ಕಲಬುರಗಿ ಪಾಲಿಕೆ ಆರೋಗ್ಯ ನಿರೀಕ್ಷಕ ಮೇಲೆ ಕೈ ಮುಖಂಡನ ಗುಂಡಾಗಿರಿ, ಕ್ರಮಕ್ಕೆ ಆಗ್ರಹಿಸಿ ಸಿಬ್ಬಂದಿ ಪ್ರತಿಭಟನೆ

| Updated By: ಆಯೇಷಾ ಬಾನು

Updated on: Aug 31, 2023 | 2:38 PM

ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಹೆಲ್ತ್ ಇನ್ಸಪೆಕ್ಟರ್ ಅಂತ ಕೆಲಸ ಮಾಡುವ ಧನಶೆಟ್ಟಿ ಹೆಡಗಾಪುರೆ ಅನ್ನೋರ ಮೇಲೆ ನಿನ್ನೆ ಸಂಜೆ ಹಲ್ಲೆಯಾಗಿದೆ. ಕಲಬುರಗಿ ನಗರದ ಕಾಂಗ್ರೆಸ್ ಮುಖಂಡ ಮತ್ತು ಸಿವಿಲ್ ಗುತ್ತಿಗೆದಾರನಾಗಿರುವ ವಿಜಯ್ ಭಾಸ್ಕರ್ ಅನ್ನೋರು ಹಲ್ಲೆ ಮಾಡಿದ್ದಾರೆ. ಇನ್ನು ಕೈ ಮುಖಂಡ ವಿಜಯ್ ಭಾಸ್ಕರ್ ಹಲ್ಲೆ ಖಂಡಿಸಿ ಇಂದು ಪಾಲಿಕೆಯ ಸಿಬ್ಬಂದಿ ಪ್ರತಿಭಟನೆ ನಡೆಸಿದ್ರು. ಕಚೇರಿಯ ಕೆಲಸಕ್ಕೆ ಹಾಜರಾಗದೇ, ಪಾಲಿಕೆಯ ಮುಂದೆ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು.

ಕಲಬುರಗಿ ಪಾಲಿಕೆ ಆರೋಗ್ಯ ನಿರೀಕ್ಷಕ ಮೇಲೆ ಕೈ ಮುಖಂಡನ ಗುಂಡಾಗಿರಿ, ಕ್ರಮಕ್ಕೆ ಆಗ್ರಹಿಸಿ ಸಿಬ್ಬಂದಿ ಪ್ರತಿಭಟನೆ
ಪಾಲಿಕೆಯ ಆರೋಗ್ಯ ನಿರೀಕ್ಷಕನ ಮೇಲೆ ಹಲ್ಲೆ ಮಾಡಿದ ಕಾಂಗ್ರೆಸ್ ಮುಖಂಡ
Follow us on

ಕಲಬುರಗಿ, ಆ.31: ಮೂರು ದಿನಗಳ ಹಿಂದಷ್ಟೇ ಕಲಬುರಗಿ ಜಿಲ್ಲೆಯಲ್ಲಿ ಕಾಂಗ್ರೆಸ್(Congress) ಮುಖಂಡನ ವಿರುದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಂಕಿತ ಅಧಿಕಾರಿ ದಬ್ಬಾಳಿಕೆಯ ಆರೋಪ ಮಾಡಿದ್ದರು. ಇದೀಗ ಕೈ ಮುಖಂಡ, ಕಲಬುರಗಿ ಮಹಾನಗರ ಪಾಲಿಕೆಯ ಕಚೇರಿಗೆ ನುಗ್ಗಿ ಮೇಲಾಧಿಕಾರಿಗಳ ಮುಂದೆಯೇ ಪಾಲಿಕೆಯ ಆರೋಗ್ಯ ನಿರೀಕ್ಷಕನ ಮೇಲೆ ಹಲ್ಲೆ ಮಾಡಿದ್ದಾನೆ. ಇದು ಪಾಲಿಕೆಯ ಸಿಬ್ಬಂದಿಯ ಆಕ್ರೋಶಕ್ಕೆ ಕಾರಣವಾಗಿದ್ದು, ಪಾಲಿಕೆಯ ಅಧಿಕಾರಿಗಳು ಕ್ರಮಕ್ಕೆ ಆಗ್ರಹಿಸಿ ಇಂದು ಪ್ರತಿಭಟನೆ(Protest) ನಡೆಸಿದರು.

