ಕಲಬುರಗಿ: ತಾಲೂಕಿನ ಮಾಡಿಹಾಳ ತಾಂಡಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ (ನ 14) ‘ವಿವೇಕ ಯೋಜನೆ’ಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇದು ಸದಾ ಕಾಲ ನೆನಪಿಡುವ ದಿನವಾಗಿದೆ. ಮಕ್ಕಳಿಗೆ ಮೂಲ ಸೌಕರ್ಯ ಒದಗಿಸುವ ಮಹತ್ವದ ಕೆಲಸಕ್ಕೆ ನಾವು ಮುಂದಡಿ ಇಟ್ಟಿದ್ದೇವೆ. ಕರ್ನಾಟಕ ಉದಯವಾದ ಮೇಲೆ ಒಂದೇ ವರ್ಷದಲ್ಲಿ ಇಷ್ಟೊಂದು ಕೊಠಡಿ ನಿರ್ಮಿಸುವ ಕೆಲಸ ಎಂದಿಗೂ ನಡೆದಿರಲಿಲ್ಲ. ಆದರೆ ನಮ್ಮ ಸರ್ಕಾರವು ಒಂದೇ ಬಾರಿಗೆ 7,601 ಕೊಠಡಿ ನಿರ್ಮಿಸಲು ಮುಂದಾಗಿದೆ. ಇದೊಂದು ದಾಖಲೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಎರಡು ಸಾವಿರ ಕೊಠಡಿಗಳನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರ್ಮಿಸಲಿದ್ದೇವೆ. ಒಂದು ಸಲ ಒಳ್ಳೆಯ ಕೆಲಸಗಳು ಆರಂಭವಾದರೆ ಅದು ನಿರಂತರವಾಗಿ ನಡೆಯುತ್ತದೆ. ಮುಂದಿನ ಅವಧಿಗೂ ನಮ್ಮದೇ ಸರ್ಕಾರ ಬರುತ್ತದೆ. ನಾಡಿನ ಕಟ್ಟಕಡೆಯ ವ್ಯಕ್ತಿಯ ಮಕ್ಕಳಿಗೂ ಶಿಕ್ಷಣ ಸಿಗುವಂತಾಗಲು ನಾವು ಶ್ರಮಿಸುತ್ತೇವೆ ಎಂದು ಆಶ್ವಾಸನೆ ನೀಡಿದರು.
ರಾಜ್ಯದ ಸರ್ಕಾರಿ ಶಾಲಾ ಕೊಠಡಿಗಳಿಗೆ ಬಣ್ಣ ಹಚ್ಚುವ ವಿಚಾರದಲ್ಲಿ ಎದ್ದಿರುವ ವಿವಾದ ಕುರಿತು ಪ್ರತಿಕ್ರಿಯಿಸಿದ ಅವರು, ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಕೈಹಾಕಿದರೂ ಅದನ್ನು ವಿವಾದವಾಗಿಸಲು ಕೆಲವರು ಯತ್ನಿಸುತ್ತಾರೆ. ಹೀಗೆ ಟೀಕೆ ಮಾಡುವವರಿಗೆ ಅಭಿವೃದ್ಧಿ ಚಟುವಟಿಕೆಗಳು ಬೇಕಿಲ್ಲ. ಶಾಲಾ ಕೊಠಡಿಗಳ ನಿರ್ಮಾಣದಲ್ಲೂ ರಾಜಕಾರಣ ಮಾಡುವುದು ಸರಿಯಲ್ಲ. ಕೇಸರಿ ಎಂದರೆ ನಿಮಗೆ ಭಯವೇಕೆ? ನಮ್ಮ ರಾಷ್ಟ್ರಧ್ವಜದಲ್ಲೂ ಕೇಸರಿ ಇದೆ. ಸ್ವಾಮಿ ವಿವೇಕಾನಂದರು ಕೂಡ ಕೇಸರಿ ಬಟ್ಟೆ ಹಾಕಿಕೊಳ್ಳುತ್ತಿದ್ದರು ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಕ್ಕಳಿಗೆ ಸಿಎಂ ಬೊಮ್ಮಾಯಿ ಸಿಹಿ ತಿನ್ನಿಸಿದರು.
