ಸತ್ಯಕ್ಕೂ ಆರ್​ಎಸ್​ಎಸ್​ಗೂ ದೂರ, ನಿಜ ಹೇಳಿದರೆ ಅವರಿಗೆ ಸಿಟ್ಟು ಬರುತ್ತೆ: ಸಿದ್ದರಾಮಯ್ಯ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 14, 2022 | 12:52 PM

ದೇವನೂರು ಮಹದೇವ ಅವರ ಮೇಲೆ ಕೇಸ್ ಹಾಕಿಸುತ್ತಾರೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕೆಲಸ ಎಂದು ತಿಳಿಸಿದರು.

ಸತ್ಯಕ್ಕೂ ಆರ್​ಎಸ್​ಎಸ್​ಗೂ ದೂರ, ನಿಜ ಹೇಳಿದರೆ ಅವರಿಗೆ ಸಿಟ್ಟು ಬರುತ್ತೆ: ಸಿದ್ದರಾಮಯ್ಯ
ಸಿದ್ದರಾಮಯ್ಯ
Follow us on

ಕಲಬುರ್ಗಿ: ದೇವನೂರು ಮಹಾದೇವ ಅವರ ‘ಆರ್​​ಎಸ್​​ಎಸ್​ ಆಳ ಅಗಲ’ ಪುಸ್ತಕವನ್ನು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಪ್ರಬಲವಾಗಿ ಸಮರ್ಥಿಸಿಕೊಂಡರು. ಸೂಕ್ತ ದಾಖಲೆಗಳ ಸಹಿತ ದೇವನೂರರು ಪುಸ್ತಕ ಬರೆದಿದ್ದಾರೆ. ಸತ್ಯ ಹೇಳಿದರೆ ಆರ್​​ಎಸ್​​ಎಸ್​ನವರಿಗೆ ಕೋಪ ಬರುತ್ತೆ. ಅವರಿಗೆ ಸತ್ಯ ಆಗಿ ಬರುವುದಿಲ್ಲ. ಹೀಗಾಗಿ ದೇವನೂರು ಮಹದೇವ ಅವರ ಮೇಲೆ ಕೇಸ್ ಹಾಕಿಸುತ್ತಾರೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕೆಲಸ ಎಂದು ತಿಳಿಸಿದರು. ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ದೇವನೂರರು ಬರೆದ ಪುಸ್ತಕದಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಪಿಎಸ್​ಐ ನೇಮಕಾತಿ ಹಗರಣದಲ್ಲಿ ಅಧಿಕಾರಿಗಳ ಬಂಧನ ಕುರಿತು ಪ್ರತಿಕ್ರಿಯಿಸಿದ ಅವರು, ಅಧಿಕಾರಿಗಳನ್ನು ಬಂಧಿಸಿದರೆ ಸಾಲದು. ಐಪಿಎಸ್​ ಅಧಿಕಾರಿ ಅಮ್ರಿತ್ ಪಾಲ್ ಮತ್ತು ಮಾಜಿ ಡಿವೈಎಸ್​ಪಿ ಶಾಂತಕುಮಾರ್​ ಅವರಿಗೆ ಮಂಪರು ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು. ಹಗರಣದಲ್ಲಿ ಭಾಗಿಯಾಗಿರುವವರ ಹೆಸರುಗಳನ್ನು ಹೇಳದಂತೆ ಈ ಅಧಿಕಾರಿಗಳ ಮೇಲೆ ಒತ್ತಡ ಇದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರದಲ್ಲಿದ್ದಾಗ ಅಕ್ರಮಗಳು ಆಗಿವೆ ಎಂದು ಇದೀಗ ಅಶ್ವತ್ಥ ನಾರಾಯಣ ಹೇಳುತ್ತಿದ್ದಾರೆ. ಇವರು ಆಗಲೇ ಯಾಕೆ ಪ್ರಸ್ತಾಪ ಮಾಡಲಿಲ್ಲ? ಆಗ ಏನು ಕಡ್ಲೇಪುರಿ ತಿನ್ನುತ್ತಿದ್ರಾ ಎಂದು ಪ್ರಶ್ನಿಸಿದರು. ಈ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಹೋಟೆಲ್​ಗಳಲ್ಲಿ ತಿಂಡಿಗೆ ಇಷ್ಟು ಎಂದು ದರಪಟ್ಟಿ ಹಾಕುವಂತೆ ಅಧಿಕಾರಿಗಳ ವರ್ಗಾವಣೆಗೆ ಬೆಲೆ ನಿಗದಿಪಡಿಸಲಾಗಿದೆ. ಇದು 40 ಪರ್ಸೆಂಟ್ ಸರ್ಕಾರ. ಇಲ್ಲಿ ಎಲ್ಲದಕ್ಕೂ ಲಂಚ ಕೊಡಬೇಕಾಗಿದೆ ಎಂದು ವ್ಯಂಗ್ಯವಾಡಿದರು.

