ಕಲಬುರಗಿ: ಎಲ್ಲವು ಸರಿಯಿದ್ದರು ಕೂಡ ಅನೇಕರು ಜೀವನ ನಡೆಸಲು ಪರದಾಡುತ್ತಾರೆ. ಆದರೆ ಇಲ್ಲೋರ್ವ ಯುವಕ, ಹುಟ್ಟುತ್ತಲೇ ಎರಡು ಕೈಗಳಿಲ್ಲದೆ, ದಿವ್ಯಾಂಗನಾಗಿ ಹುಟ್ಟಿದ್ದನು. ಬದುಕು ಹೇಗೆ ಅನ್ನೋ ದೊಡ್ಡ ಚಿಂತೆ ಹೆತ್ತವರನ್ನು ಕಾಡಿತ್ತು. ಆದರೆ ಕಾಲುಗಳನ್ನೇ ತನ್ನ ಕೈಗಳಂತೆ ಬಳಸೋದನ್ನು ಕಲಿತು, ಇದೀಗ ಕಾಲುಗಳಿಂದಲೇ ದ್ವಿಚಕ್ರ ವಾಹನಗಳನ್ನು ರಿಪೇರಿ ಮಾಡುತ್ತಾರೆ. ಮನೆಯ ಕೆಲಸಗಳನ್ನು ಕಾಲುಗಳಿಂದಲೇ ಮಾಡುತ್ತಾರೆ. ಛಲವೊಂದಿದ್ದರೇ ಬದುಕನ್ನು ಹೇಗಾದರೂ ಕಟ್ಟಿಕೊಳ್ಳಬಹುದು ಅನ್ನೋದನ್ನು ತೋರಿಸಿ, ಅನೇಕರಿಗೆ ಮಾದರಿಯಾಗಿದ್ದಾರೆ. ಯುವಕನ ಕೆಲಸಕ್ಕೆ ಸ್ವತಃ ರಾಹುಲ್ ಗಾಂಧಿ ಕೂಡಾ ಪಿಧಾ ಆಗಿದ್ದು, ಯುವಕನಿಗೆ ಮ್ಯಾಕಾನಿಕಲ್ ಕಿಟ್ನ್ನು ಉಡುಗರೆಯಾಗಿ ಕಳುಹಿಸಿದ್ದಾರೆ.
ಈ ಯುವಕನಿಗೆ ಕಾಲುಗಳೇ ಕೈಗಳು!
ಹೌದು ಕಲಬುರಗಿ ನಗರದ ಸ್ಟೇಷನ್ ಬಜಾರ್ ರಸ್ತೆಯ ನಿವಾಸಿಯಾಗಿರುವ 26 ವರ್ಷದ ಅಬ್ದುಲ್ ರೆಹಮಾನ್ಗೆ ಕಾಲುಗಳೇ ಕೈಗಳು. ಕಾಲುಗಳಿಂದಲೇ ಬೈಕ್ ರಿಪೇರಿ ಮಾಡುತ್ತಾರೆ. ಕ್ರಿಕೆಟ್ ಆಡುತ್ತಾರೆ. ಮೊಬೈಲ್ ಬಳಸ್ತಾರೆ. ಮನೆಯ ಕೆಲಸ ಮಾಡುತ್ತಾರೆ. ನಾವು ನೀವೆಲ್ಲಾ ಕೈಗಳಿಂದ ಮಾಡುವ ಅನೇಕ ಕೆಲಸಗಳನ್ನು ಈ ಯುವಕ ಕಾಲುಗಳಿಂದಲೇ ಮಾಡುವ ನೈಪುಣ್ಯತೆಯನ್ನು ಪಡೆದಿದ್ದಾರೆ. ಎರಡು ಕೈಗಳು ಇದ್ದವರು ಕೂಡ ನಾಚುವಂತೆ ಈ ಯುವಕ ತನ್ನ ಕಾಲುಗಳಿಂದಲೇ ಅನೇಕ ಕೆಲಸಗಳನ್ನು ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.