15 ಸಾವಿರ ಶಿಕ್ಷಕರ ನೇಮಕ
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ಕರ್ನಾಟಕದಲ್ಲಿ ಬಿಜೆಪಿಯು ಅಧಿಕಾರಕ್ಕೆ ಬಂದಾಗಲೆಲ್ಲವೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ‘ವಿವೇಕ ಯೋಜನೆ’ಯು ಶಿಕ್ಷಣಕ್ಕೆ ಆದ್ಯತೆ ನೀಡುವ ಪ್ರಯತ್ನದ ಒಂದು ಭಾಗವಷ್ಟೇ ಆಗಿದೆ ಎಂದು ಹೇಳಿದರು. ಮಕ್ಕಳಿಗೆ ವಿವೇಕಾನಂದರ ವಿಚಾರದ ಬಗ್ಗೆ ಪರಿಚಯವಾಗಬೇಕು. ಹೀಗಾಗಿ ವಿವೇಕ ಯೋಜನೆ ಎಂಬ ಹೆಸರನ್ನು ಇಡಲಾಗಿದೆ. ಎಲ್ಲಾ ತಾಲೂಕುಗಳಲ್ಲಿಯೂ ವಿವೇಕ ಶಾಲಾ ಕೊಠಡಿಗಳನ್ನು ನಿರ್ಮಿಸುತ್ತೇವೆ. ಮುಂದಿನ ತಿಂಗಳು 15 ಸಾವಿರ ಶಿಕ್ಷಕರಿಗೆ ನೇಮಕಾತಿ ಪತ್ರ ವಿತರಿಸಲಾಗುವುದು. ಕಲ್ಯಾಣ ಕರ್ನಾಟಕ ಭಾಗದಲ್ಲಿ 5 ಸಾವಿರ ಶಿಕ್ಷಕರನ್ನು ನೇಮಿಸಲಾಗುವುದು ಎಂದು ಹೇಳಿದರು.
ಮಕ್ಕಳಿಗೆ ಧ್ಯಾನ ಏಕೆ? ಯೋಗ ಏಕೆ ಎಂದೆಲ್ಲಾ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆದರೆ ಅವರ ಕೈಲಿ ಅಧಿಕಾರವಿದ್ದಾಗ ಅವರು ಕೇವಲ 4,000 ಕೊಠಡಿಗಳನ್ನು ನಿರ್ಮಿಸಿದ್ದರು. ಆದರೆ ಈಗ ನಾವು ಇದರ ದುಪ್ಪಟ್ಟು ಸಂಖ್ಯೆಯ ಕೊಠಡಿಗಳನ್ನು ನಿರ್ಮಿಸುತ್ತಿದ್ದೇವೆ. ವಿವೇಕ ಯೋಜನೆಯಡಿ ನಿರ್ಮಿಸುವ ಕೊಠಡಿಗಳಿಗೆ ಹೋದ ಮೇಲೆ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ ಬಲಿಷ್ಠವಾಗಬೇಕು. ವಿವೇಕ ಎಂದರೆ ಮಕ್ಕಳ ಜ್ಞಾನ ಹೆಚ್ಚಾಗಬೇಕು, ಅವರಿಗೆ ವಿವೇಕಾನಂದರ ವಿಚಾರಗಳ ಪರಿಚಯವಾಗಬೇಕು. ಹೀಗಾಗಿ ವಿವೇಕ ಅಂತ ಹೆಸರು ಇಡಲಾಗಿದೆ. ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ವಿವೇಕ ಶಾಲಾ ಕೊಠಡಿಗಳ ಶಂಕುಸ್ಥಾಪನೆ ನಡೆಯುತ್ತಿದೆ. ಕೊರೊನಾ ಕಾಲದಲ್ಲಿ ಯಾಕೆ ಶಾಲೆ ಪ್ರಾರಂಭಿಸ್ತೀರಿ ಅಂತ ಅನೇಕರು ಹೇಳಿದ್ದರು. ಆದರೆ ದೇಶದಲ್ಲಿ ಮೊದಲು ಶಾಲೆ ಆರಂಭಿಸಿದ್ದು ಕರ್ನಾಟಕ ಎಂದು ನೆನಪಿಸಿಕೊಂಡರು.