ಕೈ ಮುಖಂಡನ ಗುಂಡಾಗಿರಿ

ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಹೆಲ್ತ್ ಇನ್ಸಪೆಕ್ಟರ್ ಅಂತ ಕೆಲಸ ಮಾಡುವ ಧನಶೆಟ್ಟಿ ಹೆಡಗಾಪುರೆ ಅನ್ನೋರ ಮೇಲೆ ನಿನ್ನೆ ಸಂಜೆ ಹಲ್ಲೆಯಾಗಿದೆ. ಕಲಬುರಗಿ ನಗರದ ಕಾಂಗ್ರೆಸ್ ಮುಖಂಡ ಮತ್ತು ಸಿವಿಲ್ ಗುತ್ತಿಗೆದಾರನಾಗಿರುವ ವಿಜಯ್ ಭಾಸ್ಕರ್ ಅನ್ನೋರು ಹಲ್ಲೆ ಮಾಡಿದ್ದಾರೆ. ಹೌದು ನಿನ್ನೆ ಸಂಜೆ ಐದು ಗಂಟೆ ಸಮಯದಲ್ಲಿ, ಕಲಬುರಗಿ ಮಹಾನಗರ ಪಾಲಿಕೆಯ ಕಚೇರಿಯಲ್ಲಿಯೇ ಧನಶೆಟ್ಟಿ ಮೇಲೆ ಹಲ್ಲೆಯಾಗಿದೆ. ನಿನ್ನೆ ಸಂಜೆ ವಿಜಯ್ ಭಾಸ್ಕರ್ ಧನಶೆಟ್ಟಿಗೆ ಕರೆ ಮಾಡಿ, ಬೆದರಿಕೆ ಹಾಕಿದ್ದ ನಂತರ ಕೇಚರಿಗೆ ಬಂದು ಧನಶೆಟ್ಟಿ ಇದ್ದ ಚೇಂಬರ್​ಗೆ ನುಗ್ಗಿ ಗಲಾಟೆ ಆರಂಭಿಸಿದ್ದಾರೆ. ನಂತರ ಧನಶೆಟ್ಟಿಯ ಕೊರಳು ಪಟ್ಟಿ ಹಿಡಿದು, ಪಾಲಿಕೆಯ ಉಪ ಆಯುಕ್ತ ಆರ್ ಪಿ ಜಾಧವ್ ಅವರ ಕೊಠಡಿವರಗೆ ಕರೆದುಕೊಂಡು ಹೋಗಿದ್ದಾರಂತೆ. ಬಳಿಕ ಪಾಲಿಕೆಯ ಅಧಿಕಾರಿಗಳ ಮುಂದೆಯೇ ವಿಜಯ್ ಭಾಸ್ಕರ್, ಧನಶೆಟ್ಟಿ ಮೇಲೆ ಹಲ್ಲೆ ಮಾಡಿದ್ದಾರೆ.

ಇನ್ನು ಕೈ ಮುಖಂಡ ವಿಜಯ್ ಭಾಸ್ಕರ್ ಹಲ್ಲೆ ಖಂಡಿಸಿ ಇಂದು ಪಾಲಿಕೆಯ ಸಿಬ್ಬಂದಿ ಪ್ರತಿಭಟನೆ ನಡೆಸಿದ್ರು. ಕಚೇರಿಯ ಕೆಲಸಕ್ಕೆ ಹಾಜರಾಗದೇ, ಪಾಲಿಕೆಯ ಮುಂದೆ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ನಡೆಸಿದ ಸಿಬ್ಬಂದಿ ಪಾಲಿಕೆಯ ಅಧಿಕಾರಿಗಳ ಮೇಲೆ ನಿರಂತರವಾಗಿ ಹಲ್ಲೆಗಳು ನಡೆಯುತ್ತಿವೆ. ನಿನ್ನೆ ಕೂಡಾ ಹಲ್ಲೆಯಾಗಿದೆ. ಹೀಗಾಗಿ ತಮಗೆ ಸೂಕ್ತ ರಕ್ಷಣೆ ಬೇಕು. ತಪ್ಪಿತಸ್ಥರ ವಿರುದ್ದ ಕ್ರಮವಾಗುವಂತೆ ಮೇಲಾಧಿಕಾರಿಗಳು ನೋಡಿಕೊಳ್ಳಬೇಕು ಅಂತ ಆಗ್ರಹಿಸಿದ್ರು.

