ಪೈಪ್ ಮಾಸ್ಟರ್ ಶಾಂತಗೌಡ ಬಿರಾದರ್ನ 14 ಎಕರೆ ಫಾರ್ಮ್ಹೌಸ್ ಹೇಗಿದೆ ಗೊತ್ತಾ? ವಿಡಿಯೋ ನೋಡಿ
ಶಾಂತಗೌಡ ಬಿರಾದರ್ ಅವರ ಫಾರ್ಮ್ಹೌಸ್ ಕೂಡ ಸಾಕಷ್ಟು ಅಕ್ರಮಗಳನ್ನೇ ಹೊತ್ತು ನಿಂತಿದೆ. ಈ ಬಗ್ಗೆ ನಮ್ಮ ಟಿವಿ9 ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.
ಕಲಬುರಗಿ: ಲೋಕೋಪಯೋಗಿ ಜೆಇ ಶಾಂತಗೌಡ ಬಿರಾದರ್ ಮನೆ ಮೇಲೆ ಎಸಿಬಿ ನಡೆಸಿದ ಅಕ್ರಮ ಬೇಟೆಯಲ್ಲಿ ಸಾಕಷ್ಟು ಭ್ರಷ್ಟ ಅಧಿಕಾರಿಗಳ ಅಸಲಿಯತ್ತು ಬಯಲಾಗಿದೆ. ಕಲಬುರಗಿಯ ಹಂಗರಗಾ ಗ್ರಾಮದಲ್ಲಿರುವ ಶಾಂತಗೌಡ ಬಿರಾದರ್ ಅವರ ಫಾರ್ಮ್ಹೌಸ್ ಕೂಡ ಸಾಕಷ್ಟು ಅಕ್ರಮಗಳನ್ನೇ ಹೊತ್ತು ನಿಂತಿದೆ. ಈ ಬಗ್ಗೆ ನಮ್ಮ ಟಿವಿ9 ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.
ಎಸಿಬಿ ದಾಳಿ ವೇಳೆ ಶಾಂತಗೌಡ ಪೈಪ್‌ನಲ್ಲಿ ಬಚ್ಚಿಟ್ಟಿದ್ದ ಹಣವೂ ಪತ್ತೆಯಾಗಿದೆ. ಶಾಂತಗೌಡ ಮತ್ತು ಮಗ ಎಂಥಾ ಖತರ್ನಾಕ್‌ಗಳು ಅಂದ್ರೆ, ಎಸಿಬಿ ಅಧಿಕಾರಿಗಳು ಬರ್ತಿದ್ದಂತೆ ಹಣವನ್ನ ಪೈಪ್‌ನಲ್ಲಿ ಬಚ್ಚಿಟ್ಟಿದ್ರು. ಆದ್ರೆ, ಪೈಪ್‌ನಲ್ಲಿ ಹಣ ಬಚ್ಚಿಟ್ಟಿರೋದು ಎಸಿಬಿ ಅಧಿಕಾರಿಗಳಿಗೇ ಗೊತ್ತಾಗಿದ್ದೇ ರೋಚಕ..ಎಸಿಬಿ ಅಧಿಕಾರಿಗಳು ಮನೆಗೆ ಬರ್ತಿದ್ದಂತೆ, ತಡಬಡಾಯಿಸಿ ಪೈಪ್‌ಗೆ ಹಣ ತುರುಕಿದ್ದ ಅಪ್ಪ-ಮಗ, ನಂತರ ಬಾಗಿಲು ತೆರೆದಿದ್ರು. ಪೈಪ್‌ಗೆ ಹಣ ತುರುಕಿ, ಇಟ್ಟಿಗೆ ಇಟ್ಟಿದ್ದ ಮಗ, ಪೈಪ್ ಸುತ್ತ ಗಿರಕಿ ಹೊಡೆಯುತ್ತಿದ್ದ. ಶಾಂತಗೌಡನ ಮಗ ಪೈಪ್ ಮೇಲೆ ತೋರಿಸುತ್ತಿದ್ದ ಪ್ರೀತಿ ಕಂಡ ಎಸಿಬಿ ಅಧಿಕಾರಿಗಳಿಗೆ ಡೌಟ್ ಬಂದಿದೆ. ಇರಲಿ ಅಂತಾ ಇಟ್ಟಿಗೆ ಎತ್ತಿ ನೋಡಿದಾಗ, ಅಪ್ಪ-ಮಗನ ಬಂಡವಾಳ ಬಯಲಾಗಿದೆ.
ಕಲಬುರಗಿಯ ಜೇವರ್ಗಿಯಲ್ಲಿ ಪಿಡಬ್ಲ್ಯೂಡಿ ಜ್ಯೂನಿಯರ್ ಇಂಜಿನಿಯರ್ ಆಗಿರೋ ಶಾಂತಗೌಡ ಬಿರಾದರ್ ಬಳಿ 4 ಕೋಟಿ ಮೌಲ್ಯದ ಆಸ್ತಿ ಪಾಸ್ತಿ ಪತ್ತೆಯಾಗಿದೆ. ಆದಾಯ ಮೀರಿ ಶೇಕಡಾ 406.17ರಷ್ಟು ಅಕ್ರಮ ಆಸ್ತಿ ಇದೆ ಅಂತಾ ಎಸಿಬಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. 4 ಕೋಟಿ 15 ಲಕ್ಷದ 12 ಸಾವಿರದ 491 ರೂಪಾಯಿ ಮೌಲ್ಯದ ಆಸ್ತಿಯಲ್ಲಿ ಚಿನ್ನಾಭರಣ, ನಗದು, ವಾಹನಗಳು, ನಿವೇಶನ, ಕಟ್ಟಡ, ಗೃಹೋಪಯೋಗಿ ವಸ್ತುಗಳು, ಬ್ಯಾಂಕ್ ಠೇವಣಿ ಎಲ್ಲವೂ ಸೇರಿದೆ.