೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮೂವತ್ತೈದು ವರ್ಷದ ಕಲಾವತಿ ಅನ್ನೋ ಮಹಿಳೆ, ನಿನ್ನೆ ಸಂಜೆ ಜಮೀನಿನಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದಿದ್ದರಿಂದ ಮೃತಪಟ್ಟಿದ್ದಾಳೆ. ಇನ್ನೋರ್ವ ಮಹಿಳೆ ಘಟನೆಯಲ್ಲಿ ಗಾಯಗೊಂಡಿದ್ದು, ಆಕೆಯನ್ನು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅಫಜಲಪುರ ತಹಶಿಲ್ದಾರ್ ಸಂಜೀವ್ ಕುಮಾರ್ ದಾಸರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ವರುಣ ಬಾರದೇ ಇದ್ದಾಗ ಕಂಗಾಲಾಗಿದ್ದ ಜನರು, ಸೆಪ್ಟಂಬರ್ ತಿಂಗಳಲ್ಲಿ ವರುಣ ಅಬ್ಬರಿಸಿ ಬೊಬ್ಬೆರೆಯಲು ಆರಂಭಿಸಿದ್ದರಿಂದ ಒಂದಡೆ ಸಂತಸ ಪಟ್ಟರೆ, ಮತ್ತೊಂದಡೆ ಮಳೆಯಿಂದ ತೊಂದರೆಗಳಿಗೆ ಕೂಡಾ ಸಿಲುಕುತ್ತಿದ್ದಾರೆ.

ಕಲಬುರಗಿ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