ಸಿದ್ದರಾಮೋತ್ಸವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಹುಟ್ಟುಹಬ್ಬದ ಕಾರ್ಯಕ್ರಮದಿಂದ ಬಿಜೆಪಿಯವರಿಗೆ ಹೆದರಿಕೆ ಆಗಿದೆ. ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಸೇರುತ್ತಾರೆ. ಸೋಲಿನ ಭಯ ಅವರನ್ನು ಕಾಡುತ್ತಿದೆ. ಈ ಹಿಂದೆ ಯಡಿಯೂರಪ್ಪ ಜನ್ಮದಿನ ಮಾಡಿಕೊಂಡಿದ್ದರು. ಆಗ ನಾನು ಕೂಡಾ ಹೋಗಿದ್ದೆ. ಈಗ ನನ್ನ ಹುಟ್ಟುಹಬ್ಬ ಮಾಡಿಕೊಂಡೆರೆ ಅವರಿಗೇಕೆ ಭಯವಾಗಬೇಕು. ನನ್ನ ಜನ್ಮದಿನದ ಉತ್ಸವದ ಬಗ್ಗೆ ನಮ್ಮವರಿಗೆ ಭಯವಿಲ್ಲ. ಅದೆಲ್ಲಾ ಸುಳ್ಳು ಎಂದು ಹೇಳಿದರು.

ಮಳೆಹಾನಿ ತಡೆಗೆ ಸರ್ಕಾರ ಮುಂಜಾಗ್ರತಾ ಕ್ರಮಕೈಗೊಂಡಿಲ್ಲ. ಮನೆಗಳಿಗೆ ಹಾನಿಯಾದ ಮೇಲೆ ನೋಡಲು ಹೋಗುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರು‌ ನೆರೆ ಹಾನಿ ಸ್ಥಳಕ್ಕೆ ಹೋಗಿಲ್ಲ. ಸಿಎಂ ಬೊಮ್ಮಾಯಿ ಭೇಟಿ ನೀಡಿದ ಮೇಲೆ ಹೋಗುತ್ತಿದ್ದಾರೆ. ಅನಾಹುತಗಳನ್ನು ತಪ್ಪಿಸಲು ಯಾವುದೇ ‌ಕ್ರಮ ಕೈಗೊಳ್ಳಲಿಲ್ಲ. ಪ್ರವಾಹದಿಂದ ನಷ್ಟ ಅನುಭವಿಸಿದವರಿಗೆ ತಕ್ಷಣ ಪರಿಹಾರ ನೀಡಬೇಕು. 2019ರಲ್ಲಿ ಮನೆ ಕಳೆದುಕೊಂಡವರಿಗೆ ಇನ್ನೂ ಮನೆ ಕೊಟ್ಟಿಲ್ಲ ಎಂದು ಆರೋಪ ಮಾಡಿದರು.

Published On - 12:52 pm, Thu, 14 July 22