ಹಲ್ಲೆಗೆ ಕಾರಣವಾಯ್ತು ಟ್ರೇಡ್ ಲೈಸೆನ್ಸ್ ವಿಚಾರ

ಇನ್ನು ಪಾಲಿಕೆಯ ಹೆಲ್ತ್ ಇನ್ಸಪೆಕ್ಟರ್ ಧನಶೆಟ್ಟಿ ಮೇಲೆ ಹಲ್ಲೆಗೆ ಕಾರಣವಾಗಿದ್ದು ಟೇಡ್ ಲೈಸೆನ್ಸ್ ವಿಚಾರ. ಕೈ ಮುಖಂಡ ವಿಜಯ್ ಭಾಸ್ಕರ್ ಪರಿಚಿತ ರಾಜರತ್ನ ಅನ್ನೋರು, ನಗರದ ವಿದ್ಯಾ ನಗರದಲ್ಲಿ ರಾಜರತ್ನ ಗಿಪ್ಟ್ ಸೆಂಟರ್ ಆರಂಭಿಸಿದ್ದಾರಂತೆ. ಅದಕ್ಕೆ ವ್ಯಾಪಾರ ಪರವಾನಗಿಗೆ ಪಾಲಿಕೆಗೆ ಅರ್ಜಿ ಹಾಕಿದ್ದಾರಂತೆ. ಅದು ಹೆಲ್ತ್ ಇನ್ಸಪೆಕ್ಟರ್ ಧನಶೆಟ್ಟಿ ಬಳಿ ಈ ಹಿಂದೆ ಬಂದಿದ್ದಂತೆ. ಆಗ ಅದನ್ನು ಪರಿಶೀಲಿಸಿ ಮೇಲಾಧಿಕಾರಿಗಳಿಗೆ ಧನಶೆಟ್ಟಿ ಕಳುಹಿಸಿಕೊಟ್ಟಿದ್ದಾರಂತೆ. ಆದ್ರೆ ಇದೇ ವಿಚಾರವಾಗಿ ಜಗಳ ತಗೆದು, ವಿಜಯ್ ಭಾಸ್ಕರ್ ಹಲ್ಲೆ ನಡೆಸಿದ್ದಾರೆ ಅಂತ ಧನಶೆಟ್ಟಿ ಆರೋಪಿಸಿದ್ದಾರೆ. ಇನ್ನು ಆರು ತಿಂಗಳ ಹಿಂದೆ ಬಾರ್ ನಲ್ಲಿ ಕುಡಿದು, ಅದರ ಬಿಲ್ ನೀಡುವಂತೆ ವಿಜಯ್ ಭಾಸ್ಕರ್ ಹೇಳಿದ್ದರು. ಆಗ ಕೂಡಾ ನಾನು ಬಿಲ್ ನೀಡಿರಲಿಲ್ಲ. ನಂತರ ಮತ್ತೆ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದರು. ಆಗ ಕೂಡಾ ನಾನು ಹಣ ನೀಡಿರಲಿಲ್ಲಾ.

ಇದನ್ನೂ ಓದಿ: ವಿಜಯಪುರ: ಮಹಿಳೆ ಜೊತೆ ಬಂದಿದ್ದ ಯುವಕ ಹೊಂಡಕ್ಕೆ ಹಾರಿ ಸಾವಿಗೆ ಶರಣು, ಮಹಿಳೆ ಎಸ್ಕೇಪ್

ಇನ್ನು ಫೋನ್ ಮಾಡಿ ನೀನು ಲಿಂಗಾಯತ ಇದ್ದೀಯಾ, ನಾನು ಮನಸು ಮಾಡಿದ್ರೆ ನಿಮ್ಮ ಸಿಬ್ಬಂದಿಯಿಂದಲೇ ನಿನ್ನ ವಿರುದ್ದ ಜಾತಿ ನಿಂಧನೆ ದೂರು ಕೊಡಿಸಬಹುದು. ಕಿರುಕುಳ ದೂರು ದಾಖಲಿಸಿ ನಿನಗೆ ತೊಂದರೆ ಕೊಡಿಸ್ತೇನೆ, ನಿನ್ನ ಕುಟುಂಬವನ್ನು ಕೂಡಾ ಬಿಡೋದಿಲ್ಲಾ ಅಂತ ಹೇಳಿ ವಿಜಯ್ ಭಾಸ್ಕರ್ ಆಗಾಗ ತೊಂದರೆ ಕೊಡ್ತಿದ್ದ. ಆದ್ರೆ ಇದೀಗ ಟ್ರೇಡ್ ಲೈಸೆನ್ಸ್ ನೀಡೋ ವಿಚಾರಕ್ಕೆ ಬಂದು, ತನ್ನ ಜೊತೆ ಜಗಳ ತಗೆದು ಹಲ್ಲೆ ಮಾಡಿದ್ದಾರೆ ಅಂತ ಧನಶೆಟ್ಟಿ ಆರೋಪಿಸಿದ್ದಾರೆ.

ಇನ್ನು ಪಾಲಿಕೆಯ ನೌಕರರು ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿದ ಪಾಲಿಕೆಯ ಆಯುಕ್ತ ಭುವನೇಶ್ ಪಾಟೀಲ್, ಘಟನೆಯ ಬಗ್ಗೆ ಪೊಲೀಸ್ ಕಮಿಷನರ್ ಅವರ ಗಮನಕ್ಕೆ ತಂದಿದ್ದೇನೆ. ಕಚೇರಿಗೆ ನುಗ್ಗಿ ನಮ್ಮ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದರಿಂದ ಸಿಬ್ಬಂದಿ ಆತಂಕಕ್ಕೊಳಗಾಗಿದ್ದಾರೆ. ತಮ್ಮ ಸಿಬ್ಬಂದಿಯ ಹಿತ ಕಾಯಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇನೆ ಅಂತ ಸಿಬ್ಬಂದಿಗೆ ಭರವಸೆ ನೀಡಿದ್ದಾರೆ.

ಇನ್ನು ಘಟನೆ ಬಗ್ಗೆ ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಅಧಿಕಾರಿ ತಪ್ಪು ಮಾಡಿದರೆ, ಅವರ ಮೇಲಾಧಿಕಾರಿಗೆ ದೂರು ನೀಡಬೇಕು. ಆದರೆ ಅದನ್ನು ಬಿಟ್ಟು ಕಚೇರಿಗೆ ನುಗ್ಗಿ ಮೇಲಾಧಿಕಾರಿಗಳ ಮುಂದೆಯೇ ಹಲ್ಲೆ ಮಾಡಿ ದುಂಡಾವರ್ತನೆ ತೋರೋ ಮೂಲಕ ಕೈ ಮುಖಂಡ ಗುಂಡಾಗಿರಿ ಪ್ರದರ್ಶನ ಮಾಡಿದ್ದಾನೆ. ಹೀಗಾಗಿ ತಪ್ಪಿತಸ್ಥರ ವಿರುದ್ದ ಪೊಲೀಸರು ಕಠೀಣ ಕ್ರಮ ಕೈಗೊಳ್ಳಬೇಕಿದೆ. ರಾಜಕೀಯ ನಾಯಕರು ಕೂಡಾ ತಪ್ಪಿತಸ್ಥರ ಪರವಾಗಿ ನಿಲ್ಲದೇ ನ್ಯಾಯದ ಪರವಾಗಿ ನಿಲ್ಲುವ ಮೂಲಕ ಕಾನೂನಿಗೆ ಎಲ್ಲರು ಒಂದೇ ಅನ್ನೋದನ್ನು ತೋರಿಸಬೇಕಿದೆ.

ಕಲಬುರಗಿ ಜಿಲ್ಲೆಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