Nandini Milk Price: ಹಾಲಿನ ದರ ಏರಿಕೆ ವಿಚಾರವಾಗಿ ನವೆಂಬರ್ 20ರ ನಂತರ ಸಭೆ ಕರೆದು ತೀರ್ಮಾನ: ಸಿಎಂ ಬೊಮ್ಮಾಯಿ
ನಂದಿನಿ ಹಾಲಿನ ದರ ಪ್ರತಿ ಲೀಟರ್ಗೆ 3 ರೂ. ಹೆಚ್ಚಳ ವಿಚಾರವಾಗಿ ನವೆಂಬರ್ 20ರ ನಂತರ ಸಭೆ ಕರೆದು ನಿರ್ಧರಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಕಲಬುರಗಿ: ಹಾಲಿನ ದರ ಏರಿಕೆ ವಿಚಾರವಾಗಿ ಸರ್ಕಾರ ಮತ್ತು ಕೆಎಂಎಫ್‌ನ ನಡುವಿನ ಗುದ್ದಾಟದಿಂದ ಜನರು ಹೈರಾಣಾಗುತ್ತಿದ್ದಾರೆ. ಇತ್ತ ಕೆಎಂಎಫ್ ಈಗಾಗಲೇ ನಂದಿನಿ ಹಾಲಿನ ದರವನ್ನು 3 ರೂ ಏರಿಸಿ ಆದೇಶ ಹೊರಡಿಸಿದೆ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ನಂದಿನಿ ಹಾಲಿನ ದರ ಪ್ರತಿ ಲೀಟರ್ಗೆ 3 ರೂ. ಹೆಚ್ಚಳ ವಿಚಾರವಾಗಿ ನವೆಂಬರ್ 20ರ ನಂತರ ಸಭೆ ಕರೆದು ನಿರ್ಧರಿಸುತ್ತೇವೆ. ಜನರಿಗೆ ಹೊರೆಯಾಗದ ರೀತಿಯಲ್ಲಿ ಹಾಲಿನ ದರ ಹೆಚ್ಚಿಸುತ್ತೇವೆ ಎಂದು ಸೇಡಂ ಪಟ್ಟಣದಲ್ಲಿ ಹೇಳಿದ್ದಾರೆ.
16 ಹಾಲು ಒಕ್ಕೂಟಗಳಿಂದ ಕೆಎಂಎಫ್ಗೆ ಮನವಿ
ರೈತರು ಸಂಕಷ್ಟದಲ್ಲಿದ್ದಾರೆ ಹೀಗಾಗಿ ಪ್ರತಿ ಲೀಟರ್ಗೆ 3 ರೂಗೆ ಏರಿಕೆ ಮಾಡಬೇಕೆಂದು 16 ಜಿಲ್ಲಾ ಹಾಲು ಒಕ್ಕೂಟಗಳು ಕೆಎಂಎಫ್ಗೆ ಮನವಿ ಮಾಡಿದ್ದವು. ಅಲ್ಲದೆ ದರ ಏರಿಕೆಯ ಹಣವನ್ನು ರೈತರಿಗೆ ನೀಡುವುದಾಗಿ ಹೇಳಿದ್ದವು. ಈ ಕುರಿತು ಹಿಂದೊಮ್ಮೆ ಬೆಂಗಳೂರಿನಲ್ಲಿ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಕೆಎಂಎಫ್ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆದಿತ್ತು. ಸಭೆಯಲ್ಲಿ ಈ ಬಗ್ಗೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿತ್ತು. ಕೆಎಂಎಫ್‌ನ ಎಲ್ಲ 16 ಜಿಲ್ಲಾ ಹಾಲು ಒಕ್ಕೂಟಗಳು ಹಾಲಿನ ದರ ಹೆಚ್ಚಳ ಮಾಡುವುದಕ್ಕೆ ಬೆಂಬಲ ವ್ಯಕ್ತಪಡಿಸಿದ್ದವು.
ಸಚಿವ ಎಸ್.ಟಿ. ಸೋಮಶೇಖರ್ ಭರವಸೆ
ಹಾಲಿನ ಬೆಲೆ ಹೆಚ್ಚಳ ಸೇರಿದಂತೆ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ರಾಜ್ಯ ಸರ್ಕಾರದ ಅನುಮೋದನೆ ಪಡೆದುಕೊಳ್ಳಬೇಕು. ಹೀಗಾಗಿ ಈ ಪ್ರಸ್ತಾವನೆಯನ್ನು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರ ಕಿವಿಗು ಹಾಕಲಾಗಿತ್ತು. ಹೀಗಾಗಿ ಎಸ್.ಟಿ. ಸೋಮಶೇಖರ್ ವಿಧಾನಪರಿಷತ್ನಲ್ಲಿ ಲೀಟರ್ ಹಾಲಿಗೆ 3 ರೂ. ಹೆಚ್ಚಳ ಮಾಡಲು ಕೆಎಂಎಫ್ನಲ್ಲೂ ತೀರ್ಮಾನ ಆಗಿದೆ. ತಕ್ಷಣ ತೀರ್ಮಾನ ತೆಗೆದುಕೊಳ್ಳಲು ಸಿಎಂ ಗಮನಕ್ಕೆ ತರುವೆ ಎಂದಿದ್ದರು.
ಭರವಸೆ ನೀಡಿ 8 ತಿಂಗಳು ಕಳೆದರು ಸರ್ಕಾರ ಹಾಲಿನ ದರ ಏರಿಕೆ ಬಗ್ಗೆ ಚಕಾರ ಎತ್ತಿರಲಿಲ್ಲ. ಇದರಿಂದ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ಇರುವ ಅಧಿಕಾರವನ್ನು ಬಳಸಿಕೊಂಡು ದರ ಹೆಚ್ಚಳದ ಆದೇಶ ಮಾಡಬೇಕು ಎಂದು ಒಕ್ಕೂಟಗಳು ಅಧ್ಯಕ್ಷರ ಮೇಲೆ ಒತ್ತಡ ಹೇರಿದ್ದವು. ನಂತರ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ ಅಕ್ಟೋಬರ್ 31 ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ಶೀಘ್ರದಲ್ಲೇ ಹಾಲಿನ ದರ ಏರಿಸುವುದಾಗಿ ಹೇಳಿದ್ದರು. ಹೇಳಿಕೆ ನೀಡಿ 15 ದಿವಸ ಕಳೆಯುವುದರ ಒಳಗಾಗಿ ಕೆಎಂಎಫ್ ಹಾಲಿನ ದರವನ್ನು ಏರಿಕೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:11 pm, Mon, 14 November 22