ಅನಿವಾರ್ಯತೆ ಕಲಿಸದ ಬದುಕಿನ ಪಾಠ
ಹೌದು ಅಬ್ದುಲ್ ರೆಹಮಾನ್ಗೆ ಕಾಲುಗಳೇ ಕೈಗಳು ಆಗಲು ಕಾರಣ ಬದುಕಿನ ಅನಿವಾರ್ಯತೆ. ಹೌದು ಹುಟ್ಟುವಾಗ ಎಲ್ಲ ಮಕ್ಕಳಂತೆ ಅಬ್ದುಲ್ ರೆಹಮಾನ್ ಎರಡು ಕಾಲುಗಳು, ಕೈಗಳನ್ನು ಇಟ್ಟುಕೊಂಡು ಹುಟ್ಟಿರಲಿಲ್ಲ. ತಾಯಿಯ ಹೊಟ್ಟೆಯಿಂದ ಜನ್ಮತಾಳಿ ಬರುವಾಗಲೇ ಅವರಿಗೆ ಎರಡು ಕೈಗಳು ಇರಲಿಲ್ಲ. ಮಗನ ಸ್ಥಿತಿ ಕಂಡು ಹೆತ್ತವರು ಕಂಗಾಲಾಗಿದ್ದರು. ಆರಂಭದಲ್ಲಿ ಅಬ್ದುಲ್ ರೆಹಮಾನ್ ಕೂಡಾ ತನಗೆ ಕೈಗಳು ಇಲ್ಲದೇ ಇದ್ದಿದ್ದರಿಂದ ನೊಂದಿದ್ದರು. ಎಲ್ಲರಂತೆ ಆಟವಾಡಲು ಆಗದೆ, ತನ್ನ ಕೆಲಸಗಳನ್ನು ತಾನು ಮಾಡಿಕೊಳ್ಳಲಿಕ್ಕಾಗದೇ ಪರದಾಡಿದ್ದರು. ಹಾಗಂತ ಅದನ್ನೇ ನೆನೆದು ಜೀವನದ ಉತ್ಸಾಹವನ್ನು ಕಳೆದುಕೊಳ್ಳಲಿಲ್ಲಾ. ತಾನು ಬದುಕಬೇಕು, ಇರುವ ಅಂಗಾಗಳನ್ನೇ ಬಳಸಿಕೊಂಡು ಬದಕು ಕಟ್ಟಿಕೊಳ್ಳಬೇಕು ಅಂತ ನಿರ್ಧಾರ ಮಾಡಿ, ಕಾಲುಗಳಿಂದಲೇ ಬರೆಯುವದನ್ನು, ಆಟವಾಡುವದನ್ನು, ಕೆಲಸ ಮಾಡುವದನ್ನು ನಿಧಾನವಾಗಿ ಕರಗತ ಮಾಡಿಕೊಂಡರು. 10ನೇ ತರಗತಿವರಗೆ ಶಾಲೆಗೆ ಹೋದ ಅಬ್ದುಲ್ ರೆಹಮಾನ್, ಶಿಕ್ಷಣ ಅಷ್ಟಾಗಿ ತಲೆಗೆ ಹತ್ತದೇ ಇದ್ದರಿಂದ ಮುಂದಿನ ಶಿಕ್ಷಣವನ್ನು ಪಡೆಯಲಿಲ್ಲ. ನಂತರ ಬದುಕಿಗಾಗಿ ಗ್ಯಾರೇಜ್ ನಲ್ಲಿ ಕೆಲಸ ಮಾಡಲು ಆರಂಭಿಸಿದರು.
