ಸಚಿವ ಸ್ಥಾನ ಅಥವಾ ಡಿಸಿಎಂ ಸ್ಥಾನದ ಆಕಾಂಕ್ಷಿ ನಾನಲ್ಲ: ಬಿ ವೈ ವಿಜಯೇಂದ್ರ
Karnataka Politics: ನಾನು ಕಲಬುರಗಿ ಅಳಿಯನಾಗಿ ಈ ಭಾಗಕ್ಕೆ ನ್ಯಾಯ ದೊರಕಿಸಲು ಪ್ರಯತ್ನಿಸುತ್ತೇನೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರೂ ಆಗಿರುವ ಬಿ.ವೈ.ವಿಜಯೇಂದ್ರ ತಿಳಿಸಿದರು.
ಕಲಬುರಗಿ: ನಾನು ಯಾವುದೇ ಹುದ್ದೆ ಹುಡುಕಿಕೊಂಡು ಹೋಗಿಲ್ಲ. ಬಿಜೆಪಿ ಉಪಾಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ. ನಾನು ಸಚಿವ, ಡಿಸಿಎಂ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ. ಮಾಜಿ ಸಿಎಂ, ತಂದೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡುವ ವೇಳೆ ಯಾವುದೇ ಬೇಡಿಕೆ ಇಟ್ಟಿರಲಿಲ್ಲ ಎಂದು ಕಲಬುರಗಿ ನಗರದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದರು.
ನನಗೆ ಇನ್ನೂ ವಯಸ್ಸಿದೆ, ಪಕ್ಷ ಸಂಘಟನೆ ನನ್ನ ಕರ್ತವ್ಯ. ರಾಜ್ಯದಲ್ಲಿ ಸಚಿವ ಸ್ಥಾನದ ಬಗ್ಗೆ ಅಸಮಾಧಾನ ವಿಚಾರವಾಗಿ ಸಿಎಂ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುತ್ತಾರೆ. ಬಿಜೆಪಿಗೆ ಬಂದ 17 ಶಾಸಕರಲ್ಲಿ ಆನಂದ್ ಸಿಂಗ್ ಮೊದಲಿಗರು. ಅವರಿಗೆ ಗೌರವ ನೀಡುವುದು ನಮ್ಮ ಕರ್ತವ್ಯ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ತನ್ನ ಅವಧಿಯನ್ನು ಪೂರೈಸುತ್ತದೆ. ಕಲಬುರಗಿ, ಯಾದಗಿರಿಗೆ ಮಂತ್ರಿ ಸ್ಥಾನ ಸಿಗಬೇಕಿತ್ತು. ನಾನು ಕಲಬುರಗಿ ಅಳಿಯನಾಗಿ ಈ ಭಾಗಕ್ಕೆ ನ್ಯಾಯ ದೊರಕಿಸಲು ಪ್ರಯತ್ನಿಸುತ್ತೇನೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರೂ ಆಗಿರುವ ಬಿ.ವೈ.ವಿಜಯೇಂದ್ರ ತಿಳಿಸಿದರು.
ವಿಜಯೇಂದ್ರ ಸರ್ಕಾರದಲ್ಲಿ ಇನ್ನೂ ಹಸ್ತಕ್ಷೇಪ ಮಾಡುತ್ತಿದ್ದಾರೆ: ಶಾಸಕ ಯತ್ನಾಳ್ ಹುಬ್ಬಳ್ಳಿ: ಬಿ.ವೈ.ವಿಜಯೇಂದ್ರ ಸರ್ಕಾರದಲ್ಲಿ ಇನ್ನೂ ಹಸ್ತಕ್ಷೇಪ ಮಾಡುತ್ತಿದ್ದಾರೆ. ಕಾವೇರಿಯಲ್ಲಿನ ಕೆಲವು ದೃಶ್ಯಗಳ ಬಗ್ಗೆ ನನಗೆ ಮಾಹಿತಿ ಇದೆ. ಇನ್ನೊಂದು ವಾರ ಕಾಯಿರಿ ಎಲ್ಲವನ್ನೂ ಹೇಳುವೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಹಠ ಬಿಟ್ಟುಕೊಡುವುದಿಲ್ಲ ಎಂಬ ಸುಳಿವು ನೀಡಿದರು. ಈಗ ಹಿಂದು ವಿರೋಧಿ ಸಿಎಂ ಆಗಿದ್ದಾರೆ ಎಂಬ ನೋವು ಕಾರ್ಯಕರ್ತರಲ್ಲಿದೆ. ಯಾರು ಹಿಂದೆ ಹೊಡಿಸಿದದ್ದರು, ಯಾರು ಹೊಡೆತ ತಿಂದಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಪಕ್ಷಕ್ಕೆ ಹಾನಿ ಆಗಬಾರದು ಎಂದು ಹೈಕಮಾಂಡ್ ಈ ನಿರ್ಣಯ ಕೈಗೊಂಡಿದೆ. ಹಿಂದೆ ಎಷ್ಟೋ ಜನ ಕಮ್ಯುನಿಷ್ಟ್ ಪಕ್ಷದಲ್ಲಿ ಇದ್ದವರು ಬಿಜೆಪಿಗೆ ಬಂದಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಹೋಗುವ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ಹೇಳಿದರು.
ನಮ್ಮ ಬೇಡಿಕೆ ಸಿಎಂ ಬದಲಾವಣೆ ಆಗಬೇಕು ಅಂತಿತ್ತು. ಈಗ ನಾಯಕತ್ವ ಬದಲಾವಣೆ ಆಗಿದೆ. ಒಬ್ಬ ನಾಯಕ ತನ್ನ ಛಾಪು ಇಟ್ಟುಕೊಳ್ಳಬೇಕು. ಸಿಎಂ ಬಸವರಾಜ ಬೊಮ್ಮಾಯಿ ಮಾಜಿ ಸಿಎಂ ಯಡಿಯೂರಪ್ಪ ಅವರ ನೆರಳು ಆಗಲ್ಲ. ಅವರಿಗೆ ಸ್ವಲ್ಪ ಸಮಯ ಕೊಡಿ ಎಂದು ಶಾಸನ ಬಸನಗೌಢ ಪಾಟಿಲ್ ಯತ್ನಾಳ್, ಹಿಂದೆ ಮೂರು ಜನ ಡಿಸಿಎಂ ಆಗಿದ್ರು ಅವರು ನಮ್ಮ ನೇತೃತ್ವದಲ್ಲಿ ಚುನಾವಣೆ ನಡೆಯುತ್ತೆ ಅಂತಿದ್ರು. ಈಗ ಡಿಸಿಎಂ ಸ್ಥಾನವೇ ಇಲ್ಲ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ:
ಮಾಜಿ ಸಿಎಂ ಯಡಿಯೂರಪ್ಪ ಬೆಂಗಳೂರು ಅಭಿವೃದ್ಧಿಗಾಗಿ ಕೈಗೊಂಡ ಯೋಜನೆ ಮುಂದುವರಿಕೆ: ಸಿಎಂ ಬೊಮ್ಮಾಯಿ ಸೂಚನೆ
(BY Vijayendra says I am not the aspirants of a ministerial position or a DCM position in Kalaburagi)