ಕಲಬುರಗಿ, ಆಗಸ್ಟ್.19: ಜಿಲ್ಲೆಯ ಜೇವರ್ಗಿ ಪುರಸಭೆಯ 13 ಜನ ಬಿಜೆಪಿ ಸದಸ್ಯರು JDSಗೆ ಸೇರುವ ಮೂಲಕ ಶಾಕ್ ಕೊಟ್ಟಿದ್ದಾರೆ. ನಿನ್ನೆ ಬೆಂಗಳೂರಿನ JDS ಕಚೇರಿಯಲ್ಲಿ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಅವರ ನೇತೃತ್ವದಲ್ಲಿ 13 ಜನ JDS ಸೇರ್ಪಡೆಯಾಗಿದ್ದಾರೆ.
ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ಅವರು ಬಿಗ್ ಆಪರೇಷನ್ ಮಾಡಿ ಬಿಜೆಪಿ ಸದಸ್ಯರನ್ನ ಜೆಡಿಎಸ್ಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. 17 ಬಿಜೆಪಿ ಸದಸ್ಯರಲ್ಲಿ 13 ಜನರನ್ನು ಸೆಳೆದು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಈ ಮೂಲಕ ಸ್ಥಳೀಯ ಬಿಜೆಪಿ ನಾಯಕರಿಗೆ ಶಾಕ್ ಕೊಟ್ಟಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದ ಹಿನ್ನಲೆ ದೊಡ್ಡಪ್ಪಗೌಡ ಅವರು ಜೆಡಿಎಸ್ನಿಂದ ಸ್ಪರ್ಧಿಸಿದ್ದರು.
ಇದನ್ನೂ ಓದಿ: ಎರಡನೇ ಮಹಡಿಯಿಂದ ಎಸಿ ಬಾಕ್ಸ್ ತಲೆ ಮೇಲೆ ಬಿದ್ದು ಯುವಕ ಸಾವು
2008ರಲ್ಲಿ ಮಾಜಿ ಸಿಎಂ ಧರಂ ಸಿಂಗ್ ಅವರ ವಿರುದ್ಧ ಸ್ಪರ್ಧೆ ಮಾಡಿ ಗೆದ್ದು ಬೀಗಿದ್ದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್ ಅವರಿಗೆ ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಿರಲಿಲ್ಲ. ಇದರಿಂದ ಕಣ್ಣೀರು ಹಾಕಿದ್ದ ದೊಡ್ಡಪ್ಪಗೌಡ ಅವರು ಬಿಜೆಪಿ ವಿರುದ್ಧ ಕೆಂಡಕಾರಿದ್ದರು. ನಾನು 20 ವರ್ಷ ಪಕ್ಷ ಕಟ್ಟಿದೆ. ನಮ್ಮ ತಂದೆ ಕೂಡ ಇದೇ ಪಕ್ಷಕ್ಕೆ ದುಡಿದಿದ್ದರು. ನಮ್ಮ ಕಾರ್ಯಕರ್ತರಿಗೆ ನೋವಾದಾಗ ನಾನು ಯಾಕೆ ಆ ಪಕ್ಷದಲ್ಲಿ ಇರಬೇಕು. ಈಗ ನಾನು ನನ್ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದರು. ಸದ್ಯ ಇದೀಗ ತಮ್ಮ ಸೇಡನ್ನು ತೀರಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಮೈತ್ರಿ ಮೈತ್ರಿ ಎಂದು ಓಡಾಡುತ್ತಿರುವ ಬಿಜೆಪಿ-ಜೆಡಿಎಸ್ ಮಿತ್ರ ಪಕ್ಷದಲ್ಲೇ ಬಿಗ್ ಆಪರೇಷನ್ ನಡೆದಿದೆ. ದೊಡ್ಡಪ್ಪಗೌಡ ಪಾಟೀಲ್ ಅವರು 17 ಬಿಜೆಪಿ ಸದಸ್ಯರಿಗೆ ಗಾಳ ಹಾಕಿದ್ದು 13 ಸದಸ್ಯರನ್ನು ಜೆಡಿಎಸ್ಗೆ ಸೆಳೆದಿದ್ದಾರೆ. ಇದು ಸ್ಥಳೀಯ ಬಿಜೆಪಿ ಸದಸ್ಯರಿಗೆ ಶಾಕ್ ತಂದಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