ಕಾಲುಗಳಿಂದಲೇ ಮ್ಯಾಕಾನಿಕ್ ಕೆಲಸ ಮಾಡುವ ಅಬ್ದುಲ್ ರೆಹಮಾನ್
ಅಬ್ದುಲ್ ರೆಹಮಾನ್ ಕಾಲುಗಳಿಂದಲೇ ಮೆಕಾನಿಕ್ ಕೆಲಸ ಮಾಡುತ್ತಾರೆ. ದ್ವಿಚಕ್ರ ವಾಹನಗಳನ್ನು ಕಾಲುಗಳಿಂದಲೇ ರಿಪೇರಿ ಮಾಡುತ್ತಾರೆ. ಕಲಬುರಗಿ ನಗರದ ರೈಲ್ವೆ ಸ್ಟೇಷನ್ಗೆ ಹೋಗುವ ರಸ್ತೆಯಲ್ಲಿ ಗ್ಯಾರೇಜ್ವೊಂದರಲ್ಲಿ ಕೆಲಸ ಮಾಡುವ ಅಬ್ದುಲ್ ರೆಹಮಾನ್ ಕೈಗಳು ಇದ್ದವರು ಮಾಡಂವತೆಯೇ ಚಾಕಚಾಕ್ಯತೆಯಿಂದ ಕೆಲಸ ಮಾಡುತ್ತಾರೆ.
ಅಬ್ದುಲ್ ರೆಹಮಾನ್ನನ್ನು ಮಚ್ಚಿಕೊಂಡ ರಾಹುಲ್
ಇನ್ನು ಕರ್ನಾಟಕದಲ್ಲಿ ರಾಹುಲ್ ಗಾಂಧಿ ನೆಡಸಿದ ಭಾರತ್ ಜೋಡೋ ಯಾತ್ರೆಯಲ್ಲಿ ಅಬ್ದುಲ್ ರೆಹಮಾನ್ ಬಾಗಿಯಾಗಿದ್ದರು. ರಾಯಚೂರಿಗೆ ರಾಹುಲ್ ಗಾಂಧಿ ಆಗಮಿಸಿದ್ದಾಗ, ಅಬ್ದುಲ್ ರೆಹಮಾನ್ ಬಾಗಿಯಾಗಿದ್ದರು. ಎರಡು ಕೈಗಳಿಲ್ಲದೇ ಇದ್ದರು ಕೂಡ ಉತ್ಸಾಹದಿಂದ ಬಾಗಿಯಾಗಿದ್ದನ್ನು ಗಮನಿಸಿದ, ರಾಹುಲ್ ಗಾಂಧಿ, ಅಬ್ದುಲ್ ರೆಹಮಾನ್ನ ಕೆಲಸ ನೋಡಿ, ಅಚ್ಚರಿಗೊಂಡಿದ್ದರು. ತಮ್ಮ ಬೆಂಬಲಿಗರ ಮೂಲಕ, ಅಬ್ದುಲ್ ರೆಹಮಾನ್ಗೆ ಮ್ಯಾಕನಿಕಲ್ ಕಿಟ್ವೊಂದನ್ನು ಕೂಡ ರಾಹುಲ್ ಗಾಂಧಿ ಕಳುಹಿಸಿದ್ದಾರೆ.
ನಾನು ಹುಟ್ಟುತ್ತಲೇ ಕೈಗಳಿಲ್ಲದೆ ಹುಟ್ಟಿದೆ. ಆದರೆ ಬದುಕಿನ ಅನಿವಾರ್ಯತೆಯಿಂದ ಕಾಲುಗಳಿಂದಲೇ ಎಲ್ಲಾ ಕೆಲಸಗಳನ್ನು ಮಾಡಲು ಕಲಿತಿದ್ದೇನೆ. ಜೀವನದಲ್ಲಿ ದೊಡ್ಡ ಉದ್ಯಮಿಯಾಗಬೇಕು ಅನ್ನೋ ಕನಸು ಇದೆ. ಆದರೆ ನನಗೆ ಸರ್ಕಾರದ ಯಾವುದೇ ಸವಲತ್ತುಗಳು ಸಿಕ್ಕಿಲ್ಲಾ. ಅನೇಕರು ಸಹಾಯ ಮಾಡಿದ್ದಾರೆ, ಜೀವನದಲ್ಲಿ ಇನ್ನು ಹೆಚ್ಚಿನ ಯಶಸ್ಸುಗಳಿಸುವ ಆಸೆಯಿದೆ ಎಂದು ಅಬ್ದುಲ್ ರೆಹಮಾನ್ ಹೇಳಿದ್ದಾರೆ.
ವರದಿ – ಸಂಜಯ್ ಚಿಕ್ಕಮಠ ಟಿವಿ9 ಕಲಬುರಗಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