ಕೇಸರಿ ಬಣ್ಣ ಹಚ್ಚಲು ನಾನು ಆದೇಶ ಮಾಡಿಲ್ಲ ಎಂದು ಸಚಿವ ಬಿ.ಸಿ.ನಾಗೇಶ್ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಕೊಠಡಿ ನಿರ್ಮಿಸುವ ಎಂಜಿನಿಯರ್ ಕೇಸರಿ ಬಣ್ಣ ಹಚ್ಚಿದರೆ ಹಚ್ಚಬಹುದು. ಅದರಿಂದ ತಪ್ಪೇನೂ ಇಲ್ಲ. ವಿರೋಧ ಪಕ್ಷಗಳು ಉದ್ದೇಶಪೂರ್ವಕವಾಗಿ ಪ್ರತಿಯೊಂದನ್ನೂ ವಿವಾದ ಮಾಡುತ್ತಿವೆ ಎಂದು ವಿಷಾದಿಸಿದರು.
ಸಿಎಂಗೆ ಮಕ್ಕಳ ಮನವಿ
ಕಲಬುರಗಿ ತಾಲ್ಲೂಕಿನ ಮಾಡಬೂಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸುಜಾತಾ ಮುಖ್ಯಮಂತ್ರಿಗೆ ವಿದ್ಯಾರ್ಥಿಗಳ ಪರವಾಗಿ ಮನವಿ ಸಲ್ಲಿಸಿದರು. ತಮಗೆ ಸೈಕಲ್ ಬೇಕು, ಬಸ್ ವ್ಯವಸ್ಥೆ ಮಾಡಬೇಕು. ಎರಡು ವರ್ಷಗಳಿಂದ ಸೈಕಲ್ ಕೊಟ್ಟಿಲ್ಲ. ಶಾಲೆಗೆ ಹೋಗಲು ತೊಂದರೆಯಾಗುತ್ತಿದೆ. ಮುಖ್ಯಮಂತ್ರಿ ನಮ್ಮ ಸಮಸ್ಯೆ ಪರಿಹರಿಸಬೇಕು ಎಂದು ಅವರು ಮನವಿ ಸಲ್ಲಿಸಿದರು.
ಪೇಸಿಎಂ ಪೋಸ್ಟರ್
ಮುಖ್ಯಮಂತ್ರಿ ಭೇಟಿ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಹಾಕಿದ್ದರು. ಕಾಂಗ್ರೆಸ್ ಮುಖಂಡರು ಸಿಎಂಗೆ ಕಪ್ಪು ಬಟ್ಟೆ ಪ್ರದರ್ಶನ ಸಾಧ್ಯತೆಯಿದ್ದ ಹಿನ್ನೆಲೆಯಲ್ಲಿ ಸಿಎಂ ಸಂಚರಿಸುವ ಸೇಡಂ ರಸ್ತೆಯಲ್ಲಿ ಪೊಲೀಸರು ವಾಹನಗಳನ್ನು ತಪಾಸಣೆ ಮಾಡಲು ಮುಂದಾಗಿದ್ದಾರೆ. ಈ ನಡುವೆ ನಗರದ ವಿವಿಧೆಡೆ ನಿನ್ನೆ ರಾತ್ರಿಯೂ ಪೇಸಿಎಂ ಪೋಸ್ಟರ್ಗಳು ಕಂಡುಬಂದಿದ್ದವು. ಈ ಹಿನ್ನೆಲೆಯಲ್ಲಿ ಎಲ್ಲ ರಸ್ತೆಗಳಲ್ಲಿಯೂ ಪೊಲೀಸರು ತಪಾಸಣೆ ನಡೆಸಿದರು. ಕಲಬುರಗಿ ನಗರದ ಸಂಗಮೇಶ್ವರ ಕಾಲೋನಿ, ಟ್ಯಾಂಕ್ ಬಂಡ್ ರಸ್ತೆ ಸೇರಿದಂತೆ ಅನೇಕ ಕಡೆ ಪೇಸಿಎಂ ಪೋಸ್ಟರ್ಗಳು ರಾರಾಜಿಸಿದವು.