ಕಲಬುರಗಿ: ಅಣ್ಣ ತಮ್ಮರಿಬ್ಬರು ಆರೋಪ ಮತ್ತು ಪತ್ಯಾರೋಪಗಳ ಸುರಿಮಳೆ ಸುರಿಸುತ್ತಿದ್ದಾರೆ. ಮಾತುಕತೆಗೆ ಬಗ್ಗುತ್ತಿಲ್ಲ. ಸಂಧಾನಕ್ಕೆ ಡೋಂಟ್ಕೇರ್. ಹೌದು ಜಿಲ್ಲೆಯ ಅಫಜಲಪುರ(Afzalpur) ಕ್ಷೇತ್ರದ ಚುನಾವಣೆ(Election) ಈ ಬಾರಿ ತೀವ್ರ ಜಿದ್ದಾಜಿದ್ದಿನ ಕಣವಾಗಿದೆ. ಇಷ್ಟು ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಡುವೆ ನಡೆಯುತ್ತಿದ್ದ ಪೈಪೋಟಿಯನ್ನ ನೋಡುತ್ತಿದ್ದ ಕ್ಷೇತ್ರದ ಜನರು ಇದೀಗ ಸಹೋದರರ ನಡುವೆ ನಡೆಯುತ್ತಿರುವ ಪೈಪೋಟಿಯನ್ನು ನೋಡುತ್ತಿದ್ದಾರೆ. ಅಫಜಲಪುರ ಬಿಜೆಪಿ ಟಿಕೆಟ್ಗಾಗಿ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್(Malikayya Guttedar) ಮತ್ತು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ನಿತಿನ್ ಗುತ್ತೇದಾರ್(Nitin Guttedar)ನಡುವೆ ಬಿಗ್ ಪೈಟ್ ಆರಂಭವಾಗಿತ್ತು. ಆದ್ರೆ, ಬಿಜೆಪಿ ಹೈಕಮಾಂಡ್, ಅಳೆದು ತೂಗಿ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ಗೆ ಬಿಜೆಪಿ ಟಿಕೆಟ್ ನೀಡಿದೆ. ಇದು ಅವರ ಖಾಸಾ ಸಹೋದರ ನಿತಿನ್ ಗುತ್ತೇದಾರ್ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು ಕಳೆದ ಕೆಲ ವರ್ಷಗಳಿಂದ ನಾನು ಕ್ಷೇತ್ರದಲ್ಲಿ ಓಡಾಡುತ್ತಿದ್ದೇನೆ. ಇನ್ನು ತನ್ನ ಸಹೋದರ ಮಾಲೀಕಯ್ಯ ಗುತ್ತೇದಾರ್ ಕೂಡ ಈ ಬಾರಿ ಟಿಕೆಟ್ ನನಗೆ ಬಿಟ್ಟು ಕೋಡುವುದಾಗಿ ಪ್ರಮಾಣ ಮಾಡಿ ಹೇಳಿದ್ದರು. ಆದ್ರೆ, ಇದೀಗ ಅವರೇ ಟಿಕೆಟ್ ಪಡೆದಿದ್ದಾರೆ. ಹೀಗಾಗಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೆನೆ ಎಂದಿದ್ದಾರೆ. ಜೊತೆಗೆ ಈಗಾಗಲೇ ಒಂದು ಸಲ ನಾಮಪತ್ರ ಸಲ್ಲಿಸಿರುವ ನಿತಿನ್ ಗುತ್ತೇದಾರ್, ಇಂದು(ಏ.19) ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡಿ ನಾಮಪತ್ರ ಸಲ್ಲಿಸಲು ಸಿದ್ದತೆ ಮಾಡಿಕೊಂಡಿದ್ದಾರೆ.
ಇನ್ನು ನಿತಿನ್ ಗುತ್ತೇದಾರ್ ಈ ಹಿಂದೆ ಕಲಬುರಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಕೂಡ ಕೆಲಸ ಮಾಡಿದ್ದಾರೆ. ಮಾಲೀಕಯ್ಯ ಗುತ್ತೇದಾರ್ ಅವರ ಪ್ರತಿಯೊಂದು ಚುನಾವಣೆಯಲ್ಲಿ ಸಕ್ರೀಯವಾಗಿ ಕೆಲಸ ಮಾಡುತ್ತಿದ್ದ ನಿತಿನ್ ಗುತೇದಾರ್, ಈ ಬಾರಿ ಬಿಜೆಪಿ ಟಿಕೆಟ್ ಸಿಗದೇ ಇದ್ದಿದ್ದಕ್ಕೆ, ಬಿಜೆಪಿ ಮತ್ತು ಸಹೋದರನ ವಿರುದ್ದವೇ ಬಂಡಾಯವೆದ್ದು ಪಕ್ಷೇತರವಾಗಿ ಸ್ಪರ್ಧಿಸುತ್ತಿದ್ದಾರೆ. ತಮ್ಮ ಸಹೋದರನ ವಿರುದ್ದವೇ ಅನೇಕ ಆರೋಪಗಳನ್ನು ಮಾಡಿರೋ ನಿತಿನ್ ಗುತ್ತೇದಾರ್, ತಮ್ಮ ಸಹೋದರನೇ ಬೇಕಾದ್ರೆ ಟಿಕೆಟ್ ಬಿಟ್ಟು ಕೊಡಲಿ, ನಾನು ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದಿದ್ದಾರೆ.
ಇತ್ತ ಸಹೋದರ ನಿತಿನ್ ಗುತ್ತೇದಾರ್ ಅವರ ಮನವೊಲಿಕೆಯ ಕಸರತ್ತನ್ನು ಮಾಲೀಕಯ್ಯ ಗುತ್ತೇದಾರ್ ಆರಂಭಿಸಿದ್ದಾರೆ. ಸ್ವತಃ ನಿತಿನ್ ಗುತ್ತೇದಾರ್ ಮನೆಗೆ ಹೋಗಿ, ತನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಆದ್ರೆ, ನೀನೆ ನನಗೆ ಬೆಂಬಲಿಸಬೇಕು ಎಂದು ನಿತಿನ್ ಗುತ್ತೇದಾರ್ ಹೇಳುವ ಮೂಲಕ ಚುನಾವಣೆ ಕಣದಿಂದ ಹಿಂದೆ ಸರಿಯೋದಿಲ್ಲ ಎನ್ನುವ ಸಂದೇಶ ನೀಡಿದ್ದಾರೆ. ಇನ್ನು ತನ್ನ ಸಹೋದರನಿಗೆ ನಾನೇ ರಾಜಕೀಯವಾಗಿ ಬೆಳಸಿದ್ದೆ. ಮುಂದಿನ ಉತ್ತರಾಧಿಕಾರಿ ನೀನೆ ಎಂದು ಹೇಳಿದ್ದೆ. ಆದರೂ ಕೂಡ ತನ್ನ ಸಹೋದರ ಹಠಕ್ಕೆ ಬಿದ್ದಿದ್ದಾನೆ. ಕೆಲವರ ಮಾತು ಕೇಳಿ ಈ ರೀತಿಯಾಗಿ ಮಾತನಾಡುತ್ತಿದ್ದಾನೆ ಎಂದು ಮಾಲೀಕಯ್ಯ ಗುತ್ತೇದಾರ್ ಹೇಳಿದ್ದಾರೆ.
ಹುಟ್ಟುತ್ತಾ ಸಹೋದರರು, ಬೆಳೆಯುತ್ತಾ ದಾಯಾದಿಗಳು ಎನ್ನುತ್ತಾರೆ. ಅದರಂತೆ ಇಲ್ಲಿ ರಾಜಕೀಯಕ್ಕಾಗಿ ಗುತ್ತೇದಾರ್ ಕುಟುಂಬ ಹೋಳಾಗಿದ್ದು, ಸಹೋದರರೇ ಪರಸ್ಪರ ಅಖಾಡಕ್ಕಿಳದಿದ್ದಾರೆ. ಆದ್ರೆ, ಈ ರಾಜಕೀಯ ಅಖಾಡದಲ್ಲಿ ಯಾರು ಗೆಲ್ತಾರೆ, ಕ್ಷೇತ್ರದ ಜನರು ಯಾರಿಗೆ ಆಶಿರ್ವಾದ ಮಾಡುತ್ತಾರೆ ಎನ್ನುವುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.
ವರದಿ: ಸಂಜಯ್ ಟಿವಿ9 ಕಲಬುರಗಿ
ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